ಗುರುವಾರ , ಜುಲೈ 7, 2022
21 °C

PV Web Exclusive: ರೈಲ್ವೆ ‘ಟ್ರ್ಯಾಕ್‌’ನಲ್ಲಿ ಸೈಕ್ಲಿಂಗ್‌ ಯಾನ...

ಪ್ರಮೋದ Updated:

ಅಕ್ಷರ ಗಾತ್ರ : | |

Prajavani

ಒಂದು ತಿಂಗಳ ಹಿಂದೆ ಬಾಗಲಕೋಟೆಯಿಂದ ವಿಜಯಪುರ ಮಾರ್ಗದ ರಸ್ತೆಯಲ್ಲಿ ಬೆಳಿಗ್ಗೆ ಏಳು ಗಂಟೆ ಸುಮಾರಿಗೆ ಕಾರಿನಲ್ಲಿ ಹೋಗುತ್ತಿದ್ದಾಗ, ಹಿಂದೆ ಮುಂದೆ ಎಲ್ಲಿ ನೋಡಿದರೂ ಸೈಕಲ್‌ಗಳ ಸದ್ದು. ಆಲಮಟ್ಟಿಗೆ ಹೋಗುವ ದಾರಿಯ ಹಸಿರಾದ ಸುಂದರ ಪರಿಸರದಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಜಿದ್ದಿಗೆ ಬಿದ್ದವರಂತೆ ಪೆಡಲ್‌ ತುಳಿಯುತ್ತಿದ್ದವರೇ ಕಾಣುತ್ತಿದ್ದರು.

ಅವರಲ್ಲಿ ಕೆಲವರು ಮಾತ್ರ ವೃತ್ತಿಪರ ಸೈಕ್ಲಿಸ್ಟ್‌ಗಳು; ಬಹುತೇಕರು ಹವ್ಯಾಸಕ್ಕಾಗಿ ಸೈಕಲ್‌ ಹಿಂದೆ ಓಡಿದವರು. ದೇಹ ಸದೃಢಗಳಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನಗರ ಪ್ರದೇಶಗಳ ಜನ ಜಿಮ್‌ಗಳ ಮೊರೆ ಹೋಗುವಂತೆ, ವಿಜಯಪುರ ಮತ್ತು ಬಾಗಲಕೋಟೆ ಸುತ್ತಮುತ್ತಲಿನ ಜನ ಸೈಕ್ಲಿಂಗ್‌ ಮೊರೆ ಹೋಗುತ್ತಾರೆ. ರಾಜ್ಯದಲ್ಲಿ ‘ಸೈಕ್ಲಿಂಗ್ ಕಾಶಿ’ ಎಂದೇ ಹೆಸರಾಗಿರುವ ಈ ಜಿಲ್ಲೆಗಳ ಬಹಳಷ್ಟು ಯುವಜನತೆಯ ಆಸೆ, ಕನಸು ಮತ್ತು ಸಾಧನೆಯ ಗುರಿ ಇರುವುದು ಸೈಕ್ಲಿಂಗ್‌ನಲ್ಲಿ.

ಹೀಗಾಗಿ ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ಗಳಲ್ಲಿ ಈ ಜಿಲ್ಲೆಗಳದ್ದೇ ಪ್ರಾಬಲ್ಯ. ರೈಲ್ವೆಯಲ್ಲಿಯೂ ಇವರದ್ದೇ ಸದ್ದು. ಬಾಲ್ಯದಲ್ಲಿ, ಪ್ರಾಥಮಿಕ ಶಾಲಾ ದಿನಗಳಲ್ಲಿ ಹವ್ಯಾಸಕ್ಕಾಗಿ ಸೈಕಲ್‌ ಓಡಿಸುವ ಮಕ್ಕಳು ಆಸಕ್ತಿ ಮತ್ತು ವಯಸ್ಸು ಬೆಳೆದಂತೆಲ್ಲ ಇದೇ ಕ್ರೀಡೆಯನ್ನು ವೃತ್ತಿಪರವಾಗಿ ಸ್ವೀಕರಿಸುತ್ತಾರೆ. ಬಳಿಕ ಸೈಕ್ಲಿಂಗ್‌ ಅವರ ಬದುಕಾಗುತ್ತದೆ, ಜೀವನ ನಡೆಸಲು ದಾರಿಯನ್ನೂ ತೋರಿಸಿಕೊಡುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ನೀಡುವ ಪ್ರಮುಖ ಕ್ರೀಡಾ ಪ್ರಶಸ್ತಿಗಳನ್ನು ಪಡೆಯುವವರ ಸೈಕ್ಲಿಸ್ಟ್‌ಗಳ ಪಟ್ಟಿಯಲ್ಲಿ ವಿಜಯಪುರ ಮತ್ತು ಬಾಗಲಕೋಟೆಯವರದ್ದೇ ಮೇಲುಗೈ.


ರಾಜು ಬಾಟಿ

ಈ ಬಾರಿ 2017ರಿಂದ 2019ರ ಸಾಲಿನವರೆಗೆ ಮೂರು ವರ್ಷಗಳ ಏಕಲವ್ಯ ಪ್ರಶಸ್ತಿಯನ್ನು ಒಟ್ಟಿಗೆ ನೀಡಲಾಗಿದೆ. ಮೂರೂ ವರ್ಷದ ಪ್ರಶಸ್ತಿಗಳು ಬಾಗಲಕೋಟೆ ಜಿಲ್ಲೆಯ ಸೈಕ್ಲಿಸ್ಟ್‌ಗಳಾದ ಮೇಘಾ ಗೂಗಾಡ, ವೆಂಕಪ್ಪ ಕೆಂಗಲಗುತ್ತಿ ಮತ್ತು ರಾಜು ಬಾಟಿ ಪಾಲಾಗಿದೆ. ಏಕಲವ್ಯ ಪ್ರಶಸ್ತಿ ಆರಂಭವಾದಾಗಿನಿಂದ ಪ್ರತಿ ವರ್ಷ ಒಬ್ಬರಲ್ಲ ಒಬ್ಬರು ಸೈಕ್ಲಿಸ್ಟ್‌ಗೆ ‘ಏಕಲವ್ಯ’ ಸಿಗುತ್ತಿದೆ. ಆರಂಭದ ದಿನಗಳಲ್ಲಿ ಗುರುವಿನ ಮಾರ್ಗದರ್ಶನವಿಲ್ಲದೆ ಹವ್ಯಾಸಕ್ಕಾಗಿ ಪೆಡಲ್‌ ತುಳಿಯುವ ಎರಡು ಜಿಲ್ಲೆಗಳ ಯುವಜನತೆ ನಂತರ ಗುರುವನ್ನು ಹುಡುಕಿಕೊಂಡು ಸಾಧನೆಯ ಒಡೆಯರಾಗುತ್ತಾರೆ.

ಏಕಲವ್ಯ ಪ್ರಶಸ್ತಿ ಪಡೆದ ಈ ಮೂವರೂ ಸೈಕ್ಲಿಸ್ಟ್‌ಗಳು ಬಡತನದ ಹಿನ್ನೆಲೆಯಿಂದ ಬಂದವರು. ಸಾಧನೆಯ ಹಸಿವಿಗೆ ನಿತ್ಯದ ನೋವುಗಳನ್ನು ಮರೆತವರು. ಹೀಗಾಗಿ ಮೇಲಿಂದ ಮೇಲೆ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಪದಕಗಳನ್ನು ಗೆಲ್ಲುತ್ತಿದ್ದಾರೆ.


ಮೇಘಾ ಗೂಗಾಡ

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಕುಲ್ಲಳ್ಳಿ ಗ್ರಾಮದ ಮೇಘಾ ಗೂಗಾಡ ಏಳೆಂಟು ವರ್ಷಗಳ ಹಿಂದೆ ಬಹಳಷ್ಟು ಜನರಿಗೆ ಗೊತ್ತೇ ಇರಲಿಲ್ಲ. 2017ರಲ್ಲಿ ಬಹಮಾಸ್‌ನಲ್ಲಿ ನಡೆದ ಆರನೇ ಯೂತ್‌ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದರು. ಅದೇ ವರ್ಷ ಏಷ್ಯಾ ಕ‍ಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

ಮೇಘಾ 2012ರಲ್ಲಿ ಪಟಿಯಾಲದಲ್ಲಿ ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಬಾರಿಗೆ ಪದಕ ಜಯಿಸಿದ್ದರು. ರಾಷ್ಟ್ರೀಯ ಕೂಟದಲ್ಲಿ 15ಕ್ಕೂ ಹೆಚ್ಚು ಪದಕಗಳನ್ನು ಜಯಿಸಿದ್ದಾರೆ. ಬಾಗಲಕೋಟೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಸತಿ ನಿಲಯದಲ್ಲಿ ಸೈಕ್ಲಿಂಗ್ ಅಭ್ಯಾಸ ಆರಂಭಿಸಿದ ನಂತರ ವಿಜಯಪುರದ ವಸತಿ ನಿಲಯದಲ್ಲಿ ತರಬೇತಿ ಮುಂದುವರಿಸಿದರು. ಮೇಘಾ ಅವರದ್ದು ಕ್ರೀಡಾ ಕುಟುಂಬ. ಅವರ ತಂದೆ ಕಬಡ್ಡಿ ಆಟಗಾರ, ದೊಡ್ಡಪ್ಪ ಕುಸ್ತಿ ಪಟು.


ವೆಂಕಪ್ಪ ಕೆಂಗಲಗುತ್ತಿ

ರೈತ ದಂಪತಿ ಶಿವಪ್ಪ ಹಾಗೂ ಬಾಗವ್ವ ಅವರ ಪುತ್ರ ವೆಂಕಪ್ಪ ಕೆಂಗಲಗುತ್ತಿ ಬಾಗಲಕೋಟೆ ಜಿಲ್ಲೆಯ ತುಳಸಿಗೇರಿ ಗ್ರಾಮದವರು. ಹವ್ಯಾಸಕ್ಕಾಗಿ ಸೈಕಲ್‌ ಹೊಡೆಯುವುದನ್ನು ಆರಂಭಿಸಿದ ವೆಂಕಪ್ಪ ನಂತರ ವೃತ್ತಿಪರ ಸೈಕ್ಲಿಸ್ಟ್‌ ಆಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿದ್ದಾರೆ. 2019ರಲ್ಲಿ ನವದೆಹಲಿಯಲ್ಲಿ ನಡೆದ ಏಷ್ಯನ್‌ ಕಪ್‌ ಟೂರ್ನಿಯಲ್ಲಿ 10 ಕಿ.ಮೀ. ಸ್ಕ್ರ್ಯಾಚ್ ರೇಸ್ ಸ್ಪರ್ಧೆಯಲ್ಲಿ ಬೆಳ್ಳಿ ಜಯಿಸಿದ್ದರು. ಮೂರು ಕಿ.ಮೀ. ವೈಯಕ್ತಿಕ ಪರ್ಸೂಟ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡರು. ವೆಂಕಪ್ಪ, ಬಾಗಲಕೋಟೆ ವಸತಿ ನಿಲಯದ ಸೈಕ್ಲಿಂಗ್‌ ಕೋಚ್‌ ಅನಿತಾ ಎಂ. ನಿಂಬರಗಿ ಹಾಗೂ ದುಂಡಪ್ಪ ಅಥಣಿ ಅವರ ಬಳಿ ತರಬೇತಿ ಪಡೆದಿದ್ದರು. 2018ರಲ್ಲಿ ನಡೆದ ಏಷ್ಯನ್‌ ಕಪ್‌ ಟೂರ್ನಿಯಲ್ಲಿಯೂ ಎರಡು ಪದಕ ಗೆದ್ದಿದ್ದರು. ಸ್ವಿಟ್ಜರ್‌ಲೆಂಡ್‌ನಲ್ಲಿ ಜರುಗಿದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದರು. 

2013ರಲ್ಲಿ ಕೇರಳದಲ್ಲಿ ನಡೆದ ರಾಷ್ಟ್ರೀಯ ಮೌಂಟನ್‌ ಬೈಕ್‌ ಚಾಂಪಿಯನ್‌ಷಿಪ್‌ನ 14 ವರ್ಷದ ಒಳಗಿನವರ ವಿಭಾಗದಲ್ಲಿ ಬೆಳ್ಳಿ, 2015ರಲ್ಲಿ ಪುಣೆಯಲ್ಲಿ ನಡೆದ ಮೌಂಟನ್‌ ಬೈಕ್‌ ಟೂರ್ನಿಯಲ್ಲಿ ಚಿನ್ನ ಹಾಗೂ ಕಂಚಿನ ಪದಕ ಜಯಿಸಿದ್ದರು. ರಾಷ್ಟ್ರೀಯ ಟೂರ್ನಿಗಳಲ್ಲಿ ಇದುವರೆಗೂ ಒಟ್ಟು 20ಕ್ಕೂ ಹೆಚ್ಚು ಪದಕಗಳನ್ನು ಸಂಪಾದಿಸಿದ್ದಾರೆ.

ವಿಶೇಷ ಸಾಧನೆಗೆ ಗೌರವ

ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಟಕ್ಕಳಕಿ ಗ್ರಾಮದ ರಾಜು ಭಾಟಿ 2018ರಲ್ಲಿ ಮೊದಲ ಬಾರಿಗೆ ಎಷ್ಯನ್‌ ಕ್ರೀಡಾಕೂಟಕ್ಕೆ ಅರ್ಹತೆ ‌ಗಳಿಸಿದ್ದರು. ಈ ಸಾಧನೆ ಮಾಡಿದ ರಾಜ್ಯದ ಎರಡನೇ ಸೈಕ್ಲಿಸ್ಟ್‌ ಎನ್ನುವ ಹೆಗ್ಗಳಿಕೆಗೂ ಪಾತ್ರರಾಗಿದ್ದರು. 1982ರಲ್ಲಿ ನವದೆಹಲಿಯಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿ ಚಂದ್ರಪ್ಪ ಮಲ್ಲಪ್ಪ ಕುರಣಿ ಅರ್ಹತೆ ಪಡೆದುಕೊಂಡಿದ್ದರು. ಅವರ ಬಳಿಕ ಯಾರೂ ಈ ಸಾಧನೆ ಮಾಡಿರಲಿಲ್ಲ.

ದೆಹಲಿಯಲ್ಲಿ 2017ರಲ್ಲಿ ನಡೆದ ಏಷ್ಯಾ ಕಪ್‌ ಟೂರ್ನಿಯ ವೈಯಕ್ತಿಕ ಪರ್ಸ್ಯೂಟ್‌ ವಿಭಾಗದಲ್ಲಿ ಚಿನ್ನ, ತಂಡ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡ ಅವರಿಗೆ ತಾಯಿ ಸರೋಜಾ, ಅಜ್ಜ ಕಲ್ಲಪ್ಪ, ಸಂಬಂಧಿ ಬಸವರಾಜ ಮತ್ತು ರೈಲ್ವೆ ಕೋಚ್‌ ವಿಜಯಸಿಂಗ್‌ ರಜಪೂತ್‌ ಸೈಕ್ಲಿಂಗ್‌ ತರಬೇತಿಗೆ ನೆರವಾದರು.

ವಿಶೇಷವೆಂದರೆ ಈ ಸಲದ ಏಕಲವ್ಯ ಪ್ರಶಸ್ತಿ ಪಡೆದ ಮೂವರೂ ಸೈಕ್ಲಿಸ್ಟ್‌ಗಳು ನೈರುತ್ಯ ರೈಲ್ವೆಯ ಉದ್ಯೋಗಿಗಳು. ವೆಂಕಪ್ಪ ಮತ್ತು ರಾಜು ಬಾಟಿ ಹುಬ್ಬಳ್ಳಿ ವಿಭಾಗದಲ್ಲಿ ಟಿಕೆಟ್ ಪರೀಕ್ಷಕರಾಗಿದ್ದಾರೆ. ಇದೇ ಕಚೇರಿಯಲ್ಲಿ ಮೇಘಾ ಗೂಗಾಡ ಜೂನಿಯರ್‌ ಕ್ಲರ್ಕ್‌ ಆಗಿ ಕೆಲಸ ಮಾಡುತ್ತಿದ್ದಾರೆ.

ಹೀಗೆ ಹವ್ಯಾಸಕ್ಕಾಗಿ ಸೈಕ್ಲಿಂಗ್‌ ಆರಂಭಿಸುವ ಅನೇಕ ಕ್ರೀಡಾಪಟುಗಳು ಮುಂದೊಂದು ದಿನ ಇದೇ ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡುತ್ತಾರೆ. ಈಗಿರುವ ತರಬೇತಿ, ಆಸಕ್ತಿ ಮುಂದುವರಿದರೆ ಕರ್ನಾಟಕ ಮತ್ತು ಭಾರತ ತಂಡದಲ್ಲಿ ಈ ಎರಡೂ ಜಿಲ್ಲೆಗಳ ಸೈಕ್ಲಿಸ್ಟ್‌ಗಳದ್ದೇ ಪಾರುಪತ್ಯ ಇರುವುದರಲ್ಲಿ ಅನುಮಾನವೇನಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು