ಗುರುವಾರ , ಜನವರಿ 21, 2021
23 °C

ಕಾಲ್ಚೆಂಡಿನಾಟದ ಮೋಡಿಗಾರರ ಕೈಚಳಕ

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

Prajavani

ಎದುರಾಳಿ ತಂಡದ ಆಕ್ರಮಣವನ್ನು ತಡೆದು ತಮ್ಮ ತಂಡದ ರಕ್ಷಣಾ ಗೋಡೆಗೆ ಬಲ ತುಂಬುತ್ತಿರುವ ಗೋಲ್ ಕೀಪರ್ ಅಮರಿಂದರ್ ಸಿಂಗ್, ಟೇಬಲ್ ಬಳಿ ರ‍್ಯಾಕೆಟ್ ಹಿಡಿದು ನಿಂತು ಆಕ್ರಮಣ ಶುರುಮಾಡಿದರೆಂದರೆ ಆಚೆ ಬದಿಯಲ್ಲಿರುವ ಆಟಗಾರ ಗೊಂದಲಕ್ಕೆ ಒಳದಾದಂತೆಯೇ…

ಬಾರ್ತೊಲೊಮೆ ಒಗ್ಬೆಚೆ, ಹರ್ನನ್ ಸಂಟಾನ, ಹ್ಯೂಗೊ ಬೌಮೋಸ್, ಮೆಹ್ತಾಬ್ ಸಿಂಗ್, ಗೊಡಾರ್ಡ್‌ ಮುಂತಾದವರು ಕಣಕ್ಕೆ ಇಳಿದರೂ ಅಷ್ಟೇ ಟೇಬಲ್ ಮೇಲೆ ಶಕ್ತಿಶಾಲಿ ಮತ್ತು ತಂತ್ರಶಾಲಿ ಹೊಡೆತಗಳ ಮೂಲಕ ಎದುರಾಳಿಯನ್ನು ಕಂಗೆಡಿಸಬಲ್ಲರು.

ಇತ್ತ, ಕೇರಂ ಬೋರ್ಡ್ ಮೇಲೆಯೂ ಅದೇ ರೀತಿಯ ಆಟ. ವಿಘ್ನೇಶ್ ದಕ್ಷಿಣಮೂರ್ತಿ, ರಾವ್ಲಿನ್ ಬೋರ್ಜೆಸ್ ಮುಂತಾದವರು ಕಾಯಿನನ್ನು ಗುರಿ ಸೇರಿಸಿ ಸಂಭ್ರಮಿಸುತ್ತಾರೆ. ವಿಡಿಯೊ ಗೇಮ್‌ನಲ್ಲೂ ಯಾರೇನು ಕಮ್ಮಿ ಇಲ್ಲ. ಆ್ಯಡಂ ಲೀ ಫಾಂಡ್ರೆ ಮತ್ತಿತರರಿಗೆ ವಿರಾಮದ ಸಮಯದಲ್ಲಿ ಜಾಯ್ ಸ್ಟಿಕ್‌ ಹಿಡಿದು ಪರದೆಯಲ್ಲಿ ವಾಹನ, ಕ್ಯಾರಕ್ಟರ್‌ಗಳನ್ನು ನಿಯಂತ್ರಿಸುವುದರಲ್ಲೇ ಗಮನ.

ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಕಾಲ್ಚಳಕ ತೋರುತ್ತಿರುವ ಆಟಗಾರರು ಪಂದ್ಯ ಇಲ್ಲದ ದಿನಗಳಲ್ಲಿ ಟೇಬಲ್ ಟೆನಿಸ್‌, ಕೇರಂ ಮತ್ತಿತರರ ಆಟಗಳಲ್ಲಿ ‘ಕೈಚಳಕ’ ಮೆರೆಯುತ್ತಿದ್ದಾರೆ. ಮುಂಬೈ ಸಿಟಿ ಎಫ್‌ಸಿ ಆಟಗಾರರು ಹೀಗೆ ಸಮಯವನ್ನು ಅನ್ಯ ಆಟಗಗಳಿಗಾಗಿ ಬಳಸಿಕೊಂಡು ಸದುಪಯೋಗ ಮಾಡಿಕೊಳ್ಳುವುದರಲ್ಲಿ ಮುಂದೆ ಇದ್ದಾರೆ.

ಐಎಸ್‌ಎಲ್‌ನ ಅಪರೂಪದ ಗೋಲ್‌ಕೀಪರ್‌ಗಳಲ್ಲಿ ಒಬ್ಬರು, ಅಮರಿಂದರ್ ಸಿಂಗ್. ಅವರಿಗೆ ಫುಟ್‌ಬಾಲ್ ಬಿಟ್ಟರೆ ಟೇಬಲ್ ಟೆನಿಸ್‌ ನೆಚ್ಚಿನ ಆಟ. ಅವರು ಚೆಂಡನ್ನು ಹೊಡೆಯುವ, ಟಾಪ್ ಸ್ಪಿನ್ ಮೂಲಕ ಎದುರಾಳಿಯನ್ನು ಕಂಗೆಡಿಸುವ ಚಿತ್ರಗಳನ್ನು ಮುಂಬೈ ಸಿಟಿ ಎಫ್‌ಸಿ ತನ್ನ ಟ್ವಿಟರ್ ಖಾತೆಯಲ್ಲಿ ಹಾಕಿದೆ. ತಂಡದ ಆಟಗಾರರು ಇತರ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿರುವ ಚಿತ್ರಗಳು ಮತ್ತು ವಿಡಿಯೊಗಳನ್ನೂ ಹಾಕಿ ತಂಡದ ವೈವಿಧ್ಯಮಯ ಚಟುವಟಿಕೆಯತ್ತ ಕ್ರೀಡಾ ಪ್ರಿಯರ ಗಮನ ಸೆಳೆದಿದೆ.

ಐಎಸ್‌ಎಲ್‌ನಲ್ಲಿ ಈ ವರೆಗೆ 80 ಪಂದ್ಯಗಳಲ್ಲಿ 232 ಬಾರಿ ಎದುರಾಳಿಗಳ ದಾಳಿಯನ್ನು ತಡೆದಿರುವ ಅಮರಿಂದರ್ ಸಿಂಗ್ ಈ ಬಾರಿ ಎಂಟು ‍ಪಂದ್ಯಗಳಲ್ಲಿ 17 ಸೇವ್ ಮಾಡಿದ್ದಾರೆ. ಅವರು ಬಿಟ್ಟುಕೊಟ್ಟಿರುವುದು ಮೂರು ಗೋಲು ಮಾತ್ರ. ಆ್ಯಡಂ ಲೀ ಫಾಂಡ್ರೆ ಚಿನ್ನದ ಬೂಟು ಗಳಿಸುವ ‘ರೇಸ್‌’ನಲ್ಲಿದ್ದಾರೆ. ಎಂಟು ಪಂದ್ಯಗಳಲ್ಲಿ ಆರು ಗೋಲು ಗಳಿಸಿರುವ ಅವರು ತಂಡ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಬೆಂಗಳೂರಿನ ವಿಘ್ನೇಶ್ ಉದಯೋನ್ಮುಖ ಯುವ ಆಟಗಾರರ ಪಟ್ಟಿಯಲ್ಲಿ ಸ್ಥಾನ ಗಳಿಸಿ ಭರವಸೆ ಮೂಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು