ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಐಎಸ್‌ಎಲ್‌: ಲೊಬೆರಾ ತಂತ್ರ; ಮುಂಬೈ ಎಫ್‌ಸಿ ಯಶಸ್ಸಿನ ಮಂತ್ರ

Last Updated 14 ಮಾರ್ಚ್ 2021, 8:31 IST
ಅಕ್ಷರ ಗಾತ್ರ

‘ಈ ಸಂಭ್ರಮವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವೇ ಆಗುತ್ತಿಲ್ಲ. ತಂಡದ ಬಗ್ಗೆ ನನಗೆ ತುಂಬ ಗೌರವ ಇದೆ. ಒಂದು ಕುಟುಂಬದಂತೆ ಕಳೆದಿದ್ದ ತಂಡ ಪ್ರತಿ ಪಂದ್ಯದಲ್ಲೂ ಒಗ್ಗಟ್ಟನ್ನು ಸಾಬೀತು ಮಾಡಿದೆ. ಫೈನಲ್ ಪಂದ್ಯದಲ್ಲೂ ಅದು ಪ್ರತಿಫಲನಗೊಂಡಿದ್ದು ಎದುರಾಳಿಗಳನ್ನು ಮಣಿಸುವುವರೊಂದಿಗೆ ಚಾಂಪಿಯನ್ ಪಟ್ಟಕ್ಕೇರಿದೆ. ಇದು ನನ್ನ ಸಾಧನೆಯಲ್ಲ. ನಾನು ಮಾರ್ಗದರ್ಶನ ನೀಡಿದ್ದೇನಷ್ಟೇ. ಗೆಲುವಿನ ರೂವಾರಿಗಳು ಕಣದಲ್ಲಿ ಕಾದಾಡಿದ ಆಟಗಾರರು. ಹೀಗಾಗಿ ಈ ಶ್ರೇಯ ಅವರಿಗೇ ಸಲ್ಲಬೇಕು…’

ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದ ನಂತರ ಇಷ್ಟು ಹೇಳುವಷ್ಟರಲ್ಲಿ ಮುಂಬೈ ಸಿಟಿ ಎಫ್‌ಸಿ ಕೋಚ್‌ ಸರ್ಜಿಯೊ ಲೊಬೆರಾ ಭಾವುಕರಾಗಿ, ಪದಗಳಿಗಾಗಿ ತಡಕಾಡತೊಡಗಿದ್ದರು.

ಅವರು ಈ ಗೆಲುವಿನ ಸಂಭ್ರಮದಲ್ಲಿ ಅಷ್ಟೊಂದು ಭಾವುಕರಾಗಲು ಕಾರಣವೂ ಇತ್ತು. ಐಎಸ್‌ಎಲ್‌ ಟೂರ್ನಿಯಲ್ಲಿ ನಾಲ್ಕು ವರ್ಷಗಳಿಂದ ಕೋಚ್ ಆಗಿರುವ ಅವರಿಗೆ ಹಿಂದಿನ ಮೂರು ಆವೃತ್ತಿಗಳಲ್ಲಿ ತಂಡಕ್ಕೆ ಪ್ರಶಸ್ತಿ ಗೆಲ್ಲಿಸಿಕೊಡಲು ಆಗಿರಲಿಲ್ಲ. ಹಿಂದಿನ ಮೂರು ವರ್ಷ ಅವರು ಎಫ್‌ಸಿ ಗೋವಾ ಜೊತೆ ಇದ್ದರು. ಈ ಅವಧಿಯಲ್ಲಿ ಒಂದು ಬಾರಿ ಫೈನಲ್‌ ಮತ್ತು ಎರಡು ಬಾರಿ ಸೆಮಿಫೈನಲ್‌ ಪ್ರವೇಶಿಸಿದ್ದರೂ ಚಾಂಪಿಯನ್ ಪಟ್ಟಕ್ಕೇರಲು ಸಾಧ್ಯವಾಗಿರಲಿಲ್ಲ.

ಕಳೆದ ಬಾರಿ ಸರ್ಜಿಯೊ ಲೊಬೆರಾ ಮಾರ್ಗದರ್ಶನದಲ್ಲಿ ಗೋವಾ ತಂಡ ಲೀಗ್ ವಿಜೇತ ಪಟ್ಟವನ್ನು ತನ್ನದಾಗಿಸಿಕೊಂಡಿತ್ತು. ಆದರೆ ಪ್ಲೇ ಆಫ್‌ ಹಂತದಲ್ಲಿ ಸೋತು ಹೊರಬಿದ್ದಿತ್ತು. ಅದಕ್ಕೂ ಹಿಂದಿನ ವರ್ಷ ಫೈನಲ್‌ ಪ್ರವೇಶಿಸಿದ್ದರೂ ಬೆಂಗಳೂರು ಎಫ್‌ಸಿ ಎದುರು ಸೋತು ರನ್ನರ್ ಅಪ್ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡಿತ್ತು.

ಆದರೆ ಮುಂಬೈ ತಂಡದ ಜೊತೆ ಅವರ ತಾಳ–ಮೇಳ ಲಯ ತಪ್ಪದಂತೆ ಸಾಗಿತು. ಲೀಗ್‌ನಲ್ಲಿ ಆರಂಭದ ಪಂದ್ಯವನ್ನು ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ ಸೋತರೂ ಬೇಗನೇ ಚೇತರಿಸಿಕೊಂಡ ತಂಡ ಎರಡನೇ ಪಂದ್ಯದಲ್ಲಿ ಎಫ್‌ಸಿ ಗೋವಾವನ್ನು ಮಣಿಸಿ ಭರವಸೆ ಮೂಡಿಸಿಕೊಂಡಿತ್ತು. ಈ ಪಂದ್ಯ ಲೊಬೆರಾ ಪಾಲಿಗೆ ಮಹತ್ವದ್ದಾಗಿತ್ತು. ಮೂರು ವರ್ಷಗಳ ನಂತರ ಗೋವಾ ತೊರೆದು ಮುಂಬೈ ಸೇರಿದ್ದ ಲೊಬೆರಾ ಅವರಿಗೆ ತಾವು ಹಿಂದೆ ಇದ್ದ ತಂಡದ ತಂತ್ರಗಳಿಗೆ ಪ್ರತಿತಂತ್ರ ಹೂಡಲು ಆಗದೇ ಇದ್ದಿದ್ದರೆ ಭರವಸೆ ಕಳೆದುಕೊಳ್ಳುತ್ತಿದ್ದರು.

ಲೀಗ್ ಹಂತದ ಎರಡನೇ ಲೆಗ್‌ನಲ್ಲೂ ಗೋವಾಗೆ ಮುಂಬೈ ಮಣಿಯಲ್ಲಿಲ್ಲ. ಆ ಪಂದ್ಯ 3–3ರಲ್ಲಿ ಡ್ರಾ ಆಗಿತ್ತು. ಸೆಮಿಫೈನಲ್‌ನ ಮೊದಲ ಲೆಗ್‌ ಪಂದ್ಯ 2–2ರಲ್ಲಿ ಡ್ರಾ ಆಗಿತ್ತು. ಹೀಗಾಗಿ ಎರಡನೇ ಲೆಗ್‌ನಲ್ಲಿ ಜಯ ಅನಿವಾರ್ಯವಾಗಿತ್ತು. ಆ ಪಂದ್ಯ ಡ್ರಾ ಆದಾಗ ಪೆನಾಲ್ಟಿ ಶೂಟೌಟ್ ಮತ್ತು ಸಡನ್ ಡೆತ್‌ ಸಂದರ್ಭದಲ್ಲಿ ಲೊಬೆರಾ ತೋರಿದ ತಾಳ್ಮೆ ಮತ್ತು ಹೂಡಿದ ತಂತ್ರಗಳು ಗಮನಾರ್ಹ.

ಫೈನಲ್‌ನಲ್ಲಿ ಎಟಿಕೆ ಮೋಹನ್ ಬಾಗನ್ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಅದಕ್ಕೆ ತಕ್ಕಂತೆ ಮೊದಲ ಗೋಲು ಹೊಡೆದು ಆತಂಕವನ್ನೂ ಮೂಡಿಸಿತ್ತು. ಆದರೆ ಲೊಬೆರಾ ಎದೆಗುಂದಲಿಲ್ಲ. ಅವರಿಗೆ ತಂಡದ ಆಟಗಾರರ ಮೇಲೆ ನಂಬಿಕೆ ಇತ್ತು. ತಮ್ಮ ನೆಚ್ಚಿನ ತಂತ್ರವಾದ 4–2–3–1 ಕೈಕೊಡದು ಎಂಬ ನಂಬಿಕೆ ಬಲವಾಗಿತ್ತು. ಈ ಪಂದ್ಯದಲ್ಲಿ ಅವರು ಇಬ್ಬರು ಡಿಫೆಂಡರ್‌ಗಳು ಮತ್ತು ಏಕೈಕ ಫಾರ್ವರ್ಡರ್ ಒಳಗೊಂಡ ತಂಡವನ್ನು ಕಣಕ್ಕೆ ಇಳಿಸಿದ್ದರು. ಎರಡೂ ವಿಭಾಗಕ್ಕೆ ಬಲ ತುಂಬಲು ಸಮರ್ಥ ಮಿಡ್‌ಫೀಲ್ಡರ್‌ಗಳ ಪಡೆ ಅವರಲ್ಲಿತ್ತು. ಮೊದಲ ಗೋಲನ್ನು ಎದುರಾಳಿ ತಂಡ ಉಡುಗೊರೆಯಾಗಿ ನೀಡಿದ್ದರೂ ಇಂಜುರಿ ಅವಧಿಯಲ್ಲಿ ನಿರ್ಣಾಯಕ ಗೋಲು ಗಳಿಸಿ ಜಯ ತಂದುಕೊಟ್ಟವರು ಮಿಡ್‌ಫೀಲ್ಡರ್‌ ಬಿಪಿನ್ ಸಿಂಗ್‌.

ಬಾರ್ಸಿಲೋನಾದಿಂದ ಮುಂಬೈ ವರೆಗೆ; ಯಶಸ್ಸಿನ ಹೆಜ್ಜೆ

1997ರಲ್ಲಿ ಬಾರ್ಸಿಲೋನಾ ಯೂತ್ ತಂಡಕ್ಕೆ ತರಬೇತಿ ನೀಡಲು ಆರಂಭಿಸಿದಾಗಿನಿಂದ ಇಲ್ಲಿಯ ವರೆಗೆ ಸ್ಪೇನ್‌ನ ಲೊಬೆರಾ ತುಳಿದ ಹಾದಿಯಲ್ಲಿ ಯಶಸ್ಸಿನ ಹೂಗಳೇ ಅರಳಿ ನಿಂತಿವೆ. ಬಾರ್ಕಾ 18 ವರ್ಷದೊಳಗಿನವರ ತಂಡ, ತೆರಾಸಾ ಎಫ್‌ಸಿ, ಸ್ಯಾನ್ ರಾಕ್ ಲೀಪ್, ಅಥ್ಲೆಟಿಕೊ ಕ್ಯೂಟ, ಯುಡಿ ಲಾಸ್ ಪಲ್ಮಾಸ್ ಮತ್ತು ಮೊಗರಿಬ್ ಟೆಟಾನ್‌ನಲ್ಲಿ ಅವರು ಕಾರ್ಯನಿರ್ವಹಿಸಿದ್ದಾರೆ. ಆದರೂ ಹೆಚ್ಚು ಸಾಧನೆಯಾಗಿರುವುದು ಐಎಸ್‌ಎಲ್‌ನಲ್ಲಿ.

ಎಫ್‌ಸಿ ಗೋವಾ ಅವರ ಮಾರ್ಗದರ್ಶನದಲ್ಲಿ 59 ಪಂದ್ಯಗಳನ್ನು ಆಡಿದ್ದು 33 ಪಂದ್ಯಗಳಲ್ಲಿ ಗೆದ್ದು 11ರಲ್ಲಿ ಡ್ರಾ ಸಾಧಿಸಿತ್ತು. ಮುಂಬೈ ಅವರ ಮಾರ್ಗದರ್ಶನದಲ್ಲಿ ಆಡಿದ 23 ಪಂದ್ಯಗಳ ಪೈಕಿ 14ರಲ್ಲಿ ಜಯ ಗಳಿಸಿದೆ. ಕೇವಲ ನಾಲ್ಕು ಪಂದ್ಯಗಳಲ್ಲಿ ಸೋತಿದೆ. ಈ ನಡುವೆ ಲೀಗ್‌ ವಿಜೇತ ಪಟ್ಟವೂ ಚಾಂಪಿಯನ್ ಪಟ್ಟವೂ ತಂಡದ ಮುಡಿಯೇರಿದೆ. ಎಲ್ಲಕ್ಕಿಂತ ಮಿಗಿಲಾಗಿ ಎಎಫ್‌ಸಿ ಚಾಂಪಿಯನ್ಸ್ ಲೀಗ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಟಿಕೆಟ್ ತಂಡಕ್ಕೆ ಲಭಿಸಿದೆ. ದೇಶಿ ಲೀಗ್‌ನಲ್ಲಿ ಪಾರಮ್ಯ ಮೆರೆದ ತಂಡವನ್ನು ಏಷ್ಯಾ ಖಂಡದ ಸ್ಪರ್ಧೆಯಲ್ಲೂ ಲೊಬೆರಾ ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುವರೇ…?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT