ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ಬಲವಂತದ ರಜೆ: ಕ್ರಿಕೆಟ್ ಆಟಗಾರರ ಉಲ್ಲಾಸ ಉಳಿಸಿಕೊಳ್ಳುವ ಛಲ

ಕೊರೊನಾ ವೈರಸ್‌ ಭೀತಿ; ಹಲವು ಕ್ರೀಡಾಕೂಟಗಳು ರದ್ದು, ಮುಂದೂಡಿಕೆ; ಮನೆಯಲ್ಲಿ ಉಳಿದ ಕ್ರಿಕೆಟಿಗರು
Last Updated 18 ಮಾರ್ಚ್ 2020, 1:21 IST
ಅಕ್ಷರ ಗಾತ್ರ
ADVERTISEMENT
""
""
""
""
""
""
""

ಬೆಂಗಳೂರು: ವರ್ಷವಿಡೀ ಒಂದಿಲ್ಲೊಂದು ಮಾದರಿಯ ಕ್ರಿಕೆಟ್‌ನಲ್ಲಿ ಬಿಸಿಯಾಗಿರುವ ಆಟಗಾರರು ಆಗೀಗ ವಿಶ್ರಾಂತಿಗಾಗಿ ರಜೆ ಲಭಿಸಿದಾಗ ಕುಟುಂಬದೊಂದಿಗೆ ಅಥವಾ ಸ್ನೇಹಿತರೊಂದಿಗೆ ವಿದೇಶ ಪ್ರವಾಸಕ್ಕೆ ತೆರಳುವುದು ಮಾಮೂಲು.

ಆದರೆ, ಇದೀಗ ಕೊರೊನಾ ವೈರಸ್‌ ಭೀತಿಯಿಂದಾಗಿ ವಿಶ್ವದಾದ್ಯಂತ ಕ್ರಿಕೆಟ್ ಚಟುವಟಿಕೆಗಳಿಗೆ ‘ಒತ್ತಾಯದ ರಜೆ’ ನೀಡಲಾಗಿದೆ. ಮಿಲಿಯನ್ ಡಾಲರ್ ಬೇಬಿ ಐಪಿಎಲ್‌ ಟೂರ್ನಿಯನ್ನೂ ಮುಂದೂಡಲಾಗಿದೆ.

ಕ್ರಿಕೆಟ್‌ ಸಂಸ್ಥೆಗಳ ಕೇಂದ್ರ ಕಚೇರಿಗಳಿಗೆ ಬೀಗ ಹಾಕಲಾಗಿದೆ. ನೌಕರರಿಗೆ ಮನೆಯಿಂದ ಕೆಲಸ ನಿರ್ವಹಿಸುವಂತೆ ಸೂಚಿಸಲಾಗಿದೆ. ಎಲ್ಲಿಯೂ ಹೋಗುವ ಹಾಗಿಲ್ಲ, ಬರುವ ಹಾಗಿಲ್ಲ.

‘ಆಟಕ್ಕಿಂತ ಜೀವ ಮುಖ್ಯ’ ಎಂಬ ಮಂತ್ರದೊಂದಿಗೆ ಕೆಲವು ಟೂರ್ನಿಗಳನ್ನು ಮುಂದೂಡಲಾಗಿದೆ. ಇನ್ನೂ ಕೆಲವನ್ನು ರದ್ದು ಮಾಡಲಾಗಿದೆ. ಇದರಿಂದಾಗಿ ಆಟಗಾರರು ಮನೆಗಳಲ್ಲಿಯೇ ಇರಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೂ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲು ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಮ್, ಫೇಸ್‌ಬುಕ್, ಟ್ವಿಟರ್‌ಗಳ ಮೊರೆ ಹೋಗಿದ್ದಾರೆ. ತಾವು ರಜೆಯನ್ನು ಹೇಗೆ ಕಳೆಯುತ್ತಿದ್ದೇವೆ ಎಂಬ ಚಿತ್ರಗಳನ್ನು ಹಾಕುವುದರ ಜೊತೆಗೆ ಕೊರೊನಾ ವೈರಸ್‌ ಸೋಂಕು ತಗುಲದಂತೆ ಎಚ್ಚರಿಕೆ ವಹಿಸುವ ಸಂದೇಶಗಳನ್ನೂ ನೀಡುತ್ತಿದ್ದಾರೆ.

ಲುಂಗಿ ಗಿಡಿ

ಕಿಕ್ ವಾಲಿಬಾಲ್ ಮಜಾ

ದಕ್ಷಿಣ ಆಫ್ರಿಕಾ ತಂಡವು ಭಾರತದ ಎದುರಿನ ಸರಣಿಯ ಎರಡು ಪಂದ್ಯಗಳು ರದ್ದಾದ ನಂತರ ಲಖನೌನಲ್ಲಿ ಎರಡು ದಿನ ತಂಗಿತ್ತು. ನಂತರ ಸೋಮವಾರ ಕೋಲ್ಕತ್ತದಲ್ಲಿ ಬಂದಿಳಿದಿತ್ತು. ಮಂಗಳವಾರ ಸ್ವದೇಶಕ್ಕೆ ಪ್ರಯಾಣ ಬೆಳೆಸಿತು. ಲಖನೌನಲ್ಲಿ ಇದ್ದ ಎರಡು ದಿನಗಳಲ್ಲಿ ಸಮಯ ಕಳೆಯಲು ಒಂದಿಷ್ಟು ಮೋಜು, ಮಜಾ ಮಾಡಿತು. ಹೋಟೆಲ್‌ನ ಉದ್ಯಾನದಲ್ಲಿ ಕಿಕ್ ವಾಲಿಬಾಲ್ ಆಡಿ ಗಮನ ಸೆಳೆದರು. ತಂಡದ ವೇಗಿ ಲುಂಗಿ ಗಿಡಿ ಅವರು ಈಜುಕೊಳದ ಪಕ್ಕದಲ್ಲಿ ಬಿಸಿಲು ಕಾಯಿಸಿಕೊಂಡರೆ, ‘ಭೋಜನಪ್ರಿಯ’ ಆ್ಯಂಡಿಲೆ ಪಿಶುವಾಯೊ ಊಟದ ಟೇಬಲ್ ಮುಂದೆ ಹೆಚ್ಚು ಹೊತ್ತು ಕಳೆದರು!

ಹರ್ಮನ್‌ಪ್ರೀತ್ ಕೌರ್

ನೆಚ್ಚಿನ ನಾಯಿಯೊಂದಿಗೆ ಹರ್ಮನ್‌ಪ್ರೀತ್ ಕೌರ್

ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ರನ್ನರ್ ಅಪ್ ಆಗಿ ಬಂದಿರುವ ಭಾರತ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಕುಟುಂಬದೊಂದಿಗೆ ಮತ್ತು ತಮ್ಮ ನೆಚ್ಚಿನ ಪೊಮೆರಿಯನ್ ನಾಯಿಯೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಸುಮಾರು ಒಂದು ತಿಂಗಳು ಕಳೆದು ಮರಳಿರುವ ಹರ್ಮನ್‌, ಪಂಜಾಬಿ ಊಟದ ಸವಿಯಲ್ಲಿ ಮೈಮರೆತಿದ್ದಾರೆ.

ರಾಜೇಶ್ವರಿ ಗಾಯಕವಾಡ್

ರಾಜೇಶ್ವರಿ ಸಂದೇಶ

ಕರ್ನಾಟಕದ ರಾಜೇಶ್ವರಿ ಗಾಯಕವಾಡ್ ಅವರೂ ಟ್ವಿಟರ್, ಇನ್ಸ್ಟಾಗ್ರಾಮ್‌ನಲ್ಲಿ ’ಸಿ’ ವಿಟಮಿನ್ ಟಾನಿಕ್‌ವೊಂದರ ಚಿತ್ರದೊಂದಿಗೆ ‘ರೋಗನಿರೋಧಕ ಶಕ್ತಿ ಬೆಳೆಸಿಕೊಳ್ಳಿ. ಸುರಕ್ಷಿತವಾಗಿರಿ’ ಎಂದು ಸಂದೇಶ ಹಾಕಿದ್ದಾರೆ.

ಪತ್ನಿಯೊಂದಿಗೆ ಆ್ಯರನ್ ಫಿಂಚ್

ಫಿಂಚ್ ಡಿನ್ನರ್

ಆಸ್ಟ್ರೇಲಿಯಾ ತಂಡದ ನಾಯಕ ಆ್ಯರನ್ ಫಿಂಚ್ ಅವರು ಈ ರಜೆಯನ್ನು ತಮ್ಮ ಪತ್ನಿಯೊಂದಿಗೆ ಪ್ರಸಿದ್ಧ ಹೋಟೆಲ್‌ಗಳಲ್ಲಿ ಊಟಕ್ಕೆ ತೆರಳುವ ಮೂಲಕ ಕಳೆಯುತ್ತಿದ್ದಾರೆ. ವೆಸ್ಟ್‌ ಇಂಡೀಸ್‌ನ ಆಟಗಾರ, ಮೋಜುಗಾರ, ಸೊಗಸುಗಾರ ಎಂದೇ ಖ್ಯಾತರಾಗಿರುವ ಕ್ರಿಸ್ ಗೇಲ್ ಕೂಡ ಪಬ್‌, ಡಿಸ್ಕೋಥೆಕ್‌ಗಳಲ್ಲಿ ಗೆಳೆಯರೊಂದಿಗೆ ಉಲ್ಲಾಸದಿಂದ ಇದ್ದಾರೆ.

ಕೋಲ್ಕತ್ತ ನೈಟ್ ರೈಡರ್ಸ್‌ ತಂಡದಲ್ಲಿ ಆಡುವ ಸ್ಪೋಟಕ ಬ್ಯಾಟ್ಸ್‌ಮನ್ ಆ್ಯಂಡ್ರೆ ರಸೆಲ್ ಅವರು ಕೋಲ್ಕತ್ತದಲ್ಲಿ ತಮ್ಮ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ತಾಲೀಮು ನಡೆಸಿದ್ದರು. ಸುರಕ್ಷಿತವಾಗಿರಿ, ಆರೋಗ್ಯದಿಂದಿರಿ ಎಂಬ ಸಂದೇಶದ ಜೊತೆಗೆ ಚಿತ್ರವನ್ನೂ ಹಾಕಿದ್ದರು.

ಇತ್ತ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್‌ ಅವರು ಸಾಮಾಜಿಕ ಜಾಲತಾಣಗಳ ಕಮರ್ಷಿಯಲ್‌ಗಳಲ್ಲಿ ನಿರತರಾಗಿದ್ದಾರೆ.

ಶ್ವಾನಪ್ರಿಯ ರಾಹುಲ್:ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಪಂದ್ಯಗಳ ಸರಣಿಯು ರದ್ದಾದ ನಂತರ ತವರಿಗೆ ಮರಳಿರುವ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ತಮ್ಮ ಪ್ರೀತಿಯ ಶ್ವಾನದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಅಲ್ಲದೇ ಕಳೆದ ಕೆಲವು ತಿಂಗಳುಗಳಿಂದ ವಿಜಯ್ ಹಜಾರೆ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ನ್ಯೂಜಿಲೆಂಡ್ ವಿರುದ್ಧದ ಸರಣಿ, ರಣಜಿ ಟ್ರೋಫಿ ಟೂರ್ನಿಗಳಿಗಾಗಿ ಮನೆಯಿಂದ ದೂರವಿದ್ದ ರಾಹುಲ್‌ಗೆ ಈಗ ಅಪ್ಪ, ಅಮ್ಮ ಮತ್ತು ಸಹೋದರಿಯರೊಂದಿಗೆ ಸಮಯ ಕಳೆಯುವ ಅವಕಾಶ ಸಿಕ್ಕಿದೆ. ಮನೆಯ ಉಟದ ಮಜಾ ಬೇರೆ ಅನುಭವಿಸುತ್ತಿದ್ದಾರಂತೆ. ಆದರೆ, ಫಿಟ್‌ನೆಸ್‌ ವರ್ಕೌಟ್‌ ಮಾತ್ರ ತಪ್ಪಿಸಿಲ್ಲ.

ಮಹೇಂದ್ರ ಸಿಂಗ್ ಧೋನಿ

ಧೋನಿ ರೈಡಿಂಗ್, ಬ್ಯಾಡ್ಮಿಂಟನ್

ಇಂಡಿಯನ್ ಪ್ರೀಮಿಯರ್ ಲೀಗ್ ಏಪ್ರಿಲ್ 15ರವರೆಗೆ ಮುಂದೂಡಲಾದ ಕಾರಣ ಅಭ್ಯಾಸ ಶಿಬಿರ ಸ್ಥಗಿತ ಮಾಡಿದ ನಂತರ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ತವರು ರಾಂಚಿಗೆ ತೆರಳಿದ್ದರು. ಕಳೆದ ಎರಡು ದಿನಗಳಿಂದ ಅವರು ಸಖತ್ ಬಿಸಿಯಾಗಿದ್ದಾರೆ. ಮಗಳು ಝೀವಾ ಜೊತೆಗೆ ಆಟ. ಸಾಕುನಾಯಿಗಳೊಂದಿಗೆ ಹೆಚ್ಚಿನ ಹೊತ್ತು ಕಳೆಯುತ್ತಿದ್ದಾರೆ.

ತಮ್ಮ ಗ್ಯಾರೇಜ್‌ನ ಬಾಗಿಲು ತೆಗೆದಿರುವ ಅವರು ನೆಚ್ಚಿನ ಬೈಕ್‌ ರೈಡಿಂಗ್‌ನಲ್ಲಿಯೂ ತಲ್ಲೀನರಾಗಿದ್ದಾರೆ. ಹೆಲ್ಮೆಟ್, ಮುಖಕ್ಕೆ ಗವಸು, ಜಾಕೆಟ್, ಕೈಗವಸುಗಳನ್ನು ಧರಿಸಿಕೊಂಡು ರಸ್ತೆಯಲ್ಲಿ ಸವಾರಿ ಮಾಡಿದ್ದಾರೆ. ಅಭಿಮಾನಿಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಫಿಟ್‌ನೆಸ್‌ ಬಗ್ಗೆ ಬಹಳಷ್ಟು ಮಹತ್ವ ಕೊಡುವ ಧೋನಿ ಪ್ರತಿದಿನ ಬ್ಯಾಡ್ಮಿಂಟನ್ ಆಡುತ್ತಿದ್ದಾರೆ. ಅವರ ಈ ಎಲ್ಲ ವಿಡಿಯೋಗಳೂ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಮೆಚ್ಚುಗೆ ಗಳಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT