ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಫಾರ್ಮುಲಾ ಒನ್‌ ಟ್ರ್ಯಾಕ್‌ನಲ್ಲಿ ಮಹಿಳೆಯ ಹೊಸ ಹಾದಿ...

Last Updated 31 ಜನವರಿ 2021, 7:11 IST
ಅಕ್ಷರ ಗಾತ್ರ

ಪುರುಷ ಪ್ರಧಾನವಾದ ಫಾರ್ಮುಲಾ ಒನ್‌ ಡ್ರೈವರ್ ಅಕಾಡೆಮಿಯಲ್ಲಿ ಸೇರಿದ ಮೊದಲ ಮಹಿಳೆ ನೆದರ್ಲೆಂಡ್ಸ್‌ನ ಮಯಾ ವೀಗ್. ಮಹಿಳಾ ಚಾಲಕಿಯರನ್ನು ಗುರುತಿಸಿ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮೋಟರ್ ಸ್ಪೋರ್ಟ್‌ ಆಡಳಿತ ಸಂಸ್ಥೆಯಾದ ಎಫ್‌ಐಎ ಮತ್ತು ಫೆರಾರಿ ಜಂಟಿಯಾಗಿ ಆಯೋಜಿಸುವ ‘ಗರ್ಲ್ಸ್‌ ಆನ್ ಟ್ರ್ಯಾಕ್’ ಯೋಜನೆಯಲ್ಲಿ ಬೆಳಕಿಗೆ ಬಂದವರು ಅವರು.

ರೇಸಿಂಗ್ ವಲಯದಲ್ಲಿ ಜನವರಿ ಎರಡನೇ ವಾರ ನೆದರ್ಲೆಂಡ್ಸ್‌ನ ಮಯಾ ವೀಗ್ ಅವರದೇ ಸುದ್ದಿ–ಸದ್ದು. ಮಹಿಳಾ ಚಾಲಕಿಯರನ್ನು ಗುರುತಿಸಿ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮೋಟರ್ ಸ್ಪೋರ್ಟ್‌ ಆಡಳಿತ ಸಂಸ್ಥೆಯಾದ ಎಫ್‌ಐಎ ಮತ್ತು ಫೆರಾರಿ ಜಂಟಿಯಾಗಿ ಆಯೋಜಿಸುವ ‘ಗರ್ಲ್ಸ್‌ ಆನ್ ಟ್ರ್ಯಾಕ್’ ಯೋಜನೆಯಲ್ಲಿ ಬೆಳಕಿಗೆ ಬಂದವರು ಮಯಾ ವೀಗ್. ಹೀಗೆ ಲಭಿಸಿದ ಈ ಪ್ರತಿಭೆಯ ಜೊತೆ ಫೆರಾರಿ ಡ್ರೈವರ್ ಅಕಾಡೆಮಿ ಒಪ್ಪಂದ ಮಾಡಿಕೊಂಡಿತು. ಈ ಮೂಲಕ ವೀಗ್ ಇತಿಹಾಸದ ಪುಟಗಳಲ್ಲಿ ಸೇರ್ಪಡೆಯಾದರು. ಯಾಕೆಂದರೆ, ಪುರುಷ ಪ್ರಧಾನವಾದ ಫಾರ್ಮುಲಾ ಒನ್‌ ಡ್ರೈವರ್ ಅಕಾಡೆಮಿಯಲ್ಲಿ ಸೇರಿದ ಮೊದಲ ಮಹಿಳೆ ಅವರು. 1958ರ ಫಾರ್ಮುಲಾ ಒನ್ ಗ್ರ್ಯಾನ್ ಪ್ರಿಯಲ್ಲಿ ಪಾಲ್ಗೊಂಡ ಮಾರಿಯಾ ತೆರೆಸಾ ಡಿ ಫಿಲಿಪಿಸ್ ಮತ್ತು 1976ರಲ್ಲಿ ಗ್ರ್ಯಾನ್‌ ಪ್ರಿಯಲ್ಲಿ ಭಾಗವಹಿಸಿದ ಇಟಲಿಯ ಲೆಲಾ ಲೊಂಬಾರ್ಡಿ ಅವರನ್ನು ಬಿಟ್ಟರೆ ಫಾರ್ಮುಲಾ ಒನ್‌ ರೇಸ್‌ ಟ್ರ್ಯಾಕ್‌ನಲ್ಲಿ ಮಹಿಳೆಯರ ಉಪಸ್ಥಿತಿ ತೀರಾ ಕಡಿಮೆ. ಆರು ಮಂದಿ ಮಹಿಳೆಯರು ಈ ವರೆಗೆ ವಾರಾಂತ್ಯ ರೇಸ್‌ನಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಅಕಾಡೆಮಿಯೊಂದಕ್ಕೆ ಮಹಿಳೆ ಪ್ರವೇಶಿಸಿದ ಉದಾಹರಣೆಯೇ ಇಲ್ಲ.

ಕೇವಲ 16 ವರ್ಷದ ವೀಗ್ ‘ಗರ್ಲ್ಸ್‌ ಆನ್ ಟ್ರ್ಯಾಕ್’ನ ಫೈನಲ್ ಹಂತದಲ್ಲಿ ಅಮೋಘ ಸಾಧನೆ ಮಾಡಿ ಈ ಸ್ಥಾನಕ್ಕೇರಿದ್ದರು. ಇಟಲಿಯ ಮರಾನೆಲೊದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ತಮಗಿಂತ ಒಂದು ವರ್ಷ ಹಿರಿಯ ಸ್ಪರ್ಧಿ ಡೊರಿಯಾನೆ ಪೀನ್ ವಿರುದ್ಧ ವೀಗ್ ಮೇಲುಗೈ ಸಾಧಿಸಿದ್ದರು. 14 ವರ್ಷದ ಆ್ಯಂಟೊನೆಲಾ ಬಸಾನಿ, 15 ವರ್ಷದ ಜೂಲಿಯಾ ಅಯೋಬ್ ಕೂಡ ‘ಸ್ಪರ್ಧಾ ಕಣ’ದಲ್ಲಿದ್ದದ್ದು ವಿಶೇಷ. ಫಿಯೊರಾನೊ ಟೆಸ್ಟ್ ಟ್ರ್ಯಾಕ್‌ನಲ್ಲಿ ಐದು ದಿನ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಪಾರಮ್ಯ ಮೆರೆದಿರುವ ವೀಗ್‌ ಇದೀಗ ಎಫ್‌ಐಎ ಅನುಮೋದನೆ ನೀಡಿರುವ ಫಾರ್ಮುಲಾ ನಾಲ್ಕು ಚಾಂಪಿಯನ್‌ಷಿಪ್‌ನಲ್ಲಿ ಒಂದು ವರ್ಷ ಪಾಲ್ಗೊಂಡು ಸಾಮರ್ಥ್ಯ ಮೆರೆಯುವ ಸವಾಲು ಹೊಂದಿದ್ದಾರೆ.

ಫೆರಾರಿ ಡ್ರೈವರ್ ಅಕಾಡೆಮಿಯು ಪ್ರತಿಭಾವಂತರನ್ನು ಬೆಳೆಸುವುದರ ಜೊತೆಯಲ್ಲಿ ಯುವ ಚಾಲಕರನ್ನು ಬೆಳಕಿಗೆ ತರುವ ಕಾರ್ಯವನ್ನೂ ಮಾಡುತ್ತಿದೆ. ಇದಕ್ಕಾಗಿ ಜೂನಿಯರ್ ಸೀರಿಸ್ ಎಂಬ ಯೋಜನೆಯನ್ನೇ ಜಾರಿಗೆ ತಂದಿದೆ. ಇದರಡಿ ಈಗಾಗಲೇ ಐವರು ಯುವ ಚಾಲಕರಿಗೆ ಅವಕಾಶ ನೀಡಿದೆ. ಅವರ ಪೈಕಿ ಚಾರ್ಲ್ಸ್‌ ಈಗಾಗಲೇ ಫೆರಾರಿ ಡ್ರೈವರ್ ಆಗಿದ್ದಾರೆ. ಮತ್ತೊಬ್ಬರು ಮೈಕೆಲ್ ಶುಮಾಕರ್ ಅವರ ಪುತ್ರ ಮಿಕ್‌ ಶುಮಾಕರ್. ‘ಗರ್ಲ್ಸ್‌ ಆನ್ ಟ್ರ್ಯಾಕ್’ ಯೋಜನೆಯ ಆರಂಭಿಕ ಹಂತದಲ್ಲಿ ಈ ಬಾರಿ 20 ಚಾಲಕರು ಪಾಲ್ಗೊಂಡಿದ್ದರು.

ವೀಗ್ ತಂದೆ ನೆದರ್ಲೆಂಡ್ಸ್‌ನವರು. ತಾಯಿ ಬೆಲ್ಜಿಯಂ ಮೂಲದವರು. ವೀಗ್ ಜನಿಸಿದ್ದು ಸ್ಪೇನ್‌ನಲ್ಲಿ. ಹೀಗಾಗಿ ಮೂರು ದೇಶಗಳ ಗಂಧ–ಗಾಳಿ ಅವರ ಬಾಲ್ಯದ ಜೀವನದಲ್ಲಿ ಇತ್ತು. 2013ರಿಂದ ಕಾರ್ಟಿಂಗ್‌ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರುವ ಮಯಾ 2013ರಲ್ಲಿ ಅಲೆವಿನ್‌ನಲ್ಲಿ ನಡೆದ ಸ್ಪ್ಯಾನಿಷ್ ಚಾಂ‍ಪಿಯನ್‌ಷಿಪ್‌ನಲ್ಲಿ 150 ಪಾಯಿಂಟ್ ಕಲೆ ಹಾಕಿ 14ನೇ ಸ್ಥಾನ ಗಳಿಸಿದ್ದರು. ಮುಂದಿನ ವರ್ಷ ಅದೇ ಸ್ಥಳದಲ್ಲಿ ನಡೆದ ಫಾರ್ಮುಲಾ ಡಿ ಕ್ಯಾಂಪಿಯೊನೀಸ್‌ನಲ್ಲಿ 274 ಪಾಯಿಂಟ್ ಗಳಿಸಿ ನಾಲ್ಕನೇ ಸ್ಥಾನದಲ್ಲಿ ಮಿಂಚಿದರು. 2015ರಲ್ಲಿ ಸ್ಪ್ಯಾನಿಷ್ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಸ್ಥಾನ ಗಳಿಸಿದ ನಂತರ ಎರಡು ವರ್ಷ ಕ್ರಮವಾಗಿ 15 ಮತ್ತು ಒಂಬತ್ತನೇ ಸ್ಥಾನಕ್ಕೆ ಕುಸಿದರು. ಆದರೂ ಛಲ ಬಿಡಲಿಲ್ಲ. 2016ರಲ್ಲಿ ನಡೆದ ಡಬ್ಲ್ಯುಎಸ್‌ಕೆ ಫೈನಲ್ ಕಪ್‌ನಲ್ಲಿ ಮೊದಲ ಸ್ಥಾನ ಗಳಿಸಿ ಭರವಸೆ ಮೂಡಿಸಿದರು. ಆ ವರ್ಷ ಒಟ್ಟು ಮೂರು ಪ್ರಮುಖ ಸ್ಪರ್ಧೆಗಳಲ್ಲಿ ಕಣಕ್ಕೆ ಇಳಿದು ಅನುಭವ ಸಂಪತ್ತು ಹೆಚ್ಚಿಸಿಕೊಂಡರು. ನಂತರ ಎರಡು ವರ್ಷ ಏಳು–ಬೀಳುಗಳ ಹಾದಿಯಲ್ಲೇ ಸಾಗಿದರು. 2019ರಲ್ಲಿ ಎಫ್‌ಐಎ ಕಾರ್ಟಿಂಗ್ ಸೂಪರ್ ಮಾಸ್ಟರ್‌, ಯುರೋಪಿಯನ್ ಚಾಂಪಿಯನ್‌ಷಿಪ್‌ ಹಾಗೂ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಛಾಪು ಮೂಡಿಸಿದರು. 2019 ಮತ್ತು 2020ರಲ್ಲಿ ಅನೇಕ ಸ್ಥಳೀಯ ರೇಸ್‌ಗಳಲ್ಲೂ ಭಾಗವಹಿಸಿ ಪ್ರತಿಭೆಯನ್ನು ಒರೆಗೆ ಹಚ್ಚುತ್ತ ಸಾಗಿದ್ದರು.

‘ಈ ದಿನವನ್ನು ನಾನು ಎಂದಿಗೂ ಮರೆಯಲಾರೆ. ಡ್ರೈವರ್ ಅಕಾಡೆಮಿಯೊಂದರಲ್ಲಿ ಸೇರಿದ ಮೊದಲ ಮಹಿಳೆ ಎಂದು ಕರೆಸಿಕೊಳ್ಳಲು ಹೆಮ್ಮೆ ಇದೆ. ಸಂಪೂರ್ಣ ಸಾಮರ್ಥ್ಯವನ್ನು ತೋರಿಸಿ ಸಾಧನೆ ಮಾಡಲು ಪ್ರಯತ್ನಿಸುವೆ’ ಎಂದು ಆಯ್ಕೆಯಾದ ದಿನ ವೀಗ್ ಹೇಳಿದ್ದರು.

‘ಮೋಟರ್ ರೇಸಿಂಗ್‌ನಲ್ಲಿ ಇದೊಂದು ಮಹತ್ವದ ಹೆಜ್ಜೆ. ಮಯಾ ವೀಗ್ ಅವರ ಬರುವಿಕೆಯು ಈ ಕ್ರೀಡೆಯು ಹೊಸ ದಿಸೆಯಲ್ಲಿ ಸಾಗುತ್ತಿರುವುದರ ಸೂಚನೆ’ ಎಂದು ಅಭಿಪ್ರಾಯಪಟ್ಟಿರುವ ಫೆರಾರಿ ಫಾರ್ಮುಲಾ ಒನ್ ತಂಡದ ಮುಖ್ಯಸ್ಥ ಮಟಿಯಾ ಬಿನೊಟೊ ಅವರ ಮಾತು ಸಫಲವಾಗುವುದೋ ಎಂಬುದು ವೀಗ್ ಅವರ ಪ್ರಯತ್ನದ ಮೇಲೆ ಅವಲಂಬಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT