ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌: ಜಯದ ಖಾತೆ ತೆರೆಯುವುದೇ ಬಿಎಫ್‌ಸಿ

ಇಂದು ಆತಿಥೇಯ ಜೆಮ್‌ಶೆಡ್‌ಪುರ ಎಫ್‌ಸಿ ಎದುರು ಪಂದ್ಯ
Last Updated 2 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಜೆಮ್‌ಶೆಡ್‌ಪುರ: ಇಂಡಿಯನ್‌ ಸೂಪರ್‌ ಲೀಗ್‌ನ (ಐಎಸ್‌ಎಲ್‌) ಆರನೇ ಆವೃತ್ತಿಯಲ್ಲಿ ಆಡಿರುವ ಎರಡು ಪಂದ್ಯಗಳಲ್ಲೂ ಡ್ರಾಗೆ ತೃಪ್ತಿಪಟ್ಟಿರುವ ಹಾಲಿ ಚಾಂಪಿಯನ್‌ ಬಿಎಫ್‌ಸಿ, ಭಾನುವಾರ ಜೆ.ಆರ್‌.ಡಿ ಟಾಟಾ ಕ್ರೀಡಾ ಸಂಕೀರ್ಣದಲ್ಲಿ ಜಯದ ತೋರಣ ಕಟ್ಟುವುದೇ?

ಹೀಗೊಂದು ಪ್ರಶ್ನೆ ಈಗ ಬೆಂಗಳೂರಿನ ಫುಟ್‌ಬಾಲ್‌ ಪ್ರಿಯರನ್ನು ಕಾಡುತ್ತಿದೆ.

ತನ್ನ ಪಾಲಿನ ಮೂರನೇ ಹೋರಾಟದಲ್ಲಿ ಸುನಿಲ್ ಚೆಟ್ರಿ ಬಳಗವು ಆತಿಥೇಯ ಜೆಮ್‌ಶೆಡ್‌ಪುರ ಎಫ್‌ಸಿ ಎದುರು ಸೆಣಸಲಿದೆ.

ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ಎದುರು ಆಡುವ ಮೂಲಕ ಈ ಬಾರಿ ಅಭಿಯಾನ ಆರಂಭಿಸಿದ್ದ ಬೆಂಗಳೂರಿನ ತಂಡ, ತವರಿನ ಅಂಗಳದಲ್ಲಿ ಗೆಲುವು ದಕ್ಕಿಸಿಕೊಳ್ಳಲು ವಿಫಲವಾಗಿತ್ತು. ಎಫ್‌ಸಿ ಗೋವಾ ಎದುರಿನ ಹಣಾಹಣಿಯಲ್ಲೂ ಜಯದ ಅವಕಾಶ ಕೈಚೆಲ್ಲಿತ್ತು.

ಹಿಂದಿನ ಎರಡು ಪಂದ್ಯಗಳಲ್ಲೂ ನಾಯಕ ಚೆಟ್ರಿ, ಕಾಲ್ಚಳಕ ತೋರಲು ವಿಫಲರಾಗಿದ್ದರು.

ನಿಶುಕುಮಾರ್‌, ರಾಹುಲ್‌ ಭೆಕೆ, ವುವಾನ್‌ ಆ್ಯಂಟೋನಿಯೊ ಫರ್ನಾಂಡಿಸ್‌, ಹರ್ಮನ್‌ಜೋತ್‌ ಸಿಂಗ್‌ ಖಾಬ್ರಾ ಮತ್ತು ದಿಮಾಸ್‌ ಡೆಲ್ಗಾಡೊ ಕೂಡ ನಿರೀಕ್ಷೆ ಹುಸಿಗೊಳಿಸಿದ್ದರು. ಇವರು ಜೆಮ್‌ಶೆಡ್‌ಪುರ ವಿರುದ್ಧ ಲಯ ಕಂಡುಕೊಳ್ಳಬೇಕಿದೆ.

ಗೋವಾ ವಿರುದ್ಧ ಗೋಲು ಗಳಿಸಿದ್ದ ಉದಾಂತ್‌ ಸಿಂಗ್‌, ಎಲ್ಲರ ಕಣ್ಮಣಿಯಾಗಿದ್ದಾರೆ. ಅವರಿಗೆ ಆಶಿಕ್‌ ಕುರುಣಿಯನ್‌, ರಾಫೆಲ್‌ ಅಗಸ್ಟೊ ಹಾಗೂ ಆಲ್ಬರ್ಟ್‌ ಸೆರಾನ್‌ ಅವರಿಂದ ಸೂಕ್ತ ಬೆಂಬಲ ಸಿಗಬೇಕಿದೆ.

ಗೋವಾ ಎದುರು ಚೆಟ್ರಿ ಪಡೆ ಅಂತಿಮ ಕ್ಷಣದಲ್ಲಿ ಎದುರಾಳಿಗಳಿಗೆ ಗೋಲು ಬಿಟ್ಟುಕೊಟ್ಟಿತ್ತು. ಈ ತಪ್ಪು ಮರುಕಳಿಸದಂತೆಯೂ ಎಚ್ಚರವಹಿಸಬೇಕಿದೆ.

‘ಹ್ಯಾಟ್ರಿಕ್‌’ ಕನಸು: ತವರಿನಲ್ಲಿ ಆಡಿರುವ ಎರಡು ಪಂದ್ಯಗಳಲ್ಲೂ ಗೆದ್ದಿರುವ ಜೆಮ್‌ಶೆಡ್‌ಪುರ ತಂಡ ಈಗ ‘ಹ್ಯಾಟ್ರಿಕ್‌’ ಕನಸು ಕಾಣುತ್ತಿದೆ.

ಆರು ಪಾಯಿಂಟ್ಸ್ ಗಳಿಸಿ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಈ ತಂಡವನ್ನು ಕಟ್ಟಿಹಾಕಲು ಬಿಎಫ್‌ಸಿ ಯಾವ ಬಗೆಯ ರಣನೀತಿ ಹೆಣೆದು ಕಣಕ್ಕಿಳಿಯಲಿದೆ ಎಂಬುದು ಸದ್ಯದ ಕುತೂಹಲ.

ಆರಂಭ: ರಾತ್ರಿ 7.30

ನೇರ ಪ್ರಸಾರ: ಸ್ಟಾರ್‌ ನೆಟ್‌ವರ್ಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT