ಬೆಂಗಳೂರು: ‘ಭಾರತ ಹಾಕಿ ತಂಡವು ಸತತ ಎರಡು ಒಲಿಂಪಿಕ್ ಕೂಟಗಳಲ್ಲಿ ಕಂಚಿನ ಪದಕ ಗಳಿಸಿದೆ. ಈ ಅದ್ಭುತ ಸಾಧನೆಯು ದೇಶದ ಹಾಕಿ ಕ್ರೀಡೆಯ ಬೆಳವಣಿಗೆಗೆ ಪ್ರೇರಣೆಯಾಗಬೇಕು. ಅದಕ್ಕಾಗಿ ತಳಮಟ್ಟದಲ್ಲಿ ಹಾಕಿ ಆಟದ ಬೆಳವಣಿಗೆಗೆ ಯೋಜನೆಗಳು ಆರಂಭವಾಗಬೇಕು. ಒಲಿಂಪಿಕ್ಸ್ ಸಾಧನೆಯು ಕೇವಲ ಮಾಧ್ಯಮಗಳಲ್ಲಿ ಪ್ರಚಾರಕ್ಕೆ ಸೀಮಿತವಾಗಿ ನೇಪಥ್ಯಕ್ಕೆ ಸರಿಯಬಾರದು’
– ಕರ್ನಾಟಕದ ಒಲಿಂಪಿಯನ್ ಹಾಕಿಪಟು ಆಶಿಶ್ ಬಲ್ಲಾಳ ಅವರ ಅಭಿಪ್ರಾಯ ಇದು.
ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಜನ್ಮದಿನದ ಅಂಗವಾಗಿ ಗುರುವಾರ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ‘ಪ್ರಜಾವಾಣಿ’ಗೆ ಸಂದರ್ಶನ ನೀಡಿರುವ ಮಾಜಿ ಗೋಲ್‌ಕೀಪರ್ ಆಶಿಶ್ ದೇಶದ ಹಾಕಿ ಕ್ರೀಡೆಯ ಸ್ಥಿತಿ–ಗತಿಯ ಬಗ್ಗೆ ಮಾತನಾಡಿದ್ದಾರೆ.
ಒಲಿಂಪಿಕ್ ಕೂಟಗಳಲ್ಲಿ ಪದಕ ಜಯಿಸಿದಾಗ ದೇಶದಲ್ಲಿ ಸಂಚಲನ ಮೂಡುತ್ತದೆ. ಈ ಸಂದರ್ಭವನ್ನು ಕ್ರೀಡೆಯ ಬೆಳವಣಿಗೆಗೆ ಬಳಕೆ ಮಾಡುವುದು ಹೇಗೆ?
ಅತ್ಯುನ್ನತ ಮಟ್ಟದಲ್ಲಿ ಹಾಕಿ ವೈಭವೋಪೇತವಾಗಿ ಕಾಣುತ್ತಿದೆ. ಪದಕ ಗೆದ್ದ ತಂಡದ ಆಟಗಾರರ ಸಾಧನೆಯು ದೇಶದ ಪ್ರತಿ ರಾಜ್ಯದ ಗ್ರಾಮಾಂತರ ಮಟ್ಟದಲ್ಲಿ ಹಾಕಿ ಬೆಳೆಯಲು ಕಾರಣವಾಗಬೇಕು. ಅದಕ್ಕಾಗಿ ಟೂರ್ನಿಗಳು ಹೆಚ್ಚು ನಡೆಯಬೇಕು. ಆದರೆ ಹಾಗಾಗುತ್ತಿಲ್ಲ. ಉತ್ತರ ಭಾರತ ಒಂದಿಷ್ಟು ಪರವಾಗಿಲ್ಲ. ಆದರೆ, ದಕ್ಷಿಣ ಭಾರತದಲ್ಲಿ ಹಾಕಿ ಕ್ರೀಡೆಯು ನೆಲಕಚ್ಚಿದೆ. ಅದರಲ್ಲಿ ಕರ್ನಾಟಕವೂ ಇದೆ.
ಕರ್ನಾಟಕದಲ್ಲಿ ಹಾಕಿ ಬೆಳವಣಿಗೆಗೆ ಯಾವ ರೀತಿಯ ಯೋಜನೆಗಳು ಬೇಕು?
ನಮ್ಮ ರಾಜ್ಯದಲ್ಲಿ ಎರಡು ಹಾಕಿ ಸಂಸ್ಥೆಗಳಿವೆ. ಒಂದು ಹಾಕಿ ಕರ್ನಾಟಕ ಮತ್ತು ಬೆಂಗಳೂರು ಹಾಕಿ ಸಂಸ್ಥೆ (ಈ ಹಿಂದೆ ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ) ಇವೆ. ಅದರಲ್ಲಿ ಹಾಕಿ ಇಂಡಿಯಾದಿಂದ ಮಾನ್ಯತೆ ಪಡೆದಿರುವ ಹಾಕಿ ಕರ್ನಾಟಕದ ಹೊಣೆ ಹೆಚ್ಚು. ಈ ಸಂಸ್ಥೆಯು ಕೇವಲ ಒಂದು ಜಿಲ್ಲೆಗೆ ಸೀಮಿತವಾಗಬಾರದು. ರಾಜ್ಯವ್ಯಾಪಿ ಕಾರ್ಯನಿರ್ವಹಿಸುವಂತಾಗಬೇಕು. ಜಿಲ್ಲಾ ಸಂಸ್ಥೆಗಳಿಗೆ ಜೀವತುಂಬಬೇಕು. ಪಂಜಾಬ್ ರೀತಿಯ ಮಾದರಿಯನ್ನು ಅನುಸರಿಸರಿಸಬಹುದು. ಭಾರತ ತಂಡದಲ್ಲಿ ಪಂಜಾಬ್ ರಾಜ್ಯದ 8 ರಿಂದ 10 ಆಟಗಾರರು ಇರುತ್ತಾರೆ. ಅದಕ್ಕೆ ಕೆಲವು ವರ್ಷಗಳ ಹಿಂದೆ ಅಲ್ಲಿ ಸಚಿವರಾಗಿದ್ದ ಮಾಜಿ ಹಾಕಿಪಟು ಪರ್ಗಟ್ ಸಿಂಗ್ ಅವರು ಕಾರಣ. ಪ್ರತಿ ಜಿಲ್ಲೆಗೊಂದು ಹಾಕಿ ತರಬೇತಿ ಅಕಾಡೆಮಿ ಆರಂಭಿಸಿದರು. ಅವುಗಳಿಗೆ ಒಲಿಂಪಿಯನ್ ಮತ್ತು ಅಂತರರಾಷ್ಟ್ರೀಯ ಹಾಕಿಪಟುಗಳನ್ನು ನೇಮಕ ಮಾಡಿ ಉತ್ತಮ ಸಂಬಳ ನೀಡಿದರು. ಅವರು ಆ ಜಿಲ್ಲೆಯಲ್ಲಿರುವ ಪ್ರತಿಭಾನ್ವಿತ ಮಕ್ಕಳನ್ನು ಆಯ್ಕೆ ಮಾಡಿಕೊಂಡು ಬಂದು ತರಬೇತಿ ಕೊಟ್ಟರು. ಅದರ ಫಲವಾಗಿ ಅಂತರ ಅಕಾಡೆಮಿ, ಅಂತರ ಜಿಲ್ಲೆ, ವಲಯ ಹಾಗೂ ವಯೋಮಿತಿ ವಿಭಾಗಗಳಲ್ಲಿ ನಿರಂತರವಾಗಿ ಟೂರ್ನಿಗಳು ನಡೆಯುತ್ತಿವೆ. ಹರಿಯಾಣದಲ್ಲಿಯೂ ಇದೇ ಮಾದರಿ ಅನುಸರಿಸಲಾಗುತ್ತಿದೆ. ಮಧ್ಯಪ್ರದೇಶ, ಒಡಿಶಾ, ಉತ್ತರ ಪ್ರದೇಶಗಳಲ್ಲಿಯೂ ಮಾಜಿ ಒಲಿಂಪಿಯನ್ ಮತ್ತು ಅಂತರರಾಷ್ಟ್ರೀಯ ಆಟಗಾರರ ಅನುಭವವನ್ನು ಸಮರ್ಥವಾಗಿ ಬಳಸಿಕೊಳ್ಳಲಾಗುತ್ತಿದೆ. ಅದಕ್ಕೆ ತಕ್ಕಂತೆ ಮೂಲಸೌಲಭ್ಯ ಅಭಿವೃದ್ಧಿಪಡಿಸಲಾಗಿದೆ.ಆಟಗಾರರಿಗೆ, ತರಬೇತುದಾರರಿಗೆ ಆರ್ಥಿಕ ಸಹಾಯ ನೀಡಲಾಗುತ್ತಿದೆ. ಅಲ್ಲಿಯ ರಾಜ್ಯ ಹಾಕಿ ಸಂಸ್ಥೆಗಳು ಮತ್ತು ಸ್ಥಳೀಯ ಸರ್ಕಾರಗಳು ಕೈಜೋಡಿಸಿ ದುಡಿಯುತ್ತಿರುವುದರ ಫಲ ಇದು. ದಶಕದ ಹಿಂದೆ ಕರ್ನಾಟಕದಿಂದ ಕನಿಷ್ಠ 5 ಆಟಗಾರರು ಭಾರತ ತಂಡದಲ್ಲಿ ಇರುತ್ತಿದ್ದರು. ಈಗ ರಾಷ್ಟ್ರೀಯ ಶಿಬಿರದಲ್ಲಿಯೂ ರಾಜ್ಯ ಆಟಗಾರರು ಅಪರೂಪ ಆಗಿದ್ದಾರೆ.
ತಳಮಟ್ಟದಿಂದ ಅಂದರೆ ಯಾವ ರೀತಿಯ ಯೋಜನೆಗಳು ಬರಬೇಕು?
ನಮ್ಮ ರಾಜ್ಯದಲ್ಲಿ ವರ್ಷಕ್ಕೆ ಹೆಚ್ಚೆಂದರೆ ಎರಡು ಟೂರ್ನಿಗಳು ನಡೆಯುತ್ತವೆ. ಇದು ಸಾಲದು. ಶಾಲೆ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಟೂರ್ನಿಗಳು ಹೆಚ್ಚಬೇಕು. ಡಿವೈಎಸ್‌ಎಸ್. ಸಾಯ್ ಹಾಸ್ಟೆಲ್‌ಗಳು ಉನ್ನತ ದರ್ಜೆಗೇರಬೇಕು. ಹಾಕಿ ಕರ್ನಾಟಕವು ಅದಕ್ಕಾಗಿ ಸಮಗ್ರ ಯೋಜನೆಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಮನವರಿಕೆ ಮಾಡಬೇಕು. ಇತ್ತೀಚೆಗೆ ರಾಜ್ಯ ಸರ್ಕಾರವು ಕ್ರೀಡಾಪಟುಗಳಿಗೆ ಉದ್ಯೋಗ ನೀಡಲು ಮೀಸಲಾತಿ ಆರಂಭಿಸಿರುವುದು ಸ್ವಾಗತಾರ್ಹ. ಇಂತಹ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವುದು ರಾಜ್ಯ ಸಂಸ್ಥೆಯ ಹೊಣೆ. ತನ್ನ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ತರಬೇಕು. ನಿಯಮಾವಳಿಯ ಪ್ರಕಾರ ಪದಾಧಿಕಾರಿಗಳ ನೇಮಕವಾಗಬೇಕು. ಸತತ ನಾಲ್ಕು ಬಾರಿ ಒಬ್ಬರೇ ಅಧ್ಯಕ್ಷರಾಗಿರುವುದು ನಿಯಮದ ಉಲ್ಲಂಘನೆಯಲ್ಲವೇ? ಹಾಕಿ ಅಭಿವೃದ್ಧಿಯ ಏಕೈಕ ಗುರಿಯೊಂದಿಗೆ ಕಾರ್ಯನಿರ್ವಹಿಸಿದರೆ ಸಾವಿರ ಸಂಖ್ಯೆಯಲ್ಲಿ ಆಟಗಾರರು ಬೆಳೆಯುತ್ತಾರೆ. ಆಗ ಪೈಪೋಟಿ ಹೆಚ್ಚಿ, ಗುಣಮಟ್ಟ ವರ್ಧಿಸುತ್ತದೆಯಲ್ಲವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.