ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಚಿನ್ನದ ಭರವಸೆಯಲ್ಲಿ ಭಾರತ

ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿ: ಇಂಡೊನೇಷ್ಯಾ ಆಧಿಪತ್ಯಕ್ಕೆ ಅಂತ್ಯ ಹಾಡುವ ಅವಕಾಶ
Last Updated 14 ಮೇ 2022, 14:26 IST
ಅಕ್ಷರ ಗಾತ್ರ

ಬ್ಯಾಂಕಾಕ್: ಮೊದಲ ಬಾರಿ ಫೈನಲ್ ಪ್ರವೇಶಿಸಿರುವ ಭಾರತ ತಂಡ ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಿನ್ನದ ಕನಸಿನೊಂದಿಗೆ ಭಾನುವಾರ ಕಣಕ್ಕೆ ಇಳಿಯಲಿದೆ. ಕಿದಂಬಿ ಶ್ರೀಕಾಂತ್ ನೇತೃತ್ವದ ತಂಡ ಫೈನಲ್‌ನಲ್ಲಿ ಬಲಿಷ್ಠ ಇಂಡೊನೇಷ್ಯಾವನ್ನು ಎದುರಿಸಲಿದೆ.

ಮೊದಲ ಹಣಾಹಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆಯೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದ ಭಾರತ ಪ್ರಬಲ ಮಲೇಷ್ಯಾ ಮತ್ತು ಡೆನ್ಮಾರ್ಕ್ ತಂಡಗಳನ್ನು ಮಣಿಸಿರುವುದರಿಂದ ಭರವಸೆಯಲ್ಲಿದೆ. ಎಚ್‌.ಎಸ್‌.ಪ್ರಣಯ್ ಪ್ರತಿ ಪಂದ್ಯದಲ್ಲೂ ತಂಡದ ಕೈ ಹಿಡಿದಿದ್ದಾರೆ. ಶ್ರೀಕಾಂತ್ ಮತ್ತು ಡಬಲ್ಸ್ ಜೋಡಿ ಸಾತ್ವಿಕ್‌ ಸಾಯಿರಾಜ್–ಚಿರಾಗ್ ಶೆಟ್ಟಿ ಕೂಡ ಮಿಂಚಿದ್ದಾರೆ.

ಟೂರ್ನಿಯಲ್ಲಿ ಇಂಡೊನೇಷ್ಯಾ ಎಲ್ಲ ಹಣಾಹಣಿಗಳನ್ನೂ ಗೆದ್ದುಕೊಂಡಿದೆ. ಭಾರತ ಗುಂಪು ಹಂತದಲ್ಲಿ ಚೀನಾ ಥೈಪೆ ವಿರುದ್ಧ ಸೋತಿತ್ತು. ನಾಕ್ ಔಟ್ ಹಂತದಲ್ಲಿ ಇಂಡೊನೇಷ್ಯಾ ತಂಡ ಚೀನಾ ಮತ್ತು ಜಪಾನ್ ವಿರುದ್ಧ ಮೇಲುಗೈ ಸಾಧಿಸಿತ್ತು. ಭಾರತ ಐದು ಬಾರಿಯ ಚಾಂಪಿಯನ್ ಮಲೇಷ್ಯಾ ಮತ್ತು 2016ರ ವಿಜೇತ ತಂಡ ಡೆನ್ಮಾರ್ಕ್‌ ವಿರುದ್ಧ ಗೆಲುವು ಸಾಧಿಸಿತ್ತು.

ಕಿದಂಬಿ ಶ್ರೀಕಾಂತ್ ಮತ್ತು ಎಚ್‌.ಎಸ್.ಪ್ರಣಯ್ ತಮ್ಮ ಪಾಲಿನ ಐದು ಪಂದ್ಯಗಳನ್ನು ಗೆದ್ದುಕೊಂಡಿದ್ದಾರೆ. ಮಲೇಷ್ಯಾ ಮತ್ತು ಡೆನ್ಮಾರ್ಕ್ ಎದುರಿನ ಹಣಾಹಣಿಗಳಲ್ಲಿ ಡಬಲ್ಸ್‌ ಜೋಡಿ ಕೃಷ್ಣ ಪ್ರಸಾದ್ ಗರಗ ಮತ್ತು ವಿಷ್ಣುವರ್ಧನ್ ಗೌಡ್ ಹೋರಾಡಿ ಸೋತಿದ್ದರು. ಫೈನಲ್‌ನಲ್ಲಿ ಭಾರತವು ಎರಡನೇ ಡಬಲ್ಸ್ ಪಂದ್ಯದಲ್ಲಿ ಎಂ.ಆರ್‌.ಅರ್ಜುನ್ ಮತ್ತು ಧ್ರುವ ಕಪಿಲಾ ಅವರನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ.

ಆರಂಭದಲ್ಲಿ ಉತ್ತಮ ಆಟವಾಡಿದರೂ ಹಿಂದಿನ ಎರಡು ಪಂದ್ಯಗಳಲ್ಲಿ ನೀರಸ ಪ್ರದರ್ಶನ ತೋರಿರುವ ಲಕ್ಷ್ಯ ಸೇನ್ ಚೇತರಿಸಿಕೊಳ್ಳಬೇಕಾಗಿದೆ. ಫೈನಲ್‌ನಲ್ಲಿ ಅವರು ಆ್ಯಂಟನಿ ಸಿನಿಸುಕ ಜಿಂಟಿಂಗ್ ವಿರುದ್ಧ ಸೆಣಸುವ ಸಾಧ್ಯತೆ ಇದ್ದು ಶ್ರೀಕಾಂತ್ ಅವರು ಜೊನಾಥನ್ ಕ್ರಿಸ್ಟಿಗೆ ಸವಾಲೆಸೆಯುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT