ಬುಧವಾರ, ಫೆಬ್ರವರಿ 26, 2020
19 °C

ಫುಟ್ಬಾಲ್ ಲೋಕದ ಮೋಡಿಗಾರ ಮೆಸ್ಸಿ

ಬಸವರಾಜ ದಳವಾಯಿ Updated:

ಅಕ್ಷರ ಗಾತ್ರ : | |

ಚಾಣಾಕ್ಷ ಆಟದ ಮೂಲಕ ವಿಶ್ವ ಫುಟ್‌ಬಾಲ್‌ನಲ್ಲಿ ಸಂಚಲನ ಸೃಷ್ಟಿಸುತ್ತಿರುವ ಪ್ರತಿಭೆ ಲಯೊನೆಲ್‌ ಮೆಸ್ಸಿ. ವಿಶ್ವ ಶ್ರೇಷ್ಠ ಫುಟ್‌ಬಾಲ್‌ ಆಟಗಾರನಿಗೆ ನೀಡಲಾಗುವ ಬ್ಯಾಲನ್‌ ಡಿ ಒರ್‌ ಪ್ರಶಸ್ತಿಯನ್ನು ದಾಖಲೆಯ ಆರನೇ ಬಾರಿ ಗೆಲ್ಲುವ ಮೂಲಕ ಅರ್ಜೆಂಟೀನಾ ಆಟಗಾರ ಮತ್ತೆ ಸುದ್ದಿಯಲ್ಲಿದ್ದಾರೆ.  ಪ್ರಶಸ್ತಿಗೆ ಪ್ರಮುಖ ಪ್ರತಿಸ್ಪರ್ಧಿಯಾಗಿದ್ದ ಪೋರ್ಚುಗಲ್‌ ರಾಷ್ಟ್ರೀಯ ತಂಡದ ಕ್ರಿಸ್ಟಿಯಾನೊ ರೊನಾಲ್ಡೊ ಈ ಬಾರಿ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ರನ್ನರ್‌ ಅಪ್‌ ಆಗಿದ್ದು ನೆದರ್ಲೆಂಡ್ಸ್ ತಂಡದ ವರ್ಜಿಲ್‌ ವ್ಯಾನ್‌ ಡಿಕ್‌.

32 ವರ್ಷದ ಫಾವರ್ಡ್ ಆಟಗಾರ ಮೆಸ್ಸಿ, ಸ್ಪ್ಯಾನಿಶ್‌ ಕ್ಲಬ್‌ ಬಾರ್ಸಿಲೋನಾ ತಂಡದ ನಾಯಕ ಕೂಡ. ತಮ್ಮದೇ ದೇಶದ ದಿಗ್ಗಜ ಆಟಗಾರ ಡಿಗೊ ಮರಡೋನಾ ಅವರ ಹೆಜ್ಜೆಗುರುತು ಅನುಸರಿಸುತ್ತಿರುವ ಮೆಸ್ಸಿ ದಾಖಲೆಗಳ ಮೇಲೆ ದಾಖಲೆ ಸ್ಥಾಪಿಸುತ್ತಲೇ ಮುನ್ನುಗ್ಗುತ್ತಿದ್ದಾರೆ. ಮರಡೋನಾ ಕೂಡ ಮೆಸ್ಸಿ ಅವರನ್ನು ತಮ್ಮ ಉತ್ತರಾಧಿಕಾರಿ ಎಂದೇ ಮೆಚ್ಚಿಕೊಳ್ಳುತ್ತಾರೆ.

ಆರು ಬಾರಿ ಯುರೋಪಿಯನ್‌ ಗೋಲ್ಡನ್‌ ಶೂ ಗೌರವಕ್ಕೂ ಮೆಸ್ಸಿ ಪಾತ್ರರಾಗಿದ್ದಾರೆ. ಯುರೋಪಿಯನ್‌ ಫುಟ್‌ಬಾಲ್‌ ಸಂಸ್ಥೆಗಳ ಒಕ್ಕೂಟ (ಯುಇಎಫ್‌ಎ) ಚಾಂಪಿಯನ್ಸ್ ಲೀಗ್‌ ಪ್ರಶಸ್ತಿ ನಾಲ್ಕು ಬಾರಿ ಅವರಿಗೆ ಒಲಿದಿದೆ. 2019ರಲ್ಲಿ ಇದುವರೆಗೆ ಮೆಸ್ಸಿ 54 ಪಂದ್ಯಗಳನ್ನು ಆಡಿ 46 ಗೋಲು ದಾಖಲಿಸಿದ್ದಾರೆ. ಅದರಲ್ಲಿ ಬಾರ್ಸಿಲೋನಾ ಪರ ಲಾಲಿಗಾ ಟೂರ್ನಿಯಲ್ಲಿ ಗಳಿಸಿದ್ದು 36 ಗೋಲುಗಳು. ದೇಶ ಹಾಗೂ ಕ್ಲಬ್‌ ಪಂದ್ಯಗಳು ಸೇರಿ ಅವರು 700 ಗೋಲುಗಳ ಒಡೆಯರು. 2019ರಲ್ಲಿ ಫೋರ್ಬ್ಸ್ ನಿಯತಕಾಲಿಕೆಯು ಮೆಸ್ಸಿ ಅವರನ್ನು ವಿಶ್ವದ ಅತೀ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟು ಎಂದು ರ‍್ಯಾಂಕ್ ನೀಡಿದೆ.

ಲಯೊನೆಲ್‌ ಮೆಸ್ಸಿ ಆರು ಬಾರಿ ಬ್ಯಾಲನ್ ಡಿ ಒರ್‌ ಪ್ರಶಸ್ತಿ ಸ್ವೀಕರಿಸಿದ ಕ್ಷಣಗಳು- ಎಎಫ್‌ಪಿ ಚಿತ್ರ

2007ರಲ್ಲಿ ಫಿಫಾ ವರ್ಷದ ಆಟಗಾರ ಹಾಗೂ ಬ್ಯಾಲನ್‌ ಡಿ ಒರ್‌ ಪ್ರಶಸ್ತಿಗೆ ಫೈನಲಿಸ್ಟ್‌ ಆಗಿದ್ದ ಮೆಸ್ಸಿ, 2009ರಲ್ಲಿ ಮೊದಲ ಬಾರಿ ಎರಡೂ ಪ್ರಶಸ್ತಿಗಳಿಗೆ ಮುತ್ತಿಕ್ಕಿದ್ದರು. ನಂತರದ ಸತತ ಮೂರು ವರ್ಷಗಳು ಬ್ಯಾಲನ್‌ ಡಿ ಒರ್‌ ಮೇಲೆ ಅವರದೇ ಆಧಿಪತ್ಯ. ಈ ಪ್ರಶಸ್ತಿಯ ಹಾದಿಯಲ್ಲಿ ಮೆಸ್ಸಿ ಅವರಿಗೆ ರೊನಾಲ್ಡೊ ಪ್ರಮುಖ ಸ್ಪರ್ಧಿ. ಈ ಇಬ್ಬರೂ 12 ಬಾರಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಎರಡನೇ ಸ್ಥಾನವನ್ನು ರೊನಾಲ್ಡೊ ಆರು ಬಾರಿ ಪಡೆದರೆ, ಮೆಸ್ಸಿ ಐದು ಬಾರಿ ಗಳಿಸಿದ್ದಾರೆ. ಇಬ್ಬರೂ ತಲಾ ಒಂದು ಬಾರಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. 2008ರಲ್ಲಿ ರೊನಾಲ್ಡೊ ಮೊದಲ ಬಾರಿ ಟ್ರೋಫಿ ಗೆದ್ದ ವೇಳೆ ಮೆಸ್ಸಿ ರನ್ನರ್‌ ಅಪ್‌ ಆಗಿದ್ದರು. 

ಮಾನವೀಯ ಮುಖ

ತಮ್ಮ ಆಕರ್ಷಕ ಆಟದ ಮೂಲಕ ಜನಮನ ಸೆಳೆದಿರುವ ಅರ್ಜೆಂಟೀನಾ ಆಟಗಾರ, ಮಾನವೀಯ ಕಾರ್ಯಗಳಿಗೂ ಹೆಸರುವಾಸಿ. ವಿಶ್ವಸಂಸ್ಥೆಯ ಮಕ್ಕಳ ನಿಧಿಗೆ(ಯುನಿಸೆಫ್‌) ಆರ್ಥಿಕ ನೆರವು ನೀಡುತ್ತಿದ್ದಾರೆ. ಸಮಯ ಮೀಸಲಿಡುತ್ತಿದ್ದಾರೆ. 2007ರಲ್ಲಿ ಲಿಯೊ ಮೆಸ್ಸಿ ಫೌಂಡೇಶನ್‌ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಮಕ್ಕಳಿಗಾಗಿ ಆರೋಗ್ಯದ ಕುರಿತು ಜಾಗೃತಿ, ಶಿಕ್ಷಣ ಹಾಗೂ ಅವರ ಕ್ರೀಡಾಸಕ್ತಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು