ಗುರುವಾರ , ಆಗಸ್ಟ್ 11, 2022
22 °C

ಕ್ರಿಸ್ಟಿಯಾನೊ ರೊನಾಲ್ಡೊ ಗೋಲುಗಳ ಶತಕ

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

Cristiano Ronaldo

ಸ್ವೀಡನ್‌ನಲ್ಲಿ ನಡೆದ ನೇಷನ್ಸ್ ಕಪ್‌ ಟೂರ್ನಿಯ ಸ್ವೀಡನ್ ನಡುವಿನ ಪಂದ್ಯದಲ್ಲಿ ಗೋಲು ಗಳಿಸಿದ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ 100ನೇ ಅಂತರರಾಷ್ಟ್ರೀಯ ಗೋಲು ದಾಖಲಿಸಿದ ಸಾಧನೆ ಮಾಡಿದರು. ಈ ಸಾಧನೆ ಮಾಡಿದ ಎರಡನೇ ಆಟಗಾರ ಅವರು.

ಸ್ವೀಡನ್‌ನ ಫ್ರೆಂಡ್ಸ್ ಅರೆನಾ ಕ್ರೀಡಾಂಗಣ. ಯುಯೆಫಾ ನೇಷನ್ಸ್ ಲೀಗ್‌ನ ಎರಡನೇ ದಿನ. ಬಲಿಷ್ಠ ಪೋರ್ಚುಗಲ್‌ ಮತ್ತು ಸ್ವೀಡನ್ ನಡುವಿನ ಪಂದ್ಯ. ಮಂಗಳವಾರ ರಾತ್ರಿ ನಡೆದ ಪಂದ್ಯದ ಮೊದಲಾರ್ಧದ ಕೊನೆಯ ನಿಮಿಷದಲ್ಲಿ ಪೋರ್ಚುಗಲ್‌ಗೆ ಸಿಕ್ಕಿದ ಫ್ರೀ ಕಿಕ್ ಅವಕಾಶ ಕ್ರಿಸ್ಟಿಯಾನೊ ರೊನಾಲ್ಡೊ ಕಾಲ್ಚಳಕದಲ್ಲಿ ಗೋಲಾಗಿ ಪರಿವರ್ತನೆಯಾಯಿತು.

ಅಳೆದು–ತೂಗಿ ರೊನಾಲ್ಡೊ ಒದ್ದ ಚೆಂಡು ಗೋಲ್ ಪೋಸ್ಟ್ ಮುಂದೆ ನಿಂತಿದ್ದ ಎದುರಾಳಿ ತಂಡದ ಆಟಗಾರರ ತಲೆ ಮೇಲಿಂದ  ತೇಲಿ ಗೋಲುಬಲೆಯ ಬಲಭಾಗದ ಮೂಲೆ ಸೇರಿತು. ಇದರೊಂದಿಗೆ ರೊನಾಲ್ಡೊ ಗೋಲು ಗಳಿಕೆಯಲ್ಲಿ ಮೂರಂಕಿ ತಲುಪಿದರು. ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಇದು ಅವರ ಶತಕದ ಗೋಲಾಗಿತ್ತು. ಅವರು ಈಗ ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ ಎರಡನೆಯವರು. ಇರಾನ್‌ನ ಮಾಜಿ ಆಟಗಾರ ಅಲಿ ದಯಿ 109 ಗೋಲುಗಳೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 

ಸ್ವೀಡನ್ ಎದುರಿನ ಪಂದ್ಯದಲ್ಲಿ ರೊನಾಲ್ಡೊ 72ನೇ ನಿಮಿಷದಲ್ಲಿ ಮೊತ್ತೊಂದು ಗೋಲು ಗಳಿಸಿದರು. ಈ ಮೂಲಕ ತಮ್ಮ ದೇಶಕ್ಕೆ 2–0 ಅಂತರದ ಗೆಲುವನ್ನೂ ತಂದುಕೊಟ್ಟರು. ಪೋರ್ಚುಗಲ್‌ಗೆ ಲೀಗ್ ಹಂತದಲ್ಲಿ ಇನ್ನೂ ನಾಲ್ಕು ಪಂದ್ಯಗಳು ಬಾಕಿ ಇದ್ದು ಅಲಿ ದಯಿ ಅವರ ದಾಖಲೆ ಮುರಿಯಲು ರೊನಾಲ್ಡೊಗೆ ಸುವರ್ಣಾವಕಾಶ ಒದಗಿದೆ. ಇನ್ನು ಒಂಬತ್ತು ಗೋಲು ಗಳಿಸಿದರೆ ರೊನಾಲ್ಡೊ ಆ ಪಟ್ಟವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. 

ರೊನಾಲ್ಡೊ 165ನೇ ಪಂದ್ಯದಲ್ಲಿ ಶತಕದ ಸಾಧನೆ ಮಾಡಿದರು. 1993ರಿಂದ 2006ರ ವರೆಗೆ ಆಡಿದ್ದ ಅಲಿ ದಯಿ 149 ಪಂದ್ಯಗಳಲ್ಲಿ 109 ಗೋಲುಗಳನ್ನು ದಾಖಲಿಸಿದ್ದರು. ಐದು ಬಾರಿ ವರ್ಷದ ಆಟಗಾರ ಪ್ರಶಸ್ತಿ ಗಳಿಸಿದ್ದು ಈಗಾಗಲೇ ಚಾಂಪಿಯನ್ಸ್ ಲೀಗ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಸಾಧನೆ ಮಾಡಿದ್ದಾರೆ. ಆ ಟೂರ್ನಿಯಲ್ಲಿ 131 ಬಾರಿ ಚೆಂಡನ್ನು ಗುರಿ ಮುಟ್ಟಿಸಿರುವ ಅವರು ಲಯೊನೆಲ್ ಮೆಸ್ಸಿಗಿಂತ 16 ಗೋಲುಗಳಿಂದ ಮುಂದಿದ್ದಾರೆ. 17 ವರ್ಷಗಳಿಂದ ಸತತವಾಗಿ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಗೋಲು ಗಳಿಸಿರುವುದು ಕೂಡ ರೊನಾಲ್ಡೊ ಸಾಧನೆಗಳ ಪಟ್ಟಿಯಲ್ಲಿ ಮಹತ್ವದ್ದು.

ಲೀಗ್‌ಗಳಲ್ಲಿ ರೊನಾಲ್ಡೊ ಹೆಸರಿನಲ್ಲಿ ಎರಡು ಶತಕಗಳು ಇವೆ. ಲಾಲಿಗಾ (311) ಮತ್ತು ಚಾಂಪಿಯನ್ಸ್ ಲೀಗ್‌ನಲ್ಲಿ (131) ಮೂರಂಕಿ ದಾಟಿದ್ದರೆ ಪ್ರೀಮಿಯರ್ ಲೀಗ್ (84), ಸೀರಿ ’ಎ‘(52), ಕೋಪಾ ಡೆಲ್ ರೇ (22) ಮತ್ತು ಎಫ್‌ಎ ಕಪ್‌ನಲ್ಲಿ‌ (13) ಎರಡಂಕಿ ದಾಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು