ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರಿಯರ ವಿಶ್ವಕಪ್‌ ಮುಂದಕ್ಕೆ

17 ವರ್ಷದೊಳಗಿನವರ ಮಹಿಳಾ ಫುಟ್‌ಬಾಲ್‌ ಟೂರ್ನಿ
Last Updated 4 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ನವದೆಹಲಿ: ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಬೇಕಾಗಿದ್ದ ಫಿಫಾ 17 ವರ್ಷದೊಳಗಿನವರ ಮಹಿಳಾ ವಿಶ್ವ ಕಪ್‌ ಫುಟ್‌ಬಾಲ್‌ ಟೂರ್ನಿಯನ್ನು ಶನಿವಾರ ಮುಂದಕ್ಕೆ ಹಾಕಲಾಗಿದೆ. ಕೊರೊನಾ ಸಾಂಕ್ರಾಮಿಕ ಪಿಡುಗು ಜಗತ್ತನ್ನು ಕಂಗೆಡಿಸುತ್ತಿರುವ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ.

ಮಹಿಳಾ ವಯೋವರ್ಗದ ಈ ಅತಿ ದೊಡ್ಡ ಟೂರ್ನಿಯ ಪ‍ಂದ್ಯಗಳು ನವೆಂಬರ್‌ 2 ರಿಂದ 21ವರೆಗೆ ದೇಶದ ಐದು ಕ್ರೀಡಾಂಗಣಗಳಲ್ಲಿ ನಿಗದಿಯಾಗಿದ್ದವು.

ಕೋಲ್ಕತ್ತ, ಗುವಾಹಟಿ, ಭುವನೇಶ್ವರ, ಅಹಮದಾಬಾದ್ ಮತ್ತು ನವಿ ಮುಂಬೈ ಈ ಐದು ತಾಣಗಳಾಗಿದ್ದವು. ಫೈನಲ್‌ ಹಣಾಹಣಿಯು ನವಿ ಮುಂಬೈನಲ್ಲಿ ನಡೆಯಬೇಕಾಗಿತ್ತು.ಈ ಟೂರ್ನಿಯಲ್ಲಿ ಭಾರತ ಸೇರಿದಂತೆ ಒಟ್ಟು 16 ತಂಡಗಳು ಭಾಗವಹಿಸಬೇಕಾಗಿತ್ತು. ಆತಿಥ್ಯ ವಹಿಸುವ ಕಾರಣ ಭಾರತ ಪಾಲ್ಗೊಳ್ಳುವ ಅರ್ಹತೆ ಪಡೆದಿತ್ತು. ಇದೇ ಮೊದಲ ಬಾರಿ ಭಾರತ 17 ವರ್ಷದೊಳಗಿನವರ ಮಹಿಳಾ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಪಡೆದಿತ್ತು.

ವಿಶ್ವ ಫುಟ್‌ಬಾಲ್‌ ಸಂಸ್ಥೆಯ (ಫಿಫಾ) ಬ್ಯೂರೊ ಕೌನ್ಸಿಲ್‌ ಸ್ಥಾಪಿಸಿರುವ ಫಿಫಾ ಕಾನ್ಫಡರೇಷನ್‌ ವರ್ಕಿಂಗ್‌ ಗ್ರೂಪ್‌ ಈ ನಿರ್ಧಾರ ಕೈಗೊಂಡಿದೆ. ಕೋವಿಡ್‌–19 ಸಾಂಕ್ರಾಮಿಕ ಪಿಡುಗಿನ ಪರಿಣಾಮದ ಬಗ್ಗೆ ಅಧ್ಯಯನ ಮಾಡಿ ನಿರ್ಧಾರಕ್ಕೆ ಬರುವ ಕೆಲಸವನ್ನು ಈ ವರ್ಕಿಂಗ್‌ ಗ್ರೂಪ್‌ಗೆ ವಹಿಸಲಾಗಿದೆ.

ಪನಾಮ/ ಕೋಸ್ಟರಿಕಾದಲ್ಲಿ ಆಗಸ್ಟ್‌– ಸೆಪ್ಟೆಂಬರ್‌ ತಿಂಗಳಲ್ಲಿ ನಿಗದಿಯಾಗಿದ್ದ ಫಿಫಾ 20 ವರ್ಷದೊಳಗಿನವರ ಮಹಿಳಾ ವಿಶ್ವ ಕಪ್‌ ಟೂರ್ನಿಯನ್ನೂ ಮುಂದೂಡುವಂತೆ ವರ್ಕಿಂಗ್‌ ಗ್ರೂಪ್‌, ಫಿಫಾಕ್ಕೆ ಶಿಫಾರಸು ಮಾಡಿದೆ.

ಹೊಸ ದಿನಾಂಕಗಳನ್ನು ಮುಂದೆ ತಿಳಿಸಲಾಗುವುದು ಎಂದು ‍ಫಿಫಾ ಹೇಳಿಕೆಯಲ್ಲಿ ತಿಳಿಸಿದೆ.

ನಿರೀಕ್ಷಿತವಾಗಿತ್ತು: ‘ಈ ಮುಂದೂಡಿಕೆ ನಿರೀಕ್ಷಿತವಾಗಿತ್ತು ಎಂದು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ತಿಳಿಸಿದೆ.

‘ಈ ಭಯಾನಕ ಪಿಡುಗಿಗೆ ಬೇರೆ ಕೆಲವು ಕ್ರೀಡಾಕೂಟಗಳು ಮುಂದಕ್ಕೆ ಹೋಗಿದ್ದವು. ಇದೂ ಆಗಬೇಕಾಗಿತ್ತು. ನಾವು ಈ ನಿರ್ಧಾರ ಒ‍ಪ್ಪಿಕೊಂಡಿದ್ದೇವೆ’ ಎಂದು ಎಐಎಫ್‌ಎಫ್‌ ಮಹಾ ಕಾರ್ಯದರ್ಶಿ ಕುಶಾಲ್‌ ದಾಸ್‌ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ಯುರೋಪ್‌ ಮತ್ತು ಆಫ್ರಿಕಾ ದೇಶಗಳಲ್ಲಿ ಅರ್ಹತಾ ಟೂರ್ನಿಗಳು ಇನ್ನೂ ಸಾಧ್ಯವಾಗಿಲ್ಲ. ಹೀಗಾಗಿ ಫಿಫಾ ನಿರ್ಧಾರ ಅನಿರೀಕ್ಷಿತವೇನೂ ಆಗಿರಲಿಲ್ಲ‘ ಎಂದಿದ್ದಾರೆ. ಈ ಟೂರ್ನಿಯನ್ನು ಮುಂದಿನ ವರ್ಷಕ್ಕೆ ಮುಂದೂಡುವ ಸಾಧ್ಯತೆಯಿದೆ‘ ಎಂದು ಹೇಳಿದ್ದಾರೆ.

ಶುಕ್ರವಾರ ತಡರಾತ್ರಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಫಿಫಾ ವರ್ಕಿಂಗ್ ಗ್ರೂಪ್‌ ಸಭೆ ನಡೆಸಿ ತೀರ್ಮಾನ ಕೈಗೊಂಡಿತು.ಇದುವರೆಗೆ ಏಷ್ಯದಲ್ಲಿ ಒಂದು ಅರ್ಹತಾ ಟೂರ್ನಿ ಮಾತ್ರ ನಡೆದಿತ್ತು. ಇದರಲ್ಲಿ ಜಪಾನ್‌ ಮತ್ತು ಉತ್ತರ ಕೊರಿಯಾ ಈ ವಿಶ್ವಕಪ್‌ಗೆ ಅರ್ಹತೆ ಪಡೆದಿದ್ದವು.

ಉಳಿದ ಐದು ಅರ್ಹತಾ ಟೂರ್ನಿಗಳು ಕೊರೊನಾ ಸೋಂಕು ಎಬ್ಬಿಸಿದ ಕೋಲಾಹಲದ ಕಾರಣ ಸಾಧ್ಯವಾಗಿಲ್ಲ. ಆಫ್ರಿಕಾ, ಯುರೋಪ್‌, ಒಷಾನಿಯಾ, ದಕ್ಷಿಣ ಅಮೆರಿಕಾ ಮತ್ತು ಮಧ್ಯ, ಉತ್ತರ ಅಮೆರಿಕ, ಕೆರಿಬಿಯನ್‌ ವಿಭಾಗದಲ್ಲಿ ಅರ್ಹತಾ ಟೂರ್ನಿಗಳು ಸಾಧ್ಯವಾಗಿಲ್ಲ. ಕೊರೊನಾ ಸೋಂಕಿನಿಂದ ಆರೋಗ್ಯ ತುರ್ತು ತಲೆದೋರಿರುವ ಕಾರಣ ಇಲ್ಲಿ ಯಾವುದೇ ಕ್ರೀಡಾಕೂಟಗಳು ನಡೆಯುತ್ತಿಲ್ಲ.

ನವೆಂಬರ್‌ನಲ್ಲಿ ನಿಗದಿಯಂತೆ ಟೂರ್ನಿಯನ್ನು ನಡೆಸಲು ಸಿದ್ಧತೆ ನಡೆಸಿದ್ದರೂ ಫಿಫಾದ ಈ ನಿರ್ಧಾರ ಬೆಂಬಲಿಸುತ್ತಿದ್ದೇವೆ ಎಂದು ಸ್ಥಳೀಯ ಸಂಘಟನಾ ಸಮಿತಿ (ಎಲ್‌ಒಸಿ) ತಿಳಿಸಿದೆ.

‘ಸಾರ್ವಜನಿಕ ಆರೋಗ್ಯ, ಭಾಗವಹಿಸುವ ತಂಡಗಳ ಹಿತಾಸಕ್ತಿ, ಆತಿಥ್ಯ ವಹಿಸುವ ನಗರಗಳ ಸಿಬ್ಬಂದಿ, ಪಾಲ್ಗೊಳ್ಳುವ ಪ್ರೇಕ್ಷಕರು, ಅಭಿಮಾನಿಗಳ ಸುರಕ್ಷತೆ ದೃಷ್ಟಿಯಿಂದ ಕೈಗೊಂಡಿರುವ ಈ ನಿರ್ಧಾರವನ್ನು ಒಪ್ಪಿಕೊಳ್ಳುತ್ತೇವೆ‘ ಎಂದು ಎಲ್‌ಒಸಿ ಹೇಳಿಕೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT