ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್‌ ಗುರುಕುಲದಿಂದ ‘ಆಕಾಶ’ದೆತ್ತರಕ್ಕೆ

Last Updated 12 ಜುಲೈ 2020, 19:30 IST
ಅಕ್ಷರ ಗಾತ್ರ

ಭಾರತದ ಚೆಸ್‌ಗೆ1987 ವಿಶೇಷ ವರ್ಷ. ತಮಿಳುನಾಡಿನ ವಿಶ್ವನಾಥನ್ ಆನಂದ್ ರೂಪದಲ್ಲಿ ದೇಶಕ್ಕೆ ಮೊದಲ ಗ್ರ್ಯಾಂಡ್‌ಮಾಸ್ಟರ್ ಸಿಕ್ಕಿದ್ದು ಆ ವರ್ಷ. ನಂತರ ದೇಶದಲ್ಲಿ ಚೆಸ್ ಬೆಳೆದ ಪರಿ ಅಮೋಘ. ಈಗ ಭಾರತ 66 ಗ್ರ್ಯಾಂಡ್‌ಮಾಸ್ಟರ್‌ಗಳನ್ನು ಹೊಂದಿದೆ. ಈ ಸಂಖ್ಯೆಯಲ್ಲಿ ಬಹುಪಾಲು ತಮಿಳುನಾಡಿನದು. 2015 ಮತ್ತು 2019ರಲ್ಲಿ ತಲಾ ಮೂವರು, 2006, 2013 ಮತ್ತು 2018ರಲ್ಲಿ ತಲಾ ಇಬ್ಬರು ಒಳಗೊಂಡಂತೆದೇಶಕ್ಕೆ ಒಟ್ಟು 23 ಜಿಎಂಗಳನ್ನು ಕೊಡುಗೆಯಾಗಿ ನೀಡಿದ ರಾಜ್ಯ ಅದು.ಆ ಪಟ್ಟಿಗೆ ಹೊಸ ಸೇರ್ಪಡೆ ಜಿ.ಆಕಾಶ್‌.

2012ರಲ್ಲಿ ಅತಿ ಕಿರಿಯ (16 ವರ್ಷ, 14 ದಿನ) ರಾಷ್ಟ್ರೀಯ ಚಾಂಪಿಯನ್‌ ಎಂಬ ದಾಖಲೆಗೆ ಒಡೆಯನಾದಾಗಲೇ ಆಕಾಶ್ ಮೇಲೆ ಭರವಸೆ ಮೂಡಿತ್ತು. ಮುಂದಿನ ವರ್ಷ ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್‌ನ ಜೂನಿಯರ್ ವಿಭಾಗದಲ್ಲಿ ಚಿನ್ನ ಗೆದ್ದು ಅದೇ ವರ್ಷ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಾಗ ನಿರೀಕ್ಷೆ ಇನ್ನೂ ಹೆಚ್ಚಾಯಿತು. ಆದರೆ ಮುಂದಿನ ವರ್ಷ ಅವರಿಗೆ ನಿರ್ಣಾಯಕವಾಗಿತ್ತು. ಶಿಕ್ಷಣ ಮತ್ತು ಚೆಸ್‌ನಲ್ಲಿ ಒಂದರ ಕಡೆಗೆ ಹೆಚ್ಚು ಒತ್ತುಕೊಡಬೇಕಾದ ಅನಿವಾರ್ಯ ಸ್ಥಿತಿ ಎದುರಾಯಿತು. ಎಂಜಿನಿಯರ್ ಆಗುವ ಬಯಕೆಯಿಂದಾಗಿ ನಾಲ್ಕು ವರ್ಷ ಚೆಸ್‌ ಬೋರ್ಡ್‌ನಿಂದ ದೂರ ಉಳಿಯಬೇಕಾಯಿತು.

ಬಿಡುವಿನ ನಂತರ ಕಣಕ್ಕೆ ಇಳಿದ ಆಕಾಶ್‌, ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಮೂಲಕವೇ ಮತ್ತೊಮ್ಮೆ ಸುದ್ದಿ ಆದರು. ಕಳೆದ ವರ್ಷದ ಕೊನೆಯಲ್ಲಿ ಸಿಕ್ಕಿಂನಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದು, ಮೂರನೇಗ್ರ್ಯಾಂಡ್‌ಮಾಸ್ಟರ್ ನಾರ್ಮ್ ಗಳಿಸಿದರು. ಆದರೆ ಗ್ರ್ಯಾಂಡ್‌ಮಾಸ್ಟರ್ ಪಟ್ಟಕ್ಕೆ ಬೇಕಾದ ಇಎಲ್‌ಒ ರೇಟಿಂಗ್ಸ್‌ ಅವರ ಬಳಿ ಇರಲಿಲ್ಲ. ಅದನ್ನು ಸಾಧಿಸಲು ಮತ್ತೂ ಐದು ಪ್ರಮುಖ ಟೂರ್ನಿಗಳನ್ನು ಆಡಬೇಕಾಯಿತು. ಮಾರ್ಚ್‌ನಲ್ಲಿ ಜರ್ಮನಿಯಲ್ಲಿ ನಡೆದ ಟೂರ್ನಿಯಲ್ಲಿ ನಾಲ್ಕನೇ ನಾರ್ಮ್‌ಕೂಡ ಅವರಿಗೆ ಲಭಿಸಿತು. ಜುಲೈ ಮೂರರಂದು ನಡೆದ ಫಿಡೆ ಸಮಿತಿ ಸಭೆಯಲ್ಲಿ ಅವರ ಗ್ರ್ಯಾಂಡ್‌ಮಾಸ್ಟರ್ ಪಟ್ಟವನ್ನು ಖಚಿತಪಡಿಸಲಾಯಿತು. ನಾಗಪುರದ ರೌನಕ್ ಸಾಧ್ವಾನಿಗೆ ಜಿಎಂ ಪಟ್ಟ ಲಭಿಸಿದ ಎಂಟು ತಿಂಗಳ ನಂತರ ಭಾರತಕ್ಕೆ ಮತ್ತೊಬ್ಬರು ಜಿಎಂ ಲಭಿಸಿದರು.

ಜಿಎಂಗಳಾದ ಆರ್‌.ಬಿ.ರಮೇಶ್–ಆರತಿ ರಾಮಸ್ವಾಮಿ ದಂಪತಿ ಚೆನ್ನೈನಲ್ಲಿ ನಡೆಸುತ್ತಿರುವ ಚೆಸ್ ಗುರುಕುಲದಲ್ಲಿ ಕಾಯಿಗಳನ್ನು ನಡೆಸಲು ಕಲಿತ ಆಕಾಶ್ 17 ವರ್ಷದೊಳಗಿನವರ ವಿಭಾಗದಲ್ಲೇ ಗಮನಾರ್ಹ ಸಾಧನೆ ಮಾಡುತ್ತ ಮುನ್ನಡೆದಿದ್ದರು.

ಸ್ಟ್ಯಾಂಡರ್ಡ್ ವಿಭಾಗದಲ್ಲಿ 2495 ರೇಟಿಂಗ್ ಹೊಂದಿರುವ ಅವರು ರ‍್ಯಾಪಿಡ್‌ನಲ್ಲಿ 2393 ಮತ್ತು ಬ್ಲಿಟ್ಜ್‌ನಲ್ಲಿ 2359 ರೇಟಿಂಗ್ ಗಳಿಸಿದ್ದಾರೆ.ರ್‍ಯಾಪಿಡ್‌‌ನಲ್ಲಿ 2019ರ ಮಾರ್ಚ್‌ನಲ್ಲಿ 10 ಪಂದ್ಯ ಆಡಿ ಮುಗಿಸಿದಾಗ ಈ ರೇಟಿಂಗ್ ಗಳಿಸಿದ್ದರು. ಈಗಲೂ ಅದು ಮುಂದುವರಿದಿದೆ. ಬ್ಲಿಟ್ಜ್‌ನಲ್ಲಿ 2019ರ ಫೆಬ್ರುವರಿಯಲ್ಲಿ 13 ಪಂದ್ಯಗಳನ್ನು ಆಡಿ ಮುಗಿಸಿದಾಗ 2308 ರೇಟಿಂಗ್ ಪಾಯಿಂಟ್ಸ್ ಹೊಂದಿದ್ದ ಅವರು ಸೆಪ್ಟೆಂಬರ್‌ನಲ್ಲಿ 31 ಪಂದ್ಯಗಳನ್ನು ಆಡಿದ್ದು ರೇಟಿಂಗ್ ಪಾಯಿಂಟ್ಸ್‌ 2359ಕ್ಕೆ ಏರಿವೆ. ಈಗಲೂಅದೇಪಾಯಿಂಟ್ಸ್ ಮುಂದುವರಿದಿವೆ.

ಗ್ರ್ಯಾಂಡ್‌ಮಾಸ್ಟರ್ ಜಿ. ಆಕಾಶ್

ವಿಶ್ವ ರ್‍ಯಾಂಕ್ 1028

ಏಷ್ಯಾ ರ್‍ಯಾಂಕ್ 137

ರಾಷ್ಟ್ರೀಯ ರ್‍ಯಾಂಕ್ 43

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT