ಶನಿವಾರ, ಜನವರಿ 25, 2020
15 °C

ಚೆಸ್‌ಗೆ ಒಬ್ಬರೇ ವಿಶಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಕೆಟ್‌ನಲ್ಲಿ ಸುನಿಲ್‌ ಗಾವಸ್ಕರ್‌, ಸಚಿನ್‌ ತೆಂಡೂಲ್ಕರ್‌ ತಮ್ಮ ಪೀಳಿಗೆಯ ಆಟಗಾರರಿಗೆ ಆದರ್ಶಪ್ರಾಯರಾಗಿದ್ದವರು. ಈಗಿನ ಯುವಪೀಳಿಗೆಗೆ ವಿರಾಟ್‌ ಕೊಹ್ಲಿ ಅವರೇ ಮೆಚ್ಚಿನ ಆಟಗಾರ. ಆದರೆ ಚೆಸ್‌ ವಿಷಯ ಬಂದಾಗ ಭಾರತದಲ್ಲಿ ವಿಶ್ವನಾಥನ್‌ ಆನಂದ್‌ ಅವರೇ ದೀರ್ಘ ಸಮಯದಿಂದ ‘ರೋಲ್‌ ಮಾಡೆಲ್‌’ ಆದವರು. ಮೂರು ದಶಕಗಳಿಂದ ಅವರ ಸ್ಥಾನವನ್ನು ಆಕ್ರಮಿಸಲು ಯಾರಿಗೂ ಸಾಧ್ಯವಾಗಿಲ್ಲ!

ದೀರ್ಘ ಅವಧಿಗೆ, ಅದೂ ಬುದ್ಧಿಮತ್ತೆಯನ್ನು ಬೇಡುವ ಚೆಸ್‌ನಂಥ ಆಟದಲ್ಲಿ ಸಾಮರ್ಥ್ಯವನ್ನು ಉಳಿಸಿಕೊಳ್ಳುವುದು ಸವಾಲೇ ಸರಿ. 25 ವರ್ಷಗಳ ಕಾಲ ಅವರು ವಿಶ್ವದ ಟಾಪ್‌ 10 ಆಟಗಾರರಲ್ಲಿ ಒಬ್ಬರಾಗಿದ್ದು ವಿಸ್ಮಯದ ಸಾಧನೆ ಎನ್ನುವುದರಲ್ಲಿ ಎರಡು ಮಾತಿಲ್ಲ. 

ಇತ್ತೀಚೆಗಷ್ಟೇ (ಡಿಸೆಂಬರ್‌ 11) 50ನೇ ವಸಂತಕ್ಕೆ ಕಾಲಿಟ್ಟ ‘ವಿಶಿ’ ಆನಂದ್‌, ದೇಶದ ಮೊದಲ ಗ್ರ್ಯಾಂಡ್‌ಮಾಸ್ಟರ್‌ ಮಾತ್ರವಲ್ಲ, ಈಗಲೂ ದೇಶದ ಅಗ್ರಮಾನ್ಯ ಆಟಗಾರ. ಪ್ರಸ್ತುತ ವಿಶ್ವ ಕ್ರಮಾಂಕದಲ್ಲಿ 15ನೇ ಸ್ಥಾನದಲ್ಲಿರುವ ಆಟಗಾರ. ದೇಶದಲ್ಲಿ ಅವರ ನಂತರ 64 ಗ್ರ್ಯಾಂಡ್‌ಮಾಸ್ಟರ್‌ಗಳು ಮೂಡಿಬಂದಿದ್ದಾರೆ. ಹಲವಾರು ಮಂದಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ. ದೇಶದಲ್ಲಿ ಚೆಸ್‌ ಕ್ರಾಂತಿಗೆ ಕಾರಣರಾದವರು ಆನಂದ್‌ ಎನ್ನುವುದಕ್ಕೆ ಹಲವು ಕಾರಣಗಳಿವೆ.

ಆನಂದ್‌, 1980ರ ದಶಕದ ಮಧ್ಯದಲ್ಲಿ ಪ್ರವರ್ಧಮಾನಕ್ಕೆ ಬಂದಾಗ ಭಾರತದಲ್ಲಿ ಈ ಆಟ ಅಷ್ಟೇನೂ ಜನಪ್ರಿಯವಾಗಿರಲಿಲ್ಲ. ಹವ್ಯಾಸಕ್ಕಾಗಿ ಆಡುವವರೇ ಹೆಚ್ಚಿನ ಪ್ರಮಾಣದಲ್ಲಿದ್ದರು. ವಯೋವರ್ಗ ಟೂರ್ನಿಗಳೂ ಈಗಿನಂತೆ ನಡೆಯುತ್ತಿರಲಿಲ್ಲ. ಇಂಟರ್‌ನೆಟ್‌ ಇನ್ನೂ ಬಂದಿರಲಿಲ್ಲ. ಪಂದ್ಯಗಳನ್ನು ವಿಶ್ಲೇಷಿಸುವ ಚೆಸ್‌ ಪುಸ್ತಕಗಳು ವಿರಳವಾಗಿದ್ದವು. ತರಬೇತಿ ನೀಡುವ ವೃತ್ತಿಪರರ ಸಂಖ್ಯೆ ತೀರಾ ಕಡಿಮೆ. ಪತ್ರಿಕೆಗಳಲ್ಲೂ ಫಲಿತಾಂಶಗಳಷ್ಟೇ ಬರುತ್ತಿದ್ದವು, ಆಟ ಸುಧಾರಿಸಲು ನೆರವಾಗುವ ವಿಶ್ಲೇಷಣೆಗಳು ಅಪರೂಪಕ್ಕೆ ಕಾಣುತ್ತಿದ್ದವು.

ಆದರೆ ಆನಂದ್‌ ಚೆಸ್‌ನಲ್ಲಿ ಎತ್ತರೆತ್ತರಕ್ಕೆ ಏರುತ್ತಿದ್ದಂತೆ, ಚೆಸ್‌ ಬಗ್ಗೆ ದೇಶದ ಎಳೆಯರಲ್ಲಿ ಆಸಕ್ತಿ ಮೂಡತೊಡಗಿತು. ವಯೋವರ್ಗ ಚೆಸ್‌ ಟೂರ್ನಿಗಳು ಜನಪ್ರಿಯವಾಗತೊಡಗಿದವು. ಭಾರತದ ಎಳೆಯ ಆಟಗಾರರು ವಿದೇಶಗಳಲ್ಲಿ ನಡೆಯುತ್ತಿದ್ದ ವಿಶ್ವ ವಯೋವರ್ಗ ಚಾಂಪಿಯನ್‌ಷಿಪ್‌ಗಳಲ್ಲಿ ಪದಕ ಗೆಲ್ಲತೊಡಗಿದವರು. ಇತ್ತೀಚಿನ ವರ್ಷಗಳಲ್ಲಂತೂ ಹದಿಹರೆಯದ ಪ್ರತಿಭಾನ್ವಿತರು ಗ್ರ್ಯಾಂಡ್‌ಮಾಸ್ಟರ್‌ಗಳಾಗಿ ಸುದ್ದಿ ಮಾಡುತ್ತಿದ್ದಾರೆ. 

1995ರಲ್ಲಿ ಆನಂದ್‌ ವಿಶ್ವ ಚಾಂಪಿಯನ್‌ಷಿಪ್‌ ಪಟ್ಟಕ್ಕಾಗಿ ಗ್ಯಾರಿ ಕ್ಯಾಸ್ಪರೋವ್‌ಗೆ ಸವಾಲಿಗರಾಗಿದ್ದರು. ಆ ಸರಣಿ ನಡೆದಿದ್ದು ಅಮೆರಿಕದ ನ್ಯೂಯಾರ್ಕ್‌ನ ವಿಶ್ವ ವಾಣಿಜ್ಯ ಕೇಂದ್ರದ 107ನೇ ಮಹಡಿಯಲ್ಲಿ! ಚೆಸ್‌ ಬಗ್ಗೆ ಕ್ರೀಡಾಸಕ್ತರಿಗೆ ಹೆಚ್ಚಿನ ಕುತೂಹಲ ಮೂಡತೊಡಗಿದ್ದು ಆ ಸಂದರ್ಭದಲ್ಲಿ. ಆನಂದ್‌ ಆ ಬಾರಿ ಅನುಭವಿ ಗ್ಯಾರಿ ಕ್ಯಾಸ್ಪರೋವ್‌ ಅವರಿಗೆ ಮಣಿದರು. ಆದರೆ ಅವರು ಮುಂದಿನ ವರ್ಷಗಳಲ್ಲಿ ಐದು ಬಾರಿ ವಿಶ್ವ ಚಾಂಪಿಯನ್‌ ಆದರು. ಎರಡು ಬಾರಿ ವಿಶ್ವಕಪ್‌ನಲ್ಲಿ ಗೆದ್ದರು. ಮೂರೂ ಮಾದರಿಗಳಲ್ಲಿ (ಟೂರ್ನಿ, ನಾಕೌಟ್‌, ಪಂದ್ಯಗಳ ಸರಣಿ) ಚಾಂಪಿಯನ್‌ ಆದವರು ಅವರೊಬ್ಬರೇ. ಈಗ ಚೆಸ್‌ ಲೋಕವನ್ನು ಆಳುತ್ತಿರುವ ನಾರ್ವೆಯ ಕಾರ್ಲ್‌ಸನ್‌ ಅವರಿಗೂ 2014ರಲ್ಲಿ ಆನಂದ್‌ ಫೈನಲ್‌ನಲ್ಲಿ  ಸವಾಲಿಗರಾಗಿದ್ದರು! ನಾರ್ವೆ ಆಟಗಾರನಿಗೆ ದುಪ್ಪಟ್ಟು ವಯಸ್ಸಿನವರಾಗಿದ್ದರೂ, ಆನಂದ್‌ ಸುಲಭವಾಗಿ ಮಣಿಯಲಿಲ್ಲ.

ಮೆಚ್ಚಬೇಕಾಗಿರುವುದು ಆನಂದ್‌ ಅವರ ಸ್ಥಿರ ಉತ್ಸಾಹವನ್ನು. ‘ನನಗೆ ವಯಸ್ಸಾಗಿದೆಯೆಂದು ಮೊದಲ ಬಾರಿ ಮನಸ್ಸಿನಲ್ಲಿ ಮೂಡಿದ್ದು ಯಾವಾಗ ಎಂದು ನೆನಪಿಸಿಕೊಳ್ಳಲಿಕ್ಕೇ ಆಗುತ್ತಿಲ್ಲ’ ಎಂದು ಆನಂದ್‌ ಇತ್ತೀಚೆಗಷ್ಟೇ ಬಿಡುಗಡೆಯಾದ ‘ಮೈಂಡ್‌ ಮಾಸ್ಟರ್ಸ್‌’ ಕೃತಿಯಲ್ಲಿ ಹೇಳಿಕೊಂಡಿದ್ದಾರೆ. 

ಇತ್ತೀಚಿನ ವರ್ಷಗಳಲ್ಲಿ ತಮಗೆ ಮೊದಲಿನ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ ಎನ್ನುವುದನ್ನೂ ಅವರು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುತ್ತಾರೆ. 2019ರ ಟೂರ್ನಿಗಳಲ್ಲಿ ಅವರು ಯಶಸ್ಸು ಕಂಡಿಲ್ಲ. ಕೋಲ್ಕತ್ತದಲ್ಲಿ ಕಳೆದ ತಿಂಗಳು ಗ್ರ್ಯಾಂಡ್‌ ಚೆಸ್‌ ಟೂರ್‌ನ ಭಾಗವಾಗಿದ್ದ ಟಾಟಾ ಸ್ಟೀಲ್‌ ಚೆಸ್‌ ಟೂರ್ನಿಯಲ್ಲಿ ಅವರು ಏಳನೇ ಸ್ಥಾನಕ್ಕಿಳಿದರು. 1.5 ಪಾಯಿಂಟ್‌ ಕಡಿಮೆ ಬಿದ್ದು, ಲಂಡನ್‌ನಲ್ಲಿ ನಡೆದ ಅಂತಿಮ ಹಂತಕ್ಕೆ ಅರ್ಹತೆ ಪಡೆಯಲು ಆಗಲಿಲ್ಲ. ಅಲ್ಲಿ ಭಾರತದ ವಿದಿತ್‌ ಸಂತೋಷ್‌ ಗುಜರಾತಿ ಮತ್ತು ಪಿ.ಹರಿಕೃಷ್ಣ ಆಡಿದ್ದರೂ ಅವರು ಆನಂದ್‌ ನಂತರದ ಸ್ಥಾನಗಳನ್ನು ಪಡೆದರು. ಈಗಲೂ ವಿಶ್ವ ಕ್ರಮಾಂಕದಲ್ಲಿ ಆನಂದ್‌ 15ನೇ ಸ್ಥಾನದಲ್ಲಿದ್ದರೆ, ಹರಿಕೃಷ್ಣ 27ನೇ ಸ್ಥಾನದಲ್ಲಿದ್ದಾರೆ.ವಿಶ್ವ ಚೆಸ್‌ ಫೆಡರೇಷನ್‌ (ಫಿಡೆ) ಉಪಾಧ್ಯಕ್ಷರಾಗಿರುವ, ಬ್ರಿಟನ್‌ನ ಗ್ರ್ಯಾಂಡ್‌ಮಾಸ್ಟರ್‌ ನೈಜೆಲ್‌ ಶಾರ್ಟ್‌ ಅವರು ಆನಂದ್‌ ಜನ್ಮದಿನಕ್ಕೆ ವಾರ ಇರುವಾಗ ಹೇಳಿದ್ದ ಮಾತು ಗಮನಾರ್ಹ... ‘ಭಾರತದ ಆಟಗಾರ ಶ್ರದ್ಧೆ, ಬದ್ಧತೆ,  ಹುಮ್ಮಸ್ಸಿನಿಂದ ಇನ್ನೂ ಉನ್ನತ ಆಟಗಾರರ ಮಟ್ಟದಲ್ಲೇ ನೆಲೆಸಲು ಸಾಧ್ಯವಾಗಿದೆ.’ ಆನಂದ್ ಭಾರತದ ಚೆಸ್‌ ಅಧ್ವರ್ಯು. ಅವರು ಇನ್ನಷ್ಟು ಸಮಯ ಆಡುವಂತಾಗಲಿ. ಪ್ರೇರಣೆಯಾಗುತ್ತಿರಲಿ.     

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು