ಶನಿವಾರ, ಜುಲೈ 31, 2021
28 °C

ಖೇಲ್‌ರತ್ನಗೆ ನೀರಜ್‌ ಹೆಸರು ಶಿಫಾರಸು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ ಅಥ್ಲೆಟಿಕ್ಸ್‌ ಫೆಡರೇಷನ್‌ (ಎಎಫ್‌ಐ), ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಹೆಸರನ್ನು ರಾಜೀವ್‌ ಗಾಂಧಿ ಖೇಲ್‌ರತ್ನ ಪ್ರಶಸ್ತಿಗೆ ಬುಧವಾರ ಶಿಫಾರಸು ಮಾಡಿದೆ.

ಸತತ ಮೂರನೇ ವರ್ಷ ನೀರಜ್‌ ಅವರನ್ನು ಎಎಫ್‌ಐ ಈ ಗೌರವಕ್ಕೆ ಹೆಸರಿಸಿದ್ದು, ವೇಗದ ಓಟಗಾರ್ತಿ ದ್ಯುತಿ ಚಾಂದ್‌ ಅವರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನ ವಿಜೇತ ಅರ್ಪಿಂದರ್‌ ಸಿಂಗ್‌ (ಟ್ರಿಪಲ್‌ ಜಂಪ್‌), ಮಂಜೀತ್‌ ಸಿಂಗ್‌ (800 ಮೀ. ಓಟ) ಹಾಗೂ ಮಧ್ಯಮ ದೂರದ ಓಟಗಾರ್ತಿ, ಏಷ್ಯನ್‌ ಚಾಂಪಿಯನ್‌ ಪಿ.ಯು. ಚಿತ್ರಾ ಅವರೂ ಅರ್ಜುನ ಪುರಸ್ಕಾರಕ್ಕೆ ನಾಮಕರಣಗೊಂಡಿದ್ದಾರೆ.

‘2018 ಹಾಗೂ ಹಿಂದಿನ ವರ್ಷವೂ ನೀರಜ್‌ ಅವರನ್ನು ಖೇಲ್‌ರತ್ನಗೆ ಶಿಫಾರಸು ಮಾಡಿದ್ದೆವು. ಆ ವರ್ಷಗಳಲ್ಲಿ ಪ್ರಶಸ್ತಿಯು ಕ್ರಮವಾಗಿ ಮೀರಾಬಾಯಿ ಚಾನು ಹಾಗೂ ಬಜರಂಗ್‌ ಪೂನಿಯಾ ಅವರಿಗೆ ಒಲಿದಿತ್ತು. ಈ ಬಾರಿ ನೀರಜ್‌ ಅವರಿಗೆ ಅವಕಾಶ ಸಿಗುವ ವಿಶ್ವಾಸವಿದೆ’ ಎಂದು ಎಎಫ್‌ಐ ಅಧ್ಯಕ್ಷ ಆದಿಲ್‌ ಸುಮರಿವಾಲಾ ಹೇಳಿದ್ದಾರೆ.

22 ವರ್ಷದ ನೀರಜ್‌, 2018ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆ ವರ್ಷ ಅವರು ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅದೇ ವರ್ಷದ ಏಷ್ಯನ್‌ ಕೂಟದಲ್ಲೂ ಅವರಿಗೆ ಚಿನ್ನ ಒಲಿದಿತ್ತು. ಟೋಕಿಯೊ ಒಲಿಂಪಿಕ್ಸ್‌ಗೆ ಅವರು ಈಗಾಗಲೇ ಅರ್ಹತೆ ಗಿಟ್ಟಿಸಿದ್ದಾರೆ.

ಉಪ ಮುಖ್ಯ ಕೋಚ್‌ ರಾಧಾಕೃಷ್ಣನ್‌ ನಾಯರ್‌ ಅವರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಅವರು ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ, ಅಂತರರಾಷ್ಟ್ರೀಯ ತರಬೇತಿ ಉತ್ಕೃಷ್ಟತೆ ಪ್ರಮಾಣ ಪತ್ರ ಪಡೆದ ಏಕೈಕ ಭಾರತೀಯ ಎನಿಸಿದ್ದಾರೆ.

ಹಿರಿಯ ಅಥ್ಲೀಟ್‌ಗಳಾದ ಡಿಸ್ಕಸ್‌ ಥ್ರೊ ಪಟು ಕುಲ್‌ದೀಪ್‌ ಸಿಂಗ್‌ ಭುಲ್ಲರ್‌ ಹಾಗೂ ವೇಗದ ಓಟಗಾರ ಜಿನ್ಸಿ ಫಿಲಿಪ್‌ ಅವರು ಧ್ಯಾನ್‌ ಚಂದ್‌ ಪ್ರಶಸ್ತಿಗೆ ನಾಮಕರಣಗೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು