ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಾ ಮಾಡಿಕೊಂಡ ಬಿಎಫ್‌ಸಿ

ಐಎಸ್‌ಎಲ್‌ ಫುಟ್‌ಬಾಲ್‌: ಗೋಲು ಗಳಿಸಿದ ಉದಾಂತ
Last Updated 9 ಡಿಸೆಂಬರ್ 2018, 20:45 IST
ಅಕ್ಷರ ಗಾತ್ರ

ಬೆಂಗಳೂರು: ಆಕ್ರಮಣ ಮತ್ತು ರಕ್ಷಣಾತ್ಮಕ ಆಟ ಮೇಳೈಸಿದ ಪಂದ್ಯ ದಲ್ಲಿ ಫುಟ್‌ಬಾಲ್ ಪ್ರೇಮಿಗಳು ರೋಮಾಂಚಗೊಂಡರು. ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ಮತ್ತು ಮುಂಬೈ ಸಿಟಿ ಎಫ್‌ಸಿ ನಡುವಿನ ಪಂದ್ಯ 1–1ರ ಡ್ರಾದಲ್ಲಿ ಕೊನೆಗೊಂಡಿತು.

ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳು ಒಂದೊಂದು ಗೋಲು ಗಳಿಸಿದವು. ಮಾತಿನ ಚಕಮಕಿ, ರೆಫರಿ ಜೊತೆ ವಾಗ್ವಾದ ಮತ್ತು ಆಟಗಾರರ ಸತತ ಬದಲಾವಣೆಯನ್ನು ಕಂಡ ದ್ವಿತೀಯಾರ್ಧದಲ್ಲಿ ಉಭಯ ತಂಡಗಳ ಪ್ರಯತ್ನಕ್ಕೆ ಫಲ ಸಿಗಲಿಲ್ಲ.

ಅಕ್ರಮಣದಲ್ಲಿ ಬಲಿಷ್ಠವಾಗಿರುವ ಬಿಎಫ್‌ಸಿ ಎದುರು ಐವರು ಡಿಫೆಂಡರ್‌ಗಳನ್ನು ಮುಂಬೈ ಸಿಟಿ ತಂಡ ಕಣಕ್ಕೆ ಇಳಿಸಿತ್ತು. ಜಾರ್ಜ್ ಕೋಸ್ಟಾ ಅವರ ಈ ತಂತ್ರಕ್ಕೆ 23ನೇ ನಿಮಿಷದಲ್ಲಿ ಆತಿಥೇಯರು ಉತ್ತರ ನೀಡಿದರು. ಉದಾಂತ ಸಿಂಗ್ ಗಳಿಸಿದ ಮೋಹಕ ಗೋಲು ಪ್ರೇಕ್ಷಕರ ಗ್ಯಾಲರಿಯಲ್ಲಿ ಮೆಕ್ಸಿಕನ್‌ ಅಲೆ ಎಬ್ಬಿಸಿತು. ಎಡಭಾಗದಿಂದ ಆಕ್ರಮಣ ನಡೆಸಿದ ಬಿಎಫ್‌ಸಿಯ ಚೆಂಚೊ ಗೆಲ್ಶೆನ್‌ ಚೆಂಡನ್ನು ನಿಖರವಾಗಿ ಉದಾಂತ ಸಿಂಗ್ ಬಳಿಗೆ ಲಾಫ್ಟ್ ಮಾಡಿದರು. ಹೆಡರ್‌ ಮೂಲಕ ಉದಾಂತ ಅವರು ಚೆಂಡನ್ನು ಗೋಲು ಪೆಟ್ಟಿಗೆಯ ಒಳಗೆ ತೂರಿದರು.

20 ಮಿಮಿಷಗಳ ಅವಧಿಯಲ್ಲಿ ಲಭಿಸಿದ ಎರಡು ಫ್ರೀಕಿಕ್‌ಗಳನ್ನು ಕೈಚೆಲ್ಲಿದ್ದ ಮುಂಬೈ ಸಿಟಿ ತಂಡ 31ನೇ ನಿಮಿಷದಲ್ಲಿ ಸುಲಭ ಗೋಲು ಗಳಿಸಿ ತಿರುಗೇಟು ನೀಡಿತು. ಮೋಡು ಸೊಗೊ ಅವರು ಮುಂಬೈ ತಂಡದ ಖಾತೆ ತೆರೆದರು.

ಜಿದ್ದಾಜಿದ್ದಿಯ ಕಾದಾಟ: ದ್ವಿತೀಯಾರ್ಧದ ಆರಂಭದಲ್ಲೇ ಬಿಎಫ್‌ಸಿ ಆವರಣಕ್ಕೆ ನುಗ್ಗಿದ ಮುಂಬೈಗೆ ಗೋಲು ಗಳಿಸುವ ಸುವರ್ಣಾವಕಾಶ ಲಭಿಸಿತ್ತು. ಆದರೆ ಗುರುಪ್ರೀತ್ ಸಿಂಗ್ ಸಂಧು ಅದನ್ನು ವಿಫಲಗೊಳಿಸಿದರು.

ಅತ್ತ ಮುಂಬೈ ಸಿಟಿ ತಂಡದ ನಾಯಕ ಮತ್ತು ಗೋಲ್‌ಕೀಪರ್ ಅಮರಿಂದರ್ ಸಿಂಗ್ ಕೂಡ ಬಿಎಫ್‌ಸಿಯನ್ನು ಪದೇ ಪದೇ ನಿರಾಸೆಗೊಳಿಸಿದರು. ಪಂದ್ಯ ರೋಚಕವಾಗುತ್ತಿದ್ದಂತೆ ಆಟಗಾರರ ನಡುವೆ ಮಾತಿನ ಚಕಮಕಿಯೂ ಜೋರಾಯಿತು. ರೆಫರಿ ಆರ್‌.ವೆಂಕಟೇಶ್ ಅವರೊಂದಿಗೆ ವಾಗ್ವಾದಕ್ಕಿಳಿದ ಮುಂಬೈ ತಂಡದ ಶೆಹನಾಜ್‌ ಸಿಂಗ್‌, ರೆಡ್‌ ಕಾರ್ಡ್‌ನೊಂದಿಗೆ ಹೊರನಡೆದರು. ಬಿಎಫ್‌ಸಿಯ ಆಕ್ರಮಣ ಇನ್ನಷ್ಟು ಚುರುಕುಗೊಂಡಿತು. ಆದರೆ ತಂಡದ ಪ್ರಯತ್ನಗಳು ಸತತವಾಗಿ ವಿಫಲಗೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT