ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟರ್ ಆಗಬೇಕೆಂದಿದ್ದ ಗುರುಪ್ರೀತ್ ಕೈಗೆ ಬಂದದ್ದು ಗೋಲ್‌ಕೀಪಿಂಗ್ ಗ್ಲೌಸ್!

Last Updated 8 ಜೂನ್ 2020, 21:32 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ ಫುಟ್‌ಬಾಲ್ ತಂಡ ಮತ್ತು ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್) ಟೂರ್ನಿಯಲ್ಲಿ ಆಡುತ್ತಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್‌ನ (ಬಿಎಫ್‌ಸಿ) ಗೋಲ್‌ಕೀಪರ್ ಗುರುಪ್ರೀತ್‌ ಸಿಂಗ್ ಸಂಧು ಅವರಿಗೆ ಫುಟ್‌ಬಾಲ್ ಅಂಗಣದ ‘ಗೋಡೆ’ ಎಂದೇ ಹೆಸರು. ಆದರೆ ಈಚೆಗೆ 14 ವರ್ಷಗಳ ಹಿಂದಿನ ವರೆಗೆ ಅವರು ಫುಟ್‌ಬಾಲ್ ಪಂದ್ಯವನ್ನೇ ವೀಕ್ಷಿಸಿರಲಿಲ್ಲವಂತೆ...

ಗುರುಪ್ರೀತ್ ಸಿಂಗ್ ಅವರ ತಂದೆ ಕ್ರಿಕೆಟ್‌ ಅಭಿಮಾನಿಯಾಗಿದ್ದರು. ಹೀಗಾಗಿ ಗುರುಪ್ರೀತ್‌ಗೂ ಕ್ರಿಕೆಟ್ ಮೇಲೆಯೇ ಪ್ರೀತಿ ಇತ್ತು. ಕ್ರಿಕೆಟರ್ ಆಗಬೇಕೆಂದೇ ಬಯಸಿದ್ದರು ಕೂಡ. ಆದರೆ ನಂತರ ಫುಟ್‌ಬಾಲ್‌ನಲ್ಲಿ ಅವಕಾಶ ಲಭಿಸಿತು; ಫುಟ್‌ಬಾಲ್ ವೃತ್ತಿಯೇ ಆಯಿತು.

‘ಲೆಟ್ಸ್ ಫುಟ್‌ಬಾಲ್’ ಕಾರ್ಯಕ್ರಮದಲ್ಲಿ ಅನಂತ್ ತ್ಯಾಗಿ ನಡೆಸಿಕೊಟ್ಟ ಇತ್ತೀಚಿನ ಆವೃತ್ತಿಯಲ್ಲಿ ಗುರುಪ್ರೀತ್‌ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಕಾರ್ಯಕ್ರಮದ ವಿವರವನ್ನು ಐಎಸ್‌ಎಲ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

‘2006–07ರ ವರೆಗೆ ಒಂದೇ ಒಂದು ಫುಟ್‌ಬಾಲ್ ಪಂದ್ಯ ವೀಕ್ಷಿಸಿರಲಿಲ್ಲ. ತಂದೆಯ ಜೊತೆ ಕ್ರಿಕೆಟ್ ಮಾತ್ರ ವೀಕ್ಷಿಸುತ್ತಿದ್ದೆ. ನಾನು ಓದುತ್ತಿದ್ದ ಶಾಲೆಯಲ್ಲಿ ಕ್ರೀಡಾ ಅಕಾಡೆಮಿಯೊಂದಿತ್ತು. ಅದರ ಕಾರ್ಯಕರ್ತರು ದೈಹಿಕವಾಗಿ ಗಟ್ಟಿಮುಟ್ಟಾಗಿದ್ದವರನ್ನು ಗುರುತಿಸಿ ತರಬೇತಿ ನೀಡುತ್ತಿದ್ದರು. ನಾನು ಅಲ್ಲಿ 100 ಮೀಟರ್ಸ್ ಓಟದಲ್ಲಿ ಪಾಲ್ಗೊಂಡಿದ್ದೆ. ಬಹುಮಾನವನ್ನೂ ಗೆದ್ದುಕೊಂಡೆ. ನಮ್ಮೂರಲ್ಲಿ ಸ್ಪ್ರಿಂಟ್ ಅಪರೂಪ ಆಗಿದ್ದರಿಂದ ನನ್ನ ಮೇಲೆ ಭರವಸೆ ಇಟ್ಟು ತರಬೇತಿ ನೀಡಿದರು. ಆದರೆ ಅದೃಷ್ಟ ಖುಲಾಯಿಸಿದ್ದು ಫುಟ್‌ಬಾಲ್‌ನಲ್ಲಿ’ ಎಂದು ಅವರು ವಿವರಿಸಿದ್ದಾರೆ.

‘ಫುಟ್‌ಬಾಲ್ ಆಡಲು ಆರಂಭಿಸಿದ್ದು 13ನೇ ವಯಸ್ಸಿನಲ್ಲಿ. ಆಗ ಫುಟ್‌ಬಾಲ್ ಬಗ್ಗೆಯಾಗಲಿ ಗೋಲ್ ಕೀಪಿಂಗ್ ಕುರಿತಾಗಲಿ ಏನೂ ತಿಳಿದಿರಲಿಲ್ಲ. 16 ವರ್ಷದೊಳಗಿನವರ ರಾಷ್ಟ್ರೀಯ ತಂಡದ ಶಿಬಿರದಲ್ಲಿ ಪಾಲ್ಗೊಳ್ಳಲು ಕರೆ ಬಂದಾಗ ಆಶ್ಚರ್ಯವಾಗಿತ್ತು. ಗೋವಾದಲ್ಲಿ ತರಬೇತಿ ಶುರುವಾದ ನಂತರವೇ ಗಂಭೀರವಾಗಿ ಫುಟ್‌ಬಾಲ್ ವೀಕ್ಷಿಸಲು ಆರಂಭಿಸಿದೆ. ಈ ಕ್ರೀಡೆಯಲ್ಲಿ ನಾನು ಸಾಧನೆ ಮಾಡಲು ಸಾಧ್ಯ ಎಂದು ಆಗಲೇ ನಿರ್ಧರಿಸಿದೆ. ಟಾಟಾ ಫುಟ್‌ಬಾಲ್ ಅಕಾಡೆಮಿ (ಟಿಎಫ್‌ಎ) ಸೇರಿದ ಮೇಲಂತೂ ನನ್ನ ಬದುಕಿನ ದಿಕ್ಕೇ ಬದಲಾಯಿತು’ ಎಂದು ಅವರು ಹೇಳಿದ್ದಾರೆ.

ಅಲಿ ಅಲ್ ಹಬ್ಸಿಯ ಸಂಪರ್ಕ....
ನಾರ್ವೆಯ ಸ್ಟಬೇಕ್‌ ಫುಟ್‌ಬಾಲ್ ಕ್ಲಬ್‌ನಲ್ಲಿ ಭಾರತದ ಕೆಲವೇ ಕೆಲವು ಫುಟ್‌ಬಾಲ್ ಆಟಗಾರರಿಗೆ ಅಭ್ಯಾಸ ಮಾಡುವ ಅವಕಾಶ ಲಭಿಸಿತ್ತು. ಅವರಲ್ಲಿ ಗುರುಪ್ರೀತ್ ಕೂಡ ಒಬ್ಬರಾಗಿದ್ದರು. ಅಲ್ಲಿ, ಒಮಾನ್ ತಂಡದ ಗೋಲ್‌ ಕೀಪರ್ ಅಲಿ ಅಲ್ ಹಬ್ಸಿ ಅವರನ್ನು ಭೇಟಿಯಾದ ನಂತರ ಗೋಲ್‌ಕೀಪಿಂಗ್ ಕೌಶಲಗಳನ್ನು ವೃದ್ಧಿಸಿಕೊಳ್ಳಲು ಸಾಧ್ಯವಾಯಿತು ಎಂದು ಗುರುಪ್ರೀತ್ ಹೇಳಿದ್ದಾರೆ.

ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸಿದ ದಿನಗಳ ಬಗ್ಗೆ ಮಾತನಾಡಿದ ಅವರು ಅದನ್ನು ರೋಚಕ ಯಾನ ಎಂದು ಬಣ್ಣಿಸಿದ್ದಾರೆ.

‘ನಾನು ಆಗ 19 ವರ್ಷದೊಳಗಿನವರ ತಂಡದಲ್ಲಿದ್ದೆ. ಬಾಂಗ್ಲಾದೇಶದಲ್ಲಿ ನಡೆದಿದ್ದ ಟೂರ್ನಿಯಲ್ಲಿ ಪಾಲ್ಗೊಂಡ ನಂತರ 23 ವರ್ಷದೊಳಗಿನವರ ರಾಷ್ಟ್ರೀಯ ಶಿಬಿರಕ್ಕೆ ಕರೆ ಬಂತು. ಚೀನಾ ವಿರುದ್ಧದ ಪಂದ್ಯವೊಂದರಲ್ಲಿ ನಾನು ಮೂರನೇ ಹೆಚ್ಚುವರಿ ಗೋಲ್ ಕೀಪರ್ ಆಗಿದ್ದೆ. ಮೊದಲ ಪಂದ್ಯದಲ್ಲಿ ಲಕ್ಷ್ಮಿಕಾಂತ್ ಕಟ್ಟಿಮನಿ ಗೋಲ್ ಕೀಪರ್ ಆಗಿದ್ದರು. ಅವರು ಗಾಯಗೊಂಡ ಕಾರಣ ನಂತರದ ಎರಡು ಪಂದ್ಯಗಳಲ್ಲಿ ನನಗೆ ಅವಕಾಶ ಲಭಿಸಿತು. ಮಲೇಷ್ಯಾ ಮೇಲೆ ಗೆಲುವು ಸಾಧಿಸಿದೆವು. ಕುವೈತ್ ವಿರುದ್ಧದ ಪಂದ್ಯದಲ್ಲಿ ಸಣ್ಣ ಅಂತರದಲ್ಲಿ ಸೋತೆವು. ಅಲ್ಲಿಂದ ವಾಪಸಾಗುವಷ್ಟರಲ್ಲಿ ದುಬೈನಲ್ಲಿ ನಡೆಯಲಿರುವ ರಾಷ್ಟ್ರೀಯ ಶಿಬಿರಕ್ಕೆ ಹಾಜರಾಗುವಂತೆ ಕರೆ ಬಂತು’ ಎಂದು 2018–19ನೇ ಸಾಲಿನ ಐಎಸ್‌ಎಲ್‌ನಲ್ಲಿ ಚಿನ್ನದ ಗ್ಲೌ ಗಳಿಸಿದ ಆಟಗಾರ ವಿವರಿಸಿದ್ದಾರೆ.

ಬೆಂಗಳೂರಿನಲ್ಲಿ ಅನುಭವಿಸಿದ ಸೋಲಿನ ನೋವು
2017–18ನೇ ಸಾಲಿನ ಐಎಸ್‌ಎಲ್‌ ಟೂರ್ನಿಯ ಫೈನಲ್‌ನಲ್ಲಿ ಅನುಭವಿಸಿದ ಸೋಲಿನ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ‘ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಸೋಲು ಅನಿರೀಕ್ಷಿತವಾಗಿತ್ತು. ಚೆನ್ನಾಗಿ ಅಭ್ಯಾಸ ಮಾಡಿದ್ದ ನಾವು ಟ್ರೋಫಿ ಎತ್ತಿಹಿಡಿಯಲು ಸಜ್ಜಾಗಿದ್ದೆವು. ಆದರೆ ಪಂದ್ಯದ ಫಲಿತಾಂಶ ನಿರಾಸೆ ಮೂಡಿಸಿತ್ತು. ಅಂದು ರಾತ್ರಿ ತುಂಬ ಬೇಸರಗೊಂಡಿದ್ದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT