ಪ್ಯಾರಿಸ್: ಭಾರತದ ಕುಸ್ತಿಪಟು ರಿತಿಕಾ ಹೂಡಾ ಅವರು ಒಲಿಂಪಿಕ್ಸ್‌ನ 76 ಕೆ.ಜಿ ಮಹಿಳೆಯರ ಫ್ರೀಸ್ಟೈಲ್ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ದಿಟ್ಟ ಹೋರಾಟ ನಡೆಸಿ ಪರಾಭವಗೊಂಡರು.
21 ವರ್ಷ ವಯಸ್ಸಿನ ರಿತಿಕಾ ಶನಿವಾರ ಆರಂಭಿಕ ಸುತ್ತಿನಲ್ಲಿ ಹಂಗೇರಿಯ ಬರ್ನಾಡೆಟ್ ನ್ಯಾಗಿ ಅವರನ್ನು ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಮಣಿಸಿ ಕ್ವಾರ್ಟರ್ ಫೈನಲ್ ತಲುಪಿದ್ದರು. ಅಲ್ಲಿ ಅಗ್ರ ಶ್ರೇಯಾಂಕದ ಐಪೆರಿ ಮೆಡೆಟ್ ಕಿಝಿ ಅವರಿಗೆ ಶರಣಾದರು.
ಕಳೆದ ವರ್ಷ 23 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿರುವ ರಿತಿಕಾ, ಏಷ್ಯನ್ ಗೇಮ್ಸ್ ಚಾಂಪಿಯನ್ ಮತ್ತು ವಿಶ್ವ ಚಾಂಪಿಯನ್‌ಷಿಪ್ ಬೆಳ್ಳಿ ವಿಜೇತೆ ಕಿರ್ಗಿಸ್ತಾನದ ಐಪೆಟ್ ವಿರುದ್ಧ ಪಂದ್ಯದ ಕೊನೆಯವರೆಗೂ 1-1ಸಮಬಲ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇಬ್ಬರೂ ಕುಸ್ತಿಪಟುಗಳು ರಕ್ಷಣಾತ್ಮಕ ಆಟಕ್ಕೆ ಹೆಚ್ಚಿನ ಒತ್ತು ನೀಡಿದರು.
ಐಪೆಟ್ ಆರಂಭದಲ್ಲಿ ಆಕ್ರಮಣಕಾರಿಯಾಗಿದ್ದರು. ರಿತಿಕಾ ಬಲವಾದ ರಕ್ಷಣೆಗೆ ಮುಂದಾದರು. ಈ ಮಧ್ಯೆ ಭಾರತದ ಕುಸ್ತಿಪಟು ಮೊದಲ ಅವಧಿಯಲ್ಲಿ ಒಂದು ಅಂಕ ಗಳಿಸಿ, ಮುನ್ನಡೆ ಪಡೆದಿದ್ದರು. ಆದರೆ, ಎರಡನೇ ಅವಧಿಯಲ್ಲಿಯೂ ದಾಳಿಗಿಳಿಯದ ರಿತಿಕಾ ಮುನ್ನಡೆಯನ್ನು ಕಳೆದುಕೊಂಡು, ಸೋಲು ಅನುಭವಿಸಬೇಕಾಯಿತು.
ಕುಸ್ತಿ ನಿಯಮದ ಅನ್ವಯ ಅಂಕಗಳು ಸಮಬಲಗೊಂಡರೆ ಕೊನೆಯ ಅಂಕವನ್ನು ಗಳಿಸಿದವರನ್ನು ವಿಜೇತರು ಎಂದು ಘೋಷಿಸಲಾಗುತ್ತದೆ. ಹೀಗಾಗಿ, 25 ವರ್ಷ ವಯಸ್ಸಿನ ಐಪೆರಿ ಮುಂದಿನ ಸುತ್ತು ಪ್ರವೇಶಿಸಿದರು.
ಇದಕ್ಕೂ ಮೊದಲು ಹೂಡಾ, ಬರ್ನಾಡೆಟ್ ನ್ಯಾಗಿ ವಿರುದ್ಧ 12-2ರ ಅಂತರದಲ್ಲಿ ಸುಲಭ ಗೆಲುವು ದಾಖಲಿಸಿ ಶುಭಾರಂಭ ಮಾಡಿದ್ದರು. ತನ್ನ ಶಕ್ತಿ ಮತ್ತು ಕೌಶಲ ಪ್ರದರ್ಶಿಸಿದ್ದ ರಿತಿಕಾ ಎದುರಾಳಿಗಿಂತಲೂ 10 ಅಂಕ ಮುನ್ನಡೆ ಗಳಿಸಿದ್ದ ಹಿನ್ನೆಲೆಯಲ್ಲಿ ನಿಗದಿತ ಸಮಯಕ್ಕಿಂತಲೂ 29 ಸೆಕೆಂಡಿಗೂ ಮುನ್ನವೇ ರೆಫರಿ ಪಂದ್ಯವನ್ನು ಮುಕ್ತಾಯಗೊಳಿಸಿದ್ದರು.
‘ಹೌದು, ರಿತಿಕಾ ಚೆನ್ನಾಗಿ ಆಡಿದಳು. ಆದರೆ, ಬಲವಾದ ರಕ್ಷಣಾತ್ಮಕ ಆಟದಿಂದ ಪಂದ್ಯವನ್ನು ಗೆಲ್ಲಲು ಸಾಧ್ಯವಾಗದಿದ್ದರೆ ಏನು ಪ್ರಯೋಜನ? ಆಕೆ, ಎದುರಾಳಿಗೆ ದಾಳಿ ಮಾಡಲು ಅವಕಾಶ ನೀಡಲಿಲ್ಲ, ಆಕೆಯೂ ದಾಳಿ ಮಾಡಲಿಲ್ಲ. ಒಂದು ಅಂಕದಿಂದ ಸೋತರೂ ಸೋಲೇ, 10 ಅಂಕಗಳಿಂದ ಸೋತರೂ ಸೋಲೇ. ಈ ಪಂದ್ಯವನ್ನು ಗೆಲ್ಲಲು ರಿತಿಕಾಗೆ ಅವಕಾಶವಿತ್ತು’ ಎಂದು ಭಾರತದ ಕೋಚ್ ವೀರೇಂದ್ರ ದಹಿಯಾ ಅಸಮಾಧಾನ ವ್ಯಕ್ತಪಡಿಸಿದರು.
ರಿತಿಕಾ ಅವರ ಭವಿಷ್ಯವು ಐಪೆರಿಯ ಸೆಮಿಫೈನಲ್ ಪಂದ್ಯದ ಫಲಿತಾಂಶವನ್ನು ಅವಲಂಬಿತವಾಗಿದೆ. ಒಂದು ವೇಳೆ ಕಿರ್ಗಿಸ್ತಾನದ ಕುಸ್ತಿಪಟು ಫೈನಲ್‌ಗೆ ತಲುಪಿದರೆ, ರಿತಿಕಾ ಅವರಿಗೆ ಕಂಚಿನ ಪ್ಲೇ ಆಪ್‌ನ ರೆಪಷಾನ್ ಸುತ್ತಿಗೆ ಅರ್ಹತೆ ಪಡೆಯುತ್ತಾರೆ.
ಕಣದಲ್ಲಿದ್ದ ಭಾರತದ ಐವರು ಮಹಿಳಾ ಕುಸ್ತಿಪಟುಗಳಲ್ಲಿ ರಿತಿಕಾ ಕೊನೆಯವರು. ಅಂತಿಮ್ ಪಂಘಲ್ (53 ಕೆಜಿ), ಅಂಶು ಮಲಿಕ್ (57 ಕೆಜಿ) ಮತ್ತು ನಿಶಾ ದಹಿಯಾ (68 ಕೆಜಿ) ಈಗಾಗಲೇ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.
ವಿನೇಶ್ ಫೋಗಟ್ ಅವರು 100 ಗ್ರಾಂ ಅಧಿಕ ತೂಕ ಹೊಂದಿದ್ದಕ್ಕಾಗಿ ಮಹಿಳೆಯರ 50 ಕೆಜಿ ಫೈನಲ್‌ನಿಂದ ಅನರ್ಹಗೊಳಿಸುವುದರ ವಿರುದ್ಧದ ಮೇಲ್ಮನವಿ ಸಲ್ಲಿಸಿದ್ದಾರೆ. ಪುರುಷರ ಕುಸ್ತಿ ವಿಭಾಗದಲ್ಲಿ ಭಾರತದ ಏಕಮಾತ್ರ ಸ್ಪರ್ಧಿಯಾಗಿದ್ದ ಅಮನ್ ಸೆಹ್ರಾವತ್ ಅವರು ಶುಕ್ರವಾರ ಕಂಚಿನ ಪದಕ ಗೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.