ಯೂರೊ ಕಪ್ ಫುಟ್‌ಬಾಲ್: ಫೈನಲ್ ಕನಸಿನಲ್ಲಿ ಇಟಲಿ–ಸ್ಪೇನ್

ಲಂಡನ್: ಅಜೇಯವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿರುವ ಸ್ಪೇನ್ ಮತ್ತು ಇಟಲಿ ತಂಡಗಳು ಯೂರೊ ಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ನಲ್ಲಿ ಮಂಗಳವಾರ ರಾತ್ರಿ ಸೆಣಸಲಿವೆ.
ಎರಡೂ ತಂಡಗಳು ಈ ಚಾಂಪಿಯನ್‌ಷಿಪ್‌ನಲ್ಲಿ ಮಾತ್ರವಲ್ಲ, ಇತ್ತೀಚಿನ ಕೆಲವು ಟೂರ್ನಿಗಳಲ್ಲಿ ಅಜೇಯವಾಗಿ ಉಳಿದಿವೆ. ಸ್ಪೇನ್ ಕಳೆದ ಅಕ್ಟೋಬರ್‌ನಿಂದ 13 ಪಂದ್ಯಗಳಲ್ಲಿ ಸೋಲರಿಯದೆ ಮುನ್ನುಗ್ಗಿದೆ. ಇಟಲಿ 2018ರಿಂದ 32 ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿದ್ದು ರಾಷ್ಟ್ರೀಯ ದಾಖಲೆ ನಿರ್ಮಿಸಿದೆ.
ಸ್ವಿಟ್ಜರ್ಲೆಂಡ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 3–1ರ ಜಯ ಗಳಿಸಿ ಸ್ಪೇನ್ ನಾಲ್ಕರ ಘಟ್ಟ ಪ್ರವೇಶಿಸಿದೆ. ಇಟಲಿ ಬೆಲ್ಜಿಯಂ ಎದುರು 2–1ರಲ್ಲಿ ಗೆಲುವು ಸಾಧಿಸಿ ಈ ಹಂತಕ್ಕೆ ಲಗ್ಗೆ ಇರಿಸಿದೆ.
ಇಟಲಿ ಚಾಂಪಿಯನ್‌ಷಿಪ್‌ನಲ್ಲಿ ಈ ವರೆಗೂ ಅತ್ಯುತ್ತಮ ಸಾಮರ್ಥ್ಯ ಪ್ರದರ್ಶಿಸಿದೆ. ಒಂದು ಗೋಲು ಕೂಡ ಬಿಟ್ಟುಕೊಡದೆ ಗುಂಪು ಹಂತದ ಮೂರೂ ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ತಂಡ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರಿಯಾವನ್ನು ಮಣಿಸಿತ್ತು. ವಿಶ್ವ ಕ್ರಮಾಂಕದಲ್ಲಿ ಒಂದೇ ಸ್ಥಾನದಲ್ಲಿರುವ ಬೆಲ್ಜಿಯಂ ತಂಡವನ್ನು ಎಂಟರ ಘಟ್ಟದಲ್ಲಿ ಸೋಲಿಸಿ ತಂಡ ಬೆರಗು ಮೂಡಿಸಿದೆ.
ಸೋಲು ಎಂದರೇನು ಎಂದು ಮರೆತೇ ಹೋಗಿರಬಹುದಾದ ಎರಡು ತಂಡಗಳ ನಡುವಣ ನಾಕೌಟ್ ಹೋರಾಟದಲ್ಲಿ ಒಂದು ತಂಡ ಹೊರಬೀಳಲೇಬೇಕಾಗಿದೆ. ಆದರೆ ಹೊರಬೀಳುವ ತಂಡ ಯಾವುದು ಮತ್ತು ಪ್ರಶಸ್ತಿ ಸುತ್ತು ತಲುಪುವ ತಂಡ ಯಾವುದು ಎಂಬ ಕುತೂಹಲ ಫುಟ್‌ಬಾಲ್ ಜಗತ್ತಿನಲ್ಲಿ ಮೂಡಿದೆ. ಸ್ಪೇನ್ ಕಳೆದ 29 ಪಂದ್ಯಗಳ ಪೈಕಿ ಒಂದರಲ್ಲಿ ಮಾತ್ರ ಸೋಲು ಕಂಡಿದೆ. ಈ ಓಟವನ್ನು ಇನ್ನೂ ಮುಂದುವರಿಸಬೇಕಾದರೆ ಇಟಲಿಯ ಬಲಿಷ್ಠ ಆಕ್ರಮಣ ಮತ್ತು ರಕ್ಷಣಾ ವಿಭಾಗವನ್ನು ಮೀರಿ ನಿಲ್ಲಬೇಕಾಗಿದೆ.
ಎಲ್ಲ ವಿಭಾಗದಲ್ಲೂ ಬಲಿಷ್ಠ ಇಟಲಿ
2018ರಲ್ಲಿ ರಾಬರ್ಟೊ ಮನ್ಸಿನಿ ಕೋಚ್ ಆಗಿ ನೇಮಕಗೊಂಡ ನಂತರ ಇಟಲಿ ತಂಡದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ತಂಡದ ಆಕ್ರಮಣ ವಿಭಾಗ ಹೆಚ್ಚು ಬಲಪಡೆದುಕೊಂಡಿದೆ. ಇದೇ ವೇಳೆ ಲಿಯೊನಾರ್ಡೊ ಬೊನುಷಿ ಮತ್ತು ಜಾರ್ಜಿಯೊ ಚಿಲಿನಿ ನೇತೃತ್ವದ ಆಕ್ರಮಣ ವಿಭಾಗ ಸ್ಥಿರ ಪ್ರದರ್ಶನ ನೀಡುತ್ತಿದೆ. ಚಾಂಪಿಯನ್‌ಷಿಪ್‌ನಲ್ಲಿ ಈ ವರೆಗೆ ತಂಡ ಬಿಟ್ಟುಕೊಟ್ಟಿರುವುದು ಎರಡನೇ ಗೋಲು.
ಸ್ಪೇನ್‌ನ ರಕ್ಷಣಾ ವಿಭಾಗ ಈಚೆಗೆ ಶಕ್ತಿ ಪಡೆದುಕೊಳ್ಳುತ್ತಿದೆ. ಫ್ರಾನ್ಸ್‌ನಿಂದ ಬಂದು ಸ್ಪೇನ್ ನಾಗರಿಕತೆ ಪಡೆದುಕೊಂಡಿರುವ ಸೆಂಟರ್ ಬ್ಯಾಕ್ ಅಯ್ಮೆರಿಕ್ ಲ್ಯಾಪೊರ್ಟೆ ಅವರ ಮೇಲೆ ತಂಡ ಹೆಚ್ಚು ನಿರೀಕ್ಷೆ ಇರಿಸಿಕೊಂಡಿದೆ. ಆಕ್ರಮಣ ವಿಭಾಗದಲ್ಲಿ ತಂಡಕ್ಕೆ ಅಲ್ವಾರೊ ಮೊರಾಟ್ ಮತ್ತು ಲೂಯಿಸ್ ಹೆನ್ರಿಕ್ ಲಯ ಕಂಡುಕೊಳ್ಳಬೇಕಾಗಿದೆ.
ಇಟಲಿಯ ಸ್ಟ್ರೈಕರ್ ಸಿರೊ ಇಮೊಬೈಲ್ ಮತ್ತು ಫಾರ್ವರ್ಡ್ ಆಟಗಾರ ಲೊರೆನ್ಸೊ ಇನ್‌ಸೈನ್ ಮೇಲೆ ಸ್ಪೇನ್ ಹೆಚ್ಚು ನಿಗಾ ಇರಿಸಬೇಕಾಗಿದೆ. ಆದರೆ ಸ್ಪೇನ್‌ನ ಮಿಡ್‌ಫೀಲ್ಡ್ ವಿಭಾಗ ಇಟಲಿಗೆ ಸವಾಲೊಡ್ಡುವುದರಲ್ಲಿ ಸಂದೇಹ ಇಲ್ಲ. ಇಟಲಿಯ ಜಾರ್ಜಿನೊ, ನಿಕೋಲ ಬರೆಲಾ ಹಾಗೂ ಮಾರ್ಕೊ ವೆರಾಟಿ ಅವರಿಗೂ ಸ್ಪೇನ್‌ನ ಜಾರ್ಜಿಯೊ ಬಸ್ಕೆಟ್ಸ್, ಪೆಡ್ರಿ ಗೊನ್ಜಾಲೆಸ್ ಹಾಗೂ ಕೊಕೆ ಅವರಿಗೂ ತೀವ್ರ ಪೈಪೋಟಿ ನಡೆಯುವ ಸಾಧ್ಯತೆ ಇದೆ.
ಉಭಯ ತಂಡಗಳು ಸಾಗಿಬಂದ ಹಾದಿ
ಇಟಲಿ (ಗುಂಪು ಹಂತ)
ಟರ್ಕಿ ವಿರುದ್ಧ 3–0 ಜಯ
ಸ್ವಿಟ್ಜರ್ಲೆಂಡ್ ವಿರುದ್ಧ 3–0 ಜಯ
ವೇಲ್ಸ್ ವಿರುದ್ಧ 1–0 ಗೆಲುವು
ಪ್ರೀ ಕ್ವಾರ್ಟರ್ ಫೈನಲ್
ಆಸ್ಟ್ರಿಯಾ ವಿರುದ್ಧ 2–1 ಜಯ (ಹೆಚ್ಚುವರಿ ಅವಧಿ)
ಕ್ವಾರ್ಟರ್ ಫೈನಲ್
ಬೆಲ್ಜಿಯಂ ಎದುರು 2–1ರಲ್ಲಿ ಗೆಲುವು
ಸ್ಪೇನ್ (ಗುಂಪು ಹಂತ)
ಸ್ವೀಡನ್ ಎದುರು 0–0 ಡ್ರಾ
ಪೋಲೆಂಡ್ ವಿರುದ್ಧ 1–1 ಡ್ರಾ
ಸ್ಲೊವಾಕಿಯಾ ವಿರುದ್ಧ 5–0 ಜಯ
ಪ್ರೀ ಕ್ವಾರ್ಟರ್ ಫೈನಲ್
ಕ್ರೊವೇಷ್ಯಾ ವಿರುದ್ಧ 5–3 ಜಯ (ಹೆಚ್ಚುವರಿ ಅವಧಿ)
ಸ್ವಿಟ್ಜರ್ಲೆಂಡ್ ವಿರುದ್ಧ 3–1ರಲ್ಲಿ ಜಯ (ಪೆನಾಲ್ಟಿ ಶೂಟೌಟ್)
ಪಂದ್ಯ ಆರಂಭ: ರಾತ್ರಿ 12.30 (ಭಾರತೀಯ ಕಾಲಮಾನ)
ನೇರ ಪ್ರಸಾರ: ಸೋನಿ ನೆಟ್‌ವರ್ಕ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.