ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಿನಾರರ ಘಟ್ಟಕ್ಕೆ ಹಜಾರ್ಡ್ ಬಳಗ

ಮಿಂಚಿದ ರೊಮೆಲು ಲುಕಾಕು: ಬೆಲ್ಜಿಯಂ ತಂಡಕ್ಕೆ ಭರ್ಜರಿ ಗೆಲುವು
Last Updated 23 ಜೂನ್ 2018, 18:37 IST
ಅಕ್ಷರ ಗಾತ್ರ

ಮಾಸ್ಕೊ: ಅಮೋಘ ಆಟ ಆಡಿದ ನಾಯಕ ಈಡನ್‌ ಹಜಾರ್ಡ್‌ ಮತ್ತು ಮುಂಚೂಣಿ ವಿಭಾಗದ ಆಟಗಾರ ರೊಮೆಲು ಲುಕಾಕು, ಶನಿವಾರ ಸ್ಪಾರ್ಟಕ್‌ ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳು ಖುಷಿಯ ಕಡಲಲ್ಲಿ ತೇಲುವಂತೆ ಮಾಡಿದರು.

ಇವರು ಗಳಿಸಿದ ತಲಾ ಎರಡು ಗೋಲುಗಳ ಬಲದಿಂದ ಬೆಲ್ಜಿಯಂ ತಂಡ 21ನೇ ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಜಯಭೇರಿ ಮೊಳಗಿಸಿತು. ‘ಜಿ’ ಗುಂಪಿನ ತನ್ನ ಎರಡನೇ ಹಣಾಹಣಿಯಲ್ಲಿ ಹಜಾರ್ಡ್‌ ಪಡೆ 5–2 ಗೋಲುಗಳಿಂದ ಟ್ಯುನಿಷಿಯಾ ಸವಾಲು ಮೀರಿತು.

ಈ ಗೆಲುವಿನೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು ಆರಕ್ಕೆ ಹೆಚ್ಚಿಸಿಕೊಂಡ ಬೆಲ್ಜಿಯಂ ತಂಡ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿ ಹದಿನಾರರ ಘಟ್ಟಕ್ಕೆ ಲಗ್ಗೆ ಇಟ್ಟಿತು. ಮೊದಲ ಪಂದ್ಯದಲ್ಲಿ ಹಜಾರ್ಡ್‌ ಬಳಗ ಪನಾಮ ಎದುರು ಗೆದ್ದಿತ್ತು.

ಬಲಿಷ್ಠ ಆಟಗಾರರನ್ನು ಹೊಂದಿದ್ದ ಬೆಲ್ಜಿಯಂ ತಂಡ ಆರಂಭದಿಂದಲೇ ಚುರುಕಿನ ಆಟಕ್ಕೆ ಅಣಿಯಾಯಿತು. ಆರನೇ ನಿಮಿಷದಲ್ಲಿ ಈ ತಂಡಕ್ಕೆ ಪೆನಾಲ್ಟಿ ಸಿಕ್ಕಿತು. ಈ ಅವಕಾಶದಲ್ಲಿ ನಾಯಕ ಹಜಾರ್ಡ್‌ ಚೆಂಡನ್ನು ಗುರಿ ಮುಟ್ಟಿಸಿ ಕ್ರೀಡಾಂಗಣದಲ್ಲಿ ಮೆಕ್ಸಿಕನ್‌ ಅಲೆ ಏಳುವಂತೆ ಮಾಡಿದರು.

16ನೇ ನಿಮಿಷದಲ್ಲಿ ಲುಕಾಕು, ಕಾಲ್ಚಳಕ ತೋರಿದರು. ಸಹ ಆಟಗಾರ ಡ್ರಿಯಾಸ್‌ ಮೆರ್ಟೆನ್ಸ್‌ ಒದ್ದು ಕಳುಹಿಸಿದ ಚೆಂಡಿನ ಮೇಲೆ ಚುರುಕಾಗಿ ನಿಯಂತ್ರಣ ಸಾಧಿಸಿದ ಲುಕಾಕು ಅದನ್ನು ಎದುರಾಳಿ ಆವರಣದ 30 ಗಜ ದೂರದಿಂದ ಸೊಗಸಾಗಿ ಗುರಿ ತಲುಪಿಸಿದರು. ಇದರ ಬೆನ್ನಲ್ಲೇ ಟ್ಯುನಿಷಿಯಾದ ಡಿಫೆಂಡರ್‌ ಡೈಲಾನ್‌ ಬ್ರೊನ್‌ ಮಿಂಚಿದರು. 18ನೇ ನಿಮಿಷದಲ್ಲಿ ಸಿಕ್ಕ ಫ್ರೀ ಕಿಕ್‌ನಲ್ಲಿ ಅವರು ಚೆಂಡನ್ನು ಜಾಣ್ಮೆಯಿಂದ ಗುರಿಯೆಡೆಗೆ ಒದ್ದರು.

ಮೊದಲಾರ್ಧದ ಹೆಚ್ಚುವರಿ ಅವಧಿಯಲ್ಲಿ ಲುಕಾಕು ಮತ್ತೊಮ್ಮೆ ಜಾದೂ ಮಾಡಿದರು. ಮ್ಯಾಂಚೆಸ್ಟರ್‌ ಯುನೈಟೆಡ್‌ ಕ್ಲಬ್‌ ಪರ ಆಡಿದ ಅನುಭವ ಹೊಂದಿರುವ ಅವರು ಪಾದರಸದಂತಹ ಚಲನೆಯ ಮೂಲಕ ಟ್ಯುನಿಷಿಯಾ ಗೋಲ್‌ಕೀಪರ್‌ ಬೆನ್‌ ಮುಸ್ತಫಾ ಅವರನ್ನು ತಬ್ಬಿಬ್ಬುಗೊಳಿಸಿ ಚೆಂಡನ್ನು ಗೋಲುಪೆಟ್ಟಿಗೆಯೊಳಗೆ ತೂರಿಸಿದರು. ಹೀಗಾಗಿ ‘ರೆಡ್‌ ಡೆವಿಲ್ಸ್‌’ 3–1ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು.

ದ್ವಿತೀಯಾರ್ಧದಲ್ಲೂ ಬೆಲ್ಜಿಯಂ ಪ್ರಾಬಲ್ಯ ಮೆರೆಯಿತು. 51ನೇ ನಿಮಿಷದಲ್ಲಿ ಹಜಾರ್ಡ್‌ ವೈಯಕ್ತಿಕ ಎರಡನೇ ಗೋಲು ದಾಖಲಿಸಿ ತಂಡದ ಮುನ್ನಡೆಯನ್ನು 4–1ಕ್ಕೆ ಹೆಚ್ಚಿಸಿದರು.

ನಂತರ ಟ್ಯುನಿಷಿಯಾ ತಂಡದ ರಕ್ಷಣಾ ವಿಭಾಗದ ಆಟಗಾರರು ಪರಿಣಾಮಕಾರಿ ಸಾಮರ್ಥ್ಯ ತೋರಿದ್ದರಿಂದ ಬೆಲ್ಜಿಯಂ ಆಟಗಾರರಿಗೆ ಗೋಲು ಗಳಿಸಲು ಆಗಲಿಲ್ಲ. 89ನೇ ನಿಮಿಷದವರೆಗೂ ಪ್ರಬಲ ಪೈಪೋಟಿ ಎದುರಿಸಿದ ಬೆಲ್ಜಿಯಂ ತಂಡದ ಖಾತೆಗೆ 90ನೇ ನಿಮಿಷದಲ್ಲಿ ಐದನೇ ಗೋಲು ಸೇರ್ಪಡೆಯಾಯಿತು.

ಮುಂಚೂಣಿ ವಿಭಾಗದ ಆಟಗಾರ ಮಿಕಿ ಬತ್ಸುವಾಯಿ ಗೋಲು ಗಳಿಸಿದಾಗ ಪ್ರೇಕ್ಷಕರ ಗ್ಯಾಲರಿಯಲ್ಲಿ ಬೆಲ್ಜಿಯಂ ತಂಡದ ಧ್ವಜಗಳು ರಾರಾಜಿಸಿದವು.

ಹೆಚ್ಚುವರಿ ಅವಧಿಯಲ್ಲಿ ಟ್ಯುನಿಷಿಯಾ ತಂಡದ ವಹಾಬಿ ಖಾಜ್ರಿ ಕಾಲ್ಚಳಕ ತೋರಿದರು. 90+3ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಅವರು ಗೋಲುಗಳ ಅಂತರ ತಗ್ಗಿಸುವಲ್ಲಿ ಮಾತ್ರ ಶಕ್ತರಾದರು.


ಟ್ಯುನಿಷಿಯಾ ಎದುರಿನ ಪಂದ್ಯದಲ್ಲಿ ಗೋಲು ದಾಖಲಿಸಿದ ಬೆಲ್ಜಿಯಂ ತಂಡದ ಮಿಕಿ ಬತ್ಸುವಾಯಿ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದರು. –ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT