ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿನ ಹಾದಿಗೆ ತಳ್ಳುವ ‘ಜಿಮ್‌’ಗಳು..!

Last Updated 31 ಆಗಸ್ಟ್ 2019, 20:35 IST
ಅಕ್ಷರ ಗಾತ್ರ

ಬೆಂಗಳೂರು: ‌ನನ್ನ ಬಳಿ ಒಬ್ಬ ಯುವ ಬಾಡಿಬಿಲ್ಡರ್‌ ಬಂದಿದ್ದ. ‘ಡಾಕ್ಟ್ರೇ ನಾನು ಗೂಳಿಯಂತೆ ಆಗಬೇಕು. ಅದಕ್ಕಾಗಿ ಈ ಇಂಜೆಕ್ಷನ್ ಮಾಡಿ’ ಎಂದು ವೆಟರ್ನರಿ (ಪಶುಗಳಿಗೆ ನೀಡುವ) ಮದ್ದಿನ ಬಾಟಲ್ ಮುಂದಿಟ್ಟ. ಅದಕ್ಕೆ ನಾನು ಇದನ್ನ ಕೊಡ್ತೇನಿ. ಆದ್ರ ಅದಕ್ಕಿಂತ ಮೊದ್ಲು ಒಂದು ಬುಟ್ಟಿ ಒಣಹುಲ್ಲು, ಹಿಂಡಿ ತಿನ್ನಬೇಕು. ತರ್ಸಲೇನು? ಅಂತ ಕೇಳಿದೆ. ಆತ ಕಕ್ಕಾಬಿಕ್ಕಿಯಾಗಿ ಯಾಕ್ರೀ? ಅಂದ. ಅದಕ್‌ ನಾನು ‘ಗೂಳಿ, ದನಾ ಎಲ್ಲಾ ಅದನ್ನ ತಿಂತಾವ್. ನೀ ತಿಂತಿಯೇನೂ. ಈ ಇಂಜೆಕ್ಷನ್ ತೊಗೊಂಡ್ರ ಏನ್‌ ಗತಿ ಆಕೇತಿ ನಿಂದು’ ಎಂದು ಕ್ಲಾಸ್‌ ತೆಗೆದುಕೊಂಡು ಕಳಿಸಿದೆ.

ಕ್ರೀಡಾ ವೈದ್ಯನಾಗಿ ಪ್ರಾಕ್ಟಿಸ್ ಮಾಡಲು ಶುರು ಮಾಡಿದ ಮೇಲೆ ಇಂತಹ ಬಹಳಷ್ಟು ಪ್ರಕರಣಗಳನ್ನು ನೋಡಿದ್ದೇನೆ. ಈಗಂತೂ ಗೂಗಲ್‌ನಲ್ಲಿ ಸರ್ಚ್‌ ಮಾಡಿ ಔಷಧಿ, ಪೌಡರ್‌ ತೊಗೊಂಡು ಬರ್ತಾರೆ. ಬಹಳಷ್ಟು ಮಂದಿಗೆ ತಿಳಿವಳಿಕೆ ಹೇಳಿ ಕಳಿಸ್ತೀನಿ. ಆದರೆ ಅದರಲ್ಲಿ ಎಷ್ಟೋ ಜನ ಪಾಲಿಸುವುದಿಲ್ಲ. ಎಲ್ಲ ಕೆಟ್ಟ ಮೇಲೆ ಮತ್ತ ಬರ್ತಾರ. ಸ್ಟೆರಾಯ್ಡ್‌ ದಂಧೆಯಲ್ಲಿ ಕೋಚ್‌ಗಳು ಮತ್ತ ಜಿಮ್ ಮಾಲೀಕರಷ್ಟೇ ತಪ್ಪಿತಸ್ಥರಲ್ಲ. ಆಟಗಾರರೂ ಅಪರಾಧಿಗಳೇ. ಅವರಿಗೆ ಗೊತ್ತಿಲ್ಲದೇ ಏನೂ ನಡೆಯುವುದಿಲ್ಲ. ಸಿಕ್ಕಿಬಿದ್ದಾಗ ಮಾತ್ರ ತಾವಲ್ಲ ಎಂದು ಹೇಳುತ್ತಾರೆ. ಅದೂ ಇವತ್ತಿನ ಕಾಲದಲ್ಲಿ ಯಾವ ಔಷಧಿ ತೊಗೊಬೇಕು, ತೊಗೊಬಾರದು ಎಂಬುದು ಇಂಟರ್‌ನೆಟ್‌ನಲ್ಲಿ ಸಿಗುತ್ತದೆ. ವೈದ್ಯರು, ತಜ್ಞರು ಇದ್ದಾರೆ. ಅವರಿಂದ್ಲೂ ತಿಳಿದುಕೊಳ್ಳಬಹುದು. ಆದರೆ, ಸಾಧನೆ, ಕೀರ್ತಿ ಮತ್ತು ಹಣದ ವ್ಯಾಮೋಹ ದಾರಿ ತಪ್ಪಿಸುತ್ತಿವೆ.

ಆದರೆ, ನಾವು ಆಟಗಾರರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಯಾವುದೇ ಒಬ್ಬ ಕ್ರೀಡಾಪಟು ಹೆಚ್ಚೆಂದರೆ ತನ್ನ ಜೀವನದ ಅಲ್ಪಭಾಗ ಮಾತ್ರ ಸಾಧನೆಯ ಶಿಖರದಲ್ಲಿರುತ್ತಾನೆ. ಉಳಿದ ಆಯುಷ್ಯವನ್ನು ಆರೋಗ್ಯವಂತನಾಗಿ ಕಳೆಯಬೇಕು. ಆತನ ತಂದೆ, ತಾಯಿ, ಹೆಂಡತಿ, ಮಕ್ಕಳು ಮತ್ತು ಕುಟುಂಬದ ದೇಖರೇಕಿ ಮಾಡಬೇಕು. ಉದ್ದೀಪನ ಮದ್ದು ಸೇವಿಸಿ 25–30ರ ವಯಸ್ಸಿನಲ್ಲಿ ದೊಡ್ಡ ಕ್ರೀಡಾಪಟು ಎನಿಸಿಕೊಳ್ಳಬಹುದು. ಸಿಕ್ಕಿಬಿದ್ದರೆ ತನ್ನ ದೇಶ, ರಾಜ್ಯ ಮತ್ತು ಕುಟುಂಬದ ಹೆಸರು ಹಾಳಾಗುತ್ತದೆ. ತನ್ನ ಭವಿಷ್ಯವೂ ಹಾಳಾಗಿ ಹೋಗುತ್ತದೆ. ಅದಲ್ಲದೇ ಉಳಿದ ಆಯುಷ್ಯದಲ್ಲಿ ಹಲವಾರು ಸಮಸ್ಯೆಗಳಿಗೆ ತುತ್ತಾಗುತ್ತಾನೆ ಎಂಬುದನ್ನು ಅರಿಯಬೇಕು.

ಟ್ರೆಂಬೊಲೊನ್ ಒಂದು ಅನಾಬೊಲಿಕ್ ಸ್ಟೆರಾಯ್ಡ್‌. ಇದನ್ನು ದನದ ಮಾಂಸದ ಉತ್ಪಾದನೆಯ ಪ್ರಕ್ರಿಯೆಯ ಕೊನೆಯ ಘಟ್ಟದಲ್ಲಿ ಬಳಸಲಾಗುತ್ತದೆ. ಮಾಂಸದ ಬೆಳವಣಿಗೆ ಮತ್ತು ಸೇವನೆಯ ಸಾಮರ್ಥ್ಯ ವೃದ್ದಿಸಲು ಬಳಸಲಾಗುತ್ತದೆ. ಇದನ್ನು 35 ವರ್ಷದ ವ್ಯಕ್ತಿಯೊಬ್ಬ ಬಳಸಿದ್ದ. ಆದರೆ ಕುಳಿತುಕೊಳ್ಳುವಾಗ ನಿತಂಬಗಳಲ್ಲಿ ನೋವಾಗುತ್ತಿತ್ತು. ಆದ್ದರಿಂದ ವೈದ್ಯರ ಬಳಿ ಹೋದ. ಆ ಜಾಗದಲ್ಲಿ ದೊಡ್ಡ ಗಾಯಗಳಾಗಿದ್ದವು. ಪ್ಲಾಸ್ಟಿಕ್ ಸರ್ಜರಿಗೆ ಒಳಪಡಿಸಬೇಕಾಯಿತು ಎಂದು ಪಿಆರ್‌ಎಸ್‌ ಜರ್ನಲ್‌ನಲ್ಲಿ ವರದಿಯಾಗಿದೆ.
(ಲೇಖಕರು ಕ್ರೀಡಾ ವೈದ್ಯರು, ಬಿಸಿಸಿಐ, ಎಎಫ್‌ಸಿಯಲ್ಲಿ ಉದ್ದೀಪನ ಮದ್ದು ನಿಯಂತ್ರಣ ಅಧಿಕಾರಿ)

***
ಮನೆ ಊಟವೇ ಶ್ರೇಷ್ಠ ‘ಮದ್ದು’‌
ನಮ್ಮ ನಮ್ಮ ಮನೆಗಳಲ್ಲಿ ಲಭ್ಯವಿರುವ ಊಟವೇ ಶ್ರೇಷ್ಠ. ಅದನ್ನು ತಿಂದು ದೊಡ್ಡ ದೇಹದಾರ್ಢ್ಯಪಟು ಆಗಬಹುದು ಎನ್ನುವುದು ನನ್ನ ಸ್ವಾನುಭವ. ಪ್ರೊಟೀನ್ ಪೌಡರ್, ಡ್ರಿಂಕ್ಸ್‌, ಸ್ಟೆರಾಯ್ಡ್‌ ಇಂಜೆಕ್ಷನ್‌ಗಳ ವಿರುದ್ಧ ಎರಡು ದಶಕಗಳಿಂದ ಜಾಗೃತಿ ಮೂಡಿಸುತ್ತಿದ್ದೇನೆ. ನ್ಯಾಚುರಲ್ ಬಾಡಿಬಿಲ್ಡಿಂಗ್‌ (ಸಹಜ ವ್ಯಾಯಾಮ, ಅಂಗಸೌಷ್ಠವ) ಪದ್ಧತಿಗೆ ಒತ್ತು ನೀಡುತ್ತಿದ್ದೇನೆ. ಅಮೆರಿಕ, ಯುರೋಪ್‌ಗಳಲ್ಲಿ ಕೂಡ ಈಗ ಈ ಮದ್ದು, ಪೌಡರ್‌ಗಳನ್ನು ಬಳಸುವುದು ಕಮ್ಮಿಯಾಗಿದೆ. ನ್ಯಾಚುರಲ್ ದಾರಿಗೆ ಮರಳುತ್ತಿದ್ದಾರೆ. ಅಮೆರಿಕ ಮತ್ತು ಫಿಲಿಪೀನ್ಸ್‌ನಲ್ಲಿ ಈಚೆಗೆ ನಡೆದಿದ್ದ ನ್ಯಾಚುರಲ್ ಬಾಡಿಬಿಲ್ಡಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೆ. ಕಟ್ಟುನಿಟ್ಟಾದ ತಪಾಸಣೆ ಮಾಡಿ ಅವಕಾಶ ಕೊಡುತ್ತಾರೆ.
ಕ್ರಮವಾಗಿ ನಾಲ್ಕು ಮತ್ತು ಹನ್ನೊಂದನೆ ಸ್ಥಾನ ಪಡೆದೆ. ಆರೋಗ್ಯಯುತ ಜೀವನಶೈಲಿ ಮತ್ತು ದೇಹದ ಒಡೆಯ ನಾನು ಎಂಬ ಹೆಮ್ಮೆ ಮೂಡಿತು. ಆದರೆ ಅಲ್ಲಿ ಬೇಡವಾದ ಅನಿಷ್ಟ ಔಷಧಿಗಳು ಭಾರತಕ್ಕೆ ಏಕೆ ಬೇಕು? ಇದೀಗ ಫಿಟ್‌ ಇಂಡಿಯಾ ಆರಂಭವಾಗಿದೆ. ಶೋಕಿಗಾಗಿ ವ್ಯಾಯಾಮ ಮಾಡದೇ ಆರೋಗ್ಯಕ್ಕಾಗಿ ವ್ಯಾಯಾಮ, ಆಹಾರ ಪದ್ಧತಿ ರೂಡಿಸಿಕೊಳ್ಳಬೇಕು.

ನಮ್ಮ ಊರು, ಕುಟುಂಬದಲ್ಲಿ ತಲೆತಲಾಂತರಗಳಿಂದ ರೂಢಿಯಲ್ಲಿರುವ ಆಹಾರ ಪದ್ಧತಿಯೇ ಶ್ರೇಷ್ಠ. ಮಾಡರ್ನ್ ತಿಂಡಿ ತಿನಿಸುಗಳಲ್ಲ. ಜಿಮ್‌ಗಳಲ್ಲಿ ಯಾರಾದರೂ ನಿಮಗೆ ಪುಡಿ, ಔಷಧಿಗಳನ್ನು ಕೊಡಲು ಬಂದರೆ ಜಾಗೃತರಾಗಿ. ಈಗಿನ ದಿನಗಳಲ್ಲಿ ಅರ್ಹತೆ, ವಿದ್ಯಾಭ್ಯಾಸಗಳಿಲ್ಲದವರೇ ಟ್ರೇನರ್‌ಗಳಾಗುತ್ತಿದ್ದಾರೆ. ದುಡ್ಡು ಗಳಿಸಲು ವಾಮಮಾರ್ಗ ಹಿಡಿಯುತ್ತಿದ್ದಾರೆ. ನಿಮಗೆ ನಿಜಕ್ಕೂ ಔಷಧಿಗಳನ್ನು ಕೊಡುವವರು ವೈದ್ಯರು ಮಾತ್ರ. ಜಾಗೃತಿಯೊಂದೇ ಜೀವನ ಉಳಿಸಬಲ್ಲುದು.
–ಎ.ವಿ. ರವಿ, (ದೇಹದಾರ್ಢ್ಯಪಟು, ಟ್ರೇನರ್, ಸಿನಿಮಾ ನಟ)


**
ಸರ್ಕಾರ ಕ್ರಮ ಕೈಗೊಳ್ಳಲಿ

ಇದು ವ್ಯಾಪಕವಾಗಿ ಹರಡಿಕೊಂಡಿರುವ ಮಾಫಿಯಾ. ಇದರಲ್ಲಿ ದೇಹದಾರ್ಢ್ಯಪಟುಗಳು, ಟ್ರೇನರ್‌ಗಳು, ಸಂಘಟನೆಗಳು, ವ್ಯಾಪಾರಸ್ಥರು ಎಲ್ಲರೂ ಇದ್ದಾರೆ. ಆದರೆ, ಸರ್ಕಾರ ಇದರತ್ತ ಲಕ್ಷ್ಯವನ್ನೇ ವಹಿಸುತ್ತಿಲ್ಲ. ವ್ಯಾಯಾಮ, ಕ್ರೀಡೆಗಳ ಮೂಲ ಉದ್ದೇಶ ಆರೋಗ್ಯವರ್ಧನೆ, ಮನೋಲ್ಲಾಸಗಳನ್ನು ನೀಡುವುದೇ ಆಗಿದೆ. ಆದರೆ, ಅಲ್ಪಕಾಲದ ಯಶಸ್ಸು, ಹಣಗಳಿಕೆ, ಖ್ಯಾತಿ ಮತ್ತಿತರ ಆಮೀಷಗಳಿಗೆ ಯುವಕರು ಬಲಿಯಾಗುತ್ತಿದ್ದಾರೆ. ಸಹಜ ಅಥವಾ ನೈಸರ್ಗಿಕವಾದ ಮಾದರಿಯಲ್ಲಿ ದೇಹ ಕಟ್ಟುವುದೇ ಲೇಸು. ಅದು ಜೀವನವನ್ನು ಸುಂದರವಾಗಿಸುತ್ತದೆ. ಉದ್ದೀಪನ ಮದ್ದು, ಮಾರಕ ಪೌಡರ್‌ಗಳು ದೇಹ ಮತ್ತು ಜೀವನವನ್ನು ಹಾಳು ಮಾಡುತ್ತವೆ. ನಮ್ಮ ಜಿಮ್‌ನಲ್ಲಿ ಈಗ ದೇಹದಾರ್ಢ್ಯಪಟುಗಳ ತರಬೇತಿಯನ್ನು ಕಡಿತ ಮಾಡಿದ್ದೇವೆ. ಕೇವಲ ಫಿಟ್‌ನೆಸ್‌ ಮತ್ತು ಆರೋಗ್ಯವರ್ಧಕ ವ್ಯಾಯಾಮ ತರಬೇತಿ ಮಾತ್ರ ನೀಡುತ್ತಿದ್ದೇವೆ. ನಮ್ಮಲ್ಲಿ ಹಿಂದಿದ್ದ ಹಳೆಯ ಶೈಲಿಯ ವ್ಯಾಯಾಮಗಳೇ ಶ್ರೇಷ್ಠ. ಜೀವನಪೂರ್ತಿ ಆರೋಗ್ಯ ರಕ್ಷಿಸುತ್ತವೆ. ಪಾಲಕರು ಕೂಡ ಜಾಗೃತರಾಗಿರಬೇಕು. ಸರ್ಕಾರಗಳು ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.

–ಶಿವಕುಮಾರ್ ಶಿಂಧೆ, ಹಿರಿಯ ತರಬೇತುದಾರ, ರೆಡ್‌ಫ್ಲೇಮ್‌ ಜಿಮ್, ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT