ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಕ್ರೀಡಾಕೂಟ: ಕರ್ನಾಟಕ ಈಜುಪಟುಗಳ ಪಾರಮ್ಯ

ಟೆನಿಸ್‌ನಲ್ಲಿ ಒಟ್ಟು ಎಂಟು ಪದಕ
Last Updated 5 ಅಕ್ಟೋಬರ್ 2022, 14:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಈಜು ಸ್ಪರ್ಧಿಗಳು ಗುಜರಾತ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾರಮ್ಯ ಮುಂದುವರಿಸಿದರು.

ರಾಜ್‌ಕೋಟ್‌ನ ಸರ್ದಾರ್‌ ಪಟೇಲ್‌ ಈಜು ಕಾಂಪ್ಲೆಕ್ಸ್‌ನಲ್ಲಿ ನಡೆದ ಸ್ಪರ್ಧೆಗಳಲ್ಲಿ ಬುಧವಾರ ರಾಜ್ಯ ತಂಡವು ಮೂರು ಕೂಟ ದಾಖಲೆಗಳೊಂದಿಗೆ ಮೂರು ಚಿನ್ನ ಒಂದು ಕಂಚಿನ ಪದಕ ಗೆದ್ದುಕೊಂಡಿತು. ಇದುವರೆಗೆ ಒಟ್ಟು 21 ಪದಕ (12 ಚಿನ್ನ, ಮೂರು ಬೆಳ್ಳಿ ಮತ್ತು ಆರು ಕಂಚು) ಜಯಿಸಿ ಪದಕಪಟ್ಟಿಯಲ್ಲಿ ಗೆದ್ದು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು.

ಮಹಿಳೆಯರ 200 ಮೀಟರ್ಸ್ ಬಟರ್‌ಫ್ಲೈನಲ್ಲಿ ರಾಜ್ಯದ ಹಷಿಕಾ ರಾಮಚಂದ್ರ 2 ನಿಮಿಷ 19.12 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನಕ್ಕೆ ಕೊರಳೊಡ್ಡಿದರು. ಇದರೊಂದಿಗೆ ಇದೇ ವರ್ಷ ಅಸ್ಸಾಂ ಅಶಿತಾ ಚೌಧರಿ (2 ನಿ. 21.52 ಸೆ.) ನಿರ್ಮಿಸಿದ್ದ ದಾಖಲೆಯನ್ನು ಅಳಿಸಿ ಹಾಕಿದರು. 200 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಮಾನವಿ ವರ್ಮಾ ಕಂಚು ಗೆದ್ದರು.

ಪುರುಷರ 4X200 ಮೀ. ಫ್ರೀಸ್ಟೈಲ್‌ನಲ್ಲಿ ಸಂಭವ್ ಆರ್, ಶಿವ ಎಸ್‌, ಶಿವಾಂಕ್ ವಿಶ್ವನಾಥ್, ಅನೀಶ್ ಎಸ್‌. ಗೌಡ ಅವರಿದ್ದ ತಂಡ ಕೂಟ ದಾಖಲೆ ಬರೆಯಿತು. 7 ನಿ. 41.10 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ತನ್ನದಾಗಿಸಿಕೊಂಡಿತು. ಈ ಹಿಂದೆ ಮಹಾರಾಷ್ಟ್ರ ಸ್ಥಾಪಿಸಿದ್ದ ದಾಖಲೆಯನ್ನು ಅಳಿಸಿ ಹಾಕಿತು.

ಮಹಳೆಯರ 4X200 ಮೀ. ಫ್ರೀಸ್ಟೈಲ್‌ನಲ್ಲೂ ಕರ್ನಾಟಕ ಅಗ್ರಸ್ಥಾನ ಗಳಿಸಿತು. ಧೀನಿಧಿ ದೇಸಿಂಗು, ರುಜುಲಾ ಎಸ್‌, ಶಾಲಿನಿ ದೀಕ್ಷಿತ್‌, ಹಷಿಕಾ ರಾಮಚಂದ್ರ ಅವರನ್ನೊಳಗೊಂಡ ತಂಡ 8 ನಿ. 51.59 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಕೂಟ ದಾಖಲೆ ಬರೆಯಿತು.

ಮಂಗಳವಾರ ರಾಜ್ಯ ಈಜು ತಂಡವು ನಾಲ್ಕು ಪದಕಗಳನ್ನು ಗೆದ್ದುಕೊಂಡಿತ್ತು. ಪುರುಷರ 200 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಉತ್ಕರ್ಷ್ ಸಂತೋಷ್ ಪಾಟೀಲ ಚಿನ್ನ (ಕಾಲ: 2 ನಿಮಿಷ 5.8 ಸೆಕೆಂಡು) ಮತ್ತು ಶಿವ ಎಸ್‌. ಕಂಚಿನ ಪದಕ ಗೆದ್ದುಕೊಂಡಿದ್ದರು.

50 ಮೀ. ಫ್ರೀಸ್ಟೈಲ್‌ನಲ್ಲಿ ಶ್ರೀಹರಿ ನಟರಾಜ್‌ (23.42 ಸೆ.) ಚಿನ್ನದ ಕೊರಳಿಗೇರಿಸಿಕೊಂಡಿದ್ದರು. ಮಹಿಳೆಯರ 400 ಮೀ. ಮೆಡ್ಲೆಯಲ್ಲಿ ಹಷಿಕಾ ರಾಮಚಂದ್ರ (5 ನಿ. 9.3 ಸೆ.) ಚಿನ್ನ ತಮ್ಮದಾಗಿಸಿಕೊಂಡಿದ್ದರು.

ಅಭಿನ್‌ಗೆ ಬೆಳ್ಳಿ: ಅಥ್ಲೆಟಿಕ್ಸ್‌ನ ಪುರುಷರ 200 ಮೀಟರ್ಸ್ ಓಟದಲ್ಲಿ ಕರ್ನಾಟಕದ ಅಭಿನ್ ದೇವಾಡಿಗ (ಕಾಲ: 20. 88 ಸೆ.) ಬೆಳ್ಳಿ, ಮಹಿಳೆಯರ 400 ಮೀಟರ್ಸ್ ಹರ್ಡಲ್ಸ್‌ನಲ್ಲಿ ಸಿಂಚಲ್‌ ಕಾವೇರಮ್ಮ (58.74 ಸೆ.) ಕಂಚು ಮತ್ತು 4X400 ಮೀ. ಮಿಶ್ರ ರಿಲೇ ತಂಡವು (3 ನಿ. 20.51ಸೆ.) ಬೆಳ್ಳಿ ಪದಕ ಗೆದ್ದುಕೊಂಡಿತ್ತು. ಮಿಶ್ರ ರಿಲೇ ತಂಡದಲ್ಲಿ ಮಹಾಂತೇಶ್ ಸಿದ್ದಪ‍್ಪ, ಲಿಖಿತಾ ಎಂ, ಇಂಚರ ಎನ್‌.ಎಸ್‌. ಮತ್ತು ನಿಹಾಲ್ ಜೋಯಲ್ ಇದ್ದರು.

ಟೆನಿಸ್‌ ತಂಡಕ್ಕೆ ಒಟ್ಟು ಎಂಟು ಪದಕ:
ಕರ್ನಾಟಕ ಟೆನಿಸ್ ತಂಡವು ಒಟ್ಟು ಎಂಟು (1 ಚಿನ್ನ. ಮೂರು ಬೆಳ್ಳಿ ಮತ್ತು ನಾಲ್ಕು ಕಂಚು) ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿತು. ಮಂಗಳವಾರ ನಡೆದ ಪುರುಷರ ಡಬಲ್ಸ್ ಫೈನಲ್‌ನಲ್ಲಿ ರಾಜ್ಯದ ಆದಿಲ್ ಕಲ್ಯಾಣಪುರ– ಎಸ್‌.ಡಿ. ಪ್ರಜ್ವಲ್ ದೇವ್‌ ಜೋಡಿ6-3, 6-4ರಿಂದ ಗುಜರಾತ್‌ನ ಧ್ರುವ ಎಚ್‌. ಮಧ್ವಿನ್ ಕೆ. ಅವರನ್ನು ಸೋಲಿಸಿ ಚಿನ್ನಕ್ಕೆ ಮುತ್ತಿಟ್ಟಿತು.

ಪ್ರಮುಖ ಆಟಗಾರ್ತಿ ಶರ್ಮದಾ ಬಾಲು ಗಾಯಗೊಂಡಿದ್ದರಿಂದ ಬುಧವಾರ ಎರಡು ಚಿನ್ನ ಗೆಲ್ಲುವ ಅವಕಾಶವನ್ನು ರಾಜ್ಯ ತಂಡ ಕಳೆದುಕೊಂಡಿತು. ಮಹಿಳಾ ಸಿಂಗಲ್ಸ್‌ ಫೈನಲ್‌ನಲ್ಲಿ ಗುಜರಾತ್‌ನ ಜೀಲ್ ದೇಸಾಯಿ ಎದುರು ಆಡಬೇಕಿದ್ದ ಶರ್ಮದಾ ಹಿಂದೆ ಸರಿದರು. ಪ್ರಜ್ವಲ್‌ ಜೊತೆಗೂಡಿದ್ದ ಅವರು ಮಿಶ್ರ ಡಬಲ್ಸ್ ಫೈನಲ್‌ನಲ್ಲೂ ಅವರು ಆಡಲಿಲ್ಲ. ಹೀಗಾಗಿ ಈ ಎರಡೂ ವಿಭಾಗಗಳಲ್ಲಿ ತಂಡವು ಬೆಳ್ಳಿ ಪದಕ ಗಳಿಸಿತು.

ಕೊಕ್ಕೊ ತಂಡಗಳಿಗೆ ಕಂಚು:
ಕರ್ನಾಟಕದ ಪುರುಷ ಮತ್ತು ಮಹಿಳಾಕೊಕ್ಕೊ ತಂಡಗಳು ಟೂರ್ನಿಯಲ್ಲಿ ಕಂಚಿನ ಪದಕ ಜಯಿಸಿದವು.

ಫುಟ್‌ಬಾಲ್ ತಂಡಕ್ಕೆ ಜಯ: ಕರ್ನಾಟಕ ಫುಟ್‌ಬಾಲ್ ತಂಡವು ಕ್ರೀಡಾಕೂಟದಲ್ಲಿ ಸತತ ಎರಡನೇ ಜಯ ಸಾಧಿಸಿತು. ಬುಧವಾರ ನಡೆದ ಪಂದ್ಯದಲ್ಲಿ ಸುರೇಂದ್ರ ಪ್ರಸಾದ್ (36ನೇ ನಿ.) ಗಳಿಸಿದ ಗೋಲಿನ ಬಲದಿಂದ 1–0ಯಿಂದ ಪಂಜಾಬ್ ತಂಡವನ್ನು ಮಣಿಸಿತು. ಮೊದಲ ಪಂದ್ಯದಲ್ಲಿ ಕರ್ನಾಟಕ 2–1ರಿಂದ ಗುಜರಾತ್ ತಂಡಕ್ಕೆ ಸೋಲುಣಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT