ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋರ್ಚುಗಲ್‌ಗೆ ಆಸರೆಯಾದ ರೊನಾಲ್ಡೊ

Last Updated 24 ಜೂನ್ 2021, 13:41 IST
ಅಕ್ಷರ ಗಾತ್ರ

ಪ್ಯಾರಿಸ್‌: ಪೆನಾಲ್ಟಿ ಅವಕಾಶಗಳಲ್ಲಿ ಎರಡು ಗೋಲುಗಳನ್ನು ಗಳಿಸಿದ ಕ್ರಿಸ್ಟಿಯಾನೊ ರೊನಾಲ್ಡೊ ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಅತಿಹೆಚ್ಚು ಗೋಲು ಗಳಿಸಿದ ದಾಖಲೆಯನ್ನು ಸಮಗಟ್ಟಿದರು. ಈ ಮೂಲಕ ‍‍‍ಪೋರ್ಚುಗಲ್ ತಂಡ ಯೂರೊ ಕಪ್‌ ಫುಟ್‌ಬಾಲ್ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್‌ ಪ್ರವೇಶಿಸಲು ನೆರವಾದರು.

ಬುಧವಾರ ರಾತ್ರಿ ನಡೆದ ಫ್ರಾನ್ಸ್ ಎದುರಿನ ‘ಎಫ್‌‘ ಗುಂಪಿನ ಪಂದ್ಯದಲ್ಲಿ ರೊನಾಲ್ಡೊ ಸಾಧನೆಯ ಬಲದಿಂದ ಪೋರ್ಚುಗಲ್‌ 2–2ರ ಡ್ರಾ ಸಾಧಿಸಿತು. ಹಂಗೇರಿ ವಿರುದ್ಧದ ಪಂದ್ಯದಲ್ಲಿ 2–2ರ ಡ್ರಾ ಸಾಧಿಸಿದ ಜರ್ಮನಿ ಕೂಡ ಅಂತಿಮ 16ರ ಘಟ್ಟ ಪ್ರವೇಶಿಸಿತು.

31ನೇ ನಿಮಿಷದಲ್ಲಿ ಗಳಿಸಿದ ಪೆನಾಲ್ಟಿ ಅವಕಾಶದಲ್ಲಿ ರೊನಾಲ್ಡೊ ಗೋಲು ಗಳಿಸಿ ಮುನ್ನಡೆ ತಂದುಕೊಟ್ಟರು. ಆದರೆ ಮೊದಲಾರ್ಧದ ಇಂಜುರಿ ಅವಧಿಯಲ್ಲಿ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಕರೀಂ ಬೆನ್ಸೆಮಾ ಫ್ರಾನ್ಸ್‌ಗೆ ಸಮಬಲ ಗಳಿಸಿಕೊಟ್ಟರು. ವಿರಾಮದ ನಂತರದ ಎರಡನೇ ನಿಮಿಷದಲ್ಲಿ ಅವರು ಮತ್ತೊಂದು ಗೋಲು ಗಳಿಸಿ ತಂಡ ಮುನ್ನಡೆ ಮುನ್ನಡೆ ಸಾಧಿಸುವಂತೆ ಮಾಡಿದರು. 60ನೇ ನಿಮಿಷದಲ್ಲಿ ಪೋರ್ಚುಗಲ್‌ಗೆ ಮತ್ತೊಂದು ಪೆನಾಲ್ಟಿ ಲಭಿಸಿತು. ರೊನಾಲ್ಡೊ ಚೆಂಡನ್ನು ಗುರಿ ಮುಟ್ಟಿಸಿ ಸಮಬಲ ತಂದುಕೊಟ್ಟರು.

ಇದು ಈ ಬಾರಿ ಅವರು ಗಳಿಸಿದ ಐದನೇ ಗೋಲಾಗಿದೆ. ಇದರೊಂದಿಗೆ ಯೂರೊ ಕಪ್‌ನಲ್ಲಿ ಅವರು ಗಳಿಸಿದ ಗೋಲುಗಳ ಸಂಖ್ಯೆ 14ಕ್ಕೇರಿತು. ಇರಾನ್‌ನ ಸ್ಟ್ರೈಕರ್ ಅಲಿ ದಯಿ ಗಳಿಸಿದ ಗರಿಷ್ಠ 109 ಗೋಲುಗಳ ದಾಖಲೆಯನ್ನು ರೊನಾಲ್ಡೊ ತಮ್ಮ 178ನೇ ಪಂದ್ಯದಲ್ಲಿ ಸಮಗಟ್ಟಿದರು.

ಹಂಗೇರಿಗೆ ಆರಂಭಿಕ ಮುನ್ನಡೆ

ಜರ್ಮನಿ ಎದುರಿನ ಪಂದ್ಯದಲ್ಲಿ ಆ್ಯಡಂ ಜಲಾಯ್ 11ನೇ ನಿಮಿಷದಲ್ಲಿ ಚೆಂಡನ್ನು ಗುರಿ ತಲುಪಿಸಿ ಹಂಗೇರಿಗೆ ಮುನ್ನಡೆ ಗಳಿಸಿಕೊಟ್ಟರು. ಸಮಬಲ ಸಾಧಿಸಲು ಜರ್ಮನಿ 66ನೇ ನಿಮಿಷದ ವರೆಗೆ ಕಾಯಬೇಕಾಯಿತು. ಕಾವಿ ಹವೆಜ್ ಗೋಲು ಗಳಿಸಿ ಸಂಭ್ರಮಿಸಿದರು. ಆದರೆ ಎರಡೇ ನಿಮಿಷಗಳಲ್ಲಿ ಆ್ಯಂಡ್ರೆಸ್ ಶಾಟೆರ್ ಗಳಿಸಿದ ಗೋಲಿನ ಮೂಲಕ ಹಂಗೇರಿ ಮತ್ತೆ ಮುನ್ನಡೆ ಸಾಧಿಸಿತು. ಲಿಯಾನ್ ಗೊರೆಸ್ಕಾ 84ನೇ ನಿಮಿಷದಲ್ಲಿ ಗಳಿಸಿದ ಗೋಲಿನೊಂದಿಗೆ ಜರ್ಮನಿ ನಿಟ್ಟುಸಿರು ಬಿಟ್ಟಿತು.

ಶುಕ್ರವಾರ ವಿಶ್ರಾಂತಿ ದಿನವಾಗಿದ್ದು ಶನಿವಾರ ಮೊದಲ ಪ್ರೀ ಕ್ವಾರ್ಟ್ ಫೈನಲ್‌ನಲ್ಲಿ ವೇಲ್ಸ್ ಮತ್ತು ಡೆನ್ಮಾರ್ಕ್ ತಂಡಗಳು ಸೆಣಸಲಿವೆ. ಮರುದಿನ ಇಟಲಿ ಮತ್ತು ಆಸ್ಟ್ರಿಯಾ, ನೆದರ್ಲೆಂಡ್ಸ್ ಮತ್ತು ಜೆಕ್ ಗಣರಾಜ್ಯ ನಡುವೆ ಪಂದ್ಯ ನಡೆಯಲಿದೆ. ಬೆಲ್ಜಿಯಂ ಮತ್ತು ಪೋರ್ಚುಗಲ್ ಪಂದ್ಯ 28ರಂದು ನಡೆಯಲಿದ್ದು ಅದೇ ದಿನ ಕ್ರೊವೇಷ್ಯಾ ಮತ್ತು ಸ್ಪೇನ್‌ ಮುಖಾಮುಖಿಯಾಗಲಿವೆ. ಫ್ರಾನ್ಸ್‌–ಸ್ವಿಟ್ಜರ್ಲೆಂಡ್‌, ಇಂಗ್ಲೆಂಡ್–ಜರ್ಮನಿ ಪಂದ್ಯ 29ರಂದು, ಸ್ವೀಡನ್‌–ಉಕ್ರೇನ್ ಪಂದ್ಯ 30ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT