ಶನಿವಾರ, ಮೇ 30, 2020
27 °C

ತವರಿಗೆ ಮರಳಿದ ಸಂಭ್ರಮದಲ್ಲಿ ವುಹಾನ್‌ ಫುಟ್‌ಬಾಲ್ ಆಟಗಾರರು

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಶಾಂಘೈ: ಮೂರು ತಿಂಗಳು ಕುಟುಂಬದಿಂದ ದೂರ ಉಳಿದಿದ್ದ ಚೀನಾದ ವುಹಾನ್ ಜಾಲ್ ಫುಟ್‌ಬಾಲ್ ತಂಡದ ಆಟಗಾರರಿಗೆ ಶನಿವಾರ ರಾತ್ರಿ ಸಂಭ್ರಮವೋ ಸಂಭ್ರಮ. ಕೊರೊನಾ ಮಹಾಮಾರಿಯ ಹಾವಳಿಯಿಂದಾಗಿ ದೂರ ಉಳಿದಿದ್ದ ತಂಡ ಇದೀಗ ತವರು ನಗರಕ್ಕೆ ಮರಳಿದ್ದು ಕುಟುಂಬ ಸದಸ್ಯರನ್ನು ಭೇಟಿಯಾದ ಖುಷಿಯಲ್ಲಿ ಆಟಗಾರರು ಭಾವುಕರಾದರು. 

ಚೀನಾ ಸೂಪರ್ ಲೀಗ್ ಟೂರ್ನಿಯಲ್ಲಿ ಆಡುವ ವುಹಾನ್ ಜಾಲ್ ತಂಡ ವುಹಾನ್‌ನಲ್ಲಿ ಕೋವಿಡ್ ರುದ್ರ ತಾಂಡವವಾಡತೊಡಗಿದಾಗ ಸ್ಪೇನ್‌ನಲ್ಲಿತ್ತು. ನಂತರ ದಿನಗಟ್ಟಲೆ ಪ್ರಯಾಣ ಮಾಡಿತ್ತು. ಜನವರಿಯಲ್ಲಿ ಸೀಲ್ ಡೌನ್ ಆಗಿದ್ದ ವುಹಾನ್‌ನಲ್ಲಿ ಕೊರೊನಾ ಪ್ರಕರಣಗಳು ನಿಯಂತ್ರಣಕ್ಕೆ ಬಂದ ಕಾರಣ ಇತ್ತೀಚೆಗೆ ಜನರ ಓಡಾಟಕ್ಕೆ ಅವಕಾಶ ನೀಡಲಾಗಿತ್ತು. ಶನಿವಾರ ತಡರಾತ್ರಿ ವುಹಾನ್ ರೈಲು ನಿಲ್ದಾಣದಲ್ಲಿ ಆಟಗಾರರು ಬಂದಿಳಿದಾಗ ಅಭಿಮಾನಿಗಳು ಮತ್ತು ಕ್ರೀಡಾ ಪ್ರೇಮಿಗಳು ಜೈಕಾರ ಕೂಗಿ ಸ್ವಾಗತಿಸಿದರು.

ಮಾಸ್ಕ್ ಧರಿಸಿಕೊಂಡು, ಕೈಯಲ್ಲಿ ಹೂಗುಚ್ಚ ಹಿಡಿದು ಆಟಗಾರರು ಹೆಜ್ಜೆ ಹಾಕಿದರು. ತಂಡದ ಜೆರ್ಸಿಯನ್ನು ಹೋಲುವ ಗುಲಾಬಿ ಬಣ್ಣದ ಬ್ಯಾನರ್‌ಗಳನ್ನು ಹಿಡಿದು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಹರ್ಷೋದ್ಗಾರ ಮೊಳಗಿಸಿದರು. 

’ಮೂರು ತಿಂಗಳಿಗಿಂತಲೂ ಹೆಚ್ಚು ಕಾಲ ಅಲೆದಾಡಿದ ತಂಡ ತವರಿಗೆ ಕಾಲಿಡಲು ಹಾತೊರೆಯುತ್ತಿತ್ತು. ಇದೀಗ ಆ ಕನಸು ನನಸಾಗಿದೆ. ಆಟಗಾರರ ಕುಟುಂಬದವರು ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಶಾಂತಚಿತ್ತರಾಗಿದ್ದರು. ಅವರಿಗೆ ಯಾವ ರೀತಿ ಧನ್ಯವಾದ ಹೇಳಬೇಕೆಂದೇ ತಿಳಿಯುತ್ತಿಲ್ಲ ’ ಎಂದು ತಂಡ ಟ್ವಿಟರ್ ಮಾದರಿಯ ಜಾಮಾಜಿಕ ತಾಣವಾದ ವೀಬೊದಲ್ಲಿ ಹೇಳಿಕೊಂಡಿದೆ.

ಸ್ಪೇನ್‌ನ ಕೋಚ್‌ ಜೋಸ್ ಗೊನ್ಸಾಲೆಜ್ ಅವರ ಮಾರ್ಗದರ್ಶನದಲ್ಲಿ ತಂಡ ಮುಂದಿನ ಬುಧವಾರ ಅಭ್ಯಾಸ ಆರಂಭಿಸಲಿದೆ. ಕಳೆದ ಬಾರಿಯ ಚೀನಾ ಸೂಪರ್ ಲೀಗ್‌ನಲ್ಲಿ ತಂಡ ಆರನೇ ಸ್ಥಾನ ಗಳಿಸಿತ್ತು. 

ಫೆಬ್ರುವರಿ 22ರಂದು ಆರಂಭಗೊಳ್ಳಬೇಕಾಗಿದ್ದ ಚೀನಾ ಸೂಪರ್ ಲೀಗ್‌ ಟೂರ್ನಿಯನ್ನು ಕೊರೊನಾ ಆತಂಕದಿಂದಾಗಿ ಅನೇಕ ಬಾರಿ ಮುಂದೂಲಾಗಿದ್ದು ಇದೀಗ ಜೂನ್ ಕೊನೆಯ ವಾರದಲ್ಲಿ ನಡೆಸುವ ಸಾಧ್ಯತೆ ಇದೆ. ವರ್ಷದ ಆರಂಭದಲ್ಲಿ ವುಹಾನ್ ಜಾಲ್ ತಂಡದ ಗ್ವಾಂಗ್ಜುವಿನಲ್ಲಿ ಅಭ್ಯಾಸ ಆರಂಭಿಸಿತ್ತು. ಜನವರಿ ಕೊನೆಯಲ್ಲಿ ಕೊರೊನಾ ಹಾವಳಿ ಹೆಚ್ಚುತ್ತಿದ್ದಂತೆ ಸ್ಪೇನ್‌ನ ಮಲಾಗ ಪಟ್ಟಣಕ್ಕೆ ಹಾರಿತ್ತು. 

ತಂಡದ ಆಟಗಾರರ ಸಾಮರ್ಥ್ಯವನ್ನು ಕಡೆಗಣಿಸಬಾರದು ಎಂದು ಹೇಳಿದ್ದ ಗೊನ್ಸಾಲೆಜ್ ‘ಇವರು ಕ್ರೀಡಾಪಟುಗಳೇ ಹೊರತು ನಡೆದಾಡುವ ವೈರಸ್‌ಗಳಲ್ಲ’ ಎಂದಿದ್ದರು. ಆದರೆ ಮಾರ್ಚ್‌ನಲ್ಲಿ ಸ್ಪೇನ್ ಕೂಡ ಕೊರೊನಾ ಹಾವಳಿಯಿಂದ ತತ್ತರಿಸಿದಾಗ ತಂಡವನ್ನು ಚೀನಾಗೆ ವಾಪಸ್‌ ಕರೆತರಲು ನಿರ್ಧರಿಸಿದ್ದರು. ಆಗ ವುಹಾನ್‌ನಲ್ಲಿ ವೈರಸ್ ಹರಡುವಿಕೆ ನಿಯಂತ್ರಣದಲ್ಲಿತ್ತು. ಆದರೂ ಸೀಲ್ ಡೌನ್ ಆಗಿದ್ದರಿಂದ ಮಾರ್ಚ್ 16ರಂದು ತಂಡ ಚೀನಾದ ದಕ್ಷಿಣ ನಗರವಾದ ಶೆನ್ಜೆನ್‌ನಲ್ಲಿ ಇಳಿದಿತ್ತು. ಮೂರು ವಾರಗಳ ಕ್ವಾರಂಟೈನ್‌ನ ನಂತರ ಫೋಶಾನ್‌ನಲ್ಲಿ ಅಭ್ಯಾಸ ನಡೆಸಿತ್ತು. ಶನಿವಾರ ಹೈಸ್ಪೀಡ್ ರೈಲಿನ ಮೂಲಕ ಗ್ವಾಂಗ್ಜುವಿನಿಂದ ವುಹಾನ್‌ಗೆ ಪಯಣಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು