ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನೈನ ಬೈಕ್‌ ರೇಸ್‌ ದುರ್ಘಟನೆಯಲ್ಲಿ ಬೆಂಗಳೂರಿನ 13 ವರ್ಷದ ಶ್ರೇಯಸ್ ದುರ್ಮರಣ

ಅರಳುವ ಹಾದಿಯಲ್ಲಿ ದುರಂತ ಅಂತ್ಯವಾದ ಪುಟ್ಟ ಪ್ರತಿಭೆ ಕೊಪ್ಪರಂ ಶ್ರೇಯಸ್ ಹರೀಶ್
Published 6 ಆಗಸ್ಟ್ 2023, 0:27 IST
Last Updated 6 ಆಗಸ್ಟ್ 2023, 0:27 IST
ಅಕ್ಷರ ಗಾತ್ರ

ಬೆಂಗಳೂರು: ಕೊಪ್ಪರಂ ಶ್ರೇಯಸ್ ಹರೀಶ್ ತನ್ನ ವಯಸ್ಸಿನ ಮಕ್ಕಳಿಗಿಂತ ಭಿನ್ನ ವ್ಯಕ್ತಿತ್ವದ ಹುಡುಗ. ಆತನ ಓರಗೆಯ ಹುಡುಗರೆಲ್ಲರೂ ಆಟಿಕೆಯ ವಾಹನಗಳಲ್ಲಿ  ಆಡಿ ಸಂತಸಪಡುತ್ತಿದ್ದ ಹೊತ್ತಿನಲ್ಲಿಯೇ ರೇಸ್ ಟ್ರ್ಯಾಕ್‌ನಲ್ಲಿ ಬೈಕ್ ಓಡಿಸಿದ್ದ ಸಾಹಸಿ. ಆದರೆ ಶ್ರೇಯಸ್ ಸಾಹಸಯಾತ್ರೆಗೆ ಈಗ ತೆರೆಬಿದ್ದಿದೆ. 13 ವರ್ಷದ ಹುಡುಗ ಮರಳಿ ಬಾರದ ಲೋಕಕ್ಕೆ ತೆರಳಿದ್ದಾನೆ.

ಬೆಂಗಳೂರಿನ ಶ್ರೇಯಸ್ ಚೆನ್ನೈನ ಮದ್ರಾಸ್  ಅಂತರರಾಷ್ಟ್ರೀಯ ಸರ್ಕಿಟ್‌ (ಎಂಐಸಿ) ನಲ್ಲಿ  ಆಯೋಜಿಸಲಾಗಿದ್ದ ಎಂಆರ್‌ಎಫ್‌ ಇಂಡಿಯನ್ ನ್ಯಾಷನಲ್ ಮೋಟರ್‌ಸೈಕಲ್ ರೇಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ  ಸ್ಪರ್ಧಿಸಿದ್ದ ಶ್ರೇಯಸ್ ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾನೆ. ಶನಿವಾರ ನಡೆದ ಸ್ಪರ್ಧೆಯಲ್ಲಿ ಹರೀಶ್ ಮುಂಚೂಣಿಯಲ್ಲಿ ಸಾಗುತ್ತಿದ್ದರು. ಬೆಂಗಳೂರಿನ ಕೆನ್ಸರಿ ಶಾಲೆಯ ವಿದ್ಯಾರ್ಥಿ ಶ್ರೇಯಸ್, ಉದಯೋನ್ಮುಖ ಸ್ಪರ್ಧಿಗಳ ವಿಭಾಗದಲ್ಲಿ ಟಿವಿಎಸ್‌ ಒನ್‌ ಮೇಕ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದ. 

ಇದನ್ನೂ ಓದಿ: ರೇಸ್ ಟ್ರ್ಯಾಕ್‌ನಲ್ಲಿ ಪುಟ್ಟ ಪೋರ ಶ್ರೇಯಸ್ ಹರೀಶ್ ಸಾಹಸ ಯಾತ್ರೆ

‘ತಿರುವಿನಲ್ಲಿ ಆಯ ತಪ್ಪಿದ ಬೈಕ್ ಉರುಳಿತು. ಅದೇ ಹೊತ್ತಿನಲ್ಲಿ ಶ್ರೇಯಸ್ ಧರಿಸಿದ್ದ ಹೆಲ್ಮೆಟ್ ಲಾಕ್ ಕಳಚಿತು. ಹಿಂದಿನಿಂದ ಬರುತ್ತಿದ್ದ ಇನ್ನೊಬ್ಬ ಸ್ಪರ್ಧಿಯ ಬೈಕ್ ಶ್ರೇಯಸ್ ಮೇಲೆ ಹರಿದು ಮುಂದೆ ಸಾಗಿತು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ರೇಸ್ ಸ್ಥಗಿತಗೊಳಿಸಿದ ಆಯೋಜಕರು ಕೂಡಲೇ ಶ್ರೇಯಸ್‌ನಲ್ಲಿ ಅಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದರು. ಶ್ರೇಯಸ್ ತಂದೆ ಹರೀಶ್ ಪರಂಧಾಮನ್ ಕೂಡ ಈ ಸಂದರ್ಭದಲ್ಲಿದ್ದರು. ಆದರೆ, ಆಸ್ಪತ್ರೆ ತಲುಪುವಷ್ಟರಲ್ಲಿಯೇ ಶ್ರೇಯಸ್ ಕೊನೆಯುಸಿರೆಳೆದಿದ್ದ. 

ಐದು ವರ್ಷದ ಬಾಲಕನಾಗಿದ್ದಾಗಿನಿಂದಲೇ ಶ್ರೇಯಸ್‌ಗೆ ಬೈಕ್ ಸವಾರಿಯ ಪ್ರೀತಿ ಶುರುವಾಗಿತ್ತು. ತಂದೆ ಹರೀಶ್ ಪರಂಧಾಮನ್ ಅವರ ಯಮಹಾ ಬೈಕ್‌ನಲ್ಲಿ ಓಡಾಡುವಾಗಲೇ ರೇಸ್ ಪಟುವಾಗುವ ಕನಸು ಗರಿಗೆದರಿತ್ತು.

ಮಗನಿಗಾಗಿ ನೌಕರಿ ಬಿಟ್ಟಿದ್ದ ಅಪ್ಪ

ಮಗನ ಆಸೆಯನ್ನು ಆತಂಕದಿಂದಲೇ ಸ್ವೀಕರಿಸಿದ್ದ ಹರೀಶ್, ನಂತರ ತಾವೇ ಗುರುವಾಗಿದ್ದರು. ಮಗನಿಗೆ ಪ್ರತಿವಾರ ಕಬ್ಬನ್‌ ಪಾರ್ಕ್‌ಗೆ ಕರೆದುಕೊಂಡು ಹೋಗಿ ಬೈಕ್ ರೈಡಿಂಗ್‌ ಹೇಳಿಕೊಟ್ಟರು. ಹರೀಶ್  ತಮ್ಮ ಮಗನ ಕ್ರೀಡಾಭವಿಷ್ಯವನ್ನು ರೂಪಿಸುವ ಸಲುವಾಗಿ ಫಾರ್ಮಾಸ್ಯುಟಿಕಲ್ ಕಂಪೆನಿಯ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದರು.

11ನೇ ವಯಸ್ಸಿನಲ್ಲಿಯೇ ಭಾರತ ಮೋಟರ್‌ಸ್ಪೋರ್ಟ್ಸ್‌ ಕ್ಲಬ್‌ಗಳ ಫೆಡರೇಷನ್ (ಎಫ್‌ಎಂಎಸ್‌ಸಿಐ) ಮಾನ್ಯತೆ ಪಡೆದ ರೇಸ್‌ಗಳಲ್ಲಿ ಭಾಗವಹಿಸಲು ಶ್ರೇಯಸ್‌ ಲೈಸೆನ್ಸ್‌ ಪಡೆದಿದ್ದ. ಅದರಲ್ಲಿ ಕೆಲವು ನಿಯಮಗಳಿದ್ದವು. ರೇಸಿಂಗ್ ಟ್ರ್ಯಾಕ್‌ನಲ್ಲಿ ತಮಗಾಗಿ ಮರುವಿನ್ಯಾಸಗೊಳಿಸಿದ್ದ ಬೈಕ್‌ ಚಾಲನೆಗೆ ಮಾತ್ರ ಶ್ರೇಯಸ್‌ಗೆ ಅವಕಾಶ ಇತ್ತು. ಸಾರ್ವಜನಿಕ ಸ್ಥಳಗಳಲ್ಲಿ ಓಡಿಸುವಂತಿರಲಿಲ್ಲ. ಅಲ್ಲದೇ ಅಭ್ಯಾಸದ ಸಂದರ್ಭದಲ್ಲಿ ಜೊತೆಗೆ ಒಬ್ಬರು ಹಿರಿಯರು ಇರುವುದು ಕಡ್ಡಾಯವಾಗಿತ್ತು. ಆದ್ದರಿಂದಲೇ ತಂದೆ ಹರೀಶ್ ತಮ್ಮ ನೌಕರಿ ಬಿಟ್ಟಿದ್ದರು.

ಕೊಯಿಮತ್ತೂರಿನಲ್ಲಿ ನಡೆದ ಎಂಆರ್‌ಎಫ್‌ ಎಂಎಂಎಸ್‌ಸಿ ಎಫ್‌ಎಸ್‌ಸಿಐ ರಾಷ್ಟ್ರೀಯ ಮೋಟರ್‌ ಸೈಕಲ್ ರೇಸಿಂಗ್ ಚಾಂಪಿಯನ್‌ಷಿಪ್‌ನಲ್ಲಿಯೂ ಶ್ರೇಯಸ್ ಸ್ಪರ್ಧಿಸಿದ್ದ. ಭಾರತದಲ್ಲಿ ನಡೆದಿದ್ದ ಮಿನಿ ಜಿಪಿ ಟೈಟಲ್‌ ಕೂಡ ಜಯಿಸಿದ್ದ. ಇದೇ ತಿಂಗಳು ಮಲೇಷ್ಯಾದಲ್ಲಿ ನಡೆಯಲಿರುವ ಎಂಬಿಸಿಕೆ ಚಾಂಪಿಯನ್‌ಷಿಪ್‌ನ ಮೊಟೊಸ್ಪೋರ್ಟ್ ರೇಸ್‌ನ 250 ಸಿಸಿಯ ಬಿ ಗುಂಪಿನಲ್ಲಿ ಸ್ಪರ್ಧಿಸಬೇಕಿತ್ತು.

‘ಸ್ಪೇನ್‌ನ ಮಾರ್ಕ್‌ ಮಾರ್ಕೆಜ್ ನನಗೆ ಬಹಳ ಇಷ್ಟ. ಅವರ ರೇಸ್‌ಗಳನ್ನು ತುಂಬಾ ನೋಡುತ್ತೇನೆ. ಅವರೂ 15ನೇ ವಯಸ್ಸಿನಲ್ಲಿಯೇ ಟ್ರ್ಯಾಕ್‌ಗೆ ಇಳಿದವರು. ನಾನು ಅವರಂತೆಯೇ ಬೆಳೆಯಬೇಕು. ಅಂತರರಾಷ್ಟ್ರೀಯ ಮೋಟೊ ಜಿಪಿ ರೇಸ್‌ನಲ್ಲಿ ಭಾರತದ ರಾಷ್ಟ್ರಧ್ವಜ ಹಾರಿಸಬೇಕು ಮತ್ತು ರಾಷ್ಟ್ರಗೀತೆ ಮೊಳಗಿಸಬೇಕೆಂಬುದೇ ನನ್ನ ಗುರಿ’ ಎನ್ನುತ್ತಿದ್ದ ಈ ಪೋರ ಈಗ ನೆನಪು ಮಾತ್ರ.

ವರ್ಷದಲ್ಲಿ ಎರಡನೇ ದುರಂತ

ಮದ್ರಾಸ್ ಇಂಟರ್‌ನ್ಯಾಷನಲ್ ಸರ್ಕಿಟ್‌  (ಎಂಐಸಿ)ನಲ್ಲಿ  ಕಳೆದ ಒಂದು ವರ್ಷದಲ್ಲಿ ನಡೆದ ಎರಡನೇ ದುರಂತ ಇದಾಗಿದೆ.  ಹೋದ ಜನವರಿಯಲ್ಲಿ ಇಲ್ಲಿ ನಡೆದಿದ್ದ ಇಂಡಿಯನ್ ನ್ಯಾಷನಲ್ ಕಾರ್ ರೇಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಅನುಭವಿ ರೇಸರ್ ಕೆ.ಇ. ಕುಮಾರ್ (59) ಸಾವನ್ನಪ್ಪಿದ್ದರು. ಇದೀಗ ಶ್ರೇಯಸ್ ಪ್ರಕರಣ ನಡೆದಿದೆ. ‘ಶ್ರೇಯಸ್ ಪ್ರತಿಭಾವನ್ವಿತ ರೇಸ್‌ ಪಟುವಾಗಿದ್ದ. ಆತನ ಸಾವು ಆಘಾತ ತಂದಿದೆ. ದುರ್ಘಟನೆ ನಡೆದ ಸ್ಥಳದಲ್ಲಿಯೇ ತುರ್ತು ಚಿಕಿತ್ಸೆ ನೀಡಲಾಗಿತ್ತು. ಆಸ್ಪತ್ರೆಗೂ ತುರ್ತಾಗಿ ರವಾನಿಸಲಾಯಿತು’ ಎಂದು ಎಂಎಂಎಸ್‌ಸಿ ಅಧ್ಯಕ್ಷ ಅಜಿತ್ ಥಾಮಸ್ ಹೇಳಿದ್ದಾರೆ. ‘ಈ ಪರಿಸ್ಥಿತಿಯಲ್ಲಿ ವಾರಾಂತ್ಯದ ಎಲ್ಲ ರೇಸ್‌ಗಳನ್ನೂ ರದ್ದುಪಡಿಸಲು ನಿರ್ಧರಿಸಲಾಗಿದೆ. ಶ್ರೇಯಸ್ ಕುಟುಂಬದೊಂದಿಗೆ ನಾವಿದ್ದೇವೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT