ಶುಕ್ರವಾರ, ಮೇ 27, 2022
31 °C

ಜಪಾನ್‌: ಒಲಿಂಪಿಕ್ಸ್ ಅಥ್ಲೀಟ್‌ಗಳಿಗೆ ಲಸಿಕೆ ನೀಡಿಕೆ ಆರಂಭ

ಎಪಿ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಜಪಾನ್ ಕ್ರೀಡಾಪಟುಗಳಿಗೆ ಕೋವಿಡ್‌ ಲಸಿಕೆ ನೀಡುವ ಪ್ರಕ್ರಿಯೆ ಮಂಗಳವಾರ ಆರಂಭವಾಗಿದೆ. ದೇಶದ ಒಲಿಂಪಿಕ್ ಸಮಿತಿ ಈ ವಿಷಯ ತಿಳಿಸಿದೆ.

ಜಪಾನ್‌ನಲ್ಲಿ ಇದುವರೆಗೆ ಶೇಕಡಾ 2ರಿಂದ 3ರಷ್ಟು ನಾಗರಿಕರು ಮಾತ್ರ ಸಂಪೂರ್ಣ ಲಸಿಕೆ ತೆಗೆದುಕೊಂಡಿದ್ದಾರೆ. ಆರೋಗ್ಯವಂತ ಅಥ್ಲೀಟುಗಳಿಗೆ ಲಸಿಕೆ ನೀಡಲಾಗುತ್ತಿದ್ದು, ಮೊದಲ ದಿನವಾದ ಮಂಗಳವಾರ, ತರಬೇತಿ ಕೇಂದ್ರವೊಂದರಲ್ಲಿ 200 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಜಪಾನ್‌ನ ಒಲಿಂಪಿಕ್ ಸಮಿತಿಯ ಅಧಿಕಾರಿಗಳು ಹೇಳಿದ್ದಾರೆ.

ಲಸಿಕೆ ತೆಗದುಕೊಂಡ ಅಥ್ಲೀಟ್‌ಗಳ ಹೆಸರನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗುವ ಸಾಧ್ಯತೆಯಿಂದ ಲಸಿಕೆ ನೀಡಿಕೆ ಪ್ರಕ್ರಿಯೆಯ ಪ್ರಸಾರವನ್ನು ನಿರ್ಬಂಧಿಸಲಾಗಿದೆ.

‘ಯುವ ಕ್ರೀಡಾಪಟುಗಳಿಗೆ ಲಸಿಕೆ ನೀಡುವುದರಿಂದ ವೃದ್ಧರು ಮತ್ತು ವೈದ್ಯಕೀಯ ಕಾರ್ಯಕರ್ತರು ಸೇರಿದಂತೆ ಸಾಮಾನ್ಯ ಜನರಿಗೆ ಹಂಚಿಕೆಯ ಮೇಲೆ ಪರಿಣಾಮ ಬೀರುವುದಿಲ್ಲ‘ ಎಂದು ಜಪಾನ್‌ನ ಒಲಿಂಪಿಕ್ ಸಮಿತಿಯ ಅಧಿಕಾರಿ ಮಿತ್ಸುಗಿ ಒಗಾಟಾ ಹೇಳಿದ್ದಾರೆ.

ಟೋಕಿಯೊ ಒಲಿಂಪಿಕ್ಸ್ ಜುಲೈ 23ರಂದು ಆರಂಭವಾಗಬೇಕಿದೆ. ಕೂಟದಲ್ಲಿ ಪಾಲ್ಗೊಳ್ಳುವವರಿಗೆ ಲಸಿಕೆ ಅಗತ್ಯವಿಲ್ಲ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಹೇಳಿದೆ. ಆದಾಗ್ಯೂ ಎಲ್ಲ ಅಥ್ಲೀಟುಗಳು ಲಸಿಕೆ ಪಡೆಯಬೇಕೆಂದು ಅದು ಪ್ರೇರೇಪಿಸುತ್ತಿದೆ.

ಒಲಿಂಪಿಕ್ಸ್ ನಡೆಯುವ ಕ್ರೀಡಾಗ್ರಾಮದ ಶೇಕಡಾ 80ಕ್ಕೂ ಅಧಿಕ ನಿವಾಸಿಗಳು ಲಸಿಕೆ ಪಡೆಯುವ ವಿಶ್ವಾಸವಿದೆ ಎಂದು ಐಒಸಿ ಅಧ್ಯಕ್ಷ ಥಾಮಸ್ ಬಾಕ್‌ ಹೇಳಿದ್ದಾರೆ.

ಕ್ರೀಡಾಪಟುಗಳಿಗೆ ಲಸಿಕೆ ನೀಡುವುದರಿಂದ ಜಪಾನ್‌ನ ಸಾರ್ವಜನಿಕರಿಗೆ ಕೂಟ ಆಯೋಜನೆಯ ವಿಷಯದಲ್ಲಿ ಹೆಚ್ಚಿನ ಸುರಕ್ಷತೆಯ ಭಾವ ಉಂಟಾಗುತ್ತದೆ ಎಂದು ಒಲಿಂಪಿಕ್ಸ್ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು