ಬುಧವಾರ, ಅಕ್ಟೋಬರ್ 28, 2020
25 °C

PV Web Exclusive: ಎಂವಿಪಿಯಲ್ಲಿ ಅರಳಿದ ಜಮೈಕಾದ ಚಿನ್ನದ ಹುಡುಗಿಯರು

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ವೈರಾಣು ಹಾವಳಿಯಿಂದಾಗಿ ವಿಶ್ವದಾದ್ಯಂತ ಟ್ರ್ಯಾಕ್ ಮತ್ತು ಫೀಲ್ಡ್ ಚಟುವಟಿಕೆ ಸ್ಥಗಿತಗೊಂಡಿದ್ದಾಗಲೂ ಜುಲೈ ತಿಂಗಳ ಕೊನೆಯ ವಾರದಲ್ಲಿ ಭಾರತದ ಶ್ರಬಣಿ ನಂದಾ ಅವರು ಅಥ್ಲೆಟಿಕ್ಸ್‌ ಕೂಟವೊಂದರಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದರು. ವೆಸ್ಟ್ ಇಂಡೀಸ್‌ನ ಜಮೈಕಾದಲ್ಲಿ ನಡೆದ ವೆಲೋಸಿಟಿ ಫೆಸ್ಟ್ ಅಥ್ಲೆಟಿಕ್‌ ಕೂಟವಾಗಿತ್ತು ಅದು. ಕೊರೊನಾ ಕಾಲದಲ್ಲಿ ಭಾರತದ ಪರವಾಗಿ ಟ್ರ್ಯಾಕ್‌ಗೆ ಇಳಿದ ಮೊದಲ ಅಥ್ಲೀಟ್ ಆಗಿದ್ದರು ಶ್ರಬಣಿ.

ಅಶೆನೆಮ್ ಕ್ರೀಡಾಂಗಣದಲ್ಲಿ ನಡೆದ ವೆಲೋಸಿಟಿ ಫೆಸ್ಟ್ ಕೂಟವು ಮಾರ್ಚ್ ನಂತರ ಜಮೈಕಾದಲ್ಲಿ ನಡೆದ ಮೊದಲ ಟ್ರ್ಯಾಕ್‌–ಫೀಲ್ಡ್ ಸ್ಪರ್ಧೆಯೂ ಆಗಿತ್ತು. ಜಮೈಕಾದ ಮ್ಯಾಕ್ಸಿಮೈಸಿಂಗ್ ವೆಲೋಸಿಟಿ ಆ್ಯಂಡ್ ಪವರ್ ಟ್ರ್ಯಾಕ್ ಆ್ಯಂಡ್ ಫೀಲ್ಡ್‌ ಕ್ಲಬ್‌ (ಎಂವಿಪಿ) ಸದಸ್ಯೆಯಾಗಿರುವ ಒಡಿಶಾದ ಶ್ರಬಣಿ 100, 200 ಮೀಟರ್ಸ್ ಓಟ, 4x100 ಮೀಟರ್ಸ್ ರಿಲೆಯಲ್ಲಿ ಪ್ರಾವೀಣ್ಯ ಗಳಿಸಿದ್ದಾರೆ. ದಕ್ಷಿಣ ಏಷ್ಯಾ ಗೇಮ್ಸ್‌ನ 100 ಮತ್ತು 200 ಮೀಟರ್ಸ್ ಓಟದಲ್ಲಿ ಬೆಳ್ಳಿ ಪದಕ ಗೆದ್ದಿರುವ ಅವರು ಒಲಿಂಪಿಕ್ಸ್‌ನಲ್ಲೂ ಪಾಲ್ಗೊಂಡಿದ್ದಾರೆ.

ಶ್ರಬಣಿ ಅವರ ಸಾಧನೆಯ ಜಾಡು ಹಿಡಿದು ಎಂವಿಪಿಯ ಮಾಹಿತಿಕೋಶವನ್ನು ಜಾಲಾಡಿದರೆ ಜಮೈಕಾದ ಚಿನ್ನದ ಹುಡುಗಿಯರ ಪ್ರತಿಭೆ ಬೆಳಕಿಗೆ ಬರುತ್ತದೆ; ಕಣ್ಣು ಕುಕ್ಕುತ್ತದೆ. ಒಲಿಂಪಿಕ್ಸ್ ಮತ್ತು ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ಗಳಲ್ಲಿ ಪದಕಗಳನ್ನು ಕೊರಳಿಗೇರಿಸಿಕೊಂಡ ಎಲೈನ್ ಥಾಮ್ಸನ್, ಶೆಲ್ಲಿ ಆ್ಯನ್ ಫ್ರೇಸರ್ ಪ್ರೈಸ್, ಸ್ಟೆಫನಿ ಆ್ಯನ್ ಮೆಕ್‌ಪರ್ಸನ್ ಮುಂತಾದ ಅನೇಕ ಮಹಿಳಾ ಅಥ್ಲೀಟ್‌ಗಳ ಸಾಮರ್ಥ್ಯವನ್ನು ಹೊರಜಗತ್ತಿಗೆ ಪಸರಿಸಿದ ಅಥ್ಲೆಟಿಕ್ ತರಬೇತಿ ಸಂಸ್ಥೆ ಎಂವಿಪಿ.

ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಜಮೈಕಾದ ತಾಕತ್ತು ಏನು ಎಂಬುದು ಜಗತ್ತಿಗೇ ಗೊತ್ತು. ಅಲ್ಲಿನ ಪ್ರಮುಖ ಅಥ್ಲೀಟ್‌ಗಳ ಪೈಕಿ ಬಹುತೇಕರು ತರಬೇತಿ ಪಡೆದ ಮತ್ತು ಪಡೆಯುತ್ತಿರುವ ಸಂಸ್ಥೆ ಎಂವಿಪಿ. ವಿಶೇಷವೆಂದರೆ 1980ರಿಂದ ಒಲಿಂಪಿಕ್ಸ್‌ನ ಮಹಿಳಾ ವಿಭಾಗದ 200 ಮೀಟರ್ಸ್ ಓಟದಲ್ಲಿ ಜಮೈಕಾ ಕನಿಷ್ಠ ಒಂದು ಪದಕವನ್ನಾದರೂ ಗೆದ್ದುಕೊಂಡಿದೆ. 1992ರಿಂದ 100 ಮೀಟರ್ಸ್ ಓಟದಲ್ಲೂ ಇದೇ ಸಾಧನೆಯಾಗಿದೆ. ಇವರ ಪೈಕಿ ಹೆಚ್ಚಿನವರು ಎಂವಿಪಿಯಲ್ಲಿ ಪಳಗಿದವರು.

ಎಲೈನ್ ಥಾಮ್ಸನ್

ಎಂವಿಪಿಯಲ್ಲಿ ಬೆಳೆದ ಮಹಿಳಾ ಅಥ್ಲೀಟ್‌ಗಳಲ್ಲಿ ಪ್ರಮುಖರು ಎಲೈನ್ ಥಾಮ್ಸನ್. ಸ್ಪ್ರಿಂಟ್ ತಾರೆಯಾಗಿರುವ ಅವರು 2015ರ ವಿಶ್ವ ಚಾಂಪಿಯನ್‌ಷಿಪ್‌ನ 4x100 ಮೀಟರ್ಸ್ ರಿಲೇಯಲ್ಲಿ ಚಿನ್ನ ಗೆದ್ದ ತಂಡದಲ್ಲಿದ್ದರು. ಆ ಕೂಟದ 200 ಮೀಟರ್ಸ್ ಸ್ಪರ್ಧೆಯಲ್ಲಿ ಅವರು ಬೆಳ್ಳಿ ಪದಕವನ್ನೂ ಗೆದ್ದಿದ್ದರು. 

2016ರ ಒಲಿಂಪಿಕ್ಸ್‌ನಲ್ಲಿ ಅವರು ಜೋಡಿ ಪದಕ ಗೆದ್ದು ಅಪರೂಪದ ಸಾಧನೆ ಮಾಡಿದ್ದರು. 100 ಮೀಟರ್ಸ್ ಓಟವನ್ನು 10.71 ಸೆಕೆಂಡುಗಳಲ್ಲಿ ಪೂರ್ತಿಗೊಳಿಸಿದ ಅವರು 200 ಮೀಟರ್ಸ್ ಸ್ಪರ್ಧೆಯಲ್ಲಿ 21.78 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಸಾಧನೆ ಮಾಡಿದ್ದರು. 1988ರ ಸೋಲ್ ಒಲಿಂಪಿಕ್ಸ್‌ನಲ್ಲಿ ಅಮೆರಿಕದ ಫ್ಲಾರೆನ್ಸ್ ಗ್ರಿಫಿತ್ ಜಾಯ್ನರ್ ಅವರ ನಂತರ ಜೋಡಿ ಪದಕ ಗೆದ್ದ ಮೊದಲ ಅಥ್ಲೀಟ್ ಎಲೈನ್ ಥಾಮ್ಸನ್. 100 ಮೀಟರ್ಸ್‌ನಲ್ಲಿ ನಾಲ್ಕನೇ ಅತಿವೇಗದ ಓಟಗಾರ್ತಿ ಮತ್ತು 200 ಮೀಟರ್ಸ್‌ನಲ್ಲಿ ಐದನೇ ಅತಿವೇಗದ ಓಟಗಾರ್ತಿ ಆಗಿದ್ದಾರೆ ಅವರು. 

ಶೆಲ್ಲಿ ಆ್ಯನ್ ಫ್ರೇಜರ್ ಪ್ರೈಸ್ 

ಕಿಂಗ್ಸ್‌ಟನ್‌ನಲ್ಲಿ ಜನಿಸಿದ ಶೆಲ್ಲಿ ಆ್ಯನ್ ಫ್ರೇಜರ್ ಪ್ರೈಸ್ ಆಧುನಿಕ ಟ್ರ್ಯಾಕ್ ಮತ್ತು ಫೀಲ್ಡ್‌ನ ಮಿನುಗುತಾರೆ; ವಿಶಿಷ್ಟ ಭಾವಭ‌ಂಗಿಯ ಅವರು ಮಹತ್ವದ ದಾಖಲೆಗಳ ಒಡತಿ. 2008ರ ಒಲಿಂಪಿಕ್ಸ್ ಸಂದರ್ಭದಲ್ಲಿ ಅವರಿಗೆ 21 ವರ್ಷ. ಆ ಕೂಟದ 100 ಮೀಟರ್ಸ್ ಓಟದಲ್ಲಿ ಚಿನ್ನ ಗೆದ್ದು ಒಲಿಂಪಿಕ್ಸ್‌ನ 100 ಮೀಟರ್ಸ್‌ನಲ್ಲಿ ಚಿನ್ನ ಗೆದ್ದ ಕೆರಿಬಿಯನ್ ನೆಲದ ಮೊದಲ ಮಹಿಳಾ ಅಥ್ಲೀಟ್ ಎಂದೆನಿಸಿಕೊಂಡರು. 2012ರಲ್ಲಿ ಮತ್ತೆ ಚಿನ್ನದ ಪದಕ ಕೊರಳಿಗೇರಿಸಿಕೊಂಡರು. 2009ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲೂ ಚಿನ್ನದ ಪದಕ ಗಳಿಸಿದ್ದರು. ವಿಶ್ವ ಚಾಂಪಿಯನ್‌ಷಿಪ್‌ನ 100 ಮೀಟರ್ಸ್ ಸ್ಪರ್ಧೆಯಲ್ಲಿ ಮೂರು ಬಾರಿ (2009, 2013, 2015) ಚಿನ್ನ ಗೆದ್ದ ಮೊದಲ ಮಹಿಳೆ ಎಂದೆನಿಸಿಕೊಂಡಿದ್ದಾರೆ ಅವರು.

ಸತತ ಎರಡು ಬಾರಿ ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ (2008ರ ಒಲಿಂಪಿಕ್ಸ್‌, 2009ರ ವಿಶ್ವ ಚಾಂಪಿಯನ್‌ಷಿಪ್‌; 2012ರ ಒಲಿಂಪಿಕ್ಸ್‌, 2013ರ ವಿಶ್ವ ಚಾಂಪಿಯನ್‌ಷಿಪ್‌) ಚಿನ್ನ ಗಳಿಸಿದ ಏಕೈಕ ಮಹಿಳೆ ಅವರು. ಒಂದೇ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 100 ಮೀಟರ್ಸ್‌, 200 ಮೀಟರ್ಸ್ ಮತ್ತು 4x100 ಮೀಟರ್ಸ್‌ ರಿಲೆಯಲ್ಲಿ ಚಿನ್ನ ಗಳಿಸಿದ ಮೊದಲ ಮಹಿಳಾ ಅಥ್ಲೀಟ್ ಕೂಡ ಆಗಿದ್ದಾರೆ. 60 ಮೀಟರ್ಸ್‌, 100 ಮೀಟರ್ಸ್‌, 200 ಮೀಟರ್ಸ್ ಮತ್ತು 4x100 ಮೀಟರ್ಸ್‌ ರಿಲೆಯಲ್ಲಿ ಪದಕ ಗೆದ್ದ ಅಪರೂಪದ ಸಾಧನೆಯೂ ಅವರದಾಗಿದೆ.

ಸ್ಟೆಫಿನಿ ಆ್ಯನ್ ಮೆಕ್‌ಫರ್ಸನ್  

400 ಮೀಟರ್ಸ್ ಓಟದ ಪರಿಣಿತೆ ಸ್ಟೆಫಿನಿ ಆ್ಯನ್ ಮೆಕ್‌ಫರ್ಸನ್. 2013ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಬಾರಿ ಟ್ರ್ಯಾಕ್‌ಗೆ ಇಳಿದ ಅವರು ನಾಲ್ಕನೇ ಸ್ಥಾನ ಗಳಿಸಿದ್ದರು. ಮುಂದಿನ ವರ್ಷದ ವಿಶ್ವ ಒಳಾಂಗಣ ಕೂಟದ ರಿಲೆಯಲ್ಲಿ ಬೆಳ್ಳಿ ಗೆದ್ದ ಅವರು ಆ ವರ್ಷ ಕಾಮನ್‌ವೆಲ್ತ್ ಗೇಮ್ಸ್‌ನ 400 ಮೀಟರ್ಸ್ ಮತ್ತು ರಿಲೆಯಲ್ಲೂ ಚಿನ್ನ ಗಳಿಸಿದರು. ಅದೇ ವರ್ಷದ ಕಾಂಟಿನೆಂಟರ್ ಕಪ್ ಟೂರ್ನಿಯ ರಿಲೆಯ ಚಿನ್ನ ಗೆದ್ದ ತಂಡದಲ್ಲೂ ಅವರ ಸಾನ್ನಿಧ್ಯ ಇತ್ತು; ಆದರೆ ಆಗ ಅಮೆರಿಕ ತಂಡವನ್ನು ಪ್ರತಿನಿಧಿಸಿದ್ದರು. 

ಶೆರಿಕಾ ಜಾಕ್ಸನ್

400 ಮೀಟರ್ಸ್ ಓಟದಲ್ಲಿ ಹೆಸರು ಮಾಡಿರುವ ಮತ್ತೊಬ್ಬರು ಅಥ್ಲೀಟ್‌ ಶೆರಿಕಾ ಜಾಕ್ಸನ್. 2015 ವಿಶ್ವ ಚಾಂಪಿಯನ್‌ಷಿಪ್‌ನ ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಮತ್ತು ರಿಲೆಯಲ್ಲಿ ಚಿನ್ನ ಗೆದ್ದ ಈ ಓಟಗಾರ್ತಿ 2016ರ ಒಲಿಂಪಿಕ್ಸ್‌ನ ರಿಲೆಯಲ್ಲಿ ಬೆಳ್ಳಿ ಮತ್ತು ವೈಯಕ್ತಿಕ ವಿಭಾಗದಲ್ಲಿ ಕಂಚು ಗೆದ್ದರು. 

ಮೆಲೈನಿ ವಾಕರ್

400 ಮೀಟರ್ಸ್ ಹರ್ಡಲ್ಸ್‌ನಲ್ಲಿ ಸಾಧನೆ ಮಾಡಿರುವ ಮೆಲೈನಿ ವಾಕರ್ 2008ರ ಒಲಿಂಪಿಕ್ಸ್‌ನಲ್ಲಿ 52.64 ಸೆಕೆಂಡುಗಳ ಸಾಧನೆಯೊಂದಿಗೆ ದಾಖಲೆ ನಿರ್ಮಿಸಿದ್ದರು. 2009ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 52.42 ಸೆಕೆಂಡುಗಳ ಸಾಧನೆ ವಿಶ್ವದ ಅತಿವೇಗದ ಎರಡನೇ ಹರ್ಡಲರ್ ಎಂಬ ಖ್ಯಾತಿಯನ್ನು ಅವರಿಗೆ ತಂದುಕೊಟ್ಟಿತ್ತು. 

ಸ್ಪ್ರಿಂಟರ್‌ಗಳಾದ ಕ್ಯಾರಿ ರಸೆಲ್, ಕ್ರಿಸ್ಟಾನಿಯಾ ವಿಲಿಯಮ್ಸ್‌, ಜನೀವಿ ರಸೆಲ್, ಮೇಗನ್ ಸಿಮನ್ಸ್, ಲಾಂಗ್ ಜಂಪ್ ಪಟು ಜೆಸಿಕಾ ನೋಬಲ್‌, ಮಧ್ಯಮ ದೂರದ ಓಟಗಾರ್ತಿ ಜುನೆಲಿ ಬ್ರೂಂಫೀಲ್ಡ್ ಕೂಡ ಜಮೈಕಾ ಅಥ್ಲೆಟಿಕ್ಸ್‌ಗೆ ಚಿನ್ನದ ಕಳೆ ತುಂಬಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು