ಭಾನುವಾರ, ಸೆಪ್ಟೆಂಬರ್ 22, 2019
27 °C
ದಕ್ಷಿಣ ವಲಯ ಸಬ್‌ ಜೂನಿಯರ್‌ ಫುಟ್‌ಬಾಲ್‌: ಕರ್ನಾಟಕಕ್ಕೆ ಗೆಲುವು

ಫುಟ್‌ಬಾಲ್‌: ಚಂದನ್‌ ಬಿಜು ಕಾಲ್ಚಳಕ

Published:
Updated:
Prajavani

ಬೆಂಗಳೂರು: ಸ್ಟ್ರೈಕರ್‌ ಚಂದನ್‌ ಬಿಜು, ಶನಿವಾರ ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಕಾಲ್ಚಳಕ ತೋರಿದರು.

ಚಂದನ್‌ ಗಳಿಸಿದ ನಾಲ್ಕು ಗೋಲುಗಳ ಬಲದಿಂದ ಕರ್ನಾಟಕ ತಂಡ ದಕ್ಷಿಣ ವಲಯ ಸಬ್‌ ಜೂನಿಯರ್ (14 ವರ್ಷದೊಳಗಿನವರು) ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಜಯಭೇರಿ ಮೊಳಗಿಸಿತು. ಜೊತೆಗೆ ಅಂತರ ವಲಯ ಟೂರ್ನಿಗೂ ಅರ್ಹತೆ ಗಳಿಸಿತು.

ಆತಿಥೇಯರು 8–1 ಗೋಲುಗಳಿಂದ ತಮಿಳುನಾಡು ತಂಡವನ್ನು ಮಣಿಸಿ ‘ಎ’ ಗುಂಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರು. 

ಮೊದಲ ಹೋರಾಟದಲ್ಲಿ 6–0 ಗೋಲುಗಳಿಂದ ಆಂಧ್ರಪ್ರದೇಶವನ್ನು ಸೋಲಿಸಿದ್ದ ಕರ್ನಾಟಕ ತಂಡವು ತಮಿಳುನಾಡು ವಿರುದ್ಧವೂ ಪ್ರಾಬಲ್ಯ ಮೆರೆಯಿತು.

ಒಂಬತ್ತನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಚಂದನ್‌, ತಂಡದ ಖಾತೆ ತೆರೆದರು. 12ನೇ ನಿಮಿಷದಲ್ಲಿ ಅವರು ಮತ್ತೊಮ್ಮೆ ಕಾಲ್ಚಳಕ ತೋರಿದರು. 14ನೇ ನಿಮಿಷದಲ್ಲಿ ವೈಯಕ್ತಿಕ ಮೂರನೇ ಗೋಲು ಹೊಡೆದು ಸಂಭ್ರಮಿಸಿದರು. 23 ಮತ್ತು 27ನೇ ನಿಮಿಷಗಳಲ್ಲಿ ಪರಿಕ್ರಮ ಬೋರಾ ಅವರು ಚೆಂಡನ್ನು ಗುರಿ ಮುಟ್ಟಿಸಿದ್ದರಿಂದ ಆತಿಥೇಯರು 5–0 ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದರು.

ದ್ವಿತೀಯಾರ್ಧದಲ್ಲೂ ಕರ್ನಾಟಕದ ಆಟಗಾರರು ಗುಣಮಟ್ಟದ ಆಟ ಆಡಿದರು. 64ನೇ ನಿಮಿಷದಲ್ಲಿ ಆರ್‌.ರಜತ್‌ ಗೋಲು ಬಾರಿಸಿದರು. ಇದರ ಬೆನ್ನಲ್ಲೇ (65ನೇ ನಿ.) ಚಂದನ್‌ ಮತ್ತೊಂದು ಗೋಲು ಗಳಿಸಿದರು. 90+4ನೇ ನಿಮಿಷದಲ್ಲಿ ಮಿಡ್‌ಫೀಲ್ಡರ್‌ ಗೌತಮ್‌ ರಾಜೇಶ್‌ ಗೋಲು ದಾಖಲಿಸಿ ಸಂಭ್ರಮಿಸಿದರು.

ತಮಿಳುನಾಡು ಪರ ಅಖಿಲ್‌ ಜೆನ್ಸನ್‌ ಏಕೈಕ (54ನೇ ನಿ.) ಗೋಲು ಬಾರಿಸಿದರು.

Post Comments (+)