ಶನಿವಾರ, ಮೇ 21, 2022
24 °C
ಜೂನಿಯರ್ ಮಹಿಳಾ ವಿಶ್ವಕಪ್ ಹಾಕಿ: ಜರ್ಮನಿಗೆ ಆಘಾತ

ಎಂಟರ ಘಟ್ಟಕ್ಕೆ ಭಾರತ ಲಗ್ಗೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪೊಚೆಫ್‌ಸ್ಟ್ರೂಮ್‌, ದಕ್ಷಿಣ ಆಫ್ರಿಕಾ: ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಂಡ ಲಾಲ್‌ರೆಮ್ಸಿಯಾಮಿ ಮತ್ತು ಮುಮ್ತಾಜ್‌ಖಾನ್ ಅವರ ಆಟದ ಬಲದಿಂದ ಭಾರತ ತಂಡವು ಎಫ್ಐಎಚ್‌ ಜೂನಿಯರ್ ಮಹಿಳಾ ವಿಶ್ವಕಪ್ ಹಾಕಿ ಟೂರ್ನಿಯ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿತು.

ಭಾನುವಾರ ನಡೆದ ಟೂರ್ನಿಯ ಗುಂಪು ಹಂತದ ಎರಡನೇ ಪಂದ್ಯದಲ್ಲಿ ಭಾರತದ ಮಹಿಳೆಯರು 2–1ರಿಂದ ಜರ್ಮನಿ ತಂಡಕ್ಕೆ ಆಘಾತ ನೀಡಿದರು. ಲಾಲ್‌ರೆಮ್ಸಿಯಾಮಿ 2ನೇ ನಿಮಿಷದಲ್ಲೇ ಕೈಚಳಕ ತೋರಿದರೆ, ಮುಮ್ತಾಜ್‌ ಖಾನ್‌ 25ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.

ಜರ್ಮನಿ ಪರ ಜುಲೆ ಬ್ಲೆಯುಲ್ (57ನೇ ನಿಮಿಷ) ಗೋಲು ಗಳಿಸಿದರು.

ಡಿ ಗುಂಪಿನ ಮೊದಲ ಹಣಾಹಣಿಯಲ್ಲಿ ಭಾರತ ಶನಿವಾರ 5–1ರಿಂದ ವೇಲ್ಸ್ ತಂಡವನ್ನು ಪರಾಭವಗೊಳಿಸಿತ್ತು. ಇದರೊಂದಿಗೆ ಆಡಿದ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಗುಂಪಿನಲ್ಲಿ ಮೊದಲ ಸ್ಥಾನಕ್ಕೇರಿತು. ಮಂಗಳವಾರ ಗುಂಪು ಹಂತದ ತನ್ನ ಕೊನೆಯ ಪಂದ್ಯದಲ್ಲಿ ಮಲೇಷ್ಯಾ ತಂಡವನ್ನು ಭಾರತ ಎದುರಿಸಲಿದೆ.

ಇದೇ 8ರಿಂದ ಕ್ವಾರ್ಟರ್‌ಫೈನಲ್ ಪಂದ್ಯಗಳು ಆರಂಭವಾಗಲಿವೆ.

ಜರ್ಮನಿ ವಿರುದ್ಧದ ಪಂದ್ಯದ ಆರಂಭದಲ್ಲೇ ಭಾರತಕ್ಕೆ ಗೋಲು ಗಳಿಸುವ ಅವಕಾಶ ಲಭಿಸಿತ್ತು. ದೀಪಿಕಾ ಅವರು ಪೆನಾಲ್ಟಿ ಕಾರ್ನರ್‌ನಲ್ಲಿ ಅವಕಾಶದಲ್ಲಿ ಗೋಲು ಗಳಿಕೆಯ ಪ್ರಯತ್ನವನ್ನು ಜರ್ಮನಿ ಗೋಲ್‌ಕೀಪರ್ ತಡೆದರು. ಆದರೆ ಎರಡನೇ ನಿಮಿಷದಲ್ಲಿ ಲಭಿಸಿದ ಅವಕಾಶದಲ್ಲಿ ಲಾಲ್‌ರೆಮ್ಸಿಯಾಮಿ ತಪ್ಪು ಮಾಡಲಿಲ್ಲ.

ಇದಾದ ಬಳಿಕ ಜರ್ಮನಿ ತಂಡಕ್ಕೆ ಹಲವು ಪೆನಾಲ್ಟಿ ಅವಕಾಶಗಳು ಸಿಕ್ಕವು. ಆದರೆ ಭಾರತದ ಗೋಲಕೀಪರ್‌ ಬಿಚುದೇವಿ ಕರಿಬಮ್‌, ಅವರ ಪ್ರಯತ್ನಗಳಿಗೆ ಅಡ್ಡಗಾಲು ಹಾಕಿದರು.

ಎರಡನೇ ಕ್ವಾರ್ಟರ್‌ನಲ್ಲಿ ಪ್ರತಿದಾಳಿ ನಡೆಸಿದ ಭಾರತದ ಪ್ರಯತ್ನಕ್ಕೆ ಫಲ ಲಭಿಸಿತು. ಮುಮ್ತಾಜ್ ಮೂಲಕ ಗೋಲು ಗಳಿಸಿದ ತಂಡವು ಮುನ್ನಡೆಯನ್ನು 2–0ಗೆ ವಿಸ್ತರಿಸಿಕೊಂಡಿತು.

ಆದರೆ ಪಂದ್ಯ ಕೊನೆಗೊಳ್ಳಲು ಮೂರು ನಿಮಿಷಗಳಿರುವಾಗ ಜುಲೆ ಬ್ಲೆಯುಲ್ ರಿವರ್ಸ್‌ ಹಿಟ್‌ ಮೂಲಕ ಗೋಲು ಗಳಿಸಿ ತಂಡದ ಹಿನ್ನಡೆಯನ್ನು ತಗ್ಗಿಸಲು ಮಾತ್ರ ಯಶಸ್ವಿಯಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು