ಶನಿವಾರ, ಮೇ 21, 2022
25 °C
ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿ: ಎದುರಾಳಿಗಳನ್ನು ವೈಟ್‌ವಾಷ್ ಮಾಡಿದ ತಂಡ

ಜರ್ಮನಿ ವಿರುದ್ಧ ಭಾರತ ಜಯಭೇರಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬ್ಯಾಂಕಾಕ್: ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಪುರುಷರ ತಂಡ ಉತ್ತಮ ಆರಂಭ ಕಂಡಿದೆ. ಭಾನುವಾರ ಆರಂಭಗೊಂಡ ಟೂರ್ನಿಯ ‘ಸಿ’ ಗುಂಪಿನ ಮೊದಲ ಹಣಾಹಣಿಯಲ್ಲಿ ಭಾರತ 5–0ಯಿಂದ ಜರ್ಮನಿಯನ್ನು ಮಣಿಸಿತು.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿರುವ, ಈಚಿನ ಟೂರ್ನಿಗಳಲ್ಲಿ ಅಮೋಘ ಸಾಮರ್ಥ್ಯ ತೋರುತ್ತಿರುವ ಯುವ ಆಟಗಾರ ಲಕ್ಷ್ಯಸೇನ್ ಮೊದಲ ಪಂದ್ಯದಲ್ಲಿ ಗಳಿಸಿಕೊಟ್ಟ ಮುನ್ನಡೆಯನ್ನು ಉಳಿಸಿಕೊಂಡ ಭಾರತ ನಂತರ ಸಂಪೂರ್ಣ ಆಧಿಪತ್ಯ ಸ್ಥಾಪಿಸಿತು. ವಿಶ್ವ ಕ್ರಮಾಂಕದಲ್ಲಿ 64ನೇ ಸ್ಥಾನದಲ್ಲಿರುವ ಮ್ಯಾಕ್ಸ್ ವೀಸ್‌ಕಿರ್ಚನ್ ಅವರನ್ನು ಲಕ್ಷ್ಯ ಸೇನ್ 21-16, 21-13ರಲ್ಲಿ ಮಣಿಸಿದರು.

ಎರಡನೇ ಹಣಾಹಣಿಯಲ್ಲಿ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಪ್ರಯಾಸದಿಂದ ಜೋನ್ಸ್‌ ರಾಲ್ಫಿ ಜಾನ್ಸೆನ್ ಮತ್ತು ಮರ್ವಿನ್ ಸೀಡೆಲ್ ಎದುರು ಜಯ ಗಳಿಸಿದರು. ಮೊದಲ ಗೇಮ್‌ನಲ್ಲಿ ಉತ್ತಮ ಆಟವಾಡಿದ ಭಾರತದ ಜೋಡಿ ನಂತರ ಸೋಲೊಪ್ಪಿಕೊಂಡಿತು. ಆದರೆ ನಿರ್ಣಾಯಕ ಮೂರನೇ ಗೇಮ್‌ನಲ್ಲಿ ಚೇತರಿಕೆಯ ಆಟವಾಡಿ 21-15, 10-21, 21-13ರಲ್ಲಿ ಪಂದ್ಯ ಗೆದ್ದುಕೊಂಡಿತು. 

ಮೂರನೇ ಪಂದ್ಯದಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ 11ನೇ ಸ್ಥಾನದಲ್ಲಿರುವ ಕಿದಂಬಿ ಶ್ರೀಕಾಂತ್ ಸಿಂಗಲ್ಸ್ ಪಂದ್ಯದಲ್ಲಿ ಕಾಯ್ ಶಫರ್ ವಿರುದ್ಧ 18-21, 21-9, 21-11ರಲ್ಲಿ ಜಯ ಸಾಧಿಸಿ 3–0 ಮುನ್ನಡೆ ಗಳಿಸಿಕೊಟ್ಟರು.  

ರೋಚಕ ನಾಲ್ಕನೇ ಪಂದ್ಯದಲ್ಲಿ ಅರ್ಜುನ್ ಮತ್ತು ಧ್ರುವ ಕಪಿಲ 25-23, 21-15ರಲ್ಲಿ ಜಾರ್ನಿ ಜೀಸ್ ಮತ್ತು ಜಾನ್ ಕಾಲಿನ್ ವಿರುದ್ಧ ಗೆದ್ದರು. ಭರ್ಜರಿ ಮುನ್ನಡೆ ಸಾಧಿಸಿದ ಭಾರತಕ್ಕೆ ಕೊನೆಯ ಪಂದ್ಯದಲ್ಲಿ ಎಚ್‌.ಎಸ್‌.‍ಪ್ರಣಯ್ ಸುಲಭ ಜಯ ತಂದುಕೊಟ್ಟರು. ಮಥಿಯಾಸ್ ಕಿಕ್‌ಲಿಜ್‌ ಎದುರು ಅವರು 21-9 21-9ರಲ್ಲಿ ಜಯ ದಾಖಲಿಸಿದರು. 

ಭಾರತ ತಂಡ ಥಾಮಸ್ ಕಪ್‌ನಲ್ಲಿ ಮೊದಲ ಚಿನ್ನದ ನಿರೀಕ್ಷೆಯಲ್ಲಿದೆ. ಟೂರ್ನಿಯಲ್ಲಿ ಭಾರತಕ್ಕೆ ಈ ವರೆಗೆ ಸಮಿಫೈನಲ್ ಪ್ರವೇಶಿಸುವುದಕ್ಕೂ ಸಾಧ್ಯವಾಗಲಿಲ್ಲ. ಕಳೆದ ಬಾರಿ ಕ್ವಾರ್ಟರ್ ಫೈನಲ್‌ನಲ್ಲಿ ಮುಗ್ಗರಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು