ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಕಡಿಮೆಯಾಗದ ಕೊರೊನಾ; ಕಮರುತ್ತಿದೆ ಕೆಟಿಟಿಎ ಕನಸು

Last Updated 14 ಸೆಪ್ಟೆಂಬರ್ 2020, 5:11 IST
ಅಕ್ಷರ ಗಾತ್ರ

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್‌ವೇಳೆಗೆ ಒಟ್ಟು ಏಳು ರಾಜ್ಯ ರ‍್ಯಾಂಕಿಂಗ್‌ ಹಾಗೂ ರಾಜ್ಯ ಚಾಂಪಿಯನ್‌ಷಿಪ್‌ಗಳು‌ ಆಯೋಜನೆಯಾಗಬೇಕಿತ್ತು. ಕೊರೊನಾ ವೈರಾಣು ಸೃಷ್ಟಿಸಿರುವ ಅನಿರೀಕ್ಷಿತ ಬಿಕ್ಕಟ್ಟಿನಿಂದಾಗಿ ಕರ್ನಾಟಕ ಟೇಬಲ್‌ ಟೆನಿಸ್‌ ಸಂಸ್ಥೆಯ (ಕೆಟಿಟಿಎ) ಎಲ್ಲಾ ಯೋಜನೆಗಳು ಬುಡಮೇಲಾಗಿವೆ.

ಕರ್ನಾಟಕದ ಟೇಬಲ್‌ ಟೆನಿಸ್‌ಗೆ ವಿಶಿಷ್ಟ ಪರಂಪರೆ ಇದೆ. ವಸಂತ್‌ ಭಾರದ್ವಾಜ್‌, ಜಿ.ಕೆ.ವಿಶ್ವನಾಥ್‌, ಸಾಯಿಕುಮಾರ್‌, ಅರುಣ್‌ ಕುಮಾರ್‌, ಬೋನಾ ಥಾಮಸ್‌ ಜಾನ್, ಉಷಾ ಸುಂದರರಾಜ್‌‌, ಲಕ್ಷ್ಮಿ ಕಾರಂತ್ ಹೀಗೆ ದಿಗ್ಗಜರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇವರೆಲ್ಲಾ 70–80ರ ದಶಕಗಳಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಮಿನುಗಿದ್ದವರು. ಇವರು ತೆರೆಗೆ ಸರಿದ ನಂತರ ರಾಜ್ಯದಲ್ಲಿ ಟಿ.ಟಿ. ಕ್ರೀಡೆಯ ರಂಗು ಮಸುಕಾಗುತ್ತಾ ಸಾಗಿತ್ತು. ಹಿಂದಿನ ಗತವೈಭವ ಮರುಕಳಿಸುವಂತೆ ಮಾಡಲು ಕೆಟಿಟಿಎ ಹಲವು ಯೋಜನೆಗಳನ್ನು ರೂಪಿಸಿ ಅವುಗಳನ್ನು ಕಾರ್ಯಗತ‌ಗೊಳಿಸುತ್ತಾ ಬಂದಿದೆ.

1969ರಿಂದಲೂ ರಾಷ್ಟ್ರೀಯ ಚಾಂಪಿಯನ್‌ಷಿಪ್‌, ಜೂನಿಯರ್‌ ರಾಷ್ಟ್ರೀಯ ಚಾಂಪಿಯನ್‌ಷಿಪ್‌, ದಕ್ಷಿಣ ವಲಯ ರಾಷ್ಟ್ರೀಯ ರ‍್ಯಾಂಕಿಂಗ್‌ ಹೀಗೆ ಹಲವು ಟೂರ್ನಿಗಳಿಗೆ ಆತಿಥ್ಯ ವಹಿಸುವ ಮೂಲಕ ಎಳೆಯರಲ್ಲಿ ಟೇಬಲ್‌ ಟೆನಿಸ್‌ ಪ್ರೀತಿ ಟಿಸಿಲೊಡೆಯುವಂತೆ ಮಾಡುತ್ತಿದೆ. ಅದರ ಪ್ರತಿಫಲವಾಗಿಯೇ ಅರ್ಚನಾ ಕಾಮತ್‌, ಅನರ್ಘ್ಯ ಮಂಜುನಾಥ್‌, ಯಶಸ್ವಿನಿ ಘೋರ್ಪಡೆ, ವಿ.ಖುಷಿ, ಶ್ರೇಯಲ್‌ ತೆಲಾಂಗ್‌, ಹೃಷಿಕೇಶ್, ಕೆ.ಜೆ.ಆಕಾಶ್‌, ಕೌಸ್ತುಭ್‌ ಕುಲಕರ್ಣಿ‌ ಅವರಂತಹ ಯುವ ಪ್ರತಿಭೆಗಳು ಪ್ರವರ್ಧಮಾನಕ್ಕೆ ಬಂದಿದ್ದಾರೆ.

ಕೆಟಿಟಿಎ ಪ್ರತಿ ವರ್ಷವೂ ಮೇ ತಿಂಗಳ ಅಂತ್ಯದಿಂದ ಅಕ್ಟೋಬರ್ ಕೊನೆಯ‌ವರೆಗೂ ವಿವಿಧ ವಯೋಮಾನದವರಿಗಾಗಿ ರಾಜ್ಯ ರ‍್ಯಾಂಕಿಂಗ್‌ ಹಾಗೂ ರಾಜ್ಯ ಚಾಂಪಿಯನ್‌ಷಿಪ್‌ಗಳನ್ನು ಆಯೋಜಿಸುವುದು ವಾಡಿಕೆ. ಕೊರೊನಾ ಕಾರಣದಿಂದಾಗಿ ಈ ಬಾರಿ ಆ ಸಂಪ್ರದಾಯಕ್ಕೆ ತಡೆ ಬಿದ್ದಿದೆ.

‘ನಾವು ಪ್ರತಿ ವರ್ಷವೂ ಮೇ ಅಂತ್ಯದಲ್ಲಿ ರಾಜ್ಯಮಟ್ಟದ ಟೂರ್ನಿಗಳಿಗೆ ಚಾಲನೆ ನೀಡುತ್ತಿದ್ದೆವು. ಹೋದ ವರ್ಷ ಒಟ್ಟು 12 ಟೂರ್ನಿಗಳನ್ನು ಆಯೋಜಿಸಿದ್ದೆವು.ನವೆಂಬರ್‌‌ ಅಂತ್ಯ ಇಲ್ಲವೇ ಡಿಸೆಂಬರ್‌‌ ಆರಂಭದಲ್ಲಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳು ಆರಂಭವಾಗುವ ಕಾರಣ ಅಕ್ಟೋಬರ್‌‌ನಲ್ಲೇ ಟೂರ್ನಿಗಳನ್ನು ಮುಗಿಸಿಬಿಡುತ್ತಿದ್ದೆವು. ನಂತರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವವರಿಗಾಗಿ ವಿಶೇಷ ತರಬೇತಿ ಶಿಬಿರ ಹಮ್ಮಿಕೊಳ್ಳುತ್ತಿದ್ದೆವು. ಕೊರೊನಾದಿಂದಾಗಿ ಈ ಬಾರಿ ಎಲ್ಲಾ ಚಟುವಟಿಕೆಗಳು ಸ್ತಬ್ಧಗೊಂಡಿವೆ’ ಎಂದು ಕೆಟಿಟಿಎ ಕಾರ್ಯದರ್ಶಿ ಟಿ.ಜಿ.ಉಪಾಧ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೆಪ್ಟೆಂಬರ್‌ ವೇಳೆಗೆ ಈ ಬಿಕ್ಕಟ್ಟು ಶಮನವಾದರೆ ಕನಿಷ್ಠ ನಾಲ್ಕು ಟೂರ್ನಿಗಳನ್ನಾದರೂ ನಡೆಸಬೇಕೆಂಬ ಗುರಿ ಇತ್ತು. ಅದಕ್ಕಾಗಿ ಭಾರತ ಟೇಬಲ್‌ ಟೆನಿಸ್‌ ಫೆಡರೇಷನ್‌ (ಟಿಟಿಎಫ್‌ಐ) ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರದ ಅನುಮತಿ ಪಡೆಯಲು ಪ್ರಯತ್ನಿಸಿದ್ದೆವು. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ಟೂರ್ನಿ ಆಯೋಜನೆಗೆಟಿಟಿಎಫ್‌ಐ ಒಪ್ಪಿಗೆ ನೀಡಲು ಮೀನಮೇಷ ಎಣಿಸುತ್ತಿದೆ. ಹೀಗಾಗಿ ನಮ್ಮ ‌ಕನಸು ಬಹುತೇಕ ಕಮರಿದೆ’ ಎಂದು ಉಪಾಧ್ಯ ಹೇಳಿದರು.

ಗ್ರಾಮೀಣ ಭಾಗದ ಮಕ್ಕಳಿಗೆ ತೊಂದರೆ

‘ನಮ್ಮ ಕೋಚ್‌ಗಳೆಲ್ಲಾ ಶಾಲೆ ಮತ್ತು ಕಾಲೇಜುಗಳ ಜೊತೆ ಒಪ್ಪಂದ ಮಾಡಿಕೊಂಡು ಅಲ್ಲಿ ಅಕಾಡೆಮಿಗಳನ್ನು ಸ್ಥಾಪಿಸಿಕೊಂಡಿದ್ದಾರೆ. ಕೊರೊನಾ ಕಾರಣ ಶಾಲಾ, ಕಾಲೇಜುಗಳಿಗೂ ಬೀಗ ಬಿದ್ದಿದೆ. ಈಗ ತಲೆದೋರಿರುವ ಬಿಕ್ಕಟ್ಟಿನಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಅತಿ ಹೆಚ್ಚು ತೊಂದರೆಯಾಗುತ್ತಿದೆ, ಇದು ಪ್ರತಿಭಾನ್ವೇಷಣೆಗೂ ತೊಡಕಾಗಿ ಪರಿಣಮಿಸಬಹುದು’ ಎಂದು ಟಿಟಿಎಫ್‌ಐತಾಂತ್ರಿಕ ಸಮಿತಿ ಸದಸ್ಯರೂ ಆಗಿರುವ ಉಪಾಧ್ಯ ನುಡಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT