ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾ ಲಿಗಾ ಫುಟ್‌ಬಾಲ್‌: ಪಾಲನೆಯಾಗುತ್ತಿಲ್ಲ ಅಂತರ ನಿಯಮ

ಮ್ಯಾಡ್ರಿಡ್‌ಗೆ ಜಯದ ಸಿಹಿ; ಆಟಗಾರರಿಂದ ‘ಹೈ ಫೈವ್‌’ ಸಂಭ್ರಮ
Last Updated 19 ಜೂನ್ 2020, 6:31 IST
ಅಕ್ಷರ ಗಾತ್ರ

ಮ್ಯಾಡ್ರಿಡ್‌: ಕೊರೊನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇವೆ. ಈ ಆತಂಕದ ನಡುವೆಯೇ ವಿಶ್ವದ ಹಲವೆಡೆ ಫುಟ್‌ಬಾಲ್‌ ಚಟುವಟಿಕೆಗಳು ಗರಿಗೆದರಿವೆ.

ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಫಿಫಾ ಸೇರಿದಂತೆ ಹಲವು ಫೆಡರೇಷನ್‌ಗಳು ತಮ್ಮದೇ ಆದ ಮಾರ್ಗಸೂಚಿಗಳನ್ನು ರೂಪಿಸಿವೆ. ಆಟದ ವೇಳೆ ಎಲ್ಲರೂ ಅಂತರ ಕಾಪಾಡಿಕೊಳ್ಳಬೇಕು, ‘ಹೈ ಫೈವ್‌’ ಸಂಭ್ರಮದಿಂದ ದೂರ ಇರಬೇಕು ಎಂದು ಒತ್ತಿ ಹೇಳಿವೆ. ಕ್ರಿಸ್ಟಿಯಾನೊ ರೊನಾಲ್ಡೊ, ಲಯೊನೆಲ್‌ ಮೆಸ್ಸಿ, ಲೂಕಾ ಮಾಡ್ರಿಕ್, ಏಡನ್‌ ಹಜಾರ್ಡ್‌‌ ಅವರಂತಹ ವಿಶ್ವಶ್ರೇಷ್ಠ ಆಟಗಾರರು ಪಾಲ್ಗೊಂಡಿರುವಸ್ಪ್ಯಾನಿಷ್‌ ಹಾಗೂ ಇಟಾಲಿಯನ್ ಫುಟ್‌ಬಾಲ್‌‌ ಲೀಗ್‌ಗಳಲ್ಲೇ ಈ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ.

ರೋಮ್‌ ನಗರದ ಒಲಿಂಪಿಕ್‌ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದಿದ್ದ ಇಟಾಲಿಯನ್‌ ಕಪ್‌ ಟೂರ್ನಿಯ ಫೈನಲ್‌ನಲ್ಲಿ ಯುವೆಂಟಸ್‌ ತಂಡವನ್ನು ಮಣಿಸಿದ ಬಳಿಕ ನಪೋಲಿ ತಂಡದ ಆಟಗಾರರು ವಿಜಯ ವೇದಿಕೆಯಲ್ಲಿಪರಸ್ಪರ ಆಲಂಗಿಸಿಕೊಂಡು, ಒಬ್ಬರ ಮೇಲೊಬ್ಬರು ಬಿದ್ದು ಸಂಭ್ರಮಿಸಿದ್ದು ಚರ್ಚೆಗೆ ಎಡೆಮಾಡಿಕೊಟ್ಟಿತ್ತು.

ಲಾ ಲಿಗಾ ಟೂರ್ನಿಯಲ್ಲೂ ಈಗ ಅಂತರ ನಿಯಮ ಉಲ್ಲಂಘನೆಯಾಗಿದೆ. ಗುರುವಾರ ರಾತ್ರಿ ಅಲ್ಫ್ರೆಡೊ ಡಿ ಸ್ಟೆಫಾನೊ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಿಯಲ್‌ ಮ್ಯಾಡ್ರಿಡ್‌ 3–0 ಗೋಲುಗಳಿಂದ ವಲೆನ್ಸಿಯಾ ತಂಡವನ್ನು ಮಣಿಸಿತು.

ಪಂದ್ಯದ ವೇಳೆ ಗೋಲು ಗಳಿಸಿದಾಗಲೆಲ್ಲಾ ರಿಯಲ್‌ ಮ್ಯಾಡ್ರಿಡ್‌ ತಂಡದ ಆಟಗಾರರು ಪರಸ್ಪರ ಆಲಂಗಿಸಿಕೊಂಡು ಖುಷಿಪಡುವುದು ಸಾಮಾನ್ಯವಾಗಿತ್ತು.

ಖಾಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನಿಂದ ಸೆಣಸಿದವು. ಹೀಗಾಗಿ ಮೊದಲಾರ್ಧದ ಆಟ ಗೋಲು ರಹಿತವಾಗಿತ್ತು. ದ್ವಿತೀಯಾರ್ಧದಲ್ಲಿ ರಿಯಲ್‌ ಮ್ಯಾಡ್ರಿಡ್‌ ಆಟಗಾರರು ಮೋಡಿ ಮಾಡಿದರು. ಕರೀಂ ಬೆಂಜೆಮಾ ಕಾಲ್ಚಳಕ ತೋರಿದರು.

61ನೇ ನಿಮಿಷದಲ್ಲಿ ಬೆಂಜೆಮಾ, ಮ್ಯಾಡ್ರಿಡ್‌ ತಂಡದ ಖಾತೆ ತೆರೆದರು. ಏಡನ್‌ ಹಜಾರ್ಡ್‌ ನೀಡಿದ ಪಾಸ್‌ನಲ್ಲಿ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ ಅವರು ಅದನ್ನು ಚುರುಕಾಗಿ ಗುರಿ ಸೇರಿಸಿದರು.

ಗಾಯದ ಕಾರಣ ಸುದೀರ್ಘ ಸಮಯ ಅಂಗಳದಿಂದ ದೂರ ಉಳಿದಿದ್ದ ಮಾರ್ಕೊ ಅಸೆನ್ಸಿಯೊ 74ನೇ ನಿಮಿಷದಲ್ಲಿ ಗೋಲು ಬಾರಿಸಿ ಮ್ಯಾಡ್ರಿಡ್‌ ತಂಡದ ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು. 86ನೇ ನಿಮಿಷದಲ್ಲಿ ಮತ್ತೊಮ್ಮೆ ಮಿಂಚಿದ ಬೆಂಜೆಮಾ, ರಿಯಲ್‌ ಮ್ಯಾಡ್ರಿಡ್‌ ಸಂಭ್ರಮಕ್ಕೆ ಕಾರಣರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT