ಯೂರೊ ಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್: ಮತ್ತೆ ಇಟಲಿ–ಸ್ಪೇನ್ ಮುಖಾಮುಖಿ

ಲಂಡನ್: ಸ್ಪೇನ್ ಮತ್ತು ಇಟಲಿ ತಂಡಗಳು ಯೂರೊ ಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಸತತ ನಾಲ್ಕನೇ ಬಾರಿ ಮುಖಾಮುಖಿಯಾಗಲು ವೇದಿಕೆ ಸಜ್ಜಾಗಿದೆ. ಈ ಬಾರಿ ಉಭಯ ತಂಡಗಳು ಮುಂದಿನ ಮಂಗಳವಾರ ಸೆಣಸಲಿದ್ದು ಲಂಡನ್‌ನ ವೆಂಬ್ಲಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಗೆದ್ದ ತಂಡ ಪ್ರಶಸ್ತಿ ಸುತ್ತು ಪ್ರವೇಶಿಸಲಿದೆ.
ಶುಕ್ರವಾರ ರಾತ್ರಿ ನಡೆದ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಪೇನ್ ಪೆನಾಲ್ಟಿ ಶೂಟ್‌ಔಟ್ ಮೂಲಕ ಸ್ವಿಟ್ಜರ್ಲೆಂಡ್ ವಿರುದ್ಧ 3–1ರ ಜಯ ಗಳಿಸಿತು. ತಡರಾತ್ರಿ ನಡೆದ ಮತ್ತೊಂದು ಪಂದ್ಯದಲ್ಲಿ ಅಗ್ರ ಕ್ರಮಾಂಕದ ಬೆಲ್ಜಿಯಂ ಎದುರು ಇಟಲಿ 2–1ರ ಗೆಲುವು ಸಾಧಿಸಿತು.
ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆದಿದ್ದ ಪಂದ್ಯದ ನಿಗದಿತ ಅವಧಿಯಲ್ಲಿ ಸ್ಪೇನ್ ಮತ್ತು ಸ್ವಿಟ್ಜರ್ಲೆಂಡ್ 1–1ರ ಸಮಬಲ ಸಾಧಿಸಿದ್ದವು. ಹೆಚ್ಚುವರಿ ಅರ್ಧ ತಾಸಿನಲ್ಲಿ ಮುನ್ನಡೆ ಗಲಿಸಲು ಯಾವ ತಂಡಕ್ಕೂ ಸಾಧ್ಯವಾಗಲಿಲ್ಲ. ಹೀಗಾಗಿ ಪೆನಾಲ್ಟಿ ಮೊರೆಹೋಲಾಯಿತು.
ಎಂಟನೇ ನಿಮಿಷದಲ್ಲಿ ಜಕಾರಿಯಾ ನೀಡಿದ ‘ಉಡುಗೊರೆ’ಯ ಮೂಲಕ ಸ್ಪೇನ್ ಮುನ್ನಡೆ ಸಾಧಿಸಿತ್ತು. ಶಾಕಿರಿ 68ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ಸ್ವಿಟ್ಜರ್ಲೆಂಡ್ ಪಾಳಯ ನಿಟ್ಟುಸಿರು ಬಿಡುವಂತೆ ಮಾಡಿದ್ದರು. ಆದರೆ 77ನೇ ನಿಮಿಷದಲ್ಲಿ ರೆಡ್ ಕಾರ್ಡ್ ಪಡೆದು ಫ್ರೂಲರ್ ಹೊರಹೋದದ್ದರಿಂದ ಸ್ವಿಟ್ಜರ್ಲೆಂಡ್‌ಗೆ ಪೆಟ್ಟು ಬಿತ್ತು.
ಮ್ಯೂನಿಚ್‌ನಲ್ಲಿ ನಡೆದ ಪಂದ್ಯದ 31ನೇ ನಿಮಿಷದಲ್ಲಿ ಬರೆಲ್ಲ ಮತ್ತು 44ನೇ ನಿಮಿಷದಲ್ಲಿ ಇನ್‌ಸಿನ್ ಗಳಿಸಿದ ಗೋಲುಗಳ ಮೂಲಕ ಇಟಲಿ ಮುನ್ನಡೆ ಸಾಧಿಸಿತು. ಮೊದಲಾರ್ಧದ ಇಂಜುರಿ ಅವಧಿಯಲ್ಲಿ ಲಭಿಸಿದ ಪೆನಾಲ್ಟಿ ಅವಕಾಶದಲ್ಲಿ ಬೆಲ್ಜಿಯಂ ಪರವಾಗಿ ಲುಕಾಕು ಗೋಲು ಗಳಿಸಿದರು. ಆದರೆ ದ್ವಿತೀಯಾರ್ಧದಲ್ಲಿ ಮುನ್ನಡೆ ಉಳಿಸಿಕೊಂಡು ಕಾದಾಡಿದ ಇಟಲಿ ಜಯದ ನಗೆ ಸೂಸಿತು.
ಈ ಗೆಲುವಿನೊಂದಿಗೆ ತಂಡ ಸತತ 32 ಪಂದ್ಯಗಳಲ್ಲಿ ಅಜೇಯವಾಗಿ ಉಳಿಯಿತು. ಈ ಪೈಕಿ 13 ಪಂದ್ಯಗಳಲ್ಲಿ ಅದು ಜಯ ಗಳಿಸಿದೆ.
ಸ್ಪೇನ್ ಮತ್ತು ಇಟಲಿ ಚಾಂಪಿಯನ್‌ಷಿಪ್‌ನಲ್ಲಿ ಈ ವರೆಗೆ ಹೆಚ್ಚು ಗೋಲು ಗಳಿಸಿದ ತಂಡಗಳಾಗಿವೆ. ಮೊದಲ ಪಂದ್ಯದಲ್ಲಿ ಸ್ವೀಡನ್ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿದ್ದ ಸ್ಪೇನ್ ಈ ವರೆಗೆ ಒಟ್ಟು 12 ಬಾರಿ ಚೆಂಡನ್ನು ಬಲೆಯೊಳಗೆ ಸೇರಿಸಿದ್ದು ಇಟಲಿ 11 ಬಾರಿ ಈ ಸಾಧನೆ ಮಾಡಿದೆ. ಇಟಲಿ ಪರ ಸಿರೊ ಇಮೊಬೈಲ್, ಮಟಿಯೊ ಪೆಸಿನಾ, ಮ್ಯಾನ್ಯುಯೆಲ್ ಲೊಕಟೆಲಿ ಮತ್ತು ಲೊರೆನ್ಸೊ ಇನ್ಸಿನೆ ತಲಾ ಎರಡು ಗೋಲು ಗಳಿಸಿದ್ದಾರೆ. ಪ್ಯಾಬ್ಲೊ ಸರಬಿಯಾ, ಫೆರಾನ್ ಟೊರೆಸ್ ಮತ್ತು ಅಲ್ವಾರೊ ಮೊರಾಟ ಅವರು ಸ್ಪೇನ್‌ಗಾಗಿ ತಲಾ ಎರಡು ಗೋಲು ಗಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.