ಶನಿವಾರ, ಆಗಸ್ಟ್ 13, 2022
24 °C
ಚಲನಚಿತ್ರಗಳಲ್ಲಿ ನಟಿಸಿದ ಭಾರತದ ಕ್ರಿಕೆಟಿಗರು

PV Web Exclusive: ಅಲ್ಲಿ ಗೆದ್ದವರು ಇಲ್ಲಿ ಗೆಲ್ಲಲಿಲ್ಲ...

ನಾಗೇಶ್ ಶೆಣೈ ಪಿ. Updated:

ಅಕ್ಷರ ಗಾತ್ರ : | |

prajavani

ಅದು 1983ರ ಜುಲೈ. ಇಂಗ್ಲೆಂಡ್‌ನಲ್ಲಿ ಎಲ್ಲರ ನಿರೀಕ್ಷೆ ಮೀರಿ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯನ್ನು ಗೆದ್ದ ಭಾರತ ತಂಡದ ಆಟಗಾರ ಬ್ಯಾಟ್ಸ್‌ಮನ್‌ ಸಂದೀಪ್‌ ಪಾಟೀಲ್ ಅವರು ಚಲನಚಿತ್ರದಲ್ಲೂ ನಟಿಸುವ ಸಿದ್ಧತೆಯಲ್ಲಿ ತೊಡಗಿದ್ದರು. ಅದು ‘ಕಭಿ ಅಜ್ನಬಿ ಥೆ’ ಚಿತ್ರ. ವಿಶ್ವಕಪ್‌ ತಂಡದಲ್ಲಿದ್ದ ಕನ್ನಡಿಗ, ವಿಕೆಟ್‌ಕೀಪರ್‌ ಸೈಯ್ಯದ್‌ ಕಿರ್ಮಾನಿ ಅವರಿಗೆ ಆ ಹಿಂದಿ ಚಿತ್ರದಲ್ಲಿ ಖಳನ ಪಾತ್ರವಿತ್ತು.

ಇನ್ನೊಂದು ವಿಶೇಷ ಎಂದರೆ ಆ ಸಿನಿಮಾದಲ್ಲಿ, ನಾಯಕನ ಜೊತೆ ಆಡುವ ಹುಡುಗರಲ್ಲಿ ಪುಟ್ಟ ಸಚಿನ್‌ ತೆಂಡೂಲ್ಕರ್‌ ಸಹ ಕಾಣಿಸಿಕೊಂಡಿದ್ದರು! ಅವರಿಗೆ ಆಗ 10 ವರ್ಷ. ಎರಡು ವರ್ಷಗಳ ನಂತರ ಬಿಡುಗಡೆಯಾದ ವಿಜಯ್‌ಸಿಂಗ್‌ ನಿರ್ಮಾಣ, ನಿರ್ದೇಶನದ ಈ ಚಿತ್ರ ದುಡ್ಡು ಮಾಡಲಿಲ್ಲ. ಯುವ  ಕ್ರಿಕೆಟರ್‌ ಒಬ್ಬ ‍ಪ್ರೇಮದ ಸುಳಿಗೆ ಸಿಲುಕುವ ಕಥೆಯನ್ನು ಹೊಂದಿದ್ದ ಚಿತ್ರವದು. ಸಂದೀಪ್‌ ಪಾಟೀಲ್‌, ಎಳೆಯ ಸಚಿನ್‌ನನ್ನು ಮೊದಲ ಬಾರಿ  ಭೇಟಿಯಾಗಿದ್ದೇ ಈ ಚಿತ್ರದ ಚಿತ್ರೀಕರಣದ ವೇಳೆಯಂತೆ. ಚೆಂಬೂರ್‌ನ (ಮುಂಬೈ) ಆರ್‌ಸಿಎಫ್‌ ಮೈದಾನದಲ್ಲಿ ಹಿರಿಯ–ಕಿರಿಯ ಆಟಗಾರರ ಭೇಟಿಯಾಗಿದ್ದು.

ಕ್ರೀಡಾಪಟುಗಳ, ಕ್ರಿಕೆಟರ್‌ಗಳ ಯಶಸ್ಸಿನ ಕುರಿತು ಬೆಳ್ಳಿತೆರೆಗೆ ಬಂದ ಚಿತ್ರಗಳು (ಬಯೋಪಿಕ್‌) ಕಾಸು ಮಾಡಿದವು. ಆದರೆ ಸ್ವತಃ ಕ್ರಿಕೆಟರ್‌ಗಳು ನಟಿಸಿದ, ಹೀರೊ ಆಗಿದ್ದ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಮುಗ್ಗರಿಸಿದವು. ಕೆಲವು  ಚಿತ್ರಗಳು ಹಿಟ್‌ ಆದರೂ ಅವುಗಳಲ್ಲಿ ಕ್ರಿಕೆಟ್‌ ‘ತಾರೆ’ಗಳ ಪಾತ್ರ ದೊಡ್ಡದ್ದೇನಿರಲಿಲ್ಲ.

ಎಂ.ಎಸ್.ಧೋನಿ: ದಿ ಅನ್‌ಟೋಲ್ಡ್‌ ಸ್ಟೋರಿ, ಎಂ.ಸಿ.ಮೇರಿಕೋಮ್‌, ದಂಗಲ್‌ (ಗೀತಾ, ಬಬಿತಾ ಪೋಗಟ್‌ ಸೋದರಿಯರ ಬಗ್ಗೆ), ಭಾಗ್ ಮಿಲ್ಖಾ ಭಾಗ್‌ ಮೊದಲಾದ ಬಯೋಪಿಕ್‌ಗಳು (ಜೀವನಚರಿತ್ರೆ ಆಧರಿಸಿದ ಚಿತ್ರಗಳು) ಉತ್ತಮ ಯಶಸ್ಸು ಪಡೆದವು.

2016ರಲ್ಲಿ ತೆರೆಗೆ ಬಂದ ‘ಬುಧಿಯಾ ಸಿಂಗ್‌: ಬಾರ್ನ್‌ ಟು ರನ್‌’, ‘ಅಜರ್‌’ ಚಿತ್ರಗಳು ಯಶಸ್ಸು ಗಳಿಸದಿದ್ದರೂ ಕಥೆಯ ಕಾರಣ ತಕ್ಕಮಟ್ಟಿಗೆ ಸದ್ದು ಮಾಡಿದ್ದವು. ಮ್ಯಾರಥಾನ್‌ ಓಟಗಳನ್ನು ಸಲೀಸಾಗಿ ಓಡುತ್ತಿದ್ದ ಐದು ವರ್ಷದ ಪುಟ್ಟ ಬಾಲಕ ಬುಧಿಯಾ ಸಿಂಗ್‌ ಈ ಸಾಧನೆಗಾಗಿ ಲಿಮ್ಕಾ ದಾಖಲೆ ಪುಸ್ತಕದಲ್ಲೂ ಸೇರ್ಪಡೆ ಆಗಿದ್ದ. ಈತನ ಕಥೆಯನ್ನಾಧರಿಸಿದ ಚಿತ್ರದಲ್ಲಿ ಕೋಚ್‌ ಬಿರಾಂಚಿ ದಾಸ್‌ ಪಾತ್ರದಲ್ಲಿ ಮನೋಜ್‌ ಬಾಜಪೇಯಿ ಅಭಿನಯ ಗಮನ ಸೆಳೆದಿತ್ತು. ನೈಜ ಕೋಚ್‌ ದಾಸ್‌ 2008ರಲ್ಲಿ ಕೊಲೆಯಾಗಿದ್ದರು.

ಈಗ 1983ರ ವಿಶ್ವಕಪ್‌ ಕ್ರಿಕೆಟ್‌ ಗೆಲುವಿನ ಯಶೋಗಾಥೆಯನ್ನು ಆಧರಿಸಿದ ಕಬೀರ್‌ ಖಾನ್‌ ಅವರ ಚಿತ್ರ ‘83’ ಬಿಡುಗಡೆಗೆ ಸಿದ್ಧವಾಗಿದೆ.


'83' ಸಿನಿಮಾದ ಫಸ್ಟ್ ಲುಕ್

ದುರಾನಿ ಮೊದಲಿಗರು

ಸಂದೀಪ್‌ ಪಾಟೀಲ್‌ ಅವರಿಗಿಂತ ಮೊದಲೂ ನಟಿಸಿದ ಕ್ರಿಕೆಟಿಗರಿದ್ದಾರೆ. ನಂತರವೂ ನಟಿಸಿದವರು ಇದ್ದಾರೆ. ಆದರೆ ಯಾರೂ ನೆಲೆಯೂರಲಿಲ್ಲ. ಚಿತ್ರರಂಗಕ್ಕೆ ಬಂದಷ್ಟು ವೇಗದಲ್ಲೇ ಮರಳಿಯೂ ಹೋದವರಿದ್ದಾರೆ!

ಸಿನಿಮಾದಲ್ಲಿ ಪಾತ್ರ ವಹಿಸಿದ ಭಾರತದ ಮೊದಲ ಕ್ರಿಕೆಟ್‌ ಆಟಗಾರ ಸಲೀಮ್‌ ದುರಾನಿ ಅವರು. ಅಫ್ಗಾನಿಸ್ತಾನದ ಕಾಬೂಲ್‌ನಲ್ಲಿ ಜನಿಸಿದ್ದ ಈ ಎಡಗೈ ಬ್ಯಾಟ್ಸ್‌ಮನ್‌ 13 ವರ್ಷ ಭಾರತ ತಂಡದಲ್ಲಿ ಆಡಿದ್ದರು. 1973ರಲ್ಲಿ ಕೊನೆಯ ಟೆಸ್ಟ್‌ ಆಡಿದ್ದರು. ಆ ವರ್ಷವೇ ಅವರು ಚಿತ್ರರಂಗಕ್ಕೆ ಇಳಿದರು. ಆದರೆ ಮೊದಲ ಯತ್ನದಲ್ಲೇ ನಿರಾಶೆ ಕಂಡರು. ಪರ್ವಿನ್‌ ಬಾಬಿ ನಾಯಕಿಯಾಗಿದ್ದ ‘ಚರಿತ’ (ನಿರ್ದೇಶನ: ಬಿ.ಆರ್‌.ಇಶಾರ) ಪ್ರೇಕ್ಷಕರ ಗಮನ ಸೆಳೆಯಲಿಲ್ಲ.

ಯುವರಾಜ್‌ ಸಿಂಗ್‌ ತಂದೆ, ಕ್ರಿಕೆಟಿಗ ಯೋಗರಾಜ್‌ ಸಿಂಗ್‌ ಅವರು ಸುಮಾರು 30 ಪಂಜಾಬಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಯುವರಾಜ್‌ ಸಿಂಗ್‌ ಕೂಡ ಬಾಲನಟನಾಗಿ ಚಿತ್ರವೊಂದರಲ್ಲಿ ನಟಿಸಿದ್ದಾರೆ. ಅದು 1990ರ ದಶಕದ ಆರಂಭದಲ್ಲಿ.


ಸುನೀಲ್ ಗಾವಸ್ಕರ್‌

ಸುನೀಲ್ ಗಾವಸ್ಕರ್‌ ಅವರು ಕ್ರೀಡಾ ಜೀವನದ ಉತ್ತುಂಗದಲ್ಲಿದ್ದಾಗಲೇ ‘ಸಾವ್ಳಿ ಪ್ರೇಮಾಚಿ’ (ಪ್ರೇಮದ ನೆರಳು) ಎಂಬ ಮರಾಠಿ ಚಲನಚಿತ್ರದಲ್ಲಿ ನಟಿಸಿದ್ದರು. 1980ರ ಸುಮಾರಿಗೆ ಆ ಚಿತ್ರ ತೆರೆಗೆ ಬಂದಿತ್ತು. ಅಂಪೈರ್‌ ಆಗಿದ್ದ ಪೀಲೂ ರಿಪೋರ್ಟರ್‌ ಕೋರಿಕೆ ಮೇರೆಗೆ ಆ ಚಿತ್ರದಲ್ಲಿ ನಟಿಸಿದ್ದರಂತೆ. ನಂತರ ಇನ್ನೊಂದು ಮರಾಠಿ ಚಿತ್ರವೂ ಅವರಿಗೆ ಹೆಸರು ತರಲಿಲ್ಲ. ಕ್ರಿಕೆಟ್‌ ಜೀವನದ ಕೊನೆಯಲ್ಲಿ ನಾಸಿರುದ್ದೀನ್‌ ಶಾ, ಸತೀಶ್‌ ಶಾ ನಟಿಸಿದ ಹಾಸ್ಯಪ್ರಧಾನ ಚಿತ್ರ ‘ಮಾಲಾಮಾಲ್‌’ನಲ್ಲೂ ಅವರು ಪಾತ್ರ ವಹಿಸಿದ್ದರು. ಈ ಚಿತ್ರದ ನಂತರ  ಗಾವಸ್ಕರ್‌ ಸಿನಿಮಾ ನಟನೆಯತ್ತ ಮುಖಮಾಡಿಲ್ಲ.

ಕಲಾತ್ಮಕ ಆಟಗಾರ, ಕರ್ನಾಟಕದವರೇ ಆದ ಜಿ.ಆರ್‌.ವಿಶ್ವನಾಥ್‌ ಕೂಡ ಬಣ್ಣ ಹಚ್ಚಿದ್ದವರೇ. ‘ಪಂಜರದ ಗಿಣಿಗಳು’ ಅವರ ಮೊದಲ ಚಿತ್ರ. ಕುಮಾರ್‌ ಬಂಗಾರಪ್ಪ ನಾಯಕರಾಗಿದ್ದ 1991ರಲ್ಲಿ ತೆರೆಕಂಡ ‘ನವತಾರೆ’ ಚಿತ್ರದಲ್ಲೂ ವಿಶ್ವನಾಥ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

1983ರ ವಿಶ್ವಕಪ್‌ ತಂಡದ ಕ್ಯಾಪ್ಟನ್‌ ಕಪಿಲ್‌ ದೇವ್‌ ಕೂಡ ನಟರೇ! ತಮ್ಮದೇ ಪಾತ್ರಗಳನ್ನು ಸ್ವತಃ ನಿರ್ವಹಿಸಿದ್ದಾರೆ. ಇಕ್ಬಾಲ್‌, ಮುಝಸೇ ಶಾದಿ ಕರೋಗೆ, ಸ್ಟಂಪ್ಡ್‌ ಚಿತ್ರಗಳಲ್ಲಿ ಈ ಆಲ್‌ರೌಂಡರ್‌ ನಟಿಸಿದ್ದಾರೆ. 2003ರಲ್ಲಿ ಬಿಡುಗಡೆ ಕಂಡ ಸ್ಟಂಪ್ಡ್‌ ಚಿತ್ರದಲ್ಲಿ ಸಚಿನ್‌ ಕೂಡ ಮುಖತೋರಿಸಿದ್ದಾರೆ!

ವಿಶ್ವಕಪ್‌ ಗೆದ್ದ ತಂಡದಲ್ಲಿದ್ದ ಇನ್ನೊಬ್ಬ ಆಲ್‌ರೌಂಡರ್‌ ಮೊಹಿಂದರ್‌ ಅಮರನಾಥ್‌ ಅವರೂ ವರುಣ್‌ ಧವನ್‌ ನಟಿಸಿದ್ದ ‘ಡಿಶೂಂ’ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಆ ಚಿತ್ರದಲ್ಲಿ ಮೊಹಿಂದರ್‌ ಜೊತೆ ಕೆಲಸ ಮಾಡಿದ್ದ ಸಖಿಬ್‌ ಸಲೀಮ್‌ ಈಗ, ‘83’ ಚಿತ್ರದಲ್ಲಿ ಮೊಹಿಂದರ್‌ ಅವರ ಪಾತ್ರವನ್ನೇ ನಿರ್ವಹಿಸುತ್ತಿರುವುದು ವಿಶೇಷ.


ಅಜಯ್ ಜಡೇಜ

ಬೆಟ್ಟಿಂಗ್‌ ಪ್ರಕರಣದಿಂದಾಗಿ ಕ್ರಿಕೆಟ್‌ಜೀವನ ಮೊಟಕುಗೊಂಡ ನಂತರ ಆಲ್‌ರೌಂಡರ್‌ ಅಜಯ್‌ ಜಡೇಜ, ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾದರು. ಅವರು ನಟಿಸಿದ ‘ಖೇಲ್‌’ (2003) ಚಿತ್ರ ‘ದೊಡ್ಡ ಸ್ಕೋರ್‌’ ಮಾಡಲಿಲ್ಲ. ಜಡೇಜ ಅವರಂತೆಯೇ ಶ್ರೀಶಾಂತ್‌ ಕ್ರಿಕೆಟ್‌ ಬದುಕು ಕೂಡ ಬೆಟ್ಟಿಂಗ್‌ ವಿವಾದದಿಂದ ಬೇಗನೇ ಮೊಟಕಾಯಿತು. ಅವರೂ ‘ಅಕ್ಸರ್‌ 2’ (ಹಿಂದಿ), ಟೀಮ್‌ 5 (ಮಲಯಾಳಂ), ಕೆಂಪೇಗೌಡ 2 (ಕನ್ನಡ) ಚಿತ್ರಗಳಲ್ಲಿ ನಟಿಸಿದ್ದಾರೆ. 2017ರಲ್ಲಿ ತೆರೆಗೆ ಬಂದ ‘ಟೀಮ್‌ 5’ ಚಿತ್ರದಲ್ಲಿ ಅವರೇ ಹೀರೊ ಆಗಿದ್ದರು.

ವಿನೋದ್ ಕಾಂಬ್ಳಿ ತಮ್ಮ ಕ್ರಿಕೆಟ್‌ ಜೀವನ ನಿರೀಕ್ಷೆಗಿಂತ ಬೇಗನೇ ಅಂತ್ಯಕಂಡ ನಂತರ ‘ಅನರ್ಥ್‌’ (2002) ಎಂಬ ಚಿತ್ರದಲ್ಲಿ ನಟಿಸಿದ್ದರು. ಸುನೀಲ್‌ ಶೆಟ್ಟಿ, ಸಂಜಯ್‌ ದತ್‌ ತಾರಾಗಣವಿದ್ದ ಚಿತ್ರ ಹೆಸರು ಮಾಡಲಿಲ್ಲ. ಏಳು ವರ್ಷಗಳ ನಂತರ ಪಲ್‌ ಪಲ್‌ ದಿಲ್‌ ಕೇ ಸಾಥ್ ಚಿತ್ರವೂ ಅಷ್ಟೇ. ಐದು ವರ್ಷಗಳ ಹಿಂದೆ ‘ಬೆತ್ತನಗೆರೆ’ ಚಿತ್ರದಲ್ಲೂ ಅವರು ಸಣ್ಣಪಾತ್ರ ನಿರ್ವಹಿಸಿದ್ದರು.

2009ರಲ್ಲಿ ಬಿಡುಗಡೆಯಾದ ‘ವಿಕ್ಟರಿ’ ಚಿತ್ರ ಭಾರತ ಕ್ರಿಕೆಟ್‌ ತಂಡಕ್ಕೆ ಆಡುವ ಕನಸು ಹೊಂದಿದ್ದ ಆಟಗಾರನೊಬ್ಬನ ಕಥೆ. ದೇಶವಿದೇಶಗಳ ಹಲವು ಅಂತರರಾಷ್ಟ್ರೀಯ ಆಟಗಾರರು ಇದರಲ್ಲಿ ಕೆಲಹೊತ್ತು ಕಾಣಿಸಿಕೊಂಡಿದ್ದರು. ಈ ಚಿತ್ರವೂ ಮುಗ್ಗರಿಸಿತು.

ಅಲ್ಪ ಯಶಸ್ಸು

ಭಾರತ ತಂಡದ ಮಧ್ಯಮ ವೇಗದ ಬೌಲರ್‌ ಆಗಿದ್ದ ಸಲೀಲ್‌ ಅಂಕೋಲಾ ಅವರು ಕೆಲವು ಹಿಂದಿ ಚಿತ್ರಗಳಲ್ಲಿ ನಟಿಸಿದರಷ್ಟೇ ಅಲ್ಲ, ಸ್ಫುರದ್ರೂಪದಿಂದ ಕಿರುತೆರೆಯಲ್ಲಿ ಹೆಸರು ಮಾಡಿದರು. ಕುರುಕ್ಷೇತ್ರ (2000), ಪಿತಾ (2002), ಚುರಾ ಲಿಯಾ ಹೈ ತುಮ್ನೇ (2003), ದಿ ಡ್ರೆಸ್ಸಿಂಗ್ ರೂಮ್‌ (2004), ದಂಡ್‌ ರಿವಾಯತ್‌ (2012), ತೇರಾ ಇಂತೆಜಾರ್‌, ಏಕ್ತಾ ಸೇರಿದಂತೆ ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು‘ಕೋರಾ ಕಾಗಝ್‌’ ಹಿಂದಿ ಧಾರವಾಹಿಯಲ್ಲೂ ನಟಿಸಿದ್ದರು. ನಂತರ ಖಿನ್ನತೆ ಅವರನ್ನು ಕಾಡಿತ್ತು.

1980ರ ದಶಕದಲ್ಲಿ ಪಾಕಿಸ್ತಾನ ತಂಡದ ಆರಂಭ ಆಟಗಾರರಾಗಿದ್ದ ಮೊಹ್ಸಿನ್‌ ಖಾನ್‌ ಅವರೂ ಬಾಲಿವುಡ್‌ನತ್ತ ಆಕರ್ಷಿತರಾದರು. ಅಂದಿನ ಪ್ರಮುಖ ನಟಿಯರಲ್ಲಿ ಒಬ್ಬರಾಗಿದ್ದ ರೀನಾ ರಾಯ್‌ ಅವರನ್ನು ಮದುವೆಯಾಗಿದ್ದರು.  ಜೆ.ಪಿ.ದತ್ತಾ ಅವರ ‘ಬಟ್ವಾರಾ’ (1989), ಮಹೇಶ್‌ ಭಟ್‌ ನಿರ್ದೇಶನದ ‘ಸಾಥಿ’  ಸೇರಿ ಬಾಲಿವುಡ್‌ನ ಸುಮಾರು ಹತ್ತು ಚಿತ್ರಗಳಲ್ಲಿ ಮೊಹ್ಸಿನ್‌ ಕಾಣಿಸಿಕೊಂಡಿದ್ದಾರೆ.

ಕನ್ನಡ ಸೇರಿ ಭಾರತದ ವಿವಿಧ ಭಾಷೆಗಳಲ್ಲಿ ನಟಿಸಿದ ಪ್ರಥಮ ದರ್ಜೆ ಆಟಗಾರರು ಸಾಕಷ್ಟು ಇದ್ದರೂ ಅವರೂ ಸುದ್ದಿಯಾಗಿದ್ದು ಕಡಿಮೆ. ಚಿತ್ರಲೋಕ ಯಾಕೋ ಕ್ರಿಕೆಟ್‌ ಲೋಕದ ಖ್ಯಾತನಾಮರನ್ನು ಅಷ್ಟಾಗಿ ಅಪ್ಪಿಕೊಳ್ಳಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು