ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Pro kabaddi: ದಬಾಂಗ್‌ ಎದುರು ಮಂಕಾದ ಬುಲ್ಸ್‌

Published 8 ಡಿಸೆಂಬರ್ 2023, 18:32 IST
Last Updated 8 ಡಿಸೆಂಬರ್ 2023, 18:32 IST
ಅಕ್ಷರ ಗಾತ್ರ

ಬೆಂಗಳೂರು: ನಾಯಕ ನವೀನ್ ಕುಮಾರ್ ಅವರ ಸೂಪರ್ ಟೆನ್ ಮತ್ತು ಆಶು ಮಲಿಕ್ (10 ಪಾಯಿಂಟ್‌) ಅವರ ಅಮೋಘ ರೈಡಿಂಗ್ ಬಲದಿಂದ ದಬಾಂಗ್ ಡೆಲ್ಲಿ ಕೆ.ಸಿ. ತಂಡ ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ 38–31 ರಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಏಳು ಪಾಯಿಂಟ್‌ಗಳಿಂದ ಸೋಲಿಸಿತು. ತವರಿನಲ್ಲಿ ಈ ಪಂದ್ಯದ ಸೋಲು ಸೇರಿದಂತೆ ಬುಲ್ಸ್‌ಗೆ ಇದು 10ನೇ ಆವೃತ್ತಿಯಲ್ಲಿ ಸತತ ಮೂರನೇ ಸೋಲು.

ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಹುಪಾಲು ದೆಹಲಿ ತಂಡವೇ ಮೇಲುಗೈ ಸಾಧಿಸಿದ್ದು ವಿರಾಮದ ವೇಳೆಗೆ 17–12 ರಿಂದ ಮುನ್ನಡೆ ಸಾಧಿಸಿತ್ತು. ಬೆಂಗಳೂರು ಎರಡು ಬಾರಿ ಆಲೌಟ್‌ ಆಯಿತು. ನವೀನ್ 13 ಪಾಯಿಂಟ್ಸ್ ಕಲೆಹಾಕಿದರು. ಆಶು 9 ರೈಡಿಂಗ್ ಸೇರಿ 10 ಪಾಯಿಂಟ್‌ ಗಳಿಸಿದರು. ಇದು ಪ್ರೊ ಕಬಡ್ಡಿ ಲೀಗ್‌ನಲ್ಲಿ ಅನುಭವಿ ನವೀನ್‌ಗೆ 60ನೇ ‘ಸೂಪರ್‌ ಟೆನ್‌’.

ವಿರಾಮದ ನಂತರ ಬುಲ್ಸ್‌ ಒಮ್ಮೆ 20–20ರಲ್ಲಿ ಸಮ ಮಾಡಿದ್ದು ಬಿಟ್ಟರೆ ಉಳಿದಂತೆ ಪಂದ್ಯದುದ್ದಕ್ಕೂ ದೆಹಲಿ ತಂಡವೇ ಮುನ್ನಡೆಯಲ್ಲಿತ್ತು. ಬೆಂಗಳೂರು ಪರ ಪ್ರಮುಖ ರೈಡರ್ ಭರತ್‌ ಸೂಪರ್‌ ಟೆನ್‌ (12 ಪಾಯಿಂಟ್‌) ಸಾಧಿಸಿ ಗಮನ ಸೆಳೆದರು. ಅವರೂ ಪೂರ್ಣ ಲಯದಲ್ಲಿದ್ದಂತೆ ಕಾಣಲಿಲ್ಲ. ಮತ್ತೊಬ್ಬ ಪ್ರಮುಖ ರೈಡರ್‌ ವಿಕಾಸ್‌ ಖಂಡೋಲಾ ವಿಫಲರಾಗಿದ್ದು ಹಿನ್ನಡೆ ಎನಿಸಿತು.

ಆಶು ಮತ್ತು ನವೀನ್ ಅವರ ಉತ್ತಮ ರೈಡ್‌ಗಳ ನೆರವಿನಿಂದ ಡೆಲ್ಲಿ ತಂಡ ಆರಂಭದಲ್ಲೇ 6–3 ರಲ್ಲಿ ಮುನ್ನಡೆ ಪಡೆಯಿತು. ಬುಲ್ಸ್ ತಂಡದ ಪ್ರಮುಖ ರೈಡರ್‌ ಭರತ್‌ ಕೆಲವು ರೈಡ್‌ಗಳಲ್ಲಷ್ಟೇ ಮಿಂಚಿದರು. ಅವರ ರೈಡಿಂಗ್‌ಅನ್ನೇ ತಂಡ ಬಲವಾಗಿ ನಂಬಿದಂತಿತ್ತು. ಕ್ಯಾಚಿಂಗ್‌ನಲ್ಲೂ ಬುಲ್ಸ್‌ ವಿಫಲವಾಯಿತು. 11ನೇ ನಿಮಿಷ ಬೆಂಗಳೂರು ಬುಲ್ಸ್‌ ಆಲೌಟ್‌ ಆಯಿತು. ಆಗ ಡೆಲ್ಲಿ ತಂಡ 11–5ರಲ್ಲಿ ಮುಂದಿತ್ತು.

ಆದರೆ ಚೇತರಿಕೆಯ ಆಟವಾಡಿದ ಬೆಂಗಳೂರು ಕೆಲವು ಉತ್ತಮ ರೈಡ್‌ಗಳ ಮೂಲಕ ವಿರಾಮದ ವೇಳೆಗೆ ಹಿನ್ನಡೆಯನ್ನು 12–17ಕ್ಕೆ ಇಳಿಸಿತು. ವಿರಾಮದ ಮೂರು ನಿಮಿಷಗಳ ನಂತರ ದೆಹಲಿ ತಂಡ ಆಲೌಟ್ ಆಯಿತು. ಆಗ ಹಿನ್ನಡೆ ಅಂತರ 17–20ಕ್ಕೆ ಇಳಿದಿತ್ತು. ಬುಲ್ಸ್ ತಂಡದ ಸುಶೀಲ್‌ ಅವರ ಎರಡು ಪಾಯಿಂಟ್‌ಗಳ ನೆರವಿನಿಂದ ಮತ್ತು ಸೌರಭ್ ನಂದಾಲ್ ಅವರ ಟ್ಯಾಕಲ್‌ನಿಂದ ಒಂದು ಹಂತದಲ್ಲಿ ಸ್ಕೋರ್‌ ಸಮನಾಯಿತು. ಆದರೆ ದೆಹಲಿ ಮತ್ತೊಮ್ಮೆ ಮೇಲುಗೈ ಸಾಧಿಸಿ ಮುನ್ನಡೆ ಹೆಚ್ಚಿಸುತ್ತಾ ಹೋಯಿತು. 31ನೇ ನಿಮಿಷ ಬೆಂಗಳೂರು ಬುಲ್ಸ್ ಎರಡನೇ ಬಾರಿ ಆಲೌಟ್‌ ಆಯಿತು. ದೆಹಲಿ ಆಗ 29–23ರಲ್ಲಿ ಮುನ್ನಡೆದಿತ್ತು. ಭರತ್‌ ಒಮ್ಮೆ ರೈಡಿಂಗ್‌ನಲ್ಲಿ ಮೂರು ಪಾಯಿಂಟ್‌ಗಳನ್ನು ತಂದಾಗ ಸ್ಕೋರ್‌ ಬುಲ್ಸ್‌ ಹಿನ್ನಡೆ 29–32ಕ್ಕೆ ಇಳಿದಿತ್ತು. ಆದರೆ ಅದು ಕ್ಷಣಿಕ ಚೇತರಿಕೆಯಾಯಿತು.

ಇನ್ನೊಂದು ಪಂದ್ಯದಲ್ಲಿ ಪುಣೇರಿ ಪಲ್ಟನ್ಸ್ 43–32 ಪಾಯಿಂಟ್‌ಗಳಿಂದ ಯು ಮುಂಬಾ ತಂಡವನ್ನು ಸೋಲಿಸಿತು. ಮೋಹಿತ್ ಗೋಯತ್ ವಿಜೇತ ತಂಡದ ಪರ 12 ಪಾಯಿಂಟ್ಸ್ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT