ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ಗೆಲುವಿನ ವಿಶ್ವಾಸ

ಸೆಮಿಯಲ್ಲಿ ಇಂದು ಮುಂಬೈ ವಿರುದ್ಧ ಸೆಣಸು
Last Updated 6 ಮಾರ್ಚ್ 2023, 19:45 IST
ಅಕ್ಷರ ಗಾತ್ರ

ಮುಂಬೈ: ಸತತ ಒಂಬತ್ತು ಪಂದ್ಯಗಳಲ್ಲಿ ಗೆದ್ದಿರುವ ಬಿಎಫ್‌ಸಿ ತಂಡ, ಇಂಡಿಯನ್‌ ಸೂಪರ್‌ ಲೀಗ್‌ ಫುಟ್‌ಬಾಲ್‌ ಟೂರ್ನಿಯ ಸೆಮಿಫೈನಲ್‌ನ ಮೊದಲ ಲೆಗ್‌ ಪಂದ್ಯದಲ್ಲಿ ಮಂಗಳವಾರ ಮುಂಬೈ ಸಿಟಿ ಎಫ್‌ಸಿ ತಂಡದ ಸವಾಲು ಎದುರಿಸಲಿದೆ.

ಬೆಂಗಳೂರಿನ ತಂಡ ‘ಪ್ಲೇ ಆಫ್‌‘ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡವನ್ನು ಮಣಿಸಿ ನಾಲ್ಕರಘಟ್ಟ ಪ್ರವೇಶಿಸಿತ್ತು. ಸೆಮಿಫೈನಲ್‌ನ ಎರಡನೇ ಲೆಗ್ ಪಂದ್ಯ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿದೆ.

ಪ್ಲೇ ಆಫ್‌ ಪಂದ್ಯದಲ್ಲಿನ ಜಯ ಒಳಗೊಂಡಂತೆ ಬಿಎಫ್‌ಸಿ, ಸತತ ಒಂಬತ್ತು ಗೆಲುವು ಸಾಧಿಸಿದೆ. ಕಂಠೀರವ ಕ್ರೀಡಾಂಗಣದಲ್ಲಿ ಫೆ.15 ರಂದು ನಡೆದಿದ್ದ ಲೀಗ್‌ ಪಂದ್ಯದಲ್ಲಿ ಬಿಎಫ್‌ಸಿ 2–1 ಗೋಲುಗಳಿಂದ ಮುಂಬೈ ತಂಡವನ್ನು ಮಣಿಸಿತ್ತು. ಸೆಮಿಯಲ್ಲೂ ಅದೇ ರೀತಿಯ ಪ್ರದರ್ಶನವನ್ನು ಪುನರಾವರ್ತಿಸುವ ವಿಶ್ವಾಸದಲ್ಲಿದೆ.

ಮುಂಬೈ ತಂಡ ಪಾಯಿಂಟ್ಸ್‌ ಪಟ್ಟಿ ಯಲ್ಲಿ ಅಗ್ರಸ್ಥಾನ ಪಡೆದುಕೊಂಡಿತ್ತು. ಆದರೆ ಲೀಗ್‌ನ ಕೊನೆಯ ಎರಡು ಪಂದ್ಯಗಳನ್ನು ಸೋತಿತ್ತು.

‘ಮುಂಬೈ ತಂಡ ಕೆಲವು ದಿನಗಳ ಬಿಡುವಿನ ಬಳಿಕ ಆಡಲಿದೆ. ಆದರೆ ನಾವು ಸತತ ಪಂದ್ಯಗಳನ್ನು ಆಡಿದ್ದು, ಎಲ್ಲ ಆಟಗಾರರು ಉತ್ತಮ ಲಯದಲ್ಲಿದ್ದಾರೆ. ಇದು ನಮ್ಮ ನೆರವಿಗೆ ಬರಲಿದೆ. ಈ ಹಿಂದೆ ನಾವು ಅವರನ್ನು ಸೋಲಿಸಿದ್ದು ನಿಜ. ಆದರೆ ಮಂಗಳವಾರ ಹೇಗೆ ಆಡುತ್ತೇವೆ ಎಂಬುದು ಮುಖ್ಯವಾಗಲಿದೆ’ ಎಂದು ಬಿಎಫ್‌ಸಿ ಕೋಚ್‌ ಸೈಮನ್‌ ಗ್ರೇಸನ್ ಹೇಳಿದ್ದಾರೆ.

ರಾಯ್‌ ಕೃಷ್ಣ, ಜಾವಿ ಹೆರ್ನಾಂಡೆಜ್‌, ಶಿವಶಕ್ತಿ ನಾರಾಯಣ್ ಮತ್ತು ಸುನಿಲ್‌ ಚೆಟ್ರಿ ಅವರು ಉತ್ತಮ ಫಾರ್ಮ್‌ನಲ್ಲಿದ್ದು, ಮುಂಬೈ ವಿರುದ್ಧ ಮಿಂಚುವ ವಿಶ್ವಾಸದಲ್ಲಿದ್ದಾರೆ. ಇವರಲ್ಲಿ ಮೊದಲ ಇಲೆವೆನ್‌ನಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎಂಬುದು ಕೋಚ್‌ ಗ್ರೇಸನ್‌ ಅವರ ಚಿಂತೆಗೆ ಕಾರಣವಾಗಿದೆ.

ಮುಂಬೈನ ತಂಡ ಈ ಋತುವಿನಲ್ಲಿ ತವರು ಅಂಗಳದಲ್ಲಿ ಶ್ರೇಷ್ಠ ಪ್ರದರ್ಶನ ತೋರಿದೆ. 10 ಪಂದ್ಯಗಳಲ್ಲಿ ಆರರಲ್ಲಿ ಗೆದ್ದಿದ್ದು, ಒಂದರಲ್ಲಿ ಮಾತ್ರ ಸೋತಿದೆ.

ಪಂದ್ಯ ಆರಂಭ: ರಾತ್ರಿ 7.30

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT