ಸೋಮವಾರ, ಏಪ್ರಿಲ್ 6, 2020
19 °C

ಕುಸ್ತಿ ‘ಕಿಂಗ್‌’ ಬಜರಂಗ್‌

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

Prajavani

2014ರ ಮಾತು. ಆ ವರ್ಷ ಏಷ್ಯನ್‌ ಚಾಂಪಿಯನ್‌ಷಿಪ್‌, ಏಷ್ಯನ್ ಮತ್ತು ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಬೆಳ್ಳಿಯ ಪದಕಗಳನ್ನು ಜಯಿಸಿ ಕುಸ್ತಿ ಲೋಕದಲ್ಲಿ ಸಂಚಲನ ಮೂಡಿಸಿದ್ದ ಹರಿಯಾಣದ ಚಿಗುರು ಮೀಸೆಯ ಹುಡುಗ, ಮರು ವರ್ಷ ಬೆನ್ನು ನೋವಿನಿಂದಾಗಿ ಎಂಟು ತಿಂಗಳು ಅಖಾಡದಿಂದ ದೂರ ಉಳಿದಿದ್ದ. 

ಆಗ ಹಲವರು, ಆತನ ಭವಿಷ್ಯ ಅಂತ್ಯವಾಯಿತೆಂದು ಷರಾ ಬರೆದೇಬಿಟ್ಟಿದ್ದರು. ಗಾಯದಿಂದ ಗುಣಮುಖವಾದ ಬಳಿಕ ಕಠಿಣ ಅಭ್ಯಾಸ ನಡೆಸಿ ಫೀನಿಕ್ಸ್‌ನಂತೆ ಮೇಲೆದ್ದ ಆ ‘ವಾಮನ ಮೂರ್ತಿ’, ಭಾಗವಹಿಸಿದ ಕೂಟಗಳಲ್ಲೆಲ್ಲಾ ಪದಕಗಳನ್ನು ಗೆದ್ದು ದೇಶದ ಹಿರಿಮೆ ಹೆಚ್ಚಿಸಿದ್ದ. ಆ ಕ್ರೀಡಾ ‘ರತ್ನ’ ಬಜರಂಗ್‌ ಪುನಿಯಾ.

26ರ ಹರೆಯದ ಬಜರಂಗ್‌, ಕುಸ್ತಿ ಕ್ರೀಡೆಯ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಪಡೆದ ಭಾರತದ ಮೊದಲ ಪೈಲ್ವಾನ ಎಂಬ ಹಿರಿಮೆ ಹೊಂದಿದ್ದಾರೆ. ಅರ್ಜುನ, ರಾಜೀವ್‌ ಗಾಂಧಿ ಖೇಲ್‌ ರತ್ನ ಹಾಗೂ ಪದ್ಮಶ್ರೀ ಗೌರವಗಳಿಗೆ ಭಾಜನರಾಗಿರುವ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ. 

ಕೋವಿಡ್‌–19 ವೈರಸ್‌ನ ಕರಿನೆರಳು ಕ್ರೀಡಾ ಲೋಕದ ಮೇಲೂ ಆವರಿಸಿದೆಯಲ್ಲ?

ಒಲಿಂಪಿಕ್ಸ್‌ ವರ್ಷ ದಲ್ಲೇ ಕೋವಿಡ್‌ ಭೀತಿ ಉಂಟಾಗಿರುವುದು ದುರದೃಷ್ಟಕರ. ಕೋವಿಡ್‌ ಸೋಂಕು ವಿಶ್ವದಾದ್ಯಂತ ವೇಗವಾಗಿ ಹರಡುತ್ತಿದೆ. ಇದರಿಂದಾಗಿ ವಿವಿಧ ದೇಶಗಳಲ್ಲಿ ನಿಗದಿಯಾಗಿದ್ದ ಒಲಿಂಪಿಕ್ಸ್‌ ಅರ್ಹತಾ ಕೂಟಗಳೆಲ್ಲಾ ರದ್ದಾಗುತ್ತಿವೆ. ಹೀಗಾಗಿ ಟೋಕಿಯೊ ಕೂಟಕ್ಕೆ ಅರ್ಹತೆ ಕೈತಪ್ಪುವ ಆತಂಕ ಕ್ರೀಡಾಪಟುಗಳಲ್ಲಿ ಮನೆಮಾಡಿದೆ. ತರಬೇತಿಗಾಗಿ ವಿದೇಶಗಳಿಗೆ ಹೋಗಲೂ ಆಗುತ್ತಿಲ್ಲ.

‘ಲೆಗ್‌ ಡಿಫೆನ್ಸ್‌’ನಲ್ಲಿ ನೀವು ಪದೇ ಪದೇ ಎಡವುತ್ತಿದ್ದೀರಿ. ಇದರಲ್ಲಿ ಏನಾದರೂ ಸುಧಾರಣೆ ಮಾಡಿಕೊಂಡಿದ್ದೀರಾ?

ಹಿಂದಿನ ಕೆಲ ಪಂದ್ಯಗಳ ವಿಡಿಯೊ ತುಣುಕುಗಳನ್ನು ವೀಕ್ಷಿಸಿದಾಗ ‘ಲೆಗ್‌ ಡಿಫೆನ್ಸ್‌’ನಲ್ಲಿ ಎಡವುತ್ತಿರುವುದರ ಅರಿವಾಯಿತು. ಹೀಗಾಗಿ ಅಭ್ಯಾಸದ ವೇಳೆ ಚುರುಕಿನ ಪಾದಚಲನೆ ಮೈಗೂಡಿಸಿಕೊಳ್ಳಲು ಹೆಚ್ಚು ಒತ್ತು ನೀಡಿದ್ದೇನೆ. ಇದರಲ್ಲಿ ಯಶಸ್ವಿಯೂ ಆಗಿದ್ದೇನೆ. ಒಲಿಂಪಿಕ್ಸ್‌ ವೇಳೆಗೆ ‘ಲೆಗ್‌ ಡಿಫೆನ್ಸ್‌’ನಲ್ಲಿ ಮತ್ತಷ್ಟು ಸುಧಾರಣೆ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ.

ಹಿಂದಿನ ಕೆಲವು ಪಂದ್ಯಗಳಲ್ಲಿ ನೀವು ಆರಂಭದಲ್ಲೇ ಎದುರಾಳಿಗಳಿಗೆ ಪಾಯಿಂಟ್ಸ್‌ ಬಿಟ್ಟುಕೊಟ್ಟು ನಿರಾಸೆ ಕಂಡಿದ್ದೀರಿ. ಈ ತಪ್ಪನ್ನು ತಿದ್ದಿಕೊಳ್ಳಲು ಪ್ರಯತ್ನಿಸಿದ್ದೀರಾ?

ಒಮ್ಮೊಮ್ಮೆ ತಿಳಿದೊ ತಿಳಿಯದೆಯೋ ತಪ್ಪುಗಳು ಆಗಿಬಿಡುತ್ತವೆ. ಕೋಚ್‌ಗಳು ಅದನ್ನೆಲ್ಲಾ ಗುರುತಿಸಿ ತಿದ್ದಿದ್ದಾರೆ. ಹಿಂದಿನ ಪಂದ್ಯಗಳಲ್ಲಿ ಆದ ತಪ್ಪುಗಳು ಮರುಕಳಿಸದಂತೆ ಎಚ್ಚರವಹಿಸಿದ್ದೇನೆ. ಹೋದ ವರ್ಷ ನಡೆದಿದ್ದ ಏಷ್ಯನ್‌ ಚಾಂಪಿಯನ್‌ಷಿಪ್‌ನ ಫಲಿತಾಂಶಗಳ ಮೇಲೆ ಕಣ್ಣಾಡಿಸಿದರೆ ಇದರ ಅರಿವಾಗುತ್ತದೆ. ಆ ಚಾಂಪಿಯನ್‌ಷಿಪ್‌ನಲ್ಲಿ ನಾನು ಎದುರಾಳಿಗಳಿಗೆ ಸುಲಭವಾಗಿ ಪಾಯಿಂಟ್ಸ್‌ ಬಿಟ್ಟುಕೊಟ್ಟಿಲ್ಲ.

ಅಭ್ಯಾಸದ ವೇಳೆ ಯಾವೆಲ್ಲಾ ಕೌಶಲಗಳನ್ನು ಕಲಿಯಲು ಒತ್ತು ನೀಡುತ್ತಿದ್ದೀರಿ?

ರಕ್ಷಣೆ ಮತ್ತು ಆಕ್ರಮಣಕಾರಿ ತಂತ್ರಗಳನ್ನು ಕಲಿಯಲು ಹೆಚ್ಚು ಒತ್ತು ನೀಡುತ್ತಿದ್ದೇನೆ. ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕ ಅವಕಾಶದಲ್ಲಿ ದೇಶಕ್ಕೆ ಪದಕ ಗೆದ್ದುಕೊಡಬೇಕೆಂಬುದು ನನ್ನ ಬಯಕೆ. ಹೀಗಾಗಿ ಯಾವ ವಿಭಾಗದಲ್ಲಿ ದುರ್ಬಲನಾಗಿದ್ದೇನೆ ಅನಿಸುತ್ತದೊ ಆ ವಿಭಾಗದಲ್ಲಿ ಸುಧಾರಣೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. 

ಹಿಂದಿನ ಒಂದೂವರೆ ವರ್ಷದಲ್ಲಿ ನಿಮ್ಮಿಂದ ಸ್ಥಿರ ಸಾಮರ್ಥ್ಯ ಮೂಡಿಬರುತ್ತಿದೆ. ಇದರ ಹಿಂದಿನ ಗುಟ್ಟೇನು?

ಕ್ರೀಡಾಪಟುಗಳ ಬದುಕಿನಲ್ಲಿ ಏಳು ಬೀಳು ಸಾಮಾನ್ಯ. ಗೆದ್ದಾಗ ಹಿಗ್ಗದೇ, ಸೋತಾಗ ಕುಗ್ಗದೇ ಕಠಿಣ ಅಭ್ಯಾಸ ಮಾಡಬೇಕೆಂಬುದು ನನ್ನ ಮಂತ್ರ. ಇದನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದೇನೆ. ಹೀಗಾಗಿ ಯಶಸ್ಸು ಒಲಿಯುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು