ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಪ್ರವಾಸ: ಭಾರತ ಮಹಿಳಾ ಹಾಕಿ ತಂಡ ಪ್ರಕಟ

Published 8 ಮೇ 2023, 20:01 IST
Last Updated 8 ಮೇ 2023, 20:01 IST
ಅಕ್ಷರ ಗಾತ್ರ

ನವದೆಹಲಿ: ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ 20 ಮಂದಿ ಆಟಗಾರ್ತಿಯರ ಭಾರತ  ತಂಡವನ್ನು ಹಾಕಿ ಇಂಡಿಯಾ ಸೋಮವಾರ ಪ್ರಕಟಿಸಿದೆ. ಆಡಿಲೇಡ್‌ನಲ್ಲಿ ಮೇ 18ರಂದು ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು ಭಾರತ ಆಡಲಿದೆ.

ಆಸ್ಟ್ರೇಲಿಯಾ ವಿರುದ್ಧ ಸರಣಿಯ ನಂತರ ಭಾರತವು, ಆಸ್ಟ್ರೇಲಿಯಾ ‘ಎ’ ತಂಡದ ವಿರುದ್ಧ ಎರಡು ಪಂದ್ಯಗಳನ್ನು ಆಡಲಿದೆ. ಚೀನಾದ ಹಾಂಗ್‌ಝೌನಲ್ಲಿ ನಡೆಯಲಿರುವ ಏಷ್ಯನ್‌ ಕ್ರೀಡಾಕೂಟಕ್ಕೆ ಸಿದ್ಧತೆಯ ಭಾಗವಾಗಿ ಈ ಪ್ರವಾಸ ಹಮ್ಮಿಕೊಳ್ಳಲಾಗಿದೆ.

ಇತ್ತೀಚೆಗಷ್ಟೇ ಬಲಬೀರ್‌ ಸಿಂಗ್‌ ಸೀನಿಯರ್‌ ಹಾಕಿ ಇಂಡಿಯಾ ವರ್ಷದ ಆಟಗಾರ್ತಿ ಗೌರವಕ್ಕೆ ಪಾತ್ರರಾಗಿರುವ ಅನುಭವಿ ಗೋಲ್‌ಕೀಪರ್‌ ಸವಿತಾ ಅವರು ತಂಡದ ನೇತೃತ್ವ ವಹಿಸುವರು. ರಕ್ಷಣಾ ಆಟಗಾರ್ತಿ ದೀಪ್‌ ಗ್ರೇಸ್‌ ಎಕ್ಕಾ ಅವರು ಉಪನಾಯಕಿ ಆಗಿದ್ದಾರೆ.

ಬಿಚುದೇವಿ ಕರಿಬಮ್ ತಂಡದ ಎರಡನೇ ಗೋಲ್‌ಕೀಪರ್ ಆಗಿದ್ದಾರೆ. ದೀಪ್‌ ಗ್ರೇಸ್‌ ಜೊತೆ ನಿಕ್ಕಿ ಪ್ರಧಾನ್, ಇಶಿಕಾ ಚೌಧರಿ, ಉದಿತಾ ಮತ್ತು ಗುರ್ಜಿತ್ ಕೌರ್ ರಕ್ಷಣಾ ವಿಭಾಗದಲ್ಲಿ ಆಡಲಿದ್ದಾರೆ. ನಿಶಾ, ನವಜ್ಯೋತ್‌ ಕೌರ್‌, ಮೋನಿಕಾ, ಸಲಿಮಾ ಟೆಟೆ, ನೇಹಾ, ನವನೀತ್‌ ಕೌರ್‌, ಸೋನಿಕಾ, ಜ್ಯೋತಿ ಮತ್ತು ಬಲಜೀತ್ ಕೌರ್ ಅವರು ಮಿಡ್‌ಫೀಲ್ಡರ್‌ಗಳಾಗಿ ತಂಡದಲ್ಲಿದ್ದಾರೆ.

ಅನುಭವಿ ಆಟಗಾರ್ತಿ ವಂದನಾ ಕಟಾರಿಯಾ ಜೊತೆಗೆ ಲಾಲ್‌ರೆಮ್‌ಸಿಯಾಮಿ, ಸಂಗೀತಾ ಕುಮಾರಿ ಮತ್ತು ಶರ್ಮಿಳಾ ದೇವಿ ಫಾರ್ವರ್ಡ್‌ಗಳಾಗಿದ್ದಾರೆ.

‘ಎರಡು ಹಂತಗಳ ತರಬೇತಿ ನಂತರ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಲು ಕಾತರದಿಂದ ಇದ್ದೇವೆ. ಆಸ್ಟ್ರೇಲಿಯಾ ಪ್ರಬಲ ತಂಡವಾಗಿದ್ದು, ಆಕ್ರಮಣಕಾರಿ ಮತ್ತು ವೇಗದ ಆಟಕ್ಕೆ ಒತ್ತು ನೀಡುತ್ತದೆ’ ಎಂದು ಮುಖ್ಯ ಕೋಚ್‌ ಆಗಿರುವ ಜೇನೆಕ್‌ ಷಾಪ್‌ಮನ್ ಅವರು ತಂಡದ ಆಯ್ಕೆ ಬಗ್ಗೆ ವಿವರ ನೀಡಿದರು.

‘ಈ ಪ್ರವಾಸ ನಮಗೆ ಸತ್ವ ಪರೀಕ್ಷೆ. ನಮ್ಮ ರಕ್ಷಣಾತ್ಮಕ ಆಟದ ಜೊತೆಗೆ ಅವರ ದಾಳಿ ಮತ್ತು ವೇಗಕ್ಕೆ ಸಾಟಿಯಾಗಲು ಶ್ರಮ ಹಾಕುತ್ತೇವೆ’ ಎಂದರು.

ಭಾರತ ಮೇ 18, 20 ಮತ್ತು 21ರಂದು ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಮೇ 25 ಮತ್ತು 27ರಂದು ಆಸ್ಟ್ರೇಲಿಯಾ ‘ಎ’ ತಂಡದ ವಿರುದ್ಧ ಆಡಲಿದೆ. ಈ ಐದೂ ಪಂದ್ಯಗಳು ಅಡಿಲೇಡ್‌ನ ಮೇಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.

undefined undefined

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT