ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೇಲೊ ಇಂಡಿಯಾ ಪ್ಯಾರಾ ಗೇಮ್ಸ್‌ | ಕೈಗಳಿಲ್ಲದ ಶೀತಲ್‌ಗೆ ಆರ್ಚರಿ ಸ್ವರ್ಣ

Published 16 ಡಿಸೆಂಬರ್ 2023, 15:54 IST
Last Updated 16 ಡಿಸೆಂಬರ್ 2023, 15:54 IST
ಅಕ್ಷರ ಗಾತ್ರ

ನವದೆಹಲಿ: ಕೈಗಳಿಲ್ಲದ ಆರ್ಚರ್‌ (ಬಿಲ್ಗಾರ್ತಿ) ಶೀತಲ್ ದೇವಿ ಅಮೋಘ ರೀತಿಯಲ್ಲಿ ಯಶಸ್ಸಿನ ಓಟ ಮುಂದುವರಿಸಿ, ಮೊದಲ ಖೇಲೊ ಇಂಡಿಯಾ ಪ್ಯಾರಾ ಗೇಮ್ಸ್‌ನ ಕಾಂಪೌಂಡ್ ಓಪನ್ ವಿಭಾಗದಲ್ಲಿ ಶನಿವಾರ ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು.

ಇಲ್ಲಿನ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಶೀತಲ್ ಹಾದಿ ಸುಲಭದ್ದಾಗಿರಲಿಲ್ಲ. ಉತ್ತರ ಪ್ರದೇಶದ ಜ್ಯೋತಿ ಬಲಿಯಾನ್ ಅವರ ನಿಕಟ ಪೈಪೋಟಿಯನ್ನು ಎದುರಿಸಿದ ಶೀತಲ್ 141 ಸ್ಕೋರ್‌ನೊಡನೆ ಅಗ್ರಸ್ಥಾನ ಪಡೆದರು. ಜ್ಯೋತಿ (138) ಅವರು ಬೆಳ್ಳಿಯ ಪದಕ ತಮ್ಮದಾಗಿಸಿಕೊಂಡರು. ಹರಿಯಾಣದ ಸರಿತಾ (137) ಅವರಿಗೆ ಕಂಚಿನ ಪದಕ ದಕ್ಕಿತು.

ಕಾಲುಗಳಿಂದ ಬಾಣಗಳ ಪ್ರಯೋಗ ಮಾಡುವ ಶೀತಲ್, ಎರಡು ತಿಂಗಳ ಹಿಂದೆ ಚೀನಾದ ಹಾಂಗ್‌ಝೌನಲ್ಲಿ ನಡೆದ ಪ್ಯಾರಾ ಏಷ್ಯನ್ ಕ್ರೀಡೆಗಳಲ್ಲಿ ಸ್ವರ್ಣ ಸೇರಿ ಎರಡು ಪದಕ ಗೆದ್ದುಕೊಂಡಿದ್ದರು. ಇಲ್ಲಿಯೂ ಜಮ್ಮು ಮತ್ತು ಕಾಶ್ಮೀರದ ಈ ಸ್ಪರ್ಧಿಯಿಂದ ಕೌಶಲದ ಜೊತೆ ಗಟ್ಟಿ ಮನೋಬಲ ಕಂಡುಬಂತು.

ಪ್ಯಾರಾಲಿಂಪಿಯನ್ನರಾದ ಹರ್ವಿಂದರ್ ಸಿಂಗ್ (ಹರಿಯಾಣ) ಮತ್ತು ವಿವೇಕ್ ಚಿಕರಾ (ಉತ್ತರ ಪ್ರದೇಶ) ರಿಕರ್ವ್ ಆರ್ಚರಿ ವಿಭಾಗದಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿಯ ಪದಕ ಗಳಿಸಿದರು.

ಹಾಂಗ್‌ಝೌ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ರುದ್ರಾಂಶ್ ಖಂಡೇಲ್ವಾಲ್ (ರಾಜಸ್ತಾನ) ಅವರೂ ಉತ್ತಮ ಫಾರ್ಮ್ ಮುಂದುವರಿಸಿ ಡಾ.ಕರ್ಣಿಸಿಂಗ್ ಶೂಟಿಂಗ್‌ ರೇಂಜ್‌ನಲ್ಲಿ ನಡೆದ ಪುರುಷರ 50 ಮೀ. ಪಿಸ್ತೂಲ್ (ಎಸ್‌ಎಚ್‌1 ವಿಭಾಗ) ಸ್ಪರ್ಧೆಯಲ್ಲಿ 223.4 ಸ್ಕೋರ್‌ನೊಡನೆ ಚಿನ್ನ ಗೆದ್ದರು. ಈ ಸ್ಪರ್ಧೆಯಲ್ಲಿ ವಿಶ್ವದಾಖಲೆ ಹೊಂದಿರುವ ಖಂಡೇಲ್ವಾಲ್, ಹರಿಯಾಣದ ಸಿಂಗರಾಜ್ (216.4) ಅವರನ್ನು ಹಿಂದೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT