ಶನಿವಾರ, ಜುಲೈ 31, 2021
25 °C

ಕೋವಿಡ್‌-19 ಹಿನ್ನೆಲೆ: ಕ್ರೀಡಾ ಪರಿಕರಗಳ ಸೇಲ್ ಡೌನ್

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ಕಾಲಿಟ್ಟ ನಂತರ ಕ್ರೀಡಾ ಚಟುವಟಿಕೆ ನಿಂತ ಕಾರಣ ಆರ್ಥಿಕವಾಗಿ ಹೆಚ್ಚು ತೊಂದರೆಯಾದದ್ದು ಕ್ರೀಡಾ ಪರಿಕರಗಳ ತಯಾರಕರು ಮತ್ತು ಮಾರಾಟಗಾರರಿಗೆ. ಬೆಂಗಳೂರಿನಂಥ ಕ್ರೀಡಾ ಹಬ್‌ಗಳಲ್ಲಿ, ಮೈಸೂರು, ಮಂಗಳೂರು, ಹುಬ್ಬಳ್ಳಿ–ಧಾರವಾಡ, ಕಲಬುರ್ಗಿ, ದಾವಣಗೆರೆ ಮುಂತಾದ ಕ್ರೀಡಾ ಚಟುವಟಿಕೆ ಹೆಚ್ಚು ಇರುವ ನಗರಗಳಲ್ಲಿ ಕ್ರೀಡಾ ಪರಿಕರಗಳ ಮಾರಾಟ ಕೋಟ್ಯಂತರ ಮೊತ್ತದ ವಹಿವಾಟು. ಈಗ ಈ ವಹಿವಾಟಿಗೆ ಛಡಿಯೇಟು ಬಿದ್ದಿದೆ.

ರಾಜ್ಯದಲ್ಲಿ ಕ್ಲಬ್‌ಗಳು ಮತ್ತು ಕ್ರೀಡಾ ಸಂಸ್ಥೆಗಳು ಸಂದರ್ಭಾನುಸಾರ ಕ್ರೀಡಾ ಪರಿಕರಗಳನ್ನು ಖರೀದಿಸುತ್ತವೆ. ಆದರೆ ಪರಿಕರಗಳು ಹೆಚ್ಚು ಮಾರಾಟವಾಗುವುದು ಬೇಸಿಗೆ ರಜೆ ಕ್ರೀಡಾ ಶಿಬಿರಗಳ ಸಂದರ್ಭದಲ್ಲಿ. ಶಿಕ್ಷಣ ಸಂಸ್ಥೆಗಳು ಪುನರಾರಂಭಗೊಳ್ಳುವಾಗ ಆಡಳಿತ ಮಂಡಳಿಯವರು ಕ್ರೀಡೆಗೆ ತೆಗೆದಿರಿಸಿದ ನಿಧಿಯಿಂದ ಸಾಮಗ್ರಿ ಖರೀದಿಸುವ ಸಂದರ್ಭವೂ ಮಾರಾಟಗಾರರಿಗೆ ಸುಗ್ಗಿಕಾಲ. ಮಳೆಗಾಲ ಆರಂಭಕ್ಕೂ ಮೊದಲು ಕ್ರೀಡಾಕೂಟಗಳ ಆಯೋಜನೆ ಹೆಚ್ಚು ಇರುತ್ತದೆ. ಆಗಲೂ ಸಾಮಗ್ರಿ ಮಾರಾಟ ಜೋರಾಗಿ ನಡೆಯುತ್ತದೆ. ಈ ಬಾರಿ ಇದ್ಯಾವುದೂ ನಡೆಯಲೇ ಇಲ್ಲ. ಆರಂಭದಲ್ಲಿ ಸಂಪೂರ್ಣ ಸ್ಥಗಿತಗೊಂಡಿದ್ದ ಖರೀದಿ ಮೇ ತಿಂಗಳಲ್ಲಿ ಶೇಕಡಾ 25ರಷ್ಟು ಚೇತರಿಕೆ ಕಂಡಿತ್ತು. ಈಗ ಮತ್ತೆ ಹಿಂದಿನದೇ ಸ್ಥಿತಿಗೇ ಮರಳಿದೆ ಎನ್ನುತ್ತಾರೆ ಮಾರಾಟಗಾರರು.

ಬಾಡಿಗೆ ಕಟ್ಟುವುದಕ್ಕೂ ಪರದಾಟ...

ಲಾಕ್‌ಡೌನ್‌ನ ಅರಂಭದ ಕೆಲವು ದಿನಗಳಲ್ಲಿ ಕೇರಂ ಬೋರ್ಡ್‌ಗಳು ಸಾಕಷ್ಟು ಮಾರಾಟವಾದವು. ನಂತರ ಅದೂ ನಿಂತಿತು. ಈಗ ಮಳಿಗೆಯ ಬಾಡಿಗೆ ಕಟ್ಟುವುದೂ ಕಷ್ಟವಾಗಿದೆ ಎಂದು ಬೆಂಗಳೂರಿನ ವಿಜಯನಗರದ ಜೋನ್ ಸ್ಪೋರ್ಟ್ಸ್‌ನ ಪ್ರಿಜೊ ಹೇಳಿದರೆ, ‘ಖರೀದಿದಾರರೂ ಇಲ್ಲ, ಪರಿಕರಗಳ ಸರಬರಾಜೂ ಇಲ್ಲ. ಹೀಗಾಗಿ ತೊಂದರೆಯಾಗಿದೆ. ಬ್ಯಾಂಕಿಗೆ ಇಎಂಐ, ಕಟ್ಟಡ ಮಾಲೀಕರಿಗೆ ಬಾಡಿಗೆ ಕಟ್ಟದೇ ಇರುವುದಕ್ಕಾಗುವುದಿಲ್ಲ. ಕೆಲಸದವರಿಗೆ ಸಂಬಳ ಕೊಡದೇ ಇರುವುದೂ ಸರಿಯಲ್ಲ. ವ್ಯಾಪಾರವಿಲ್ಲದೆ ಸಂಕಷ್ಟದ ದಿನಗಳು ಸಾಗುತ್ತಲೇ ಇವೆ’ ಎಂದು ಬೇಸರಪಟ್ಟವರು ಮೈಸೂರಿನ ಶ್ರೀ ಸ್ಪೋರ್ಟ್ಸ್‌ನ ಮಾಲೀಕ ಶ್ರೀರಾಮ್.

‘ಕ್ರೀಡಾ ಚಟುವಟಿಕೆ, ಗ್ರಾಮೀಣ ಕ್ರೀಡಾಕೂಟಗಳು ಗರಿಗೆದರುವ ಸಮಯದಲ್ಲೇ ಕೊರೊನಾ ಕಾಲಿಟ್ಟಿದ್ದರಿಂದ ವ್ಯಾಪಾರಕ್ಕೆ ಕುತ್ತಾಯಿತು. ಇದ್ದ ಸ್ಟಾಕ್‌ನಿಂದ ಒಂದಷ್ಟು ಪರಿಕರಗಳು ಖಾಲಿಯಾಗಿವೆ. ಹೊಸ ಸಾಮಗ್ರಿ ತರಿಸುವುದಕ್ಕೆ ಆಗುತ್ತಿಲ್ಲ. ತರಿಸಿದರೂ ಮುಂದೇನು ಎಂಬ ಆತಂಕ ಕಾಡುತ್ತಿದೆ’ ಎಂದವರು ಮಂಗಳೂರಿನ ಒಲಿಂಪಿಕ್ ಸ್ಪೋರ್ಟ್ಸ್‌ನ ನಿಜಾಂ.

ತಯಾರಿಕೆ ಮೇಲೆಯೂ ಕರಿನೆರಳು

ಸುದೀರ್ಘ ಲಾಕ್‌ಡೌನ್ ಸಂದರ್ಭದಲ್ಲಿ ನಿಂತುಹೋಗಿದ್ದ ಕ್ರೀಡಾ ಪರಿಕರಗಳ ತಯಾರಿ ಕಾರ್ಯ ಅನ್‌ಲಾಕ್ ಆರಂಭವಾದ ಕೂಡಲೇ ಗರಿಗೆದರಿತ್ತು. ಆದರೆ ಕೆಲವು ದಿನಗಳಿಂದ ಮಹಾನಗರಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಮತ್ತೆ ಸಮಸ್ಯೆ ಎದುರಾಗಿದೆ. ಕ್ರಿಕೆಟ್‌ಗೆ ಸಂಬಂಧಿಸಿದ ಸಾಮಗ್ರಿ ತಯಾರಕರು ಹೆಚ್ಚು ಸಂಕಷ್ಟಕ್ಕೆ ಒಳಗಾಗಿದ್ದಾರೆ.

‘ಕೊರೊನಾ ಹಾವಳಿ ಆರಂಭವಾದಾಗಿನಿಂದ ವಹಿವಾಟು ಕಡಿಮೆ. ಏಪ್ರಿಲ್‌ನಿಂದ ಈ ವರೆಗೆ ಕೇವಲ ಶೇಕಡಾ ಐದರಷ್ಟು ಉತ್ಪನ್ನಗಳನ್ನು ಮಾರಾಟ ಮಾಡಲು ಮಾತ್ರ ಸಾಧ್ಯವಾಗಿದೆ’ ಎನ್ನುತ್ತಾರೆ ಸ್ಟ್ಯಾಂಡ್‌ಫೋರ್ಡ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಸರೀನ್.

‘ಪಟ್ಟಣಗಳು ಸಹಜ ಸ್ಥಿತಿಯತ್ತ ಮರಳುತ್ತಿವೆ. ಆದರೆ ನಗರಗಳು ಮತ್ತು ಮಹಾನಗರಗಳಲ್ಲಿ ದಿನಗಳೆದಂತೆ ಸ್ಥಿತಿ ಗಂಭೀರವಾಗುತ್ತಿದೆ. ಬೆಂಗಳೂರು, ಹೈದರಾಬಾದ್‌ನಂಥ ಕಡೆಗಳಿಂದ ಸಾಮಗ್ರಿಗಳಿಗೆ ಬೇಡಿಕೆಯೇ ಬರುತ್ತಿಲ್ಲ’ ಎಂದು ಹೇಳಿದವರು ಬಿಡಿಎಂ ಕಂಪನಿಯ ನಿರ್ದೇಶಕ ರಾಕೇಶ್ ಮಹಾಜನ್.

‘ಪ್ರಯಾಣ ಮತ್ತು ಸಾಗಾಟದ ಮೇಲಿನ ನಿರ್ಬಂಧಗಳು ಕೂಡ ವಹಿವಾಟಿನ ಮೇಲೆ ದುಷ್ಪರಿಣಾಮ ಬೀರಿವೆ. ಇಂಗ್ಲಿಷ್ ವಿಲೊ ಬ್ಯಾಟ್‌ಗೆ ಬೇಕಾದ ಸಾಮಗ್ರಿ ಇಂಗ್ಲೆಂಡ್‌ನಿಂದ, ಹ್ಯಾಂಡಲ್‌ಗೆ ಬೇಕಾದ ಬೆತ್ತ ಮಲೇಷ್ಯಾದಿಂದ, ಚೆಂಡಿಗೆ ಕಾರ್ಕ್ ಪೋರ್ಚುಗಲ್‌ನಿಂದ ತರಿಸುತ್ತೇವೆ. ಆದರೆ ಸದ್ಯ ಇದ್ಯಾವುದೂ ಬರುತ್ತಿಲ್ಲ’ ಎಂದು ರಾಕೇಶ್ ತಿಳಿಸಿದರು.

ಭಾರತದ ಅಧಿಕೃತ ಕ್ರಿಕೆಟ್ ಚೆಂಡು ನಿರ್ಮಾಣ ಕಂಪನಿ ಸ್ಯಾನ್ಸ್‌ಪರೀಲ್ಸ್ ಗ್ರೀನ್‌ಲ್ಯಾಂಡ್ಸ್‌ (ಎಸ್‌ಜಿ) ಮೊದಲ ಎರಡು ತಿಂಗಳ ಲಾಕ್‌ಡೌನ್ ಅವಧಿಯಲ್ಲೇ ₹ 50 ಕೋಟಿ ನಷ್ಟ ಅನುಭವಿಸಿದೆ ಎನ್ನುತ್ತಾರೆ ಕಂಪನಿಯ ಪ್ರತಿನಿಧಿ ಪಾರಸ್ ಆನಂದ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು