ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮನು ಭಾಕರ್‌– ನೀರಜ್‌ ಚೋಪ್ರಾ ಮದುವೆ ವದಂತಿಗೆ ತೆರೆ ಎಳೆದ ತಂದೆ ರಾಮ್‌ಕಿಶನ್

Published : 13 ಆಗಸ್ಟ್ 2024, 14:21 IST
Last Updated : 13 ಆಗಸ್ಟ್ 2024, 14:21 IST
ಫಾಲೋ ಮಾಡಿ
Comments

ನವದೆಹಲಿ: ಭಾರತದ ಜಾವೆಲಿನ್‌ ಥ್ರೋ ತಾರೆ ನೀರಜ್‌ ಚೋಪ್ರಾ ಹಾಗೂ ಶೂಟರ್‌ ಮನು ಭಾಕರ್ ಅವರ ವಿವಾಹ ವದಂತಿಯನ್ನು ಮನು ತಂದೆ ರಾಮ್‌ಕಿಶನ್ ತಳ್ಳಿ ಹಾಕಿದ್ದಾರೆ.

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ 26 ವರ್ಷ ವಯಸ್ಸಿನ ನೀರಜ್ ‍ಮತ್ತು 22 ವರ್ಷ ವಯಸ್ಸಿನ ಮನು ಗಮನ ಸೆಳೆದಿದ್ದರು. ಶೂಟಿಂಗ್‌ನ ವೈಯಕ್ತಿಕ ವಿಭಾಗ ಮತ್ತು ಮಿಶ್ರ ವಿಭಾಗದಲ್ಲಿ ಮನು ಭಾಕರ್ ಅವಳಿ ಕಂಚಿನ ಪದಕ ಗೆದ್ದರೆ, ನೀರಜ್ ‍ಪುರುಷರ ಜಾವೆಲಿನ್ ಥ್ರೋ ಪಂದ್ಯದಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

ಒಲಿಂಪಿಕ್ಸ್ ಸಮಾರೋಪದಂದು ನೀರಜ್, ಮನು ಹಾಗೂ ಆಕೆಯ ತಾಯಿ ಸುಮೇಧಾ ಭಾಕರ್ ಸಂಭಾಷಣೆ ನಡೆಸುವ ಎರಡು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಒಂದು ವಿಡಿಯೊದಲ್ಲಿ ನೀರಜ್ ಮತ್ತು ಮನು ಮಾತನಾಡುವ ವೇಳೆ ಒಬ್ಬರನ್ನೊಬ್ಬರ ಮುಖ ನೋಡಿ ಮಾತನಾಡಲು ಹಿಂಜರಿಯುತ್ತಿರುವುದು ಕಾಣಬಹುದಾಗಿದೆ. ಅಲ್ಲದೆ, ನೀರಜ್ ಜೊತೆ ಫೋಟೊಗೆ ಫೋಸ್‌ ಕೊಡುವಂತೆ ಮನುಗೆ ಸುಮೇಧಾ ಹೇಳುತ್ತಿದ್ದಾರೆ.

ಮತ್ತೊಂದು ವಿಡಿಯೊದಲ್ಲಿ ನೀರಜ್ ಮತ್ತು ಸುಮೇಧಾ ಸಂಭಾಷಣೆ ನಡೆಸುತ್ತಾರೆ. ಅದರಲ್ಲಿ ನೀರಜ್ ಅವರ ಕೈಯನ್ನು ತಮ್ಮ ತಲೆಯ ಮೇಲೆ ಇಟ್ಟು ಪ್ರಮಾಣ ಮಾಡಿಸಿಕೊಳ್ಳುತ್ತಿರುವುದು ಕಾಣಬಹುದಾಗಿದೆ. ಈ ವಿಡಿಯೊಗಳನ್ನು ಮೆಚ್ಚಿಕೊಂಡಿರುವ ನೆಟ್ಟಿಗರು, ಮದುವೆ ನಿಶ್ಚಯವಾಯಿತಾ? ಎಂದು ಕಾಲೆಳೆದಿದ್ದಾರೆ.

ಒಲಿಂಪಿಕ್ಸ್‌ ಸಮಾರೋಪ ಸಮಾರಂಭದಲ್ಲಿ ನೀರಜ್ ಮತ್ತು ಮನು ಭಾರತದ ಧ್ವಜಧಾರಿಗಳಾಗಿ ಕಾಣಿಸಿಕೊಳ್ಳಬೇಕಿತ್ತು. ಆದರೆ, ನಿವೃತ್ತಿ ಘೋಷಿಸಿದ ಭಾರತ ಹಾಕಿ ತಂಡದ ಗೋಲ್‌ಕೀಪರ್‌ ಪಿ.ಆರ್‌. ಶ್ರೀಜೇಶ್‌ ಅವರನ್ನು ಧ್ವಜಧಾರಿಯಾಗಿ ನೋಡಲು ಇಷ್ಟಪಡುವುದಾಗಿ ನೀರಜ್‌ ಹೇಳಿದ್ದರು.

ಮದುವೆ ಬಗ್ಗೆ ಯೋಚಿಸಿಲ್ಲ:

ನೀರಜ್‌– ಮನು ಮದುವೆಯ ವದಂತಿ ಕುರಿತು ‘ದೈನಿಕ್ ಬಾಸ್ಕರ್‌’ಗೆ ಪ್ರತಿಕ್ರಿಯಿಸಿರುವ ರಾಮ್‌ಕಿಶನ್, ‘ಮನು ಇನ್ನೂ ತುಂಬಾ ಚಿಕ್ಕವಳು. ಅವಳಿಗೆ ಮದುವೆಯ ವಯಸ್ಸು ಆಗಿಲ್ಲ. ಆಕೆಯ ಮದುವೆ ಬಗ್ಗೆ ಈಗ ಯೋಚಿಸುತ್ತಿಲ್ಲ. ಸುಮೇಧಾ ಅವರು ನೀರಜ್‌ನನ್ನು ತನ್ನ ಮಗನಂತೆ ಭಾವಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ. 

ನೀರಜ್‌ ಚೋಪ್ರಾ –ಪಿಟಿಐ ಚಿತ್ರ
ನೀರಜ್‌ ಚೋಪ್ರಾ –ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT