ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬೈಗೆ ತೆರಳಲು ಭಾರತ ಫುಟ್‌ಬಾಲ್ ತಂಡ ಸಜ್ಜು

Last Updated 14 ಮಾರ್ಚ್ 2021, 15:44 IST
ಅಕ್ಷರ ಗಾತ್ರ

ನವದೆಹಲಿ: ಒಮಾನ್ ಮತ್ತು ಯುಎಇ ಎದುರು ನಡೆಯಲಿರುವ ಸೌಹಾರ್ದ ಪಂದ್ಯಗಳಲ್ಲಿ ಆಡಲು ಭಾರತ ಫುಟ್‌ಬಾಲ್ ತಂಡ ಸೋಮವಾರ ದುಬೈಗೆ ಪ್ರಯಾಣ ಬೆಳೆಸಲಿದೆ. ಕೋವಿಡ್‌–19 ಸೋಂಕಿಗೆ ಒಳಗಾಗಿರುವ ನಾಯಕ ಸುನಿಲ್ ಚೆಟ್ರಿ ವಿಶ್ರಾಂತಿಯಲ್ಲಿದ್ದು ಅವರನ್ನು ಹೊರತುಪಡಿಸಿ 27 ಮಂದಿಯನ್ನು ಒಳಗೊಂಡ ತಂಡ ಅಲ್ಲಿ ಅಭ್ಯಾಸ ನಡೆಸಲಿದೆ.

ಒಮಾನ್ ಎದುರಿನ ಪಂದ್ಯ ಮಾರ್ಚ್ 25ರಂದು ನಡೆಯಲಿದ್ದು ಯುಎಇ ಎದುರಿನ ಪಂದ್ಯ 29ಕ್ಕೆ ನಿಗದಿಯಾಗಿದೆ. ಎರಡೂ ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಭಾರತ ತಂಡವು 2019ರಲ್ಲಿ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಕೊನೆಯದಾಗಿ ಅಂತರರಾಷ್ಟ್ರೀಯ ಪಂದ್ಯ ಆಡಿತ್ತು.

ಭಾರತದ ಪರವಾಗಿ ಅತಿಹೆಚ್ಚು, 72 ಅಂತರರಾಷ್ಟ್ರೀಯ ಗೋಲು ಗಳಿಸಿರುವ ಸುನಿಲ್ ಚೆಟ್ರಿ ಕೋವಿಡ್‌ನಿಂದ ಗುಣಮುಖರಾಗುತ್ತಿದ್ದಾರೆ. 36 ವರ್ಷದ ಚೆಟ್ರಿ ಪ್ರತ್ಯೇಕವಾಸದಲ್ಲಿದ್ದಾರೆ.

‘ಎಲ್ಲರೂ ಮತ್ತೆ ಒಂದಾಗಿದ್ದೇವೆ. ಅಂತರರಾಷ್ಟ್ರೀಯ ಪಂದ್ಯದಲ್ಲಿ ಆಡಲು ಕೊನೆಗೂ ತಂಡ ಸಜ್ಜಾಗಿದ್ದು ಇದು ಖುಷಿಯ ವಿಚಾರ. ತಂಡದಲ್ಲಿ ಅನೇಕ ಹೊಸಬರು ಇದ್ದು ಎಲ್ಲರೂ ಕಠಿಣ ಅಭ್ಯಾಸ ಮಾಡುವುದು ಅನಿವಾರ್ಯವಾಗಿದೆ. ಅವರು ಈಗಿನ ಪರಿಸ್ಥಿತಿಗೆ ಹೇಗೆ ಹೊಂದಿಕೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ’ ಎಂದು ಮುಖ್ಯ ಕೋಚ್ ಇಗರ್ ಸ್ಟಿಮ್ಯಾಕ್ ಹೇಳಿದರು.

ಪುನಶ್ಚೇತನ ಶಿಬಿರದಲ್ಲಿರುವ ಬ್ರೆಂಡನ್ ಫರ್ನಾಂಡಿಸ್‌, ರಾಹುಲ್ ಭೆಕೆ, ಸಹಾಲ್ ಅಬ್ದುಲ್ ಸಮದ್‌ ಮತ್ತು ಆಶಿಶ್‌ ರಾಯ್ ಆಯ್ಕೆಗೆ ಲಭ್ಯ ಇಲ್ಲ ಎಂದೂ ಸ್ಟಿಮ್ಯಾಕ್ ತಿಳಿಸಿದರು.

ತಂಡ: ಗೋಲ್‌ಕೀಪರ್‌ಗಳು: ಗುರುಪ್ರೀತ್ ಸಿಂಗ್ ಸಂಧು, ಅಮರಿಂದರ್ ಸಿಂಗ್, ಸುಭಾಷಿಷ್ ರಾಯ್‌ ಚೌಧರಿ, ಧೀರಜ್ ಸಿಂಗ್; ಡಿಫೆಂಡರ್‌ಗಳು: ಅಶುತೋಷ್ ಮೆಹ್ತಾ, ಆಕಾಶ್ ಮಿಶ್ರಾ, ಪ್ರೀತಮ್ ಕೊತಾಲ್, ಸಂದೇಶ್ ಜಿಂಗಾನ್‌, ಚಿಂಗ್ಲೆನ್ಸಾನಾ ಸಿಂಗ್, ಆದಿಲ್ ಖಾನ್, ಮಂದಾರ್ ರಾವ್ ದೇಸಾಯಿ, ಮಶೂರ್ ಶರೀಫ್‌; ಮಿಡ್‌ಫೀಲ್ಡರ್‌ಗಳು: ರಾವ್ಲಿನ್ ಬೋರ್ಜೆಸ್‌, ಲಾಲೆಂಗ್‌ಮಾವಿಯಾ, ಜೀಕ್ಸನ್ ಸಿಂಗ್‌, ರೇನಿಯನ್ ಫರ್ನಾಂಡಿಸ್‌, ಅನಿರುದ್ಧ ಥಾಪಾ, ಬಿಪಿನ್ ಸಿಂಗ್‌, ಯಾಸಿರ್ ಮೊಹಮ್ಮದ್‌, ಸುರೇಶ್‌ ಸಿಂಗ್‌, ಹಾಲಿಚರಣ್ ನಜರೆ, ಲಾಲಿಯಂಗ್ಜಾಲಾ ಚಾಂಗ್ಟೆ, ಆಶಿಕ್ ಕುರುಣಿಯನ್‌; ಫಾರ್ವರ್ಡರ್‌ಗಳು: ಮನ್ವೀರ್ ಸಿಂಗ್‌, ಇಶಾನ್ ಪಂಡಿತ, ಹಿತೇಶ್ ಶರ್ಮಾ, ಲಿಸ್ಟನ್ ಕೊಲ್ಯಾಕೊ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT