ಶುಕ್ರವಾರ, ಸೆಪ್ಟೆಂಬರ್ 17, 2021
22 °C

ಬೆಂಗಳೂರಿನಲ್ಲಿ ನಿಗದಿಯಾಗಿದ್ದ ಬ್ಯಾಡ್ಮಿಂಟನ್‌ ಟೂರ್ನಿ ಮುಂದಕ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬೆಂಗಳೂರಿನಲ್ಲಿ ನಿಗದಿಯಾಗಿದ್ದ ಪುರುಷರ ಮತ್ತು ಮಹಿಳೆಯರ ಸೀನಿಯರ್‌ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿಯನ್ನು ಕೋವಿಡ್‌ನಿಂದಾಗಿ ಮುಂದೂಡಲಾಗಿದೆ.

ಭಾರತ ಬ್ಯಾಡ್ಮಿಂಟನ್‌ ಸಂಸ್ಥೆ (ಬಿಎಐ) ಸೋಮವಾರ ಈ ವಿಷಯ ಪ್ರಕಟಿಸಿದೆ. ಈ ಋತುವಿನ ಮೊದಲ ಟೂರ್ನಿಯಾಗಿದ್ದ ಇದು ಆಗಸ್ಟ್‌ 27ರಿಂದ ಸೆಪ್ಟೆಂಬರ್‌ 3ರವರೆಗೆ ನಡೆಯಬೇಕಿತ್ತು.

‘ಕರ್ನಾಟಕ ಸರ್ಕಾರವು ಟೂರ್ನಿ ಆಯೋಜಿಸಲು ಅನುಮತಿ ನಿರಾಕರಿಸಿದೆ. ಹೀಗಾಗಿ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ತೀರ್ಮಾನಿಸಿದ್ದೇವೆ’ ಎಂದು ಬಿಎಐ ಮಹಾ ಕಾರ್ಯದರ್ಶಿ ಅಜಯ್‌ ಸಿಂಘಾನಿಯಾ ತಿಳಿಸಿದ್ದಾರೆ.

ಏಪ್ರಿಲ್‌ನಲ್ಲೇ ಈ ಋತುವಿನ ಬ್ಯಾಡ್ಮಿಂಟನ್‌ ಟೂರ್ನಿಗಳನ್ನು ನಡೆಸಲು ಬಿಎಐ ನಿರ್ಧರಿಸಿತ್ತು. ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಬಿಟ್ಟಿತ್ತು.

‘ಕೇರಳದಲ್ಲಿ ಕೋವಿಡ್‌ ಪ್ರಕರಣಗಳು ಏರುತ್ತಲೇ ಇವೆ. ಬೆಂಗಳೂರಿನಲ್ಲೂ ಸೋಂಕಿತರ ಪ್ರಮಾಣ ತಗ್ಗಿಲ್ಲ. ಹೀಗಾಗಿ ಸ್ಥಳೀಯ ಆಡಳಿತವು ವಾರಾಂತ್ಯ ಕರ್ಫ್ಯೂ ಕೂಡ ಜಾರಿ ಮಾಡಿದೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ಟೂರ್ನಿ ಆಯೋಜನೆಗೆ ಅನುಮತಿ ಕೊಟ್ಟಿಲ್ಲ’ ಎಂದು ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆಯ (ಕೆಬಿಎ) ಕಾರ್ಯದರ್ಶಿ ಪಿ.ರಾಜೇಶ್‌ ಹೇಳಿದ್ದಾರೆ.

‘2,000ಕ್ಕೂ ಅಧಿಕ ಕ್ರೀಡಾಪಟುಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲು ಹೆಸರು ನೋಂದಾಯಿಸಿದ್ದರು. ಇದರಲ್ಲಿ 18 ವರ್ಷದೊಳಗಿನವರೂ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಮೂರನೇ ಅಲೆಯ ವೇಳೆ ಮಕ್ಕಳಿಗೆ ಹೆಚ್ಚು ಅಪಾಯ ಎಂದು ತಜ್ಞರು ಎಚ್ಚರಿಸಿದ್ದಾರೆ’ ಎಂದೂ ಅವರು ತಿಳಿಸಿದರು.

ಟೂರ್ನಿ ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದ ಬಿಎಐ, ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳುವಂತೆ 18 ವರ್ಷ ಮೇಲ್ಪಟ್ಟ ಕ್ರೀಡಾಪಟುಗಳು, ಕೋಚ್‌ಗಳು, ತಾಂತ್ರಿಕ ಸಿಬ್ಬಂದಿ, ಸಂಘಟನಾ ಸಮಿತಿಯ ಸದಸ್ಯರಿಗೆ ಸೂಚಿಸಿತ್ತು. ಕೋವಿಡ್‌ನಿಂದಾಗಿ ಹಿಂದಿನ ಒಂದೂವರೆ ವರ್ಷದಿಂದ ಬ್ಯಾಡ್ಮಿಂಟನ್‌ ಟೂರ್ನಿಗಳು ಆಯೋಜನೆಯಾಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು