ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಫಾ ವಿಶ್ವಕಪ್‌ | 2–1 ಅಂತರದಿಂದ ಮೊರೊಕ್ಕೊ ಮಣಿಸಿ 3ನೇ ಸ್ಥಾನ ಪಡೆದ ಕ್ರೊವೇಷ್ಯಾ

Last Updated 18 ಡಿಸೆಂಬರ್ 2022, 2:33 IST
ಅಕ್ಷರ ಗಾತ್ರ

ದೋಹಾ: ಜೊಸ್ಕೊ ಗ್ವಾರ್ಡಿಯೊಲ್‌ ಮತ್ತು ಮಿಸ್ಲಾವ್‌ ಒರಿಸಿಚ್‌ ಗಳಿಸಿದ ಗೋಲುಗಳ ನೆರವಿನಿಂದ ಕ್ರೊವೇಷ್ಯಾ ತಂಡ, ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಮೂರನೇ ಸ್ಥಾನ ಗಳಿಸಿತು.

ಖಲೀಫಾ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಕ್ರೊವೇಷ್ಯಾ 2–1 ಗೋಲುಗಳಿಂದ ಮೊರೊಕ್ಕೊ ತಂಡವನ್ನು ಮಣಿಸಿತು.

ಗ್ವಾರ್ಡಿಯೊಲ್‌ ಅವರು ಏಳನೇ ನಿಮಿಷದಲ್ಲಿ ಕ್ರೊವೇಷ್ಯಾ ತಂಡಕ್ಕೆ ಮುನ್ನಡೆ ತಂದಿತ್ತರು. ಇದಾದ ಎರಡು ನಿಮಿಷಗಳಲ್ಲೇ ಮೊರೊಕ್ಕೊ ತಿರುಗೇಟು ನೀಡಿತು. ಅಶ್ರಫ್‌ ದರಿ ಅವರು ಗೋಲು ಗಳಿಸಿ ಪಂದ್ಯವನ್ನು ಸಮಸ್ಥಿತಿಗೆ ತಂದರು.

ಆದರೆ, ಮೊದಲಾರ್ಧ ಕೊನೆಗೊಳ್ಳಲು ಕೆಲವೇ ನಿಮಿಷಗಳು ಇದ್ದಾಗ ಒರಿಸಿಚ್‌ (42ನೇ ನಿ.) ಅವರು ಕ್ರೊವೇಷ್ಯಾ ತಂಡಕ್ಕೆ ಮತ್ತೆ ಮುನ್ನಡೆ ತಂದಿತ್ತರು.

ಎರಡನೇ ಅವಧಿಯಲ್ಲಿ ಮೊರೊಕ್ಕೊ ಸಮಬಲದ ಗೋಲಿಗಾಗಿ ಪ್ರಯತ್ನಿಸಿದರೂ ಯಶಸ್ಸು ಕಾಣಲಿಲ್ಲ. ಯೂಸೆಫ್‌ ಎನ್‌ ನೆಸ್ರಿ ಅವರಿಗೆ ಲಭಿಸಿದ ಅತ್ಯುತ್ತಮ ಅವಕಾಶವನ್ನು ಕ್ರೊವೇಷ್ಯಾ ಗೋಲ್‌ಕೀಪರ್‌ ಲಿವಕೊವಿಚ್‌ ತಡೆದರು. ಕ್ರೊವೇಷ್ಯಾ ತಂಡ 2–3 ಸಲ ಗೋಲು ಗಳಿಸುವ ಸನಿಹಕ್ಕೆ ಬಂದರೂ, ಅಲ್ಪ ಅಂತರದಲ್ಲಿ ಗುರಿ ತಪ್ಪಿತು.

ಉಭಯ ತಂಡಗಳು ಸಾಕಷ್ಟು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದ್ದವು. ಮೊರೊಕ್ಕೊ ತಂಡದ ಪ್ರಮುಖ ಡಿಫೆಂಡರ್‌ಗಳಾದ ರೊಮೇನ್‌ ಸೈಸ್, ನಯೇಫ್‌ ಅಗುಯೆದ್‌ ಮತ್ತು ನಸೇರ್‌ ಮಜರೂಯಿ ಅವರು ಈ ಪಂದ್ಯದಲ್ಲಿ ಆಡಲಿಲ್ಲ.

ಕ್ರೊವೇಷ್ಯಾ ತಂಡ ಫಿಫಾ ವಿಶ್ವಕಪ್‌ನಲ್ಲಿ ಮೂರನೇ ಸ್ಥಾನ ಗಳಿಸಿದ್ದು ಇದು ಎರಡನೇ ಬಾರಿ. ಸ್ವತಂತ್ರ ದೇಶವಾದ ಬಳಿಕ 1998 ರಲ್ಲಿ ಆಡಿದ ತನ್ನ ಚೊಚ್ಚಲ ವಿಶ್ವಕಪ್‌ನಲ್ಲೂ ಮೂರನೇ ಸ್ಥಾನ ಪಡೆದುಕೊಂಡಿತ್ತು.

ಸೆಮಿಫೈನಲ್‌ ಪಂದ್ಯಗಳಲ್ಲಿ ಮೊರೊಕ್ಕೊ ತಂಡ ಫ್ರಾನ್ಸ್ ಎದುರು 0–2 ಗೋಲುಗಳ ಅಂತರದಿಂದ ಮತ್ತು ಕ್ರೊವೇಷ್ಯಾ ತಂಡ ಅರ್ಜೆಂಟೀನಾ ಎದುರು 0–3ಗೋಲುಗಳ ಅಂತರದಿಂದ ಸೋಲು ಕಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT