ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಸರ್ಫಿಂಗ್, ಕ್ಲೈಂಬಿಂಗ್ ರೋಮಾಂಚನ; ಕರಾಟೆಯ ‘ಕಿಕ್‌’

Last Updated 18 ಜುಲೈ 2021, 14:12 IST
ಅಕ್ಷರ ಗಾತ್ರ

ಕೋವಿಡ್‌ನಿಂದಾಗಿ ಮುಂದೂಡಲಾದ ಟೋಕಿಯೊ ಒಲಿಂಪಿಕ್ಸ್‌ ಆರಂಭಕ್ಕೆ ಇನ್ನು ಐದೇ ದಿನ ಬಾಕಿ. ವೈರಸ್ ಆತಂಕದ ನಡುವೆಯೂ ಕುತೂಹಲ ಮೂಡಿಸಿರುವ ಕ್ರೀಡಾಕೂಟದಲ್ಲಿ ಮೊದಲ ಬಾರಿ ಪಾಲ್ಗೊಳ್ಳುವವರ ಪಟ್ಟಿ ದೊಡ್ಡದಿದೆ. ಇದೇ ವೇಳೆ ಈ ಬಾರಿ ನಾಲ್ಕು ಕ್ರೀಡೆಗಳು ಕೂಡ ವಿಶ್ವದ ‘ಮಹಾಕೂಟ’ಕ್ಕೆ ಪದಾರ್ಪಣೆ ಮಾಡಲು ಸಿದ್ಧವಾಗುತ್ತಿವೆ. ಕರಾಟೆ, ಸರ್ಫಿಂಗ್, ಸ್ಕೇಟ್ ಬೋರ್ಡಿಂಗ್‌ ಮತ್ತು ಸ್ಪೋರ್ಟ್ ಕ್ಲೈಂಬಿಂಗ್‌ ಸ್ಪರ್ಧೆಗಳು ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಳ್ಳಲಿವೆ.

ಈ ಪೈಕಿ ಕರಾಟೆ ತನ್ನ ‘ತವರಿನಲ್ಲೇ’ ಒಲಿಂಪಿಕ್ಸ್‌ನಲ್ಲಿ ಸೇರಿಕೊಳ್ಳಲು ಸಜ್ಜಾಗಿದೆ. ಸಮರಕಲೆಯಾದ ಕರಾಟೆ ಆರಂಭಗೊಂಡದ್ದು ಜಪಾನ್‌ನ ಒಕಿನಾವದಲ್ಲಿ. 1920ರ ಸಂದರ್ಭದಲ್ಲಿ ಜಪಾನ್‌ನಾದ್ಯಂತ ಹೆಸರು ಗಳಿಸಿದ ಇದು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ವಿಶ್ವಕ್ಕೆ ತಲುಪಿತು.

ಪ್ರತಿರೋಧ, ಕಿಕ್‌ ಮತ್ತು ಪಂಚಿಂಗ್‌ನಿಂದಾಗಿ ಆತ್ಮರಕ್ಷಣೆಗೆ ಅತ್ಯಂತ ಉತ್ತಮ ‘ಕಲೆ’ ಎಂಬ ಹೆಸರನ್ನೂ ಗಳಿಸಿರುವ ಈ ಕ್ರೀಡೆಯನ್ನು ಒಲಿಂಪಿಕ್ಸ್‌ನಲ್ಲಿ ಸೇರಿಸಲು 1970ರಿಂದಲೇ ಪ್ರಯತ್ನಗಳು ನಡೆದಿವೆ. ಜಪಾನ್‌ನ ಅಧ್ಯಾತ್ಮ ತಾಣವಾದ ನಿಪೋನ್ ಬುಡೋಕನ್‌ನಲ್ಲಿ ಕಟಾ ಮತ್ತು ಕುಮಿಟೆ ಮಾದರಿಗಳಲ್ಲಿ ಪದಕಗಳಿಗಾಗಿ ಸ್ಪರ್ಧಿಗಳು ಪೈಪೋಟಿ ನಡೆಸುವರು. ಕಟಾ ಏಕವ್ಯಕ್ತಿ ‘ಪ್ರದರ್ಶನ’. ಏಳು ವಿಭಾಗಗಳಲ್ಲಿ ತೋರುವ ಸಾಮರ್ಥ್ಯಕ್ಕೆ ತಕ್ಕಂತೆ ‘ಕರಾಟೆಕ’ಗಳಿಗೆ ಪಾಯಿಂಟ್ ನೀಡಲಾಗುತ್ತದೆ. ಕುಮಿಟೆಯಲ್ಲಿ ಇಬ್ಬರು ಮುಖಾಮುಖಿಯಾಗುತ್ತಾರೆ. ಪಂದ್ಯದ ಅವಧಿ ಮೂರು ನಿಮಿಷ. ಕರಾಟೆಯ ಕೆಲವು ಅಂಶಗಳನ್ನು ಹೊಂದಿರುವ ಟೇಕ್ವಾಂಡೊ ಮತ್ತು ಜೂಡೊ ಈಗಾಗಲೇ ಒಲಿಂಪಿಕ್ಸ್‌ನಲ್ಲಿ ಸೇರ್ಪಡೆಯಾಗಿವೆ.

ಎತ್ತರೆತ್ತರಕ್ಕೆ...ಕ್ಲೈಂಬಿಂಗ್‌

ವಾಲ್ ಕ್ಲೈಂಬಿಂಗ್ ಎಂದೂ ಕರೆಯಲಾಗುವ ಸ್ಪೋರ್ಟ್ ಕ್ಲೈಂಬಿಂಗ್ ಕ್ರೀಡೆಯಲ್ಲಿ ಸ್ಪೀಡ್ ಕ್ಲೈಂಬಿಂಗ್‌, ಬುಲ್ಡರಿಂಗ್ ಮತ್ತು ಲೀಡ್ ಕ್ಲೈಂಬಿಂಗ್ ವಿಭಾಗಗಳು ಒಲಿಂಪಿಕ್ಸ್‌ನಲ್ಲಿ ಇರುತ್ತವೆ. ಸ್ಪೀಡ್ ಕ್ಲೈಂಬಿಂಗ್‌ನಲ್ಲಿ ಇಬ್ಬರು ಕ್ರೀಡಾಪಟುಗಳು ಹಗ್ಗ ಬಳಸಿಕೊಂಡು ಒಂದೇ ಸಮಯದಲ್ಲಿ 15 ಮೀಟರ್ ಎತ್ತರದ ಗೋಡೆ ಹತ್ತುವರು.ಬುಲ್ಡರಿಂಗ್‌ನಲ್ಲಿ ಹಗ್ಗ ಇರುವುದಿಲ್ಲ. ನಾಲ್ಕು ಮೀಟರ್ ಎತ್ತರದ ಗೋಡೆಯಲ್ಲಿ ನಿಗದಿಪಡಿಸಿದ ದಾರಿಯಲ್ಲಿ ಹತ್ತಬೇಕು.ಲೀಡ್ ಕ್ಲೈಂಬಿಂಗ್‌ನಲ್ಲಿ 15 ಮೀಟರ್ ಎತ್ತರದ ಗೋಡೆ ಹತ್ತಬೇಕು. ಇದರಲ್ಲಿ ಸುರಕ್ಷತೆಗಾಗಿ ಮಾತ್ರ ಹಗ್ಗ ನೀಡಲಾಗುತ್ತದೆ.

ಸರ್ಫಿಂಗ್ ಸ್ಪರ್ಧೆಗೆ ಸಜ್ಜುಗೊಂಡಿರುವ ಸುರಿಗಸಾಕಿ ಕಡಲ ಕಿನಾರೆ –ರಾಯಿಟರ್ಸ್ ಚಿತ್ರ
ಸರ್ಫಿಂಗ್ ಸ್ಪರ್ಧೆಗೆ ಸಜ್ಜುಗೊಂಡಿರುವ ಸುರಿಗಸಾಕಿ ಕಡಲ ಕಿನಾರೆ –ರಾಯಿಟರ್ಸ್ ಚಿತ್ರ

ಚಕ್ರಗಳ ಮೇಲೆ ಮರದ ಅಥವಾ ತಗಡಿನ ಹಾಳೆ ಇರಿಸಿ ರಸ್ತೆಗಳಲ್ಲಿ ಸುಮ್ಮನೇ ಓಡಾಡುವುದನ್ನು ಸಾಮಾನ್ಯವಾಗಿ ಕಾಣುತ್ತೇವೆ. ಇದುವೇ ಸ್ಕೇಟ್‌ಬೋರ್ಡಿಂಗ್. ಬಳಸುವ ತಂತ್ರಗಳು, ವೇಗ, ತೋರುವ ಸೊಗಸು ಮತ್ತು ಜಿಗಿಯುವ ಎತ್ತರದ ಆಧಾರದಲ್ಲಿ ಕ್ರೀಡಾಪಟುಗಳಿಗೆ ಪಾಯಿಂಟ್ ನೀಡಲಾಗುತ್ತದೆ.

1940ರಲ್ಲಿ ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ ಆರಂಭಗೊಂಡ ಈ ಕ್ರೀಡೆಯಲ್ಲಿ ಆರಂಭದಲ್ಲಿ ಲೋಹದ ಚಕ್ರಗಳ ಮೇಲೆ ಕಟ್ಟಿಗೆಯ ಹಾಳೆ ಇರಿಸಿ ಆಡಲಾಗುತ್ತಿತ್ತು. 1950ರ ವೇಳೆ ಇದರಲ್ಲಿ ಅನೇಕ ಬದಲಾವಣೆಗಳು ಆದವು.

ಸರ್ಫಿಂಗ್‌

ಸಾಗರದಲ್ಲಿ ಅಡೆ–ತಡೆಗಳನ್ನು ದಾಟಿ ಮುನ್ನುಗ್ಗುವ ಆಟ ಸರ್ಫಿಂಗ್. 20ರಿಂದ 25 ನಿಮಿಷಗಳ ಕಾಲ ಕ್ರೀಡಾಪಟುಗಳು ತೋರುವ ಸಾಮರ್ಥ್ಯದ ಆಧಾರದಲ್ಲಿ ಪಾಯಿಂಟ್ ನೀಡಲಾಗುತ್ತದೆ. ಒಂದು ಅವಧಿಯಲ್ಲಿ ನಾಲ್ವರನ್ನು ಸಾಗರಕ್ಕೆ ಇಳಿಸಲಾಗುತ್ತದೆ. ಅಗ್ರ ಸ್ಥಾನ ಗಳಿಸುವ ಇಬ್ಬರಿಗೆ ಮುಂದಿನ ಹಂತಕ್ಕೆ ಬಡ್ತಿ ನೀಡಲಾಗುತ್ತದೆ.

ಸ್ಕೇಟ್‌ಬೋರ್ಡಿಂಗ್‌ ಸ್ಪರ್ಧೆಗೆ ಸಿದ್ಧಗೊಂಡಿರುವ ಅರಿಯಾಕಿ ಅರ್ಬನ್ ಸ್ಲೋರ್ಟ್ಸ್ ಪಾರ್ಕ್ –ರಾಯಿಟರ್ಸ್ ಚಿತ್ರ
ಸ್ಕೇಟ್‌ಬೋರ್ಡಿಂಗ್‌ ಸ್ಪರ್ಧೆಗೆ ಸಿದ್ಧಗೊಂಡಿರುವ ಅರಿಯಾಕಿ ಅರ್ಬನ್ ಸ್ಲೋರ್ಟ್ಸ್ ಪಾರ್ಕ್ –ರಾಯಿಟರ್ಸ್ ಚಿತ್ರ

ಒಲಿಂಪಿಕ್ಸ್‌ ಈಜಿನಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದಿರುವ ಡ್ಯೂಕ್ ಕಹನಮೊಕು ಅವರು ಸರ್ಫಿಂಗ್ ಕ್ರೀಡೆಯನ್ನು ಜನಪ್ರಿಯಗೊಳಿಸಿದವರು. ಅವರನ್ನು ಆಧುನಿಕ ಸರ್ಫೀಂಗ್‌ನ ಪಿತಾಮಹ ಎಂದೇ ಕರೆಯಲಾಗುತ್ತದೆ. ಲಾಂಗ್‌ಬೋರ್ಡ್ ಮತ್ತು ಶಾರ್ಟ್‌ಬೋರ್ಡ್ ಎಂಬ ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತದೆ.

ಬೇಸ್‌ಬಾಲ್ ಮತ್ತೆ ಮುನ್ನೆಲೆಗೆ

ಹಿಂದಿನ ಎರಡು ಆವೃತ್ತಿಗಳಲ್ಲಿ ಸ್ಥಾನ ಗಳಿಸದೇ ಇದ್ದ ಬೇಸ್ ಬಾಲ್‌ ಕ್ರೀಡೆ ಟೋಕಿಯೊದಲ್ಲಿ ಮತ್ತೆ ಕಾಣಿಸಿಕೊಳ್ಳಲಿದೆ. ಬ್ಯಾಸ್ಕೆಟ್‌ಬಾಲ್‌ನಲ್ಲಿ ತ್ರಿ ಎ ಸೈಡ್‌ ವಿಭಾಗದ ಸ್ಪರ್ಧೆಯನ್ನು ಈ ಬಾರಿ ಸೇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT