ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ ಶೂಟಿಂಗ್‌: ಎರಡು ವೈಯಕ್ತಿಕ ಸ್ಪರ್ಧೆಗಳಿಗೆ ಮನು ಭಾಕರ್

ರೈಫಲ್, ಪಿಸ್ತೂಲ್ ತಂಡಗಳ ಪ್ರಕಟ
Published 11 ಜೂನ್ 2024, 13:47 IST
Last Updated 11 ಜೂನ್ 2024, 13:47 IST
ಅಕ್ಷರ ಗಾತ್ರ

ನವದೆಹಲಿ: ಮಹಿಳಾ ಪಿಸ್ತೂಲ್ ಶೂಟರ್‌ ಮನು ಭಾಕರ್ ಅವರು ಆಯ್ಕೆ ಟ್ರಯಲ್ಸ್‌ನಲ್ಲಿ ಅಮೋಘ ಪ್ರದರ್ಶನ ತೋರಿದ ಕಾರಣ ಅವರನ್ನು ಒಲಿಂಪಿಕ್ಸ್‌ ಶೂಟಿಂಗ್‌ನ ಎರಡು ಸ್ಪರ್ಧೆಗಳಿಗೆ ಆಯ್ಕೆ ಮಾಡಲಾಗಿದೆ. ಪಿಸ್ತೂಲ್ ಮತ್ತು ರೈಫಲ್ ವಿಭಾಗದ ತಂಡಗಳನ್ನು ರಾಷ್ಟ್ರೀಯ ಶೂಟಿಂಗ್ ಫೆಡರೇಷನ್ ಮಂಗಳವಾರ ಪ್ರಕಟಿಸಿದೆ.

ವರ್ಚುವಲ್ ಆಗಿ ನಡೆದ ಆಯ್ಕೆಸಮಿತಿ ಸಭೆಯ ನಂತರ ತಂಡಗಳನ್ನು ಅಂತಿಮಗೊಳಿಸಲಾಯಿತು. ತಂಡದಲ್ಲಿ ಎಂಟು ಮಂದಿ ರೈಫಲ್ ಶೂಟರ್‌ಗಳು ಮತ್ತು ಏಳು ಮಂದಿ ಪಿಸ್ತೂಲ್ ಶೂಟರ್‌ಗಳು ಸ್ಥಾನ ಪಡೆದಿದ್ದಾರೆ.

ಟ್ರಯಲ್ಸ್‌ ಫಲಿತಾಂಶಗಳಿಗೆ ಆಯ್ಕೆಗಾರರು ಆದ್ಯತೆ ನೀಡಿದ್ದು, ವಿಶ್ವ ಚಾಂಪಿಯನ್‌ ರುದ್ರಾಂಕ್ಷ್‌ ಪಾಟೀಲ್ ಅಂಥ ಸ್ಪರ್ಧಿಗಳಿಗೆ ಬಾಗಿಲು ಮುಚ್ಚಿದ್ದಾರೆ. ತಮಗೆ ಅವಕಾಶ ನೀಡುವಂತೆ ಪಾಟೀಲ್ ಮನವಿ ಮಾಡಿದ್ದರು. ಮೆಚ್ಚಿನ 10 ಮೀ. ಏರ್‌ ರೈಫಲ್‌ನಲ್ಲಿ ಅವರು ಕೋಟಾ ಗಿಟ್ಟಿಸಿದ್ದರು. ಆದರೆ ಶೂಟಿಂಗ್‌ನಲ್ಲಿ ದೊರೆಯುವ ಕೋಟಾ, ವೈಯಕ್ತಿಕವಾಗಿ ಶೂಟರ್‌ಗಳಿಗೆ ಹೋಗುವುದಿಲ್ಲ ಅದು ಆ ದೇಶಕ್ಕೆ ಲಭಿಸುತ್ತದೆ.

ತಂಡದ ಎಲ್ಲ ಸದಸ್ಯರು, ಕೋಚ್ ಮತ್ತು ನೆರವು ಸಿಬ್ಬಂದಿಗಳ ಜೊತೆ ಈಗ ಫ್ರಾನ್ಸ್‌ನಲ್ಲಿ ಶಿಬಿರದಲ್ಲಿದ್ದಾರೆ. ಅಲ್ಲಿನ ಹವೆಗೆ ಒಗ್ಗಿಕೊಳ್ಳಲು ಮತ್ತು ಕಠಿಣ ತರಬೇತಿ ದೃಷ್ಟಿಯಿಂದ ಅಲ್ಲಿ ಶಿಬಿರ ನಡೆಯುತ್ತಿದೆ. ಶಿಬಿರದ ನಂತರ ತವರಿಗೆ ಬಂದು ಒಲಿಂಪಿಕ್ಸ್‌ಗೆ ಮೊದಲು ಎರಡು ವಾರಗಳ ವಿರಾಮ ಪಡೆಯಲಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ ಜುಲೈ 26 ರಿಂದ ಆಗಸ್ಟ್‌ 11ರವರೆಗೆ ನಿಗದಿಯಾಗಿದೆ.

24 ಗರಿಷ್ಠ ಕೋಟಾಗಳಲ್ಲಿ ಭಾರತ ದಾಖಲೆಯ 21 ಕೋಟಾಗಳನ್ನು ಪಡೆದಿದೆ. ಇದು ಭಾರತ ಪಡೆದ ಅತ್ಯಧಿಕ ಕೋಟಾ. ಟೋಕಿಯೊ ಕ್ರೀಡೆಗಳಲ್ಲಿ 15 ಕೋಟಾಗಳು ದೊರಕಿದ್ದವು.

ಟೋಕಿಯೊ ಮತ್ತು ರಿಯೊ ಕ್ರೀಡೆಗಳಲ್ಲಿ ಭಾರತ ಕ್ರಮವಾಗಿ 12 ಮತ್ತು 15 ಸದಸ್ಯರ ತಂಡಗಳನ್ನು ಕಳುಹಿಸಿತ್ತು. ಆದರೆ ಎರಡೂ ಸಂದರ್ಭಗಳಲ್ಲಿ ತಂಡ ಪದಕವಿಲ್ಲದೇ ಬರಿಗೈಲಿ ಮರಳಿತ್ತು.

ಪ್ಯಾರಿಸ್ ಒಲಿಂಪಿಕ್ಸ್‌ಗೆ ತಂಡಗಳು ಇಂತಿವೆ:

ರೈಫಲ್‌: ಸಂದೀಪ್ ಸಿಂಗ್, ಅರ್ಜುನ್ ಬಬುಟಾ (10 ಮೀ. ಏರ್‌ ರೈಫಲ್‌, ಪುರುಷರು), ಇಳವೆನಿಲ್ ವಳರಿವನ್, ರಮಿತಾ (10 ಮೀ. ಏರ್‌ ರೈಫಲ್, ವನಿತೆಯರು), ಸಿಫ್ತ್ ಕೌರ್ ಸಮ್ರಾ, ಅಂಜುಂ ಮೌದ್ಗಿಲ್ (50 ಮೀ. ರೈಫಲ್ 3 ಪೊಸಿಷನ್ಸ್, ವನಿತೆಯರು), ಐಶ್ವರಿ ತೊಮಾರ್, ಸ್ವಪ್ನಿಲ್ ಕುಸಲೆ (50 ಮೀ. ರೈಫಲ್ 3 ಪೊ. ಪುರುಷರು).

ಪಿಸ್ತೂಲ್‌: ಸರಬ್ಜೋತ್ ಸಿಂಗ್, ಅರ್ಜುನ್ ಚೀಮಾ (10 ಮೀ. ಏರ್‌ ಪಿಸ್ತೂಲ್, ಪುರುಷರು), ಮನು ಭಾಕರ್, ರಿದಂ ಸಂಗ್ವಾನ್ (10 ಮೀ. ಏರ್‌ ಪಿಸ್ತೂಲ್, ವನಿತೆಯರು), ಅನಿಶ್ ಭಾನವಾಲ್, ವಿಜಯವೀರ್ ಸಿಧು (25 ಮೀ. ರ‍್ಯಾಪಿಡ್‌ ಫೈರ್ ಪಿಸ್ತೂಲ್, ಪುರುಷರು), ಮನು ಭಾಕರ್, ಇಶಾ ಸಿಂಗ್ (25 ಮೀ. ರ‍್ಯಾ.ಫೈ. ಪಿಸ್ತೂಲ್, ಮಹಿಳೆಯರು).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT