ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದಲ್ಲೂ ಆಶಾವಾದ ಮೂಡಿಸಿದ ಭಾರತದ ಹಾಕಿ ಯಶಸ್ಸು

ಪಾಕಿಸ್ತಾನ ಹಿರಿಯ ಆಟಗಾರರಿಂದ ಗುಣಗಾನ
Last Updated 2 ಆಗಸ್ಟ್ 2021, 12:16 IST
ಅಕ್ಷರ ಗಾತ್ರ

ಕರಾಚಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡದ ಪ್ರದರ್ಶನ ಗತ ವೈಭವದತ್ತ ಮರಳುತ್ತಿರುವ ಸಂಕೇತಗಳು ಪಾಕಿಸ್ತಾನದಲ್ಲೂ ಖುಷಿಯ ಅಲೆಗಳು ಏಳಲು ಕಾರಣವಾಗಿವೆ. ತಮ್ಮ ದೇಶದಲ್ಲಿ ಈ ಕ್ರೀಡೆ ಅಧೋಗತಿಯತ್ತ ಸಾಗುವುದನ್ನು ತಡೆಯಲು ಭಾರತ ತಂಡದ ಯಶಸ್ಸು ಸ್ಫೂರ್ತಿಯಾಗಬಹುದೆಂದು ಒಂದು ಕಾಲದ ಘಟಾನುಘಟಿ ಆಟಗಾರರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತ ಪುರುಷ ಮತ್ತು ಮಹಿಳಾ ತಂಡಗಳು ಟೋಕಿಯೊ ಕ್ರೀಡೆಗಳಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದು, ಗಗನಕುಸುಮ ಎನ್ನುವಂತಿದ್ದ ಒಲಿಂಪಿಕ್‌ ಪದಕಗಳು ಈಗ ಕೈಎಟಕಿನಷ್ಟು ಹತ್ತಿರವಾಗಿವೆ.

ಇನ್ನೊಂದೆಡೆ ಪಾಕಿಸ್ತಾನ ತಂಡ ಸತತ ಎರಡನೇ ಬಾರಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ವಿಫಲವಾಗಿದೆ.

ಭಾರತ ತಂಡ ಉತ್ತಮ ಆಟದ ಪ್ರದರ್ಶನ ನೀಡತೊಡಗಿದ ನಂತರ ತಾವು ಒಲಿಂಪಿಕ್‌ ಹಾಕಿ ಪಂದ್ಯಗಳನ್ನು ವೀಕ್ಷಿಸುತ್ತಿರುವುದಾಗಿ ಪಾಕಿಸ್ತಾನದ ಹಿರಿಯ ಸೆಂಟರ್‌ ಫಾರ್ವರ್ಡ್‌ ಆಟಗಾರ ಹಸನ್ ಸರ್ದಾರ್‌ ಹೇಳಿದ್ದಾರೆ.

‘ಭಾರತ ಹಾಕಿ ಆಟ ಏಳಿಗೆಗೆ ಕೈಗೊಂಡ ಉಪಕ್ರಮಗಳಿಗೆ ದೊರೆತ ಯಶಸ್ಸು ಇದು. ಇದಕ್ಕೆ ಆರ್ಥಿಕ ಬೆಂಬಲವೂ ಬೇಕು. ಹಾಕಿಯ ಮೇಲೆ ಹಣ ಹೂಡದಿದ್ದರೆ ಪ್ರತಿಭೆಗಳು ನಮಗೆ ಸಿಗುವುದಾದರೂ ಎಲ್ಲಿಂದ? ಹಾಕಿ ಆಟದಲ್ಲಿ ತಮಗೆ ಮುಂದೆ ಭದ್ರತೆ ಸಿಗುತ್ತದೆ ಎಂಬ ಸುರಕ್ಷತಾ ಭಾವ ಇಲ್ಲದ ಕಾರಣಕ್ಕೆ ಯುವ ಸಮೂಹ ಕ್ರಿಕೆಟ್‌ನತ್ತ ಮುಖ ಮಾಡುತ್ತಿದೆ’ ಎಂದು ಅವರು ವಿಶ್ಲೇಷಿಸಿದ್ದಾರೆ.

ಪಾಕಿಸ್ತಾನ 1984ರ ಒಲಿಂಪಿಕ್ಸ್‌ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಜಯಗಳಿಸಿದ್ದ ಸಂದರ್ಭದಲ್ಲಿ ಹಸನ್‌ ವಿಜಯದ ಗೋಲು ಗಳಿಸಿದ್ದರು. ಆ ಕ್ರೀಡೆಗಳಲ್ಲಿಪಾಕಿಸ್ತಾನ ಚಿನ್ನ ಗೆದ್ದುಕೊಂಡಿತ್ತು.

‘ಏಷ್ಯಾದ ಕೌಶಲದ ಜೊತೆಗೆ ಅಧುನಿಕ ತಂತ್ರಗಾರಿಕೆಯನ್ನು ಹದವಾಗಿ ಮಿಶ್ರಣ ಮಾಡಿ ಭಾರತ ತಂಡ ಆಡುವುದನ್ನು ನೋಡಿ ಖುಷಿ ಎನಿಸುತ್ತಿದೆ’ ಎಂದಿದ್ದಾರೆ ಹಸನ್‌ ಸರ್ದಾರ್‌. ಹಾಕಿ ಆಟದಲ್ಲಿ ಫಿಟ್ನೆಸ್‌ ಬಹಳ ಮುಖ್ಯ. ಭಾರತದ ಆಟಗಾರರ ಫಿಟ್ನೆಸ್‌ ಕೂಡ ಉತ್ತಮ ಮಟ್ಟದಲ್ಲಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನ ಹಾಕಿ ಫೆಡರೇಷನ್‌ನ ಮಹಾ ಕಾರ್ಯದರ್ಶಿ ಆಸಿಫ್‌ ಬಾಜ್ವಾ ಅವರೂ ಭಾರತದ ನಿರ್ವಹಣೆಯನ್ನು ಕೊಂಡಾಡಿದ್ದು, ಈ ವಲಯದಲ್ಲಿ ಹಾಕಿ ಆಟದ ಬಗ್ಗೆ ಮತ್ತೆ ಆಸಕ್ತಿ ಮೂಡಲು ಇದು ಸಹಕಾರಿಯಾಗಲಿದೆ ಎಂದು ಪಿಟಿಐಗೆ ತಿಳಿಸಿದ್ದಾರೆ.

‘ಭಾರತ ಒಲಿಂಪಿಕ್ಸ್‌ ಸೆಮಿಫೈನಲ್‌ಗೆ ಅರ್ಹತೆ ಪಡೆದಿರುವುದು ದೊಡ್ಡ ಸಾಧನೆಯೇ. ಇದು ಕಟ್ಟಾ ಎದುರಾಳಿ ಪಾಕಿಸ್ತಾನದಲ್ಲೂ ಹಾಕಿ ಆಟದ ಪುನಶ್ಚೇತನಕ್ಕೆ ಕಾರಣವಾಗಬಲ್ಲದು. ತಮ್ಮ ತಂಡವೂ ಉತ್ತಮ ಸಾಧನೆ ಮಾಡಬೇಕೆಂಬ ಪ್ರೇರಣೆ ಪಾಕಿಸ್ತಾನದಲ್ಲೂ ಮೂಡಬಹುದು’ ಎಂದಿದ್ದಾರೆ ಬಾಜ್ವಾ.

ಭಾರತದಲ್ಲಿ ಹಾಕಿ ಆಟದ ಪುನರುತ್ಥಾನದ ನಿಟ್ಟಿನಲ್ಲಿ ಮಾಡಿಕೊಂಡ ಸಂರ‍್ರಚನೆ ಈಗ ರುಚಿಯಾದ ಫಲಗಳನ್ನು ನೀಡುತ್ತಿದೆ ಎಂದು ಅವರು ಹೇಳಿದ್ದಾರೆ. ಅವರು 1992ರ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಪಾಕ್‌ ತಂಡದಲ್ಲಿ ಆಡಿದ್ದರು. 1994 ವಿಶ್ವಕಪ್‌ ಗೆದ್ದ ತಂಡದಲ್ಲೂ ಆಡಿದ್ದರು.

‘ಭಾರತದಲ್ಲಿ ಹಾಕಿ ಫಡೆರೇಷನ್‌ ಬಳಿ ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಣವಿದೆ. ಸರ್ಕಾರವೂ ಪ್ರೋತ್ಸಾಹ ನೀಡುತ್ತಿದೆ. ಈಗಿನ ದಿನಗಳಲ್ಲಿ ಏಳಿಗೆ ಕಂಡು ಉನ್ನತ ಮಟ್ಟದಲ್ಲೇ ಇರಬೇಕಾದರೆ ಹಣದ ಅಗತ್ಯವೂ ಇದೆ’ ಎಂದು ಬಾಜ್ವಾ ಹೇಳಿದ್ದಾರೆ.

‘ಮೊದಲ ಐದು ಸ್ಥಾನಗಳಲ್ಲಿ ನಾವು ನೆಲೆಯಾಗಬೇಕಾರೆ ವರ್ಷಕ್ಕೆ 25 ರಿಂದ 30 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಬೇಕಾಗುತ್ತದೆ. ಭಾರತ ಅದಕ್ಕೂ ಹೆಚ್ಚು ಪಂದ್ಯಗಳನ್ನು ಆಡುತ್ತಿದೆ. ಅದು ಆಧುನಿಕ ಕಾಲಕ್ಕೆ ತಕ್ಕಂತೆ ದೇಶದ ಹಾಕಿ ವ್ಯವಸ್ಥೆಯಲ್ಲೂ ಮಾರ್ಪಾಡುಗಳನ್ನು ಮಾಡಿಕೊಂಡಿದೆ’ ಎಂದರು.

‘ಒಲಿಂಪಿಕ್ಸ್‌ನಲ್ಲಿ ಏಷ್ಯದ ತಂಡ ಉತ್ತಮ ಸಾಧನೆ ತೋರುತ್ತಿರುವುದರಿಂದ ಖುಷಿಯಾಗಿದೆ’ ಎಂದಿದ್ದಾರೆ ಹಳೆಹುಲಿ ಸಮೀಯುಲ್ಲಾ ಖಾನ್‌. ತಮ್ಮ ವೇಗದ ಆಟಕ್ಕಾಗಿ ಅವರು ‘ಫ್ಲೈಯಿಂಗ್ ಹಾರ್ಸ್‌’ ಎಂಬ ಬಿರುದು ಪಡೆದಿದ್ದರು.

‘1984ರವರೆಗೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಒಲಿಂಪಿಕ್ಸ್‌ನಲ್ಲಿ ಪ್ರಬಲ ಪ್ರತಿಸ್ಪರ್ಧಿಗಳಾಗಿದ್ದವು. ನಂತರದ ವರ್ಷಗಳಲ್ಲಿ ಯುರೋಪಿಯನ್ನರು ಪ್ರಾಬಲ್ಯ ಸಾಧಿಸತೊಡಗಿದರು’ ಎಂದಿದ್ದಾರೆ. ‘ಭಾರತ ಸೆಮಿಫೈನಲ್‌ಗೆ ಅರ್ಹತೆ ಪಡೆದಿರುವುದು ನೋಡುವಾಗ ಸಂತಸವೆನಿಸುತ್ತಿದೆ. ಅವರು ಫೈನಲ್‌ಗೆ ತೇರ್ಗಡೆಯಾಗಿ ಪದಕ ಗೆಲ್ಲಲಿ’ ಎಂದು ಹಾರೈಸಿದ್ದಾರೆ.

‘ಕಳಪೆ ಆಡಳಿತ ನಿರ್ವಹಣೆಯ ಕಾರಣ ಪಾಕಿಸ್ತಾನದಲ್ಲಿ ಹಾಕಿ ಆಟ ಅಧೋಗತಿಗೆ ಇಳಿದಿದೆ. ಇತ್ತೀಚಿನ ವರ್ಷಗಳಲ್ಲಿ ಟೂರ್ನಿಗಳ ಮತ್ತು ಆಟದ ಸ್ವರೂಪದಲ್ಲಿ ಸುಧಾರಿಸುವತ್ತ ನಾವು ಲಕ್ಷ್ಯ ಕೊಟ್ಟಿಲ್ಲ. ಈಗಲೂ ಆ ದಿಸೆಯಲ್ಲಿ ನಾವು ಕಾರ್ಯೋನ್ಮುಖರಾಗಿ, ಜೊತೆಗೆ ಹಣವನ್ನೂ ತೊಡಗಿಸಿದರೆ ನಾವು ಮತ್ತೆ ಪುನರಾಗಮನ ಮಾಡಬಹುದು. ಹಾಕಿ ನಮ್ಮ ರಕ್ತದಲ್ಲಿದೆ’ ಎಂದಿದ್ದಾರೆ.

‘ನನ್ನ ಅಧಿಕಾರದ ಕೊನೆಯ ಎರಡು ವರ್ಷ ದೇಶದಲ್ಲಿ ಹಾಕಿ ಮತ್ತು ಇತರ ಕ್ರೀಡೆಗಳ ಪುನಶ್ಚೇತನಕ್ಕೆ ಹೆಚ್ಚಿನ ಗಮನ ನೀಡುತ್ತೇನೆ’ ಎಂದು ಪಾಕ್‌ ಪ್ರಧಾನಿ ಹಾಗೂ ಕ್ರಿಕೆಟಿಗರಾಗಿದ್ದ ಇಮ್ರಾನ್‌ ಖಾನ್‌ ಭಾನುವಾರಷ್ಟೇ ಹೇಳಿದ್ದಾರೆ.

ʼವಿಶ್ವದ ನಾಲ್ಕು ತಂಡಗಳಲ್ಲಿ ಏಷ್ಯಾದ ತಂಡವೂ ಒಂದಾಗಿ ನಿಲ್ಲಬಹುದು ಎಂಬುದು ಭಾರತ ಹಾಕಿ ತಂಡದ ಚೇತೋಹಾರಿ ಪ್ರದರ್ಶನದಿಂದ ಸಾಬೀತಾಗಿದೆʼ ಎಂದು ಪಾಕಿಸ್ತಾನದಲ್ಲಿ ‘ಹಾಕಿ ಆಟದ ಮರಡೋನಾ’ ಎಂದೇ ಹೆಸರು ಪಡೆದಿರುವ ಷಾಬಾಜ್‌ ಅಹ್ಮದ್‌ ಅಭಿಪ್ರಾಯಪಟ್ಟಿದ್ದಾರೆ. ಆಸ್ಟ್ರೇಲಿಯಾ ಕೈಲಿ 7–1 ರಿಂದ ಹೊಡೆಸಿಕೊಂಡ ನಂತರವೂ ಭಾರತ ತಂಡವು ಈ ರೀತಿಯ ಪುನರಾಗಮನ ಮಾಡಿರುವುದು ಅಸಾಧಾರಣ ಸಾಧನೆ ಎಂದು ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT