ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್ಎಲ್‌: ಫೈನಲ್‌ಗೆ ಬೆಂಗಳೂರು ಎಫ್‌ಸಿ

ಪೆನಾಲ್ಟಿ ಶೂಟೌಟ್‌ನಲ್ಲಿ ಮುಂಬೈ ವಿರುದ್ಧ ಗೆಲುವು
Last Updated 13 ಮಾರ್ಚ್ 2023, 0:14 IST
ಅಕ್ಷರ ಗಾತ್ರ

ಬೆಂಗಳೂರು: ಪೆನಾಲ್ಟಿ ಶೂಟೌಟ್‌ನಲ್ಲಿ ಮುಂಬೈ ಸಿಟಿ ಎಫ್‌ಸಿ ತಂಡವನ್ನು ಮಣಿಸಿದ ಬೆಂಗಳೂರು ಎಫ್‌ಸಿ ತಂಡದವರು ಇಂಡಿಯನ್ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಫೈನಲ್‌ ಪ್ರವೇಶಿಸಿದರು.

ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಎರಡನೇ ಲೆಗ್‌ ಸೆಮಿಫೈನಲ್‌ ಪಂದ್ಯವನ್ನು ಬಿಎಫ್‌ಸಿ ಶೂಟೌಟ್‌ನಲ್ಲಿ 9–8 ರಲ್ಲಿ ಗೆದ್ದುಕೊಂಡಿತು. ಬೆಂಗಳೂರಿನ ತಂಡ ನಾಲ್ಕು ವರ್ಷಗಳ ಬಳಿಕ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದೆ.

ಮುಂಬೈನಲ್ಲಿ ನಡೆದಿದ್ದ ಮೊದಲ ಲೆಗ್‌ ಪಂದ್ಯವನ್ನು 1–0 ರಲ್ಲಿ ಗೆದ್ದಿದ್ದ ಬಿಎಫ್‌ಸಿ ಆತ್ಮವಿಶ್ವಾಸದೊಂದಿಗೆಯೇ ಎರಡನೇ ಲೆಗ್‌ ಪಂದ್ಯಕ್ಕಾಗಿ ಕಣಕ್ಕಿಳಿದಿತ್ತು. ಆದರೆ ಮುಂಬೈ ತಂಡ ನಿಗದಿತ ಅವಧಿಯಲ್ಲಿ 2–1 ರಲ್ಲಿ ಮುನ್ನಡೆ ಸಾಧಿಸಿತು.

ಮೊದಲ ಲೆಗ್‌ನ ಫಲಿತಾಂಶವನ್ನೂ ಸೇರಿಸಿದಾಗ 2–2 ರಲ್ಲಿ ಸಮಬಲವಾದ್ದರಿಂದ ಪಂದ್ಯ ಹೆಚ್ಚುವರಿ ಅವಧಿಗೆ ಹೋಯಿತು. ಹೆಚ್ಚುವರಿ ಅವಧಿಯ 30 ನಿಮಿಷಗಳ ಆಟದಲ್ಲಿ ಗೋಲು ಬರಲಿಲ್ಲ. ಇದರಿಂದ ಪೆನಾಲ್ಟಿ ಶೂಟೌಟ್‌ನಲ್ಲಿ ವಿಜೇತರನ್ನು ನಿರ್ಣಯಿಸಲಾಯಿತು.

ಶೂಟೌಟ್‌ನಲ್ಲಿ ಎರಡೂ ತಂಡಗಳ ಆಟಗಾರರು ಚೆಂಡನ್ನು ಗುರಿ ಸೇರಿಸುವಲ್ಲಿ ನಿಖರತೆ ಸಾಧಿಸಿದ್ದರಿಂದ 8–8 ರಲ್ಲಿ ಸಮಬಲ ಆಯಿತು.

ಮುಂಬೈ ಪರ 9ನೇ ಕಿಕ್‌ ತೆಗೆದ ಮೆಹ್ತಾಬ್‌ ಸಿಂಗ್‌ ಅವರು ಒದ್ದ ಚೆಂಡನ್ನು ಬಿಎಫ್‌ಸಿ ಗೋಲ್‌ಕೀಪರ್‌ ಗುರುಪ್ರೀತ್‌ ಸಂಧು ತಡೆದರು. ಬಿಎಫ್‌ಸಿ ಪರ ಕಿಕ್‌ ತೆಗೆದ ಸಂದೇಶ್‌ ಜಿಂಗಾನ್‌ ಅವರು ಯಶಸ್ವಿಯಾಗಿ ಗುರಿ ಸೇರಿಸಿದರು.

ಕಂಠೀರವ ಕ್ರೀಡಾಂಗಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳು ಸಂಭ್ರಮದಲ್ಲಿ ಮಿಂದೆದ್ದರು. ಬಿಎಫ್‌ಸಿ ಕೋಚ್‌ ಸೈಮನ್‌ ಗ್ರೇಸನ್‌ ಹಾಗೂ ಆಟಗಾರರು ಪರಸ್ಪರ ಅಪ್ಪಿಕೊಂಡು ಗೆಲುವಿನ ಖುಷಿ ಆಚರಿಸಿದರು.

ಎಟಿಕೆ ಮೋಹನ್‌ ಬಾಗನ್‌ ಮತ್ತು ಹೈದರಾಬಾದ್‌ ಎಫ್‌ಸಿ ತಂಡಗಳ ನಡುವಣ ಸೆಮಿಫೈನಲ್‌ ಪಂದ್ಯದ ವಿಜೇತರನ್ನು ಬಿಎಫ್‌ಸಿ ತಂಡ ಫೈನಲ್‌ನಲ್ಲಿ ಎದುರಿಸಲಿದೆ. ಪ್ರಶಸ್ತಿ ಸುತ್ತಿನ ಹಣಾಹಣಿ ಮಾರ್ಚ್‌ 18 ರಂದು ಗೋವಾದಲ್ಲಿ ನಡೆಯಲಿದೆ.

ನಿಗದಿತ ಅವಧಿಯ 22ನೇ ನಿಮಿಷ ದಲ್ಲಿ ಜಾವಿ ಹೆರ್ನಾಂಡೆಜ್‌ ಗೋಲು ಗಳಿಸಿ ಬಿಎಫ್‌ಸಿಗೆ ಮುನ್ನಡೆ ತಂದಿತ್ತರು. ಶಿವಶಕ್ತಿ ನಾರಾಯಣ್ ನೀಡಿದ ನಿಖರ ಪಾಸ್‌ನಲ್ಲಿ ದೊರೆತ ಚೆಂಡನ್ನು ಜಾವಿ ಹೆಡ್‌ ಮಾಡಿ ಗುರಿ ಸೇರಿಸಿದರು.

ಆದರೆ ಗೋಲಿನ ಸಂತಸ ಹೆಚ್ಚು ಸಮಯ ಇರಲಿಲ್ಲ. ಮುಂಬೈ ತಂಡದ ಬಿಪಿನ್‌ ಅವರು 30ನೇ ನಿಮಿಷದಲ್ಲಿ ಗೋಲು ಗಳಿಸಿ ಪಂದ್ಯವನ್ನು ಸಮಸ್ಥಿತಿಗೆ ತಂದರು. ಎರಡನೇ ಅವಧಿಯಲ್ಲೂ ಮುಂಬೈ ಆಕ್ರಮಣಕಾರಿ ಆಟವಾಡಿತು. ಮೆಹ್ತಾಬ್‌ ಅವರು 66ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ 2–1 ರಲ್ಲಿ ಮುನ್ನಡೆಗೆ ಕಾರಣರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT