ಸೋಮವಾರ, ಜನವರಿ 18, 2021
22 °C
ಇಂಡಿಯನ್‌ ಸೂಪರ್ ಲೀಗ್‌ ಫುಟ್‌ಬಾಲ್‌ ಟೂರ್ನಿ: ಜಮ್ಶೆಡ್‌ಪುರ ವಿರುದ್ಧದ ಪಂದ್ಯ ಡ್ರಾ

ಮೌರಿಸಿಯೊ ಸಾಹಸ: ಸೋಲಿನಿಂದ ಪಾರಾದ ಒಡಿಶಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮ್ಶೆಡ್‌ಪುರ ಎಫ್‌ಸಿ ತಂಡದ ನೆರಿಜುಸ್‌ ವಲ್ಕೀಸ್‌–ಪಿಟಿಐ ಚಿತ್ರ

ವಾಸ್ಕೋ: ಪಂದ್ಯದ ಹೆಚ್ಚುವರಿ ಅವಧಿಯಲ್ಲಿ ಕಾಲ್ಚಳಕ ತೋರಿದ ಡಿಯೆಗೊ ಮೌರಿಸಿಯೊ ಒಡಿಶಾ ಎಫ್‌ಸಿಗೆ ಆಪತ್ಬಾಂಧವರಾದರು. ಜಮ್ಶೆಡ್‌ಪುರ ಎಫ್‌ಸಿ ತಂಡದ ಗೆಲುವಿನ ಆಸೆಗೆ ತಣ್ಣೀರೆರೆಚಿದರು. ಇಂಡಿಯನ್‌ ಸೂಪರ್‌ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಉಭಯ ತಂಡಗಳ ನಡುವೆ ಭಾನುವಾರ ಇಲ್ಲಿ ನಡೆದ ಪಂದ್ಯ 2–2ರ ಡ್ರಾನಲ್ಲಿ ಅಂತ್ಯವಾಯಿತು.

ಪಂದ್ಯದ ಏಳನೇ ನಿಮಿಷದಲ್ಲೇ ಗೋಲು ಗಳಿಸುವ ಅವಕಾಶವೊಂದನ್ನು ಜಮ್ಶೆಡ್‌ಪುರ (ಜೆಎಫ್‌ಸಿ) ತಂಡದ ನೆರಿಜುಸ್ ವಲ್ಕೀಸ್‌ ಕೈ ಚೆಲ್ಲಿದರು. ಆದರೆ ಐದು ನಿಮಿಷಗಳ ಅಂತರದಲ್ಲಿ ವಲ್ಕೀಸ್‌ ಅವರಿಗೆ ಸಿಕ್ಕ ಪೆನಾಲ್ಟಿ ಅವಕಾಶ ಕೈತಪ್ಪಲಿಲ್ಲ. ಪಂದ್ಯದ ಮೊದಲ ಗೋಲು ಹೊಡೆದ ಅವರು ತಂಡದ ಜಯದ ನಿರೀಕ್ಷೆಗೆ ನೀರೆರೆದಿದ್ದರು.

ಅದೇ ಲಯದಲ್ಲಿ ಮುಂದುವರಿದ ವಲ್ಕೀಸ್‌ 27ನೇ ನಿಮಿಷದಲ್ಲಿ ಮತ್ತೊಂದು ಸೊಗಸಾದ ಗೋಲು ದಾಖಲಿಸಿದರು. 2–0 ಮುನ್ನಡೆಯೊಂದಿಗೆ ಜೆಎಫ್‌ಸಿ ವಿರಾಮಕ್ಕೆ ತೆರಳಿತು.

ದ್ವಿತೀಯಾರ್ಧದಲ್ಲಿ ಆಟ ರಂಗೇರಿತು. 77ನೇ ನಿಮಿಷದಲ್ಲಿ ಡಿಯೆಗೊ ಮೌರಿಸಿಯೊ ಅವರು ಜಾಕಬ್‌ ಟ್ರಾಟ್‌ ನೆರವಿನಲ್ಲಿ ಗೋಲು ದಾಖಲಿಸಿ ಒಡಿಶಾ ತಂಡದ ಹಿನ್ನಡೆಯನ್ನು ತಗ್ಗಿಸಿದರು. ಆ ಬಳಿಕ ಉಭಯ ತಂಡಗಳು ಭಾರೀ ಪೈಪೋಟಿ ನಡೆಸಿದರೂ ಗೋಲು ದಾಖಲಾಗಲಿಲ್ಲ. ಆದರೆ 90ನೇ ನಿಮಿಷದಲ್ಲಿ ಮೌರಿಸಿಯೊ ತೋರಿದ ಸಾಹಸ ಒಡಿಶಾ ತಂಡವನ್ನು ಸೋಲಿನ ಬಲೆಯಿಂದ ಪಾರು ಮಾಡಿತು. ಡೇನಿಯಲ್‌ ನೀಡಿದ ಪಾಸ್‌ನಲ್ಲಿ ಸುಂದರ ಗೋಲು ಹೊಡೆದ ಅವರು ತಂಡ ನಿಟ್ಟುಸಿರು ಬಿಡುವಂತೆ ಮಾಡಿದರು.

ತನ್ನ ಕ್ಷೇತ್ರ ವ್ಯಾಪ್ತಿ ಮೀರಿ ಚೆಂಡು ತಡೆದ ಕಾರಣ ಜಮ್ಶೆಡ್‌ಪುರ ಎಫ್‌ಸಿಯ ಗೋಲ್‌ಕೀಪರ್‌ ರೆಹನೇಶ್‌ ತುಂಬಿರುಂಬು ಪರಂಬ 74ನೇ ನಿಮಿಷದಲ್ಲಿ ಕೆಂಪು ಕಾರ್ಡ್‌ ಪಡೆದು ಹೊರನಡೆದರು. ಇದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿತು.

ಪಂದ್ಯದಲ್ಲಿ ಒಡಿಶಾ ಎಫ್‌ಸಿಯ ನಂದಕುಮಾರ್‌ ಶೇಖರ್‌, ಅಲೆಕ್ಸಾಂಡರ್‌, ಟ್ರಾಟ್‌ ಹಾಗೂ ಹೆಂಡ್ರಿ ಆ್ಯಂಟನಿ ಅವರು ಹಳದಿ ಕಾರ್ಡ್‌ ದರ್ಶನ ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು