ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ತಿ: ಒಂದು ವರ್ಷ ನಷ್ಟ; ಬಜರಂಗ್, ಸಾಕ್ಷಿ, ವಿನೇಶಾ ವಿರುದ್ಧ ಕಿರಿಯರ ಆಕ್ರೋಶ

Published 3 ಜನವರಿ 2024, 9:28 IST
Last Updated 3 ಜನವರಿ 2024, 9:28 IST
ಅಕ್ಷರ ಗಾತ್ರ

ನವದೆಹಲಿ: ಕುಸ್ತಿ ಕ್ಷೇತ್ರದಲ್ಲಿ ಪ್ರತಿಭಟನೆ ಮುಂದುವರಿದಿದೆ. ಕಳೆದ ಒಂದು ವರ್ಷದಿಂದ ಹಿರಿಯ ಕುಸ್ತಿಪಟುಗಳು ನಡೆಸುತ್ತಿರುವ ಧರಣಿಯಿಂದಾಗಿ ತಮ್ಮ ಒಂದು ವರ್ಷ ನಷ್ಟವಾಗಿದೆ ಎಂದು ಬಜರಂಗ್ ಪೂನಿಯಾ, ಸಾಕ್ಷಿ ಮಲ್ಲಿಕ್ ಹಾಗೂ ವಿನೇಶಾ ಫೋಗಟ್ ವಿರುದ್ಧ ಕಿರಿಯ ಕುಸ್ತಿಪಟುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ಬೆಳಿಗ್ಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ಸೇರಿದ ನೂರಾರು ಕುಸ್ತಿಪಟುಗಳು ಹಿರಿಯ ಕುಸ್ತಿಪಟುಗಳ ವಿರುದ್ಧ ಘೋಷಣೆ ಕೂಗುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದರು. 

ಉತ್ತರ ಪ್ರದೇಶ, ಹರಿಯಾಣ, ದೆಹಲಿಯಿಂದ ತಂಡೋಪತಂಡವಾಗಿ ಬಸ್ಸಿನಲ್ಲಿ ಬಂದಿಳಿದ ಕಿರಿಯ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದರು. ಸುಮಾರು 300ಕ್ಕೂ ಹೆಚ್ಚು ಜನರಿದ್ದ ಕುಸ್ತಿಪಟುಗಳಲ್ಲಿ ಕೆಲವರು ಆರ್ಯ ಸಮಾಜ ಆಖಾರ್‌, ವೀರೇಂದ್ರ ರೆಸ್ಲಿಂಗ್ ಅಕಾಡೆಮಿ ಹಾಗೂ ಇನ್ನಿತರ ಕಡೆಗಳಿಂದ ಬಂದಿದ್ದರು. ಪೂನಿಯಾ, ಮಲ್ಲಿಕ್ ಹಾಗೂ ಫೋಗಟ್ ವಿರುದ್ಧ ಘೋಷಣೆಗಳನ್ನು ಕೂಗಿದರು. ‘ಈ ಮೂವರು ಕುಸ್ತಿಪಟುಗಳಿಂದ ನಮ್ಮನ್ನು ರಕ್ಷಿಸಿ’ ಎಂದು ಬರೆದ ಘೋಷಣಾ ಫಲಕವನ್ನು ಪ್ರದರ್ಶಿಸಿದರು. ಧರಣಿ ನಿರತರನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಹರಸಾಹಸ ಪಟ್ಟರು.

ಭಾರತೀಯ ಕುಸ್ತಿ ಫೆಡರೇಷನ್‌ (WFI)ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ಬಜರಂಗ್, ಸಾಕ್ಷಿ ಹಾಗೂ ವಿನೇಶಾ ಅವರು ಕಳೆದ ಒಂದು ವರ್ಷದಿಂದ ಇದೇ ಸ್ಥಳದಲ್ಲಿ ಧರಣಿ ನಡೆಸಿದ್ದರು. ಅವರಿಗೆ ಭಾರೀ ಸಂಖ್ಯೆಯ ಬೆಂಬಲ ವ್ಯಕ್ತವಾಗಿತ್ತು. ರೈತರು, ಸಾಮಾಜಿಕ ಕಾರ್ಯಕರ್ತರು, ರಾಜಕಾರಣಿಗಳು, ಮಹಿಳಾ ಸಮೂಹ ಹಾಗೂ ಕುಸ್ತಿ ಕ್ಷೇತ್ರದ ಹಲವರು ಈ ಮೂವರಿಗೆ ಬೆಂಬಲ ವ್ಯಕ್ತಪಡಿಸಿದ್ದರು.

ಇದೀಗ ಅದೇ ಸ್ಥಳದಲ್ಲಿ ಈ ಮೂವರ ವಿರುದ್ಧವೇ ಧರಣಿ ನಡೆಯುತ್ತಿದೆ. ಕುಸ್ತಿ ಫೆಡರೇಷನ್‌ ಅನ್ನು ಎರಡು ಬಾರಿ ಅಮಾನತಿನಲ್ಲಿರಿಸಿದ ಕ್ರೀಡಾ ಸಚಿವಾಲಯ, ಸದ್ಯ ಅಡ್‌ಹಾಕ್ ಸಮಿತಿಯನ್ನು ರಚಿಸಿದೆ.

ಬುಧವಾರ ಧರಣಿ ನಡೆಸಿದ ಕಿರಿಯ ಕುಸ್ತಿಪಟುಗಳು ಕುಸ್ತಿ ಫೆಡರೇಷನ್‌ ಮೇಲಿನ ಅಮಾನತನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

ವಯೋವರ್ಗ ಕುಸ್ತಿ ಕೂಟ ಘೋಷಿಸಿದ ಸಮಿತಿ

ನವದೆಹಲಿ: ಜೂನಿಯರ್‌ ಕುಸ್ತಿಪಟುಗಳ ಪ್ರತಿಭಟನೆ ನಡೆಸಿದ ಸ್ವಲ್ಪ ಹೊತ್ತಿನಲ್ಲೇ, ಭಾರತ ಒಲಿಂಪಿಕ್ ಸಂಸ್ಥೆಯ ಅಡ್‌ಹಾಕ್‌ ಸಮಿತಿಯು ಆರು ವಾರಗಳ ಒಳಗೆ 15 ಮತ್ತು 20 ವರ್ಷದೊಳಗಿನವರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ನಡೆಸುವುದಾಗಿ ಘೋಷಿಸಿದೆ.

ಯುವ ಕುಸ್ತಿಪಟುಗಳ ಆತಂಕ ಒಪ್ಪಿಕೊಂಡ ಸಮಿತಿ ಅಧ್ಯಕ್ಷ ಭೂಪಿಂದರ್ ಸಿಂಗ್‌ ಬಾಜ್ವಾ ಅವರು, ಗ್ವಾಲಿಯರ್‌ನಲ್ಲಿ ಮೇಲಿನ ಎರಡು ಕೂಟಗಳನ್ನು ನಡೆಸುವುದಾಗಿ ಹೇಳಿಕೆಯಲ್ಲಿ ಭರವಸೆ ನೀಡಿದರು.

ಸಂಜಯ್‌ ಸಿಂಗ್‌ ಅಧ್ಯಕ್ಷರಾಗಿರುವ ಕುಸ್ತಿ ನೂತನ ಆಡಳಿತ ಸಮಿತಿಯನ್ನು ಕ್ರೀಡಾ ಸಚಿವಾಲಯ ಅಮಾನತುಗೊಳಿಸಿದ ನಂತರ ಮೂವರು ಸದಸ್ಯರ ಅಡ್‌ಹಾಕ್ ಸಮಿತಿಯನ್ನು ಡಿಸೆಂಬರ್‌ 27ರಂದು ನೇಮಕ ಮಾಡಲಾಗಿದ್ದು, ಇದು ದೇಶದ ಕುಸ್ತಿ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದೆ.

‘ಸಂಜಯ್ ಇಲ್ಲದ ಫೆಡರೇಷನ್‌ಗೆ ಸಮ್ಮತಿ’

ನವದೆಹಲಿ: ಬ್ರಿಜ್‌ ಭೂಷಣ್ ಶರಣ್ ಸಿಂಗ್ ಆಪ್ತರಾದ ಸಂಜಯ್ ಸಿಂಗ್ ಅವರನ್ನು ಹೊರಗಿಡಬೇಕು. ಉಳಿದಂತೆ ನೂತನ ಆಡಳಿತ ಸಮಿತಿಯ ಬಗ್ಗೆ ತಮ್ಮದೇನೂ ತಕರಾರು ಇಲ್ಲ ಎಂದು ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ಬುಧವಾರ ತಿಳಿಸಿದರು.

ಭಾರತ ಕುಸ್ತಿ ಫೆಡರೇಷನ್‌ಗೆ (ಡಬ್ಲ್ಯುಎಫ್‌ಐ) ಅಧ್ಯಕ್ಷರಾಗಿ ಸಂಜಯ್ ಆಯ್ಕೆ ಪ್ರತಿಭಟಿಸಿ ಕಳೆದ ತಿಂಗಳು 31 ವರ್ಷದ ಸಾಕ್ಷಿ ಅವರು ಕುಸ್ತಿಗೆ ವಿದಾಯ ಹೇಳಿದ್ದರು. 2016ರ ರಿಯೊ ಒಲಿಂಪಿಕ್ಸ್‌ ನಲ್ಲಿ ಸಾಕ್ಷಿ ಕಂಚಿನ ಪದಕ ಗೆದ್ದುಕೊಂಡಿದ್ದರು.

‘ಸರ್ಕಾರ ನಮಗೆ ಪೋಷಕರಿದ್ದಂತೆ. ಮುಂಬರುವ ಕುಸ್ತಿಪಟುಗಳಿಗೆ ಫೆಡರೇಷನ್‌ ಸುರಕ್ಷಾ ಭಾವ ಮೂಡಿಸಬೇಕು. ಸಂಜಯ್ ಸಿಂಗ್ ವರ್ತನೆ ನೀವೆಲ್ಲಾ ನೋಡಿದ್ದೀರಿ. ಫೆಡರೇಷನ್‌ನಲ್ಲಿ ಅವರ ಹಸ್ತಕ್ಷೇಪ ಇರಬಾರದು’ ಎಂದರು. ಸಂಜಯ್, ಚುನಾವಣೆಯಲ್ಲಿ 40–7 ಮತಗಳ ದೊಡ್ಡ ಅಂತರದಿಂದ ಅನಿತಾ ಶೆವೊರಾನ್ ಅವರನ್ನು ಸೋಲಿಸಿದ್ದರು.

ಜೂನಿಯರ್ ಕುಸ್ತಿಪಟುಗಳ ಪ್ರತಿಭಟನೆ ಬಗ್ಗೆ ಕೇಳಿದಾಗ, ‘ನಾನು ಕುಸ್ತಿಗಾಗಿ 18–20 ವರ್ಷ ತ್ಯಾಗ ಮಾಡಿದ್ದೇನೆ. ಕಳೆದ ಕೆಲವು ತಿಂಗಳನ್ನು ಹೇಗೆ ಕಳೆದಿದ್ದೇನೆ ಎಂಬುದು ನನಗಷ್ಟೇ ಗೊತ್ತು’ ಎಂದು ಸಾಕ್ಷಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT