ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಫಾ ವಿಶ್ವಕಪ್‌ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಅರ್ಜೆಂಟೀನಾ, ಜರ್ಮನಿಗೆ ಜಯ

Last Updated 17 ನವೆಂಬರ್ 2022, 20:07 IST
ಅಕ್ಷರ ಗಾತ್ರ

ಅಬುಧಾಬಿ/ ದೋಹಾ: ಅರ್ಜೆಂಟೀನಾ ಮತ್ತು ಜರ್ಮನಿ ತಂಡಗಳು ಫಿಫಾ ವಿಶ್ವಕಪ್‌ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಗೆಲುವು ಪಡೆದು ಆತ್ಮವಿಶ್ವಾಸ ಹೆಚ್ಚಿಸಿಕೊಂಡವು.

ಅಬುಧಾಬಿಯಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಅರ್ಜೆಂಟೀನಾ 5–0 ಗೋಲುಗಳಿಂದ ಯುಎಇ ತಂಡವನ್ನು ಮಣಿಸಿತು. ತಂಡದ ನಾಲ್ಕನೇ ಗೋಲನ್ನು ಸ್ಟಾರ್‌ ಆಟಗಾರ ಲಯೊನೆಲ್‌ ಮೆಸ್ಸಿ ಗಳಿಸಿದರು. ಏಂಜೆಲ್‌ ಡಿ ಮರಿಯಾ ಎರಡು ಗೋಲುಗಳನ್ನು ತಂದಿತ್ತರೆ, ಜೂಲಿಯನ್‌ ಅಲ್ವಾರೆಜ್‌ ಮತ್ತು ಜೋಕಿನ್‌ ಕೊರಿಯಾ ತಲಾ ಒಂದು ಗೋಲು ತಂದುಕೊಟ್ಟರು.

ಅರ್ಜೆಂಟೀನಾ ಕೋಚ್‌ ಲಯೊನೆಲ್‌ ಸ್ಕಾಲೊನಿ ಅವರು ಎರಡನೇ ಅವಧಿಯ ಆರಂಭದಲ್ಲಿ ನಾಲ್ಕು ಬದಲಿ ಆಟಗಾರರನ್ನು ಕಣಕ್ಕಿಳಿಸಿದರು. ಆದರೆ ಮೆಸ್ಸಿ ಅವರಿಗೆ ಪೂರ್ಣ 90 ನಿಮಿಷ ಆಡುವ ಅವಕಾಶ ನೀಡಿದರು.

ಅರ್ಜೆಂಟೀನಾ ರಾಷ್ಟ್ರೀಯ ತಂಡದ ಪರ ಮೆಸ್ಸಿ ಗಳಿಸಿದ 91ನೇ ಗೋಲು ಇದು. ಕಳೆದ ಐದು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅವರು ಒಟ್ಟು 10 ಗೋಲುಗಳನ್ನು ಗಳಿಸಿದ್ದಾರೆ.

‘ಸಿ’ ಗುಂಪಿನಲ್ಲಿರುವ ಅರ್ಜೆಂಟೀನಾ ತನ್ನ ಮೊದಲ ಪಂದ್ಯದಲ್ಲಿ ನ.22 ರಂದು ಸೌದಿ ಅರೇಬಿಯಾವನ್ನು ಎದುರಿಸಲಿದೆ. ಆ ಬಳಿಕ ಕ್ರಮವಾಗಿ ಮೆಕ್ಸಿಕೊ ಹಾಗೂ ಪೋಲೆಂಡ್‌ ತಂಡಗಳ ವಿರುದ್ಧ ಆಡಲಿದೆ.

ಜರ್ಮನಿ ಜಯಭೇರಿ: ನಾಲ್ಕು ಬಾರಿಯ ಚಾಂಪಿಯನ್‌ ಜರ್ಮನಿ ತಂಡದವರು ಮಸ್ಕತ್‌ನಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ 1–0 ರಲ್ಲಿ ಒಮಾನ್‌ ವಿರುದ್ಧ ಗೆದ್ದರು. ನಿಕ್ಲಾಸ್‌ ಫುಲ್ಕ್‌ಉಗ್‌ ಅವರುಗೋಲು ಗಳಿಸಿದರು. ತಮ್ಮ ಕೊನೆಯ ಅಭ್ಯಾಸ ಪಂದ್ಯವನ್ನಾಡಿದ ಜರ್ಮನಿ ಆಟಗಾರರು ಗುರುವಾರ ದೋಹಾಕ್ಕೆ ಬಂದಿಳಿದರು.

‘ಇ’ ಗುಂಪಿನಲ್ಲಿರುವ ಜರ್ಮನಿ ತಂಡ ಲೀಗ್‌ ಹಂತದಲ್ಲಿ ಕ್ರಮವಾಗಿ ಜಪಾನ್‌, ಸ್ಪೇನ್‌ ಮತ್ತು ಕೋಸ್ಟಾರಿಕಾ ತಂಡಗಳನ್ನು ಎದುರಿಸಲಿವೆ.

ರಿಯಾದ್‌ನಲ್ಲಿ ನಡೆದ ಪಂದ್ಯದಲ್ಲಿ ಕ್ರೊಯೇಷ್ಯಾ 1–0 ರಲ್ಲಿ ಸೌದಿ ಅರೇಬಿಯಾ ತಂಡವನ್ನು ಮಣಿಸಿತು. ಆಂದ್ರೆ ಕ್ರಾಮರಿಚ್‌ ಅವರು 82ನೇ ನಿಮಿಷದಲ್ಲಿ ಗೋಲು ಗಳಿಸಿದರು. ತಂಡದ ಸ್ಟಾರ್‌ ಆಟಗಾರ ಲುಕಾ ಮಾಡ್ರಿಚ್‌ 25 ನಿಮಿಷ ಮಾತ್ರ ಆಡಿದರು. ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಘಾನಾ 2–0 ಗೋಲುಗಳಿಂದ ಸ್ವಿಟ್ಜರ್‌ಲೆಂಡ್‌ ತಂಡವನ್ನು ಪರಾಭವಗೊಳಿಸಿತು. ಮೊಹಮ್ಮದ್‌ ಸಲಿಸು 70ನೇ ನಿಮಿಷದಲ್ಲಿ ಹಾಗೂ ಕಮಾಲುದೀನ್ ಸುಲೇಮಾನ್ 74ನೇ ನಿಮಿಷದಲ್ಲಿ ಗೋಲು ತಂದಿತ್ತರು.

ವಸ್ತ್ರಸಂಹಿತೆ: ಊಹಾಪೋಹ
ದೋಹಾ: ವಿಶ್ವಕಪ್‌ ಪಂದ್ಯ ವೀಕ್ಷಿಸಲು ಬರುವ ವಿದೇಶಿಯರು ಕತಾರ್‌ನ ಸಂಸ್ಕೃತಿಯನ್ನು ಗೌರವಿಸುವಂತಹ ಬಟ್ಟೆ ಧರಿಸಬೇಕು ಎಂಬ ಹೇಳಿಕೆಯನ್ನೊಳಗೊಂಡ ಪ್ರಕಟಣೆಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.

ಅರಬ್‌ ರಾಷ್ಟ್ರ ಕತಾರ್‌ನಲ್ಲಿ ಮಹಿಳೆಯರು ತುಂಡುಡುಗೆ ಧರಿಸುವುದಕ್ಕೆ ನಿಷೇಧವಿದೆ. ವಿಶ್ವಕಪ್‌ ಟೂರ್ನಿಯ ವೇಳೆ ವಿದೇಶಿಯರಿಗೂ ಈ ನಿಯಮ ಅನ್ವಯಿಸಲಿದೆ. ಮಹಿಳೆಯರು ಮಂಡಿಯಿಂದ ಭುಜದವರೆಗೆ ಮುಚ್ಚುವಂತಹ ಬಟ್ಟೆಗಳನ್ನು ಧರಿಸಬೇಕು ಎಂಬ ಸೂಚನೆ ಪ್ರಕಟಣೆಯಲ್ಲಿದೆ.

ಆದರೆ ಇದು ‘ನಕಲಿ’ ಪ್ರಕಟಣೆ ಎಂದು ಸಂಘಟಕರು ಸ್ಪಷ್ಟಪಡಿಸಿದ್ದಾರೆ. ‘ಅಭಿಮಾನಿಗಳು ಕತಾರ್‌ನ ಸಂಸ್ಕೃತಿಯನ್ನು ಗೌರವಿಸಬೇಕು. ಆದರೆ ಬಟ್ಟೆಯ ಆಯ್ಕೆಯ ವಿಚಾರದಲ್ಲಿ ಯಾರನ್ನೂ ಬಂಧಿಸುವ ಅಥವಾ ಟೂರ್ನಿಯಿಂದ ಹೊರಹಾಕುವ ಪ್ರಶ್ನೆ ಉದ್ಭವಿಸದು’ ಎಂದು ಹೇಳಿದ್ದಾರೆ. ಆದರೂ ವಸ್ತ್ರಸಂಹಿತೆಯ ಕುರಿತ ಊಹಾಪೋಹಗಳು ಹರಿದಾಡುತ್ತಲೇ ಇವೆ.

‘ಮಹಿಳೆಯರು ತಮ್ಮಿಷ್ಟದ ಬಟ್ಟೆಗಳನ್ನು ಧರಿಸಬಹುದು. ಆದರೆ ಕತಾರ್‌ನ ನಿಯಮ ಗಳನ್ನೂ ಗಮನದಲ್ಲಿಟ್ಟುಕೊಳ್ಳಬೇಕು’ ಎಂದು ಫಿಫಾ ವೆಬ್‌ಸೈಟ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT